ದೆಹಲಿಯಲ್ಲಿ ಭಾನುವಾರ ಟೊಮೆಟೊ ಚಿಲ್ಲರೆ ದರ ಕೇಜಿಗೆ 70 ರುಪಾಯಿ ಮುಟ್ಟಿತ್ತು. ಟೊಮೆಟೊ ಪೂರೈಕೆಯಲ್ಲಿ ಕಡಿಮೆ ಆಗಿರುವುದರಿಂದ ಬೆಲೆಯ ಮೇಲೆ ಪರಿಣಾಮ ಬೀರಿದೆ. ಜೂನ್ 1ರಿಂದ ಈಚೆಗೆ ವಾರಕ್ಕೆ 10 ರುಪಾಯಿಯಂತೆ ಏರಿಕೆ ಕಾಣುತ್ತಲೇ ಸಾಗುತ್ತಿದೆ. ಅಸಂಘಟಿತ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಮದರ್ ಡೇರಿಯ ಸಫಲ್ ರೀಟೇಲ್ ತರಕಾರಿ ಔಟ್ ಲೆಟ್, ಬಿಗ್ ಬ್ಯಾಸ್ಕೆಟ್ ಮತ್ತು ಗ್ರೋಫರ್ಸ್ ನಲ್ಲಿ ಕೂಡ ಏರಿಕೆ ದಾಖಲಿಸುತ್ತಲೇ ಸಾಗಿದೆ.
ಬಿಗ್ ಬ್ಯಾಸ್ಕೆಟ್ ನಲ್ಲಿ ಭಾನುವಾರ ಟೊಮೆಟೊ ಕೇಜಿಗೆ 60ರಿಂದ 66 ರುಪಾಯಿ ಹಾಗೂ ಗ್ರೋಫರ್ಸ್ ನಲ್ಲಿ 53ರಿಂದ 55 ರುಪಾಯಿಗೆ ಮಾರಾಟ ಆಗುತ್ತಿದೆ. ಅಸಂಘಟಿತ ಮಾರುಕಟ್ಟೆಯಲ್ಲಿ ಗುಣಮಟ್ಟ, ಸ್ಥಳದ ಆಧಾರದ ಮೇಲೆ ಕೇಜಿಗೆ 70ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ ಎಂದು ವರ್ತಕರು ಹೇಳಿದ್ದಾರೆ.
ಯಾವ ರಾಜ್ಯಗಳಿಂದ ಟೊಮೆಟ್ ಉತ್ಪನ್ನ ಹೆಚ್ಚು ಬರುತ್ತಿತ್ತೋ ಅಲ್ಲಿಂದ ಅಗತ್ಯ ಪ್ರಮಾಣದಲ್ಲಿ ಬರುತ್ತಿಲ್ಲ. ಆ ಕಾರಣಕ್ಕೆ ಸಗಟು ಮಾರುಕಟ್ಟೆಯಲ್ಲಿ ಕೂಡ ಟೊಮೆಟೊ ಬೆಲೆ ಹೆಚ್ಚಿದೆ. ಇನ್ನು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಟೊಮೆಟೊ ಬೆಳೆಯುವುದೇ ಕಡಿಮೆ ಆಗಿದೆ. ಆ ಕಾರಣಕ್ಕೆ ದೆಹಲಿ ಮಾತ್ರ ಅಲ್ಲ, ಅಲ್ಲಿನ ನೆರೆಯ ರಾಜ್ಯಗಳಲ್ಲೂ ಟೊಮೆಟೊ ಬೆಲೆ ಏರಿಕೆ ಆಗಿದೆ.

ಉತ್ತರಪ್ರದೇಶ, ರಾಜಸ್ಥಾನ, ಜಾರ್ಖಂಡ್, ಪಂಜಾಬ್, ತಮಿಳುನಾಡು, ಕೇರಳ, ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲಪ್ರದೇಶದಲ್ಲಿ ಟೊಮೆಟೊ ಉತ್ಪಾದನೆಯಲ್ಲಿ ಕೊರತೆಯಾಗಿದೆ. ಅಂದ ಹಾಗೆ ದೇಶದಲ್ಲಿ ವಾರ್ಷಿಕ 19.73 ಮಿಲಿಯನ್ ಟನ್ ಟೊಮೆಟೊ ಉತ್ಪಾದನೆಯಾದರೆ, 11.51 ಮಿಲಿಯನ್ ಟನ್ ಬಳಕೆಯಾಗುತ್ತದೆ ಎಂದು ಅಧಿಕೃತ ಮಾಹಿತಿಗಳು ದೊರೆಯುತ್ತವೆ.


Click it and Unblock the Notifications