ಮುಂದಿನ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಬರಬಹುದಾದ ಆದಾಯ ಮತ್ತು ಆಗಬಹುದಾದ ಖರ್ಚಿನ ಅಂದಾಜು ಪಟ್ಟಿಯನ್ನು ಬಜೆಟ್ ಎನ್ನಲಾಗುತ್ತದೆ. ಹೇಗೆ ಒಂದು ಮನೆ ಅಂದರೆ ವಿವಿಧ ಆದಾಯ ಮೂಲ ಹಾಗೂ ಖರ್ಚು, ಹೆಚ್ಚಿನ ಖರ್ಚನ್ನು ಸರಿದೂಗಿಸಲು ಏನು ಮಾಡಬೇಕು ಎಂಬ ಲೆಕ್ಕಾಚಾರ ಇರುತ್ತದೋ ಇದು ಹಾಗೇ.
ಆದರೆ, ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುವ ತನಕ ಅದರಲ್ಲಿ ಒಳಗೊಂಡಿರುವ ಅಂಶಗಳು ಬಹಿರಂಗ ಆಗದಂತೆ ಬಹಳ ಎಚ್ಚರಿಕೆ ವಹಿಸಲಾಗುತ್ತದೆ. ಬಜೆಟ್ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಡದಂತೆ ಸಿದ್ಧತೆಗಳು ನಡೆಯುತ್ತವೆ. ಆ ಸಿದ್ಧತೆಗಳು ಏನು ಮತ್ತು ಹೇಗಿರುತ್ತವೆ ಎಂಬುದರ ಬಗ್ಗೆ ಬರೆದರೆ ಅದೇ ಒಂದು ಲೇಖನವಾಗುತ್ತದೆ. ಈಗಿನ ಲೇಖನ ಆ 'ಬಜೆಟ್ ರಹಸ್ಯ'ವನ್ನು ತೆರೆದಿಡುತ್ತದೆ.
ನಾರ್ತ್ ಬ್ಲಾಕ್ ಗೆ ಬಿಗಿ ಭದ್ರತೆ
ನವದೆಹಲಿಯಲ್ಲಿ ಸಂಸತ್ ಕಾರ್ಯಾಲಯದ ನಾರ್ತ್ ಬ್ಲಾಕ್ ನಲ್ಲಿ ಹಣಕಾಸು ಸಚಿವಾಲಯ ಇದೆ. ಬಜೆಟ್ ಗೆ ಮೂರು ವಾರ ಮುಂಚೆ ಭಾರೀ ಭದ್ರತೆಯನ್ನು ಒದಗಿಸಲಾಗುತ್ತದೆ. ಗುಪ್ತಚರ ದಳ (ಐಬಿ), ದೆಹಲಿ ಪೊಲೀಸ್ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಕೂಡ ಈ ವಲಯದಲ್ಲಿ ಭದ್ರತೆ ಒದಗಿಸುತ್ತವೆ. ಹಾಗೆ ನೋಡಿದರೆ ನವೆಂಬರ್ ತಿಂಗಳಿಂದಲೇ ಭದ್ರತೆ ಇರುತ್ತದೆ. ಏಕೆಂದರೆ ಬಜೆಟ್ ಸಿದ್ಧತೆ ಆಗಿಂದಲೇ ಶುರುವಾಗುತ್ತದೆ. ಜನವರಿ ಹೊತ್ತಿಗೆ ಆ ಭದ್ರತೆ ವಿಪರೀತ ಹೆಚ್ಚಿರುತ್ತದೆ.
ಹಲ್ವಾ ಕಾರ್ಯಕ್ರಮದೊಂದಿಗೆ ಆರಂಭ
ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆ 'ಹಲ್ವಾ ಕಾರ್ಯಕ್ರಮ'ದೊಂದಿಗೆ ಆರಂಭವಾಗುತ್ತದೆ. ಈ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಜೆಟ್ ದಾಖಲೆಗಳ ಮುದ್ರಣ ಆರಂಭವಾಗುವ ದಿನದಂದು ದೊಡ್ಡ ಕಡಾಯಿಯಲ್ಲಿ ಹಲ್ವಾ ಮಾಡಿ, ಹಂಚಲಾಗುತ್ತದೆ. ಆ ದಿನದಿಂದ ಸಂಸತ್ ನಲ್ಲಿ ಬಜೆಟ್ ಮಂಡನೆ ಆಗುವ ತನಕ ಹಣಕಾಸು ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮ ಕುಟುಂಬ, ಸಂಬಂಧಿಕರು, ಸ್ನೇಹಿತರ ಸಂಪರ್ಕಕ್ಕೆ ಸಿಗುವುದಿಲ್ಲ. ಅವರು ಮುದ್ರಣಾಲಯ ಇರುವ ನಾರ್ತ್ ಬ್ಲಾಕ್ ಬೇಸ್ ಮೆಂಟ್ ನಲ್ಲೇ ಉಳಿದಿರುತ್ತಾರೆ.
ದಾಖಲೆಗಳ ಮಾಹಿತಿ ಕಾಪಾಡಿಕೊಳ್ಳಲಾಗುತ್ತದೆ
ಬಜೆಟ್ ಬಗ್ಗೆ ಪ್ರಮುಖ ಅಂಕಿಗಳನ್ನು ಒಳಗೊಂಡ 'ಬ್ಲ್ಯೂ ಶೀಟ್' ಅನ್ನು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಲಾಗುತ್ತದೆ. ಇದನ್ನು ಹಣಕಾಸು ಸಚಿವರು ಕೂಡ ತಮ್ಮ ಬಳಿ ಇರಿಸಿಕೊಳ್ಳಲು ಅನುಮತಿ ಇರುವುದಿಲ್ಲ. ಬಜೆಟ್ ನ ಜಂಟಿ ಕಾರ್ಯದರ್ಶಿ ಸುಪರ್ದಿಯಲ್ಲಿ ಇದು ಇರುತ್ತದೆ. ಬಜೆಟ್ ಗೆ ಕೆಲವು ವಾರಗಳ ಮುಂಚೆ ಬ್ಲ್ಯೂ ಶೀಟ್ ನ ಮೊದಲ ಪ್ರತಿ ಸಿದ್ಧವಾಗುತ್ತದೆ. ಇದರಲ್ಲಿ ಬಜೆಟ್ ಗೆ ಸಂಬಂಧಿಸಿದ ಎಲ್ಲ ಲೆಕ್ಕಾಚಾರಗಳು ಇರುತ್ತವೆ.
ಮುದ್ರಣಾಲಯದಲ್ಲೇ ಉಳಿದುಕೊಳ್ಳುವ ಸಿಬ್ಬಂದಿ
ಹಲ್ವಾ ಕಾರ್ಯಕ್ರಮದ ನಂತರ ನೂರರಷ್ಟು ಅಧಿಕಾರಿಗಳು ನಾರ್ತ್ ಬ್ಲಾಕ್ ನ ಬೇಸ್ ಮೆಂಟ್ ನಲ್ಲಿ ಇರುವ ಮುದ್ರಣಾಲಯದಲ್ಲೇ ಉಳಿದುಕೊಳ್ಳುತ್ತಾರೆ. ಬಜೆಟ್ ಮಂಡನೆ ದಿನದ ತನಕ ಹೊರಗಿನ ಜಗತ್ತಿನ ಜತೆಗೆ ಸಂಪರ್ಕ ಇರುವುದಿಲ್ಲ. ಈ ಅಧಿಕಾರಿಗಳು ಪ್ರಿಂಟಿಂಗ್, ಪ್ರೂಫ್ ರೀಡಿಂಗ್ ಮತ್ತು ಭಾಷಾಂತರದ ಜವಾಬ್ದಾರಿಗಳನ್ನು ವಹಿಸಿಕೊಂಡಿರುತ್ತಾರೆ. ಈ ಮುದ್ರಣಾಲಯದಲ್ಲಿ ಅತ್ಯಾಧುನಿಕ ಮುದ್ರಣ ಯಂತ್ರಗಳ ಜತೆಗೆ ಏರ್ ಕಂಡೀಷನ್ ವ್ಯವಸ್ಥೆ ಇದೆ. ಈ ಮುದ್ರಾಣಲಯದಿಂದ ಹೊರಗಿನ ಸಂಪರ್ಕಕ್ಕೆ ಯಾವ ವ್ಯವಸ್ಥೆಯೂ ಇರುವುದಿಲ್ಲ. ಅಧಿಕಾರಿಗಳಿಗೆ ಉಳಿದುಕೊಳ್ಳಲು ಮತ್ತು ಊಟ- ತಿಂಡಿ ವ್ಯವಥೆ ಮಾಡಲಾಗಿರುತ್ತದೆ. ತೀರಾ ತುರ್ತು ಸಂದರ್ಭದಲ್ಲಿ ಹೊರಗೆ ಕರೆ ಮಾಡಬಹುದಾದರೂ ಆ ವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಜರಿರುತ್ತಾರೆ. ಸುರಕ್ಷಿತ ವಲಯದೊಳಗೆ ಹಣಕಾಸು ಸಚಿವರು ಬಂದು, ಹೋಗಬಹುದು. ಆದರೆ ಅವರು ಕೂಡ ಮೊಬೈಲ್ ಫೋನ್ ಜತೆಗೆ ಪ್ರವೇಶಿಸುವಂತಿಲ್ಲ.
ಬಜೆಟ್ ಭಾಷಣ, ಇಂಟರ್ ನೆಟ್ ಸಂಪರ್ಕ
ಆರ್ಥಿಕ ಸಚಿವರ ಭಾಷಣ ಬಜೆಟ್ ಮಂಡನೆಗೆ ಕೆಲವೇ ಗಂಟೆಗಳ ಮುಂಚೆ ಅಂತಿಮವಾಗುತ್ತದೆ. ಅಂದ ಹಾಗೆ ಜನವರಿ ಆರಂಭದಿಂದಲೇ ಮಾಧ್ಯಮಗಳಿಗೆ ನಾರ್ತ್ ಬ್ಲಾಕ್ ಬಳಿಯ ಮುದ್ರಣಾಲಯ ಸಮೀಪ ಪ್ರವೇಶ ಮಿತಿ ಆಗುತ್ತಾ ಆಗುತ್ತದೆ. ನಾರ್ತ್ ಬ್ಲಾಕ್ ಒಳಬರುವ ಹಾಗೂ ಹೊರಹೋಗುವ ಪ್ರತಿಯೊಂದನ್ನೂ ಗುಪ್ತಚರ ಇಲಾಖೆ ಅಧಿಕಾರಿಗಳು ಎಕ್ಸ್ ರೇ ಮಷೀನ್ ಬಳಸಿ, ಕಣ್ಗಾವಲು ಇರಿಸುತ್ತಾರೆ. ಮೊಬೈಲ್ ಫೋನ್ ಜಾಮರ್ ಗಳನ್ನು ಅಳವಡಿಸಲಾಗುತ್ತದೆ. ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳ ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಲ್ಯಾಂಡ್ ಲೈನ್ ಮೂಲಕ ಮಾಡುವ ಕರೆಗಳ ಮೇಲೆ ನಿಗಾ ಮಾಡಲಾಗುತ್ತದೆ.


Click it and Unblock the Notifications