ಯುಪಿಐ ವಹಿವಾಟಿಗೆ ಇನ್ನು ಮುಂದೆ ಕೊಂಚ ದಂಡವನ್ನು ಪಾವತಿ ಮಾಡಬೇಕಾಗಿ ಬರುತ್ತದೆ. ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) 2 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟಿನ ಮೇಲೆ ಇಂಟರ್ ಚೇಂಜ್ ಶುಲ್ಕವನ್ನು ಶಿಫಾರಸು ಮಾಡಿದೆ. ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಮೂಲಕ ಮಾಡಿದ ವಹಿವಾಟಿಗೆ ಮಾತ್ರ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಸುಮಾರು ಶೇಕಡ 1.1ರಷ್ಟು ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ.
ಎನ್‌ಪಿಸಿಐ 2 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಮೇಲೆ ಶೇಕಡ 1.1ರಷ್ಟು ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಿದೆ. ಬ್ಯಾಂಕ್ ಹಾಗೂ ಪಾವತಿ ಸೇವೆಯನ್ನು ನೀಡುವವರಿಗೆ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪಾವತಿ ಸೇವೆಯನ್ನು ನೀಡುವವರಿಗೆ ಯುಪಿಐನ ವಹಿವಾಟಿಗ ಅಧಿಕ ವೆಚ್ಚ ಹೊರೆಯಾಗುತ್ತಿದ್ದು ಇದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 30, 2023ರ ಒಳಗೆ ವಿನಿಮಯ ದರವನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತದೆ.

ಪ್ರಸ್ತುತ ಅತೀ ಹೆಚ್ಚು ಆದ್ಯತೆಯನ್ನು ಹೊಂದಿರುವ ಮತ್ತು ಜನರು ಅತೀ ಹೆಚ್ಚಾಗಿ ಬಳಕೆ ಮಾಡುವ ಪಾವತಿ ವಿಧಾನವೇ ಯುಪಿಐ ಆಗಿದೆ. ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ಸರಳವಾಗಿ ಮೊಬೈಲ್ ಮೂಲಕವೇ ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆ ಮಾಡಲು ಸಾಧ್ಯವಾಗುವ ಕಾರಣ ಜನರು ಈ ಪಾವತಿ ವಿಧಾನವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಪಿಪಿಐ ಡಿಜಿಟಲ್ ವ್ಯಾಲೆಟ್ ಆಗಿದ್ದು, ಹಣವನ್ನು ಸಂಗ್ರಹ ಮಾಡಿ ಇಡಲು ಅಲ್ಲಿಂದಲೇ ಪಾವತಿ ಮಾಡಲು ಅವಕಾಶ ನೀಡುತ್ತದೆ.
ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಸೇರಿದಂತೆ ಭಾರತದಲ್ಲಿ ಹಲವಾರು ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್‌ಗಳು (ಪಿಪಿಐ) ಇದೆ. ಇಂಟರ್ ಚೇಂಜ್ ಶುಲ್ಕವೆಂದರೆ ವಹಿವಾಟನ್ನು ನಡೆಸುವುದಕ್ಕಾಗಿ ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕ್ ಮೇಲೆ ವಿಧಿಸುವ ಶುಲ್ಕವಾಗಿದೆ. ಯುಪಿಐ ವಹಿವಾಟುಗಳ ವೇಳೆ ಇಂಟರ್‌ಚೇಂಜ್ ಶುಲ್ಕವನ್ನು ವ್ಯಾಪಾರಿಯ ಬ್ಯಾಂಕ್ (ಪಾವತಿಯನ್ನು ಸ್ವೀಕರಿಸುವ ವ್ಯಕ್ತಿ) ಪಾವತಿಸುವವರ ಬ್ಯಾಂಕ್‌ಗೆ (ಪಾವತಿ ಮಾಡುವ ವ್ಯಕ್ತಿ) ಪಾವತಿಸುತ್ತದೆ.
ಬಳಕೆದಾರರಿಗೆ ಯುಪಿಐ ಶುಲ್ಕ ವಿಧಿಸಲಾಗುತ್ತದೆಯೇ?
ಈ ನಡುವೆ ಯುಪಿಐ ಆಪ್ ಬಳಕೆದಾರರಿಗೆ ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆಯಿದೆ. ಅದಕ್ಕೆ ಉತ್ತರ ಇಲ್ಲ ಎಂದಾಗಿದೆ. ಎನ್‌ಪಿಸಿಐನ ಈ ಹೊಸ ಘೋಷಣೆಯು ಬಳಕೆದಾರರ ಮೇಲೆ ಯಾವುದೇ ಪ್ರಭಾವವನ್ನು ಉಂಟು ಮಾಡುವುದಿಲ್ಲ. ಮೊಬೈಲ್ ವ್ಯಾಲೆಟ್ ಆದ ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಬಳಸಿಕೊಂಡು 2 ಸಾವಿರ ರೂಪಾಯಿಗಿಂತ ಅಧಿಕ ವಹಿವಾಟು ನಡೆಸುವ ವ್ಯಾಪಾರಿಗೆ ಮಾತ್ರ ಈ ಹೊಸ ನಿಯಮವು ಪ್ರಭಾವ ಬೀರುತ್ತದೆ. ಯುಪಿಐ ಮೂಲಕ ವೈಯಕ್ತಿಕ ವಹಿವಾಟು ನಡೆಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಪ್ರಸ್ತುತ ಹಲವಾರು ಯುಪಿಐ ವಹಿವಾಟುಗಳು ಸಣ್ಣ ಮೊತ್ತದ ವರ್ಗಾವಣೆಗಾಗಿ ಮಾಡಲಾಗುತ್ತಿರುವ ವಹಿವಾಟುಗಳು ಆಗಿದೆ. ಪಿಪಿಐ ಪೂರೈಕೆದಾರರನ್ನು ಉತ್ತೇಜಿಸುವ ಮೂಲಕ ಹೆಚ್ಚಿನ ಮೊತ್ತದ ಯುಪಿಐ ವಹಿವಾಟುಗಳನ್ನು ಉತ್ತೇಜನ ಮಾಡಬುಉದು ಎಂಬುವುದು ಎನ್‌ಪಿಸಿಐ ನಂಬಿಕೆಯಾಗಿದೆ. ಇದರಿಂದಾಗಿ ಯುಪಿಐ ವಹಿವಾಟುಗಳ ಸರಾಸರಿ ವಹಿವಾಟು ಮೌಲ್ಯವನ್ನು ಹೆಚ್ಚಿಸಬಹುದು ಮತ್ತು ಭಾರತದಲ್ಲಿ ಪಾವತಿ ವ್ಯವಸ್ಥೆಗಳ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಎನ್‌ಪಿಸಿಐ ನಂಬಿಕೆ ಹೊಂದಿದೆ.
ಇನ್ನು ಈ ಇಂಟರ್ ಚೇಂಜ್ ಶುಲ್ಕವನ್ನು ವಿಧಿಸುವ ಬಗ್ಗೆ ಎನ್‌ಪಿಸಿಐ ಶಿಫಾರಸ್ಸನ್ನು ಮಾತ್ರ ಮಾಡಿದೆ. ಈ ಶಿಫಾರಸ್ಸು ನಿರ್ಧಾರವಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಸೂಚನೆಯ ಆಧಾರದಲ್ಲಿ ನಿರ್ಧಾರವನ್ನು ಕೈಗೊಳ್ಳಲಿದೆ. ಎನ್‌ಪಿಸಿಐ ಈ ಪ್ರಸ್ತಾಪವನ್ನು ಆರ್‌ಬಿಐ ಮುಂದಿಟ್ಟಿದ್ದು, ಆರ್‌ಬಿಐ ಪ್ರಸ್ತಾಪವನ್ನು ಅನುಮೋದನೆ ಮಾಡುತ್ತದೆಯೇ ಎಂದು ನಾವು ಕಾದುನೋಡಬೇಕಾಗಿದೆ.


Click it and Unblock the Notifications