ಟ್ವಿಟ್ಟರ್ ಬಳಕೆದಾರರ ಸಂಖ್ಯೆ ಏರಿಕೆಯಾಗಿದೆ. ಆದರೆ ತ್ರೈಮಾಸಿಕ ಆದಾಯದಲ್ಲಿ ಮಾತ್ರ ನಷ್ಟವಾಗಿದೆ ಎಂದು ಶುಕ್ರವಾರ ಟ್ವಿಟ್ಟರ್ ವರದಿ ಮಾಡಿದೆ. ಇನ್ನು ಈ ನಷ್ಟಕ್ಕೆ ಎಲಾನ್ ಮಸ್ಕ್ ಕಾರಣ ಎಂದು ಆಕ್ರೋಶ ಕೂಡಾ ವ್ಯಕ್ತಪಡಿಸಿದೆ.
ಇನ್ನು ಟ್ವಿಟ್ಟರ್ ಅನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳುತ್ತಾರೆಯೇ ಎಂಬುದರ ಕುರಿತು ತಿಂಗಳ ಕಾಲ ಮಾತುಕತೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮ ವ್ಯವಹಾರವು ಹೇಗೆ ಕಾರ್ಯನಿರ್ವಹಿಸಿದೆ ಎಂಬುದರ ಕುರಿತು ವಿವರವನ್ನು ಕೂಡಾ ನೀಡಲಾಗಿದೆ.
ಏಪ್ರಿಲ್-ಜೂನ್ ಅವಧಿಯಲ್ಲಿ ಕಂಪನಿಯಲ್ಲಿ 270 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಆದಾಯವು ಶೇಕಡ 1ರಷ್ಟು ಕುಸಿದು 1.18 ಬಿಲಿಯನ್ ಡಾಲರ್‌ಗೆ ತಲುಪಿದೆ. ಜಾಹೀರಾತು ಹಾಗೂ ಎಲಾನ್ ಮಸ್ಕ್ ವಿವಾದದ ನಡುವೆ ಟ್ವಿಟ್ಟರ್ ಆದಾಯ ಕುಸಿದಿದೆ ಎಂದು ವರದಿ ಉಲ್ಲೇಖ ಮಾಡಿದೆ.

ದೈನಂದಿನ ಟ್ವಿಟ್ಟರ್ ಬಳಕೆದಾರರ ಸಂಖ್ಯೆ ಏರಿಕೆ
ಈ ನಡುವೆ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆಯು ಶೇಕಡ 16.6ರಷ್ಟು ಏರಿಕೆಯಾಗಿದೆ. 237.8 ಮಿಲಿಯನ್ ಮಂದಿ ದೈನಂದಿನ ಟ್ವಿಟ್ಟರ್ ಬಳಕೆ ಮಾಡುತ್ತಿದ್ದಾರೆ. ಆದರೆ ಲಾಭ ಮಾತ್ರ ಇಳಿಕೆಯಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಟ್ವಿಟ್ಟರ್ ಲಾಭವನ್ನು ದಾಖಲಿಸಿತ್ತು.
ಎಲಾನ್ ಮಸ್ಕ್ ಟ್ವಿಟ್ಟರ್ ಸಂಸ್ಥೆಯನ್ನು 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡುವುದಾಗಿ ಹೇಳಿದ್ದು, ಈ ವಿಚಾರದಲ್ಲಿ ಕಾನೂನು ಸಮರ ನಡೆಯುತ್ತಿದೆ. ಒಪ್ಪಂದವನ್ನು ಪೂರ್ಣಗೊಳಿಸಲು ಟ್ವಿಟರ್ ಕಳೆದ ವಾರ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದೆ. ಅಕ್ಟೋಬರ್‌ನಲ್ಲಿ ನ್ಯಾಯಾಲಯದ ವಿಚಾರಣೆ ಸಾಧ್ಯತೆ ಇದೆ.
ಏಪ್ರಿಲ್ 4 ರಂದು ಮಸ್ಕ್ ಕಂಪನಿಯಲ್ಲಿ ಭಾರಿ ಪಾಲನ್ನು ಪಡೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ ಬಳಿಕ ಈ ವಿವಾದ ಆರಂಭವಾಗಿದೆ. ಟ್ವಿಟರ್ ಮತ್ತು ಅದರ ಉದ್ಯೋಗಿಗಳ ಬಗ್ಗೆ ಮಸ್ಕ್ ಸಾರ್ವಜನಿಕವಾಗಿ ತನ್ನ ಕಳವಳವನ್ನು ಟ್ವೀಟ್ ಮಾಡಿದ್ದಾರೆ. ಇವೆಲ್ಲವೂ ಟ್ವಿಟ್ಟರ್ ಆದಾಯದ ಮೇಲೆ ಪ್ರಭಾವ ಉಂಟು ಮಾಡಿದೆ ಎಂದು ಆರೋಪ ಮಾಡಲಾಗಿದೆ.
"ಟ್ವಿಟ್ಟರ್ ಮತ್ತು ಅದರ ಸಿಬ್ಬಂದಿಯನ್ನು ಪದೇ ಪದೇ ಅವಹೇಳನ ಮಾಡುವುದು ಟ್ವಿಟರ್‌ನ ವ್ಯಾಪಾರ ಕಾರ್ಯಾಚರಣೆಗಳು, ಉದ್ಯೋಗಿಗಳು ಮತ್ತು ಸ್ಟಾಕ್ ಬೆಲೆಗೆ ಹಾನಿ ಉಂಟು ಮಾಡಿದೆ," ಎಂದು ಟ್ವಿಟ್ಟರ್ ನ್ಯಾಯಾಲಯದಲ್ಲಿ ವಾದಿಸಿದೆ. ಹಾಗೆಯೇ ತ್ವರಿತ ವಿಚಾರಣೆ ನಡೆಯಬೇಕು ಎಂದು ಹೇಳಿದೆ. ನ್ಯಾಯಾಧೀಶರು ಅಕ್ಟೋಬರ್‌ನಲ್ಲಿ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.


Click it and Unblock the Notifications