ದೇಶದಾದ್ಯಂತ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಟೊಮೆಟೊ ದರವು ಶೀಘ್ರವೇ 100 ರೂಪಾಯಿಯ ಗಡಿಯನ್ನು ದಾಟಲಿದೆ ಎಂದು ತಜ್ಞರುಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ ಒಂದು ದಿನದಲ್ಲಿಯೇ ಟೊಮೆಟೊ ದರವು ಒಂದು ಕೆಜಿಗೆ 120 ರೂಪಾಯಿಗೆ ಜಿಗಿತ ಕಂಡಿದೆ. ಪ್ರಮುಖವಾಗಿ ಹವಮಾನ ವೈಪರೀತ್ಯದಿಂದ ಟೊಮೆಟೊ ದರವು ಹೆಚ್ಚಳವಾಗಿದೆ. ಹಾಗೆಯೇ ಇತರೆ ಕಾರಣಗಳು ಕೂಡಾ ಇದೆ.
ಭಾರತದಲ್ಲಿ ನಾವು ಮಾಡಲಾಗುವ ಬಹುತೇಕ ಎಲ್ಲ ಅಡುಗೆಗಳಿಗೂ ಈರುಳ್ಳಿ, ಟೊಮೆಟೊ ಅತೀ ಮುಖ್ಯವಾದ ಸಾಮಾಗ್ರಿಯಾಗಿದೆ. ಹಾಗಿರುವಾಗ ಈ ಅಗತ್ಯ ತರಕಾರಿಗಳ ಬೆಲೆ ಏರಿಕೆಯು ನಮ್ಮ ಜೇಬಿಗೆ ಕತ್ತರಿ ಹಾಕವುದು ಖಂಡಿತ. ದೇಶದ ಹಲವಾರು ಮೆಟ್ರೋ ನಗರಗಳಲ್ಲಿ ಪ್ರಸ್ತುತ ಒಂದು ಕೆಜಿ ಟೊಮೆಟೊ ದರವು 100 ರೂಪಾಯಿ ಗಡಿಯನ್ನು ದಾಟಿ ಏರಿಕೆ ಕಂಡಿದೆ. ಬೆಂಗಳೂರು, ದೆಹಲಿಯಲ್ಲಂತೂ ಟೊಮೆಟೊ ದರವು ದಿಡೀರ್ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಟೊಮೆಟೊ ದರ ಎಷ್ಟಿದೆ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟೊಮೆಟೊ ಕಳೆದ ಮೂರು ದಿನಗಳಿಂದ ಪ್ರತಿ ಕೆಜಿಗೆ 80 ರೂಪಾಯಿ ಆಗಿದೆ. ಇನ್ನು ಕಾನ್ಪುರದಲ್ಲಿ ಟೊಮೆಟೊ ದರವು ಪ್ರತಿ ಕೆಜಿಗೆ 100 ರೂಪಾಯಿಗೆ ಜಿಗಿತ ಕಂಡಿದೆ. ಕಳೆದ ತಿಂಗಳು ದೆಹಲಿಯಲ್ಲಿ ಟೊಮೆಟೊ ದರವು ಪ್ರತಿ ಕೆಜಿಗೆ 10-15 ರೂಪಾಯಿ ಆಗಿತ್ತು. ಆದರೆ ಈಗ ಐದಾರು ಪಟ್ಟು ದರ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಟೊಮೆಟೊ ದರವು ಒಂದು ವಾರದಲ್ಲಿಯೇ 125 ರೂಪಾಯಿಗೆ ಏರಿಕೆ ಕಂಡಿದೆ.
ಮೇ ತಿಂಗಳ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಟೊಮೆಟೊ ದರವು ಪ್ರತಿ ಕೆಜಿಗೆ 40 ರೂಪಾಯಿ ಆಗಿತ್ತು. ಆದರೆ ಈಗ ದಿಡೀರ್ ಆಗಿ 125 ರೂಪಾಯಿಗೆ ಹೆಚ್ಚಳಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರಿನ ನಿವಾಸಿ ಸಂಗೀತಾ, "ಟೊಮೆಟೊ ಹಾಕಿ ಅಡುಗೆ ಮಾಡೋದೆ ಬೇಡ, ಟೊಮೆಟೊ ಇಲ್ಲದೆ ಮಾಡುವ ಅಡುಗೆಯೇ ಒಳ್ಳೆಯದು ಅನಿಸಿದೆ. ಈ ಹಿಂದೆ ಪ್ರತಿ ಕೆಜಿ ಟೊಮೆಟೊ ದರ 30 ರೂಪಾಯಿ ಆಗಿತ್ತು. ಅದಾದ ಬಳಿಕ 50 ರೂಪಾಯಿಗೆ ಹೆಚ್ಚಾಗಿದೆ. ಈಗ 100 ರೂಪಾಯಿ ಆಗಿದೆ. ಬೆಲೆ ಹೆಚ್ಚಾಗುತ್ತಾ ಸಾಗಿದೆ. ಆದರೆ ನಮ್ಮ ಜೇಬಿಗೆ ಕತ್ತರಿ," ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಅತೀ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆ ಕೋಲಾರವಾಗಿದೆ. ಹಾಗೆಯೇ ದೇಶದಲ್ಲಿ ಅತೀ ದೊಡ್ಡ ಎಪಿಎಂಸಿ ಮಂಡಿಯನ್ನು ಹೊಂದಿರುವ ಜಿಲ್ಲೆಗಳ ಪೈಕಿ ಕೋಲಾರ ಒಂದಾಗಿದೆ. ಕೋಲಾರ ಮಂಡಿಯಲ್ಲಿ ಪ್ರತಿ 15 ಕೆಜಿಯ ಬುಟ್ಟಿಯು ಸೋಮವಾರ 1,080-1100 ರೂಪಾಯಿಗೆ ಮಾರಾಟವಾಗಿದೆ. ಪ್ರಮುಖವಾಗಿ ಕೋಲಾರದಲ್ಲಿ ಈ ವರ್ಷವು ಟೊಮೆಟೊ ಬಿತ್ತನೆಯು ಕಡಿಮೆಯಾಗಿದೆ.
ಟೊಮೆಟೊ ದರ ಏರಿಕೆ ಮೇಲೆ ಪ್ರಭಾವ ಬೀರಿದ ಅಂಶಗಳು
ಕೋಲಾರದಲ್ಲಿ ಹಲವಾರು ಕೃಷಿಕರು ಈ ವರ್ಷ ಬೀನ್ಸ್ ಬೆಳೆಯನ್ನು ಮಾಡುತ್ತಿದ್ದಾರೆ. ಬೀನ್ಸ್ ಬೆಲೆ ಅಧಿಕವಾಗಿರುವುದಕ್ಕೆ ಬೀನ್ಸ್‌ನತ್ತ ಕೃಷಿಕರು ವಾಲಿದ್ದಾರೆ. ಕಳೆದ ತಿಂಗಳು ಟೊಮೆಟೊ ದರವು ಪ್ರತಿ ಕೆಜಿಗೆ 3ರಿಂದ 5 ರೂಪಾಯಿಯಷ್ಟು ಇಳಿಕೆಯಾಗಿದೆ. ಇದಾದ ಬೆನ್ನಲ್ಲೇ ಹಲವಾರು ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಾಯಿತು ಎಂದು ತಾವು ಬೆಳೆದ ಟೊಮೆಟೊವನ್ನು ಟ್ರಾಕ್ಟರ್ ಓಡಿಸಿ ನಾಶ ಮಾಡಿದ್ದಾರೆ. ಆದರೆ ಈಗ ಟೊಮೆಟೊ ಸರಬರಾಜಿನ ಕೊರತೆ ಉಂಟಾಗಿದೆ.
ಈ ನಗರದಲ್ಲಿ ಟೊಮೆಟೊ ದರ 10 ರೂಪಾಯಿ!
ದೇಶದಲ್ಲಿ ಬಹುತೇಕ ಎಲ್ಲ ನಗರಗಳಲ್ಲಿ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವಾಗ ಕೆಲವು ನಗರಗಳಲ್ಲಿ ಇಂದಿಗೂ ಕೂಡಾ ಟೊಮೆಟೊ ದರವು ಅತೀ ಕಡಿಮೆಯಾಗಿದೆ. ಪ್ರಮುಖವಾಗಿ ಎರಡು ನಗರಗಳಲ್ಲಿ ಟೊಮೆಟೊ ದರವು ಅತೀ ಕಡಿಮೆಯಾಗಿದೆ. ಸಂಭಾಲ್ ಮತ್ತು ಕಿಯೋಂಜಾರ್‌ನಲ್ಲಿ ಪ್ರತಿ ಕೆಜಿಗೆ ಟೊಮೆಟೊ ದರವು ಕೇವಲ 10 ರೂಪಾಯಿ ಆಗಿದೆ. ಇನ್ನು ಟೊಮೆಟೊ ಮಾತ್ರವಲ್ಲ ಹಲವಾರು ತರಕಾರಿಗಳ ದರವು ಕೂಡಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಬೆಂಗಳೂರಿನ ಮಾರುಕಟ್ಟೆ ಮೇಲೆ ಅವಲಂಬನೆ
ದೆಹಲಿಯ ಸಗಟು ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಲ್ಲಿ ಟೊಮೆಟೊ ದರವು ದುಪ್ಪಟ್ಟಾಗಿದೆ. ಟೊಮೆಟೊ ವ್ಯಾಪಾರಿಯೊಬ್ಬರು ಮಾಧ್ಯಮಕ್ಕೆ ಈಗ ಬಗ್ಗೆ ಮಾಹಿತಿ ನೀಡಿದ್ದು ಕೊರತೆಯಿಂದಾಗಿ ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ನಮಗೆ ಬೇಕಾದಷ್ಟು ಟೊಮೆಟೊವು ಲಭ್ಯವಾಗುತ್ತಿಲ್ಲ. ಸದ್ಯಕ್ಕೆ ಟೊಮೆಟೊ ಪೂರೈಕೆಗಾಗಿ ಬೆಂಗಳೂರು ಮಾರುಕಟ್ಟೆಯನ್ನು ಅವಲಂಬಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಟೊಮೆಟೊ ಮಾತ್ರವಲ್ಲ ಇತರೆ ತರಕಾರಿಗಳ ದರವು ಕೂಡಾ ಏರಿಕೆಯಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆ ದರವು ಕೂಡಾ ಗಗನಕ್ಕೆ ಏರುತ್ತಿದೆ. ಒಂದು ಕೆಜಿ ಬೀನ್ಸ್ ದರವು 120-140 ರೂಪಾಯಿ ಆಸುಪಾಸಿನಲ್ಲಿದೆ. ಕ್ಯಾರೆಟ್ ದರವು 100 ರೂಪಾಯಿಗೆ ಸಮೀಸುತ್ತಿದೆ. ದೊಡ್ಡ ಮೆಣಸಿನಕಾಯಿ (ಕ್ಯಾಪ್ಸಿಕಮ್) ದರವು ಕೆಜಿಗೆ 80ಕ್ಕೆ ತಲುಪುತ್ತಿದೆ. ಮೊಟ್ಟೆ ದರವು ಕೂಡಾ ಹೆಚ್ಚಳವಾಗಿದೆ. ಒಂದು ಮೊಟ್ಟೆ ದರವು 7ರಿಂದ 8 ರೂಪಾಯಿಗೆ ತಲುಪಿದೆ.


Click it and Unblock the Notifications