ಟಿಕ್ ಟಾಕ್ ನ ಚೈನೀಸ್ ಮಾತೃಸಂಸ್ಥೆಯಿಂದ ಉದ್ಯೋಗಿಗಳಿಗೆ ಅರ್ಧ ತಿಂಗಳ ಬೋನಸ್ ಘೋಷಣೆ ಮಾಡಲಾಗಿದೆ. ಬೈಟ್ ಡ್ಯಾನ್ಸ್ ನಿಂದ ಈ ತಿಂಗಳು ಉದ್ಯೋಗಿಗಳಿಗೆ ಬೋನಸ್ ನೀಡಲಾಗುತ್ತದೆ. ವಿಶ್ವದಾದ್ಯಂತ ಕಂಪೆನಿಗೆ 60 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟು ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲೂ ಇಂಥ ನಿರ್ಧಾರ ಮಾಡಿದೆ.
ಬೀಜಿಂಗ್ ಮೂಲದ ಬೈಟ್ ಡ್ಯಾನ್ಸ್ ಕಂಪೆನಿಯು ಹೆಚ್ಚಿನ ವೇತನ ನೀಡುವ ವಿಚಾರದಲ್ಲಿ ಹೆಸರುವಾಸಿ. ಅದರಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂಥ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉತ್ತಮ ವೇತನ ನೀಡುತ್ತದೆ. ವರ್ಷದ ಮಧ್ಯಭಾಗದಲ್ಲಿ ಈ ರೀತಿ ಬೋನಸ್ ನೀಡುತ್ತಿರುವುದು ವಿರಳ ವಿದ್ಯಮಾನ ಎನ್ನುತ್ತಾರೆ ಈ ಬಗ್ಗೆ ಮಾಹಿತಿ ಇರುವವರು.
ಅರ್ಹ ಉದ್ಯೋಗಿಗಳಿಗೆ ನಗದು ಬೋನಸ್
ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವ ಸಲುವಾಗಿ ಮತ್ತು ಬದ್ಧತೆಗಾಗಿ ಅರ್ಹ ಉದ್ಯೋಗಿಗಳಿಗೆ ನಗದು ಬೋನಸ್ ನೀಡುತ್ತಿದ್ದೇವೆ ಎಂದು ಕಂಪೆನಿಯ ಆಂತರಿಕ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಜುಲೈ 1ರಿಂದ ಆಗಸ್ಟ್ 31ರ ಮಧ್ಯೆ 26 ದಿನಗಳ ಕಾಲ ಕಾರ್ಯ ನಿರ್ವಹಿಸಿದವರಿಗೆ ಬೋನಸ್ ನೀಡಲಾಗುತ್ತಿದೆ.
ಪ್ರತಿಸ್ಪರ್ಧಿ ಆಪ್ ಗಳ ಬಳಕೆ ಆರಂಭ
ಬೈಟ್ ಡ್ಯಾನ್ಸ್ ಗಾಗಿ ಕೆಲಸ ಮಾಡುವ ಉದ್ಯೋಗಿಗಳು ಆತಂಕಗೊಂಡಿದ್ದಾರೆ. ಅದರಲ್ಲೂ ಯು.ಎಸ್.ನಲ್ಲಿ ಕಾರ್ಯ ನಿರ್ವಹಿಸುವವರಿಗೆ ಆತಂಕ ಎದುರಾಗಿದೆ. ಏಕೆಂದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟಿಕ್ ಟಾಕ್ ನಿಷೇಧ ಮಾಡಿದ್ದಾರೆ. ಈ ತನಕ ಟಿಕ್ ಟಾಕ್ ಬಳಕೆ ಮಾಡುತ್ತಿದ್ದವರು ಅದರ ಪ್ರತಿಸ್ಪರ್ಧಿ ಆಪ್ ಗಳ ಬಳಕೆ ಶುರು ಮಾಡುತ್ತಿದ್ದಾರೆ.
1.40 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರ
ಟಿಕ್ ಟಾಕ್ ಖರೀದಿಗೆ ಸಂಬಂಧಿಸಿದಂತೆ ಹಲವು ಕಂಪೆನಿಗಳು ಮಾತುಕತೆ ನಡೆಸುತ್ತಿವೆ. ಈ ವ್ಯವಹಾರದಲ್ಲಿ 2000 ಕೋಟಿ ಅಮೆರಿಕನ್ ಡಾಲರ್ ಬರಬಹುದು ಎಂಬ ಅಂದಾಜಿದೆ. ಭಾರತದ ರುಪಾಯಿ ಲೆಕ್ಕದಲ್ಲಿ 1.40 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಆದರೆ ಕಳೆದ ವಾರ ಚೀನಾದಿಂದ ಬಂದ ಹೇಳಿಕೆ ಈ ಮಾರಾಟ ವ್ಯವಹಾರಕ್ಕೆ ಹಿನ್ನಡೆ ಆಗುವಂತೆ ಮಾಡಿದೆ. ವಿದೇಶದಲ್ಲಿ ಮಾರಾಟ ಮಾಡದಂತೆ ಅಥವಾ ಮಾಡುವಂತೆ ಸೂಚಿಸುವ ಹಕ್ಕು ಚೀನಾಗಿದೆ ಎಂದು ಹೇಳಿತ್ತು. ಆ ನಂತರ ಈ ಬೆಳವಣಿಗೆ ಆಗಿದೆ.


Click it and Unblock the Notifications