ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿತ್ತು. ಈಗ ಚುನಾವಣೆಯಲ್ಲಿ ಗೆದ್ದು ಗದ್ದುಗೆಯನ್ನು ಪಡೆದ ಬಳಿಕ ಈ ಐದೂ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಎಂಬ ಐದು ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಈಗಾಗಲೇ ಜಾರಿಗೆ ತರಲಾಗಿದೆ.
ಆದರೆ ಇದಕ್ಕೆ ಬಳಕೆ ಮಾಡಲಾಗುವ ಫಂಡ್ ವಿಚಾರದಲ್ಲಿ ಪ್ರಸ್ತುತ ಗೊಂದಲಗಳು, ವಿರೋಧ ಸೃಷ್ಟಿಯಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಗಳಿಗಾಗಿ ಇರಿಸಲಾದ ನಿಧಿಯನ್ನು ಬಳಕೆ ಮಾಡಲಾಗುತ್ತದೆ ಎಂಬ ವಿಚಾರವು ಪ್ರಸ್ತುತ ದಲಿತ ನಾಯಕರುಗಳ ವಿರೋಧಕ್ಕೆ, ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ನಿರ್ಧಾರವನ್ನು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ವಿರೋಧ ಮಾಡಿದೆ.

ವಿಶೇಷವಾಗಿ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ನಿರ್ಧಾರವನ್ನು ಮಾಡುತ್ತಿದೆ. ಆದರೆ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನ ಭಾಗ್ಯ ಮತ್ತು ಗೃಹ ಲಕ್ಷ್ಮಿಗೆ ಸರ್ಕಾರವು 34,294 ಕೋಟಿ ರೂಪಾಯಿಯ ಎಸ್‌ಸಿಎಸ್‌ಪಿ/ಟಿಎಸ್‌ಪಿಯಿಂದ 11,000 ಕೋಟಿ ರೂಪಾಯಿ ವರ್ಗಾವಣೆ ಮಾಡಿರುವುದಾಗಿ ಸರ್ಕಾರ ಹೇಳಿದೆ.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಂಚಿಕೆಯಿಂದ 11,000 ಕೋಟಿ ರೂಪಾಯಿಗಳನ್ನು ತೆಗೆಯುವ ನಿರ್ಧಾರವನ್ನು ಜುಲೈ 31 ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಾದದೇವಪ್ಪ ಹಾಜರಾತಿಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಗ್ಯಾರಂಟಿ ಯೋಜನೆಗಳ ಲಾಭವು ಎಲ್ಲ ವರ್ಗದ ಜನರಿಗೆ ಲಭ್ಯವಾಗುತ್ತದೆ. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಜನರೂ ಕೂಡಾ ಇರುತ್ತಾರೆ. ಎಸ್‌ಸಿ ಮತ್ತು ಎಸ್‌ಟಿ ಫಲಾನುಭವಿಗಳ ಯೋಜನೆಗಳ ವೆಚ್ಚವನ್ನು ಕೂಡಾ ಗ್ಯಾರಂಟಿ ಯೋಜನೆಯು ಭರಿಸುತ್ತದೆ ಎಂದು ಸರ್ಕಾರವು ತನ್ನ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದೆ.
ಆದರೆ ಸರಕಾರವು 11,000 ಕೋಟಿ ರೂಪಾಯಿ ರವಾನೆ ಮಾಡು ನಿರ್ಧಾರಕ್ಕೆ ಹೇಗೆ ಬಂದಿತು ಎಂದು ನಾಯಕರುಗಳು ಪ್ರಶ್ನಿಸುತ್ತಿದ್ದಾರೆ ಮತ್ತು ಈ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಹಂಚಿಕೆಗಳನ್ನು ಕಡಿಮೆ ಮಾಡುವುದನ್ನು ಸಮರ್ಥಿಸಲು ಡೇಟಾವನ್ನು ಒದಗಿಸಬೇಕೆಂದು ಸಮುದಾಯದ ಮುಖಂಡರು ಆಗ್ರಹಿಸುತ್ತಿದ್ದಾರೆ.
"ದಲಿತರ ಸುರಕ್ಷತೆ, ಭದ್ರತೆ ಮತ್ತು ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆ ಎಂಬ ನಂಬಿಕೆಯಿಂದ ನಾವು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇವೆ. ಒಟ್ಟು ಜನಸಂಖ್ಯೆಯ ಶೇಕಡ 24ರಷ್ಟು ಎಸ್‌ಸಿ ಮತ್ತು ಎಸ್‌ಟಿ ಸಮುದಾಯವಾಗಿದೆ. ಆದರೂ ಯೋಜನೆಗಳಿಗೆ ಬಳಸಿದ ಹಣವು 8,000 ಕೋಟಿ ರೂಪಾಯಿಗಿಂತ ಹೆಚ್ಚಿರಬಾರದು. 11,000 ಕೋಟಿ ರೂಪಾಯಿ ಹಣವನ್ನು ಸರ್ಕಾರ ಏಕೆ ಬೇರೆಡೆಗೆ ತಿರುಗಿಸಿದೆ?," ಎಂದು ಪ್ರಶ್ನಿಸಿದ್ದಾರೆ.
ಆದರೆ ಸರ್ಕಾರವು ಅಗತ್ಯಕ್ಕಿಂತ ಹೆಚ್ಚು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಬಳಸುವುದಿಲ್ಲ ಮತ್ತು ಸಂಪೂರ್ಣ ನಿಧಿಯನ್ನು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸಹಾಯ ಮಾಡಲು ಮತ್ತು ಅಭಿವೃದ್ಧಿಪಡಿಸಲು ಮಾತ್ರ ಬಳಸಲಾಗುವುದು ಎಂದು ಮಹದೇವಪ್ಪ ಮಾಧ್ಯಮಕ್ಕೆ ತಿಳಿಸಿದರು. "ಜುಲೈ 31 ರಂದು ನಾವು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು 40 ಇಲಾಖೆಗಳ ನಡುವೆ ಬಜೆಟ್‌ನಲ್ಲಿ ಮಾಡಿದ ಹಂಚಿಕೆಗಳ ಆಧಾರದ ಮೇಲೆ ವಿಂಗಡಿಸಿದ್ದೇವೆ," ಎಂದು ಸಚಿವರು ಹೇಳಿದರು.


Click it and Unblock the Notifications