ತುಮಕೂರು, ಏಪ್ರಿಲ್ 2: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ ಸೋಮಣ್ಣ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಆಸ್ತಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಅವರು ಪಕ್ಷದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡಲಾಗಿದೆ. ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತಿರುವ ಅವರಿಗೆ ಪಕ್ಷದ ಕೆಲವು ಕಾರ್ಯಕರ್ತರ ವಿರೋಧ ವ್ಯಕ್ತವಾಗಿದೆ.

ಸೋಮವಾರ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಘೋಷಿಸಿದ ಮಾಜಿ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಪತ್ನಿ ಜಿ ಶೈಲಜಾ ಅವರಿಗಿಂತ ಬಡವರು ಎಂದು ತಿಳಿದು ಬಂದಿದೆ. ಅವರ ಒಟ್ಟು ಆಸ್ತಿ ಮೌಲ್ಯ 43,03,81,625 ರೂ. ಎಂದು ಅವರು ಘೋಷಿಸಿಕೊಂಡಿದ್ದಾರೆ. ಸೋಮಣ್ಣ ಅವರಿಗೆ ಚಿಕ್ಕಮಗಳೂರು ತಾಲೂಕಿನ ಬಸಾಪುರ ಮತ್ತು ಕಡವಂತಿ ಗ್ರಾಮದಲ್ಲಿ 4.5 ಕೋಟಿ ಮೌಲ್ಯದ 68.01 ಎಕರೆ ಕೃಷಿ ಭೂಮಿ ಇದೆ.
ಅವರ ಪತ್ನಿ ಶೈಲಜಾ ಅವರು ಬೆಂಗಳೂರಿನ ನಾಗದೇವನಹಳ್ಳಿ ಮತ್ತು ಕೆಂಗೇರಿಯಲ್ಲಿ ವಾಣಿಜ್ಯ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಸೇರಿದಂತೆ 25.7 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ವಿ ಸೋಮಣ್ಣ ಅವರು ವಿಜಯನಗರ ಮತ್ತು ಎಂಆರ್ ಸಿಆರ್ ಲೇಔಟ್ ನಲ್ಲಿ 8.06 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರು 10.35 ಲಕ್ಷ ಮೌಲ್ಯದ ಚಿನ್ನ (650 ಗ್ರಾಂ) ಮತ್ತು ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ, ಆದರೆ ಅವರ ಪತ್ನಿ 2,524 ಗ್ರಾಂ ವಜ್ರಗಳು ಸೇರಿದಂತೆ 1.05 ಕೋಟಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಸೋಮಣ್ಣ ಅವರ ಚರ ಆಸ್ತಿ ಮೌಲ್ಯ 5,18,23,590 ಆಗಿದ್ದು, ಸ್ಥಿರಾಸ್ತಿ ಮೌಲ್ಯ 12,56,00,000ರಷ್ಟಿದೆ. ಪತ್ನಿ ಶೈಲಜಾ 4,38,81,625 ಮೌಲ್ಯದ ಚರ ಆಸ್ತಿ ಮತ್ತು 38,65,00,000 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸೋಮಣ್ಣ ಅವರು ಬ್ಯಾಂಕ್‌ಗಳಲ್ಲಿ 6,44,52,206 ಸಾಲ ಹೊಂದಿದ್ದರೆ, ಶೈಲಜಾ 16,18,48,255 ರೂ. ಹೊಂದಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.
ಸೋಮಣ್ಣ ಮೇಲೆ ಮಾಧುಸ್ವಾಮಿ ಅಸಮಾಧಾನ
ವಿ ಸೋಮಣ್ಣ ನಾಮಪತ್ರ ಸಲ್ಲಿಸುವಾಗ ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಗೈರಾಗಿದ್ದರು. ಸೋಮಣ್ಣ ಅವರೊಂದಿಗೆ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ, ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಇದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನಿಷ್ಠಾವಂತರಾಗಿರುವ ಮಾಧುಸ್ವಾಮಿ ಸೋಮಣ್ಣ ಅವರ ಉಮೇದುವಾರಿಕೆಯನ್ನು ವಿರೋಧಿಸಿದ್ದಾರೆ. ಸೋಮಣ್ಣ ಅವರನ್ನು ಹೊರಗಿನವರು ಎಂದು ಕರೆದಿದ್ದಾರೆ. ಈ ನಿಟ್ಟಿನಲ್ಲಿ ಮಾಧುಸ್ವಾಮಿ ಒಳೇಟು ನೀಡುವ ಸಾಧ್ಯತೆ ಇರುವುದರಿಂದ ಪಕ್ಷವು ಅವರನ್ನು ಉಡುಪಿ-ಚಿಕ್ಕಮಗಳೂರು ಉಸ್ತುವಾರಿಯನ್ನಾಗಿ ನಿಯೋಜಿಸಿದೆ.


Click it and Unblock the Notifications