ಈ ಹಿಂದೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದ, ಪ್ರಸ್ತುತ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಸಂಸ್ಥೆಯು ಭಾರೀ ನಷ್ಟವನ್ನು ಕಂಡಾಗ ವೆಚ್ಚ ಕಡಿತದ ನೆಪದಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈಗ ದೆಹಲಿ, ಮುಂಬೈ ಕಚೇರಿಯನ್ನು ಟ್ವಿಟ್ಟರ್ ಮುಚ್ಚಿದೆ ಎಂದು ವರದಿಯಾಗಿದೆ.
ಹೌದು, ದೇಶದಲ್ಲಿರುವ ಟ್ವಿಟ್ಟರ್‌ನ ಮೂರು ಕಚೇರಿಗಳ ಪೈಕಿ ಎರಡು ಕಚೇರಿಗಳನ್ನು ಟ್ವಿಟ್ಟರ್ ಬಂದ್ ಮಾಡಿದೆ. ದೆಹಲಿ, ಮುಂಬೈ ಕಚೇರಿಯನ್ನು ಮುಚ್ಚಿದ ಟ್ವಿಟ್ಟರ್ ತನ್ನ ಉದ್ಯೋಗಿಗಳಿಗೆ ಇನ್ನು ಮುಂದೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ತಿಳಿಸಿದೆ. ಟ್ವಿಟ್ಟರ್ ಈಗಾಗಲೇ ಸುಮಾರು ಶೇಕಡ 90ರಷ್ಟು ಅಂದರೆ 200ಕ್ಕೂ ಅಧಿಕ ಭಾರತದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈಗ ಕಚೇರಿ ಮುಚ್ಚಿದೆ.
ಇನ್ನು ಈ ಹಿಂದೆ ಟ್ವಿಟ್ಟರ್ ತನ್ನ ಬೆಂಗಳೂರು ಕಚೇರಿ ಮುಚ್ಚಲಿದೆ, ಮುಚ್ಚಿದೆ ಎಂಬ ಊಹಾಪೋಹಗಳು ಹರಡಿದ್ದವು. ಸಂಸ್ಥೆಯು ಬೆಂಗಳೂರಿನಲ್ಲಿನ ಕಚೇರಿಯನ್ನು ಮುಚ್ಚುವ ನಿರ್ಧಾರವನ್ನು ಮಾಡಿಲ್ಲ. ಬೆಂಗಳೂರಿನಲ್ಲಿರುವ ಉದ್ಯೋಗಿಗಳು ನೇರವಾಗಿ ಯುಎಸ್‌ಗೆ ವರದಿ ಮಾಡುವಂತಹ ಉದ್ಯೋಗಿಗಳು ಎಂದು ಕೂಡಾ ಮಾಹಿತಿ ಲಭ್ಯವಾಗಿದೆ.

ವಿಶ್ವದಾದ್ಯಂತ ಹಲವಾರು ಕಚೇರಿಗಳು ಬಂದ್
ಟ್ವಿಟ್ಟರ್ ಈಗಾಗಲೇ ವೆಚ್ಚ ಕಡಿತದ ನೆಪದಲ್ಲಿ ವಿಶ್ವದಾದ್ಯಂತ ಹಲವಾರು ಕಚೇರಿಗಳನ್ನು ಬಂದ್ ಮಾಡಿದೆ. ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಭಾರತದಲ್ಲಿಯೂ ಈ ಕ್ರಮವನ್ನು ಕೈಗೊಂಡಿದೆ. ಟ್ವಿಟ್ಟರ್ ಈ ಹಿಂದೆ ಸಿಂಗಾಪುರದಲ್ಲಿ ಕಚೇರಿಯನ್ನು ಬಂದ್ ಮಾಡಿದೆ. ಹಾಗೆಯೇ ಟ್ವಿಟ್ಟರ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ತನ್ನ ಕಚೇರಿಯ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ದೂರು ದಾಖಲು ಮಾಡಲಾಗಿತ್ತು.
ಇವೆಲ್ಲ ಬೆಳವಣಿಗೆ ನಡುವೆ ಭಾರತದಲ್ಲಿ ಟ್ವಿಟ್ಟರ್ ತನ್ನ ವಿಸ್ತಾರವನ್ನು ವರ್ಷ ಕಳೆದಂತೆ ಹೆಚ್ಚಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಟ್ವಿಟ್ಟರ್ ಭಾರತದಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮವಾಗಿ ಬದಲಾಗಿದೆ. ಸರ್ಕಾರದ ಘೋಷಣೆ, ನಿಯಮ ಯಾವುದೇ ಕ್ರಮಗಳನ್ನು ಕೂಡಾ ಟ್ವಿಟ್ಟರ್ ಖಾತೆಯ ಮೂಲಕ ಘೋಷಣೆ ಮಾಡಲಾಗುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ 86.5 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆದರೆ ಭಾರತದಲ್ಲಿ ಎಲಾನ್ ಮಸ್ಕ್‌ನ ಸಂಸ್ಥೆಗೆ ಅಧಿಕವಾಗಿ ಆದಾಯ ಲಭಿಸುತ್ತಿಲ್ಲ ಎಂದು ವರದಿಯಾಗಿದೆ. ಹಾಗೆಯೇ ಭಾರತದಲ್ಲಿ ನಿಯಮಗಳು ಅಧಿಕವಾಗಿದೆ.


Click it and Unblock the Notifications