ಮಳೆ ಆರಂಭವಾಗುತ್ತಿದ್ದಂತೆ ದೇಶದ ಹಲವಾರು ಪ್ರದೇಶಗಳಲ್ಲಿ ಟೊಮೆಟೊ ದರವು ಭಾರೀ ಏರಿಕೆಯಾಗಿದೆ. ಕಳೆದ ಒಂದು ವರ್ಷಗಳ ಹಿಂದೆ ಟೊಮೆಟೊವು ಅತೀ ದುಬಾರಿಯಾದಂತೆ ಈಗ ಮತ್ತೆ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಟೊಮೆಟೊ ಸೇರಿದಂತೆ ಹಲವಾರು ತರಕಾರಿಗಳ ದರವು ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ತರಕಾರಿಗಳಲ್ಲಿ ಮುಖ್ಯವಾಗಿ ಟೊಮೆಟೊ ದರವು ಶೀಘ್ರವೇ ಪ್ರತಿ ಕೆಜಿಗೆ 100 ರೂಪಾಯಿಗೂ ಅಧಿಕವಾಗುವ ಸಾಧ್ಯತೆಯಿದೆ.
ಇದಕ್ಕೆಲ್ಲ ಪ್ರಮುಖ ಕಾರಣ ಸರಬರಾಜು ಕೊರತೆ ಎಂದು ವರದಿಗಳು ಹೇಳುತ್ತದೆ. ಸರಬರಾಜು ಕೊರತೆ ಕಾರಣದಿಂದಾಗಿ ದೇಶದಲ್ಲಿ ಈಗ ಟೊಮೆಟೊ ದರವು ಗಗನಕ್ಕೆ ಏರಿಕೆಯಾಗುತ್ತಿದೆ. ಕಳೆದ ವಾರದಲ್ಲಿ ಟೊಮೆಟೊ ದರವು ಪ್ರತಿ ಕೆಜಿಗೆ 80 ರೂಪಾಯಿಗೆ ಜಿಗಿತ ಕಂಡಿದೆ. ಕೋಲಾರದ ಸಗಟು ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ 15 ಕೆಜಿ ಟೊಮೆಟೊ 1,100 ರೂಪಾಯಿಗೆ ಮಾರಾಟವಾಗಿದೆ. ಟೊಮೆಟೊ ದರ ಏರಿಕೆಗೆ ಪ್ರಭಾವ ಬೀರಿದ ಅಂಶಗಳ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ ಮುಂದೆ ಓದಿ...
ಟೊಮೆಟೊ ದರವು ಏರಿಕೆಯಾಗಲು ಕಾರಣವೇನು?
ಮಾನ್ಸೂನ್ ಈ ವರ್ಷ ವಿಳಂಬವಾಗಿದೆ. ಹಾಗೆಯೇ ಹವಾಮಾನ ವರದಿಯ ಪ್ರಕಾರ ಈ ವರ್ಷ ಭಾರತದ ಹಲವಾರು ನಗರಗಳಲ್ಲಿ ಅತೀ ಕಡಿಮೆ ಮಳೆಯಾಗಲಿದೆ. ಇವೆಲ್ಲದರ ಪರಿಣಾಮವು ತರಕಾರಿಗಳ ಬೆಲೆಯ ಮೇಲೆ ಬೀರಿದೆ. ದೇಶದ ಹಲವಾರು ನಗರಗಳಲ್ಲಿ ಪ್ರಸ್ತುತ ತರಕಾರಿ ದರವು ಭಾರೀ ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ ಟೊಮೆಟೊ ದರವು ಅಧಿಕವಾಗಿದೆ. ಇನ್ನಷ್ಟು ಅಧಿಕವಾಗುವ ನಿರೀಕ್ಷೆಯಿದೆ.
"ನಾವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷವು ಟೊಮೆಟೊ ಬಿತ್ತನೆಯು ಕಡಿಮೆಯಾಗಿದೆ. ಅದಕ್ಕೆ ನಿಗದಿತ ಒಂದೇ ಕಾರಣವಲ್ಲ, ಹಲವಾರು ಕಾರಣಗಳು ಇದೆ. ಕೋಲಾರದಲ್ಲಿ ಹಲವಾರು ಕೃಷಿಕರು ಈ ವರ್ಷ ಬೀನ್ಸ್ ಬೆಳೆಯನ್ನು ಮಾಡುತ್ತಿದ್ದಾರೆ. ಬೀನ್ಸ್ ಬೆಲೆ ಅಧಿಕವಾಗಿರುವುದಕ್ಕೆ ಬೀನ್ಸ್‌ನತ್ತ ಕೃಷಿಕರು ವಾಲಿದ್ದಾರೆ. ಆದರೆ, ಮುಂಗಾರು ಕೊರತೆಯಿಂದ ಬೆಳೆಗಳು ಒಣಗಿ ಹೋಗಿವೆ," ಎಂದು ಮಾಧ್ಯಮಗಳಿಗೆ ಕೋಲಾರದ ರೈತ ಆಂಜಿ ರೆಡ್ಡಿ ಮಾಹಿತಿ ನೀಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಅಧಿಕವಾಗಿ ಟೊಮೆಟೊ ಬೆಳೆಯುವ ಜಿಲ್ಲೆ ಕೋಲಾರ ಎಂಬುವುದು ಗಮನಾರ್ಹ.
ಪ್ರತಿ ಕೆಜಿಗೆ 3-5 ರೂಪಾಯಿ ಕುಗ್ಗಿದ್ದ ಟೊಮೆಟೊ ದರ
ಕಳೆದ ತಿಂಗಳು ಟೊಮೆಟೊ ದರವು ಪ್ರತಿ ಕೆಜಿಗೆ 3ರಿಂದ 5 ರೂಪಾಯಿಯಷ್ಟು ಇಳಿಕೆಯಾಗಿದೆ. ಇದಾದ ಬೆನ್ನಲ್ಲೇ ಹಲವಾರು ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಾಯಿತು ಎಂದು ತಾವು ಬೆಳೆದ ಟೊಮೆಟೊವನ್ನು ಟ್ರಾಕ್ಟರ್ ಓಡಿಸಿ ನಾಶ ಮಾಡಿದ್ದಾರೆ. ಆದರೆ ಈಗ ಟೊಮೆಟೊ ಸರಬರಾಜಿನ ಕೊರತೆ ಉಂಟಾಗಿದೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಟೊಮೆಟೊ ಬೆಲೆ ಕೊರತೆ ಉಂಟಾಗಿದೆ. ಪಶ್ಚಿಮ ಬಂಗಾಳ, ಒಡಿಶಾ, ಮಾತ್ರವಲ್ಲದೆ ಬಾಂಗ್ಲಾದೇಶದಿಂದಲೂ ಟೊಮೆಟೊವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ದೆಹಲಿಯ ಅಜಾದ್‌ಪುರದಲ್ಲಿ ಟೊಮೆಟೊ ದರ ದುಪ್ಪಟ್ಟು
ದೆಹಲಿಯ ಸಗಟು ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಲ್ಲಿ ಟೊಮೆಟೊ ದರವು ದುಪ್ಪಟ್ಟಾಗಿದೆ. ಟೊಮೆಟೊ ವ್ಯಾಪಾರಿಯೊಬ್ಬರು ಮಾಧ್ಯಮಕ್ಕೆ ಈಗ ಬಗ್ಗೆ ಮಾಹಿತಿ ನೀಡಿದ್ದು ಕೊರತೆಯಿಂದಾಗಿ ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ನಮಗೆ ಬೇಕಾದಷ್ಟು ಟೊಮೆಟೊವು ಲಭ್ಯವಾಗುತ್ತಿಲ್ಲ. ಸದ್ಯಕ್ಕೆ ಟೊಮೆಟೊ ಪೂರೈಕೆಗಾಗಿ ಬೆಂಗಳೂರು ಮಾರುಕಟ್ಟೆಯನ್ನು ಅವಲಂಭಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಟೊಮೆಟೊ ಮಾತ್ರವಲ್ಲ ಇತರೆ ತರಕಾರಿಗಳ ದರವು ಕೂಡಾ ಏರಿಕೆಯಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆ ದರವು ಕೂಡಾ ಗಗನಕ್ಕೆ ಏರುತ್ತಿದೆ. ಒಂದು ಕೆಜಿ ಬೀನ್ಸ್ ದರವು 120-140 ರೂಪಾಯಿ ಆಸುಪಾಸಿನಲ್ಲಿದೆ. ಕ್ಯಾರೆಟ್ ದರವು 100 ರೂಪಾಯಿಗೆ ಸಮೀಸುತ್ತಿದೆ. ದೊಡ್ಡ ಮೆಣಸಿನಕಾಯಿ (ಕ್ಯಾಪ್ಸಿಕಮ್) ದರವು ಕೆಜಿಗೆ 80ಕ್ಕೆ ತಲುಪುತ್ತಿದೆ. ಮೊಟ್ಟೆ ದರವು ಕೂಡಾ ಹೆಚ್ಚಳವಾಗಿದೆ. ಒಂದು ಮೊಟ್ಟೆ ದರವು 7ರಿಂದ 8 ರೂಪಾಯಿಗೆ ತಲುಪಿದೆ.



Click it and Unblock the Notifications