ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟ್ಟರ್‌ನ ಮಾಲೀಕತ್ವವನ್ನು ಪಡೆದ ಬಳಿಕ ಸಂಸ್ಥೆಯಲ್ಲಿ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದವು. ಈಗ ಟ್ವಿಟ್ಟರ್ ಭಾರತದಲ್ಲಿ ತನ್ನ 200ಕ್ಕೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
ಈ ಹಿಂದೆ ಟ್ವಿಟ್ಟರ್ ತನ್ನ ಒಟ್ಟು ಉದ್ಯೋಗಗಳಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಾರೆ ಎಂಬ ಸುದ್ದಿಯಾಗಿತ್ತು. ಅದಕ್ಕೂ ಮುನ್ನ ಟ್ವಿಟ್ಟರ್ ಸುಮಾರು ಶೇಕಡ 75ಕ್ಕಿಂತ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.
ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸುಮಾರು 44 ಬಿಲಿಯನ್ ಯುಎಸ್ ಡಾಲರ್ ನೀಡಿ ಖರೀದಿ ಮಾಡಿದ್ದಾರೆ. ಈ ಹಣವನ್ನು ವಾಪಾಸ್ ಪಡೆಯುವ ನಿಟ್ಟಿನಲ್ಲಿ ಯಾವುದೇ ಉದ್ಯಮಿಗಳು ಕಾರ್ಯನಿರ್ವಹಣೆ ಮಾಡುವುದು ಸಹಜವಾಗಿದೆ. ಈಗ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿನ ಜಗತ್ತಿನಾದ್ಯಂತ ಸಾಮೂಹಿಕವಾಗಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ.
ಟ್ವಿಟ್ಟರ್ ಭಾರತದಲ್ಲಿ ತನ್ನ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಹೆಚ್ಚಾಗಿ ಇಂಜಿನಿಯರ್‌ಗಳು, ಮಾರಾಟ ಅಥವಾ ಮಾರ್ಕೆಟಿಂಗ್ ತಂಡದಲ್ಲಿದ್ದವರು, ಕಮ್ಯೂನಿಕೇಷನ್ ನಿರ್ವಹಣೆ ತಂಡದಲ್ಲಿದ್ದವರನ್ನು ವಜಾ ಮಾಡಲಾಗಿದೆ. ಆದರೆ ಈವರೆಗೂ ಭಾರತದಲ್ಲಿ ವಜಾ ಮಾಡಿದ ಉದ್ಯೋಗಿಗಳಿಗೆ ಸಂಸ್ಥೆಯು ಎಷ್ಟು ವೇತನವನ್ನು ನೀಡುತ್ತಿತ್ತು ಎಂಬ ಬಗ್ಗೆ ಸ್ಪಷ್ಟಣೆ ಇಲ್ಲ.
ಎಲಾನ್ ಮಸ್ಕ್ ಹೇಳುವುದು ಏನು?
ಇನ್ನು ಎಲಾನ್ ಮಸ್ಕ್ ಸಂಸ್ಥೆಯ ಆದಾಯದಲ್ಲಿ ಗಮನಾರ್ಹ ಕುಸಿತಕ್ಕೆ ಸಾಮಾಜಿಕ ಕಾರ್ಯಕರ್ತರನ್ನು ದೂಷಿಸಿದ್ದಾರೆ. "ಟ್ವಿಟ್ಟರ್‌ನ ಆದಾಯದಲ್ಲಿ ಭಾರೀ ಕುಸಿತ ಉಂಟಾಗಿದೆ. ಜಾಹೀರಾತುದಾರರ ಮೇಲೆ ಸಾಮಾಜಿಕ ಕಾರ್ಯಕರ್ತರ ಗುಂಪು ಒತ್ತಡ ಹೇರುತ್ತಿರುವ ಕಾರಣದಿಂದಾಗಿ ಸಂಸ್ಥೆಯ ಆದಾಯ ಕುಸಿಯುತ್ತಿದೆ. ನಾವು ಸಾಮಾಜಿಕ ಕಾರ್ಯಕರ್ತರನ್ನು ಸಮಾಧಾನಪಡಿಸುವ ಎಲ್ಲ ಕಾರ್ಯವನ್ನು ಮಾಡಿದ್ದೇವೆ. ಆದರೆ ಜಾಹೀರಾತುದಾರರ ಮೇಲಿನ ಒತ್ತಡವು ಸಂಸ್ಥೆಯ ಆದಾಯದ ಮೇಲೆ ಪ್ರಭಾವ ಉಂಟು ಮಾಡಿದೆ," ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ. "ಅತ್ಯಂತ ಗೊಂದಲಮಯವಾಗಿದೆ. ಅಮೆರಿಕಾದಲ್ಲಿ ವಾಕ್ ಸ್ವಾತಂತ್ರ್ಯವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ," ಎಂದು ಕೂಡಾ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಸಂಸ್ಥೆಗೆ ಈವರೆಗೆ ಆಗಿರುವ ನಷ್ಟ
ಟ್ವಿಟ್ಟರ್ ಸಂಸ್ಥೆಯು ಜೂನ್ 30, 2022 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಸುಮಾರು 270 ಮಿಲಿಯನ್ ಯುಎಸ್ ಡಾಲರ್ ನಷ್ಟವನ್ನು ಕಂಡಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಟ್ವಿಟ್ಟರ್ ಸುಮಾರು 66 ಮಿಲಿಯನ್ ಯುಎಸ್ ಡಾಲರ್ ನಿವ್ವಳ ಲಾಭವನ್ನು ಘೋಷಣೆ ಮಾಡಿತ್ತು. ಆದರೆ ಈ ವರ್ಷ ನಷ್ಟವನ್ನು ಕಂಡಿದೆ. 2022 ರ ಜೂನ್ ತ್ರೈಮಾಸಿಕದಲ್ಲಿ ಟ್ವಿಟರ್‌ನ ಆದಾಯವು ಭಾರೀ ಕುಸಿದಿದೆ. ಒಂದು ವರ್ಷದ ಹಿಂದೆ ಜೂನ್‌ನಿಂದ ಅಂತ್ಯವಾಗುವ ತ್ರೈಮಾಸಿಕದಲ್ಲಿ ಟ್ವಿಟ್ಟರ್‌ನ ಆದಾಯವು 1,190 ಮಿಲಿಯನ್ ಯುಎಸ್ ಡಾಲರ್ ಆಗಿತ್ತು. ಆದರೆ ಆದಾಯವು ಈ ವರ್ಷದಲ್ಲಿ 1,176 ಮಿಲಿಯನ್ ಡಾಲರ್‌ಗೆ ಕುಸಿದಿದೆ. ಈಗ ಕಂಪನಿಯ ಜಾಗತಿಕವಾಗಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.
ಉದ್ಯೋಗ ಕಡಿತದ ಬಗ್ಗೆ ಇಮೇಲ್
ಭಾರತದಲ್ಲಿನ ಸಂಪೂರ್ಣ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗವನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವದಲ್ಲೇ ಅತೀ ಶ್ರೀಮಂತ ಉದ್ಯೋಗಿಯಾಗಿರುವ ಎಲಾನ್ ಮಸ್ಕ್ ಕಳೆದ ವಾರ ಟ್ವಿಟರ್‌ನಲ್ಲಿ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ ಮತ್ತು ಇತರ ಕೆಲವು ಉನ್ನತ ಅಧಿಕಾರಿಗಳನ್ನು ವಜಾ ಮಾಡಿದ್ದಾರೆ. ಕಂಪನಿಯ ಜಾಗತಿಕವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವ ನಿಟ್ಟಿನಲ್ಲಿ ಈಗ ಕೆಲಸದಿಂದ ವಜಾ ಮಾಡುವ ಕಾರ್ಯಕ್ಕೆ ಇಳಿದಿದೆ. "ವಜಾಗೊಳಿಸುವಿಕೆ ಪ್ರಾರಂಭವಾಗಿದೆ. ನನ್ನ ಕೆಲವು ಸಹೋದ್ಯೋಗಿಗಳು ಈ ಬಗ್ಗೆ ಇಮೇಲ್ ಪಡೆದಿದ್ದಾರೆ," ಎಂಬ ಮಾಹಿತಿಯನ್ನು ಹೆಸರು ಹೇಳಲು ಬಯಸದ ಟ್ವಿಟ್ಟರ್ ಉದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ.


Click it and Unblock the Notifications