ಪ್ರೇಮಿಗಳ ದಿನವಾದ ಫೆಬ್ರವರಿ ಹದಿನಾಲ್ಕನೇ ತಾರೀಕು ಹತ್ತಿರ ಬರುತ್ತಿದೆ. ಇತ್ತೀಚಿನ ಲೆಕ್ಕಾಚಾರವೇ ಹೇಳಬೇಕು ಅಂದರೆ, ಪ್ರತಿ ವರ್ಷ ಐವತ್ತೇಳು ಕೋಟಿ ರುಪಾಯಿ ಮೌಲ್ಯದ ಗುಲಾಬಿ ಹೂವು ಭಾರತದಿಂದ ರಫ್ತಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಬೆಳೆದ ಗುಲಾಬಿ ಹೂವುಗಳಿಗೆ ಪ್ರಮುಖ ಮಾರುಕಟ್ಟೆ ಅಂದರೆ, ಯುಕೆ. ಭಾರತದಿಂದ ರಫ್ತಾಗುವ ಪೈಕಿ ಶೇಕಡಾ ಮೂವತ್ತೈದರಷ್ಟು ಅಲ್ಲಿಗೇ ಹೋಗುತ್ತದೆ.
ಕಳೆದ ವರ್ಷ ಮುಂಗಾರು ಅವಧಿಗೂ ಮೀರಿ ಸುರಿದಿದ್ದರಿಂದ ಶೇಕಡಾ ಹತ್ತರಿಂದ ಹದಿನೈದರಷ್ಟು ಬೆಳೆ ನಷ್ಟವಾಗಿದೆ. ಆದರೆ ಬೆಲೆಯಲ್ಲಿ ಏರಿಕೆ ಆಗಿ, ಬೆಳೆ ನಷ್ಟದ ಪ್ರಮಾಣ ಸರಿತೂಗಿಸಬಹುದು ಎಂಬುದು ಇದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರ ಅಭಿಪ್ರಾಯ.
ಭಾರತದ ಗುಲಾಬಿ ಆಮದು ಮಾಡಿಕೊಳ್ಳುವಲ್ಲಿ ಯುಕೆ ಮೊದಲ ಸ್ಥಾನದಲ್ಲಿ ಇದ್ದರೆ, ಆ ನಂತರದ ಸ್ಥಾನಗಳಲ್ಲಿ ಜಪಾನ್, ಆಸ್ಟ್ರೇಲಿಯಾ, ಸಿಂಗಾಪೂರ್, ಹಾಲೆಂಡ್ ಇವೆ. ಅಂದ ಹಾಗೆ ಹಾಲೆಂಡ್ ನಲ್ಲಿ ಹೂವುಗಳಿಗೆ ಜಾಗತಿಕ ಮಟ್ಟದ ಮಾರುಕಟ್ಟೆ ಇದೆ. ಅಲ್ಲಿ ವಿಶ್ವದಲ್ಲಿ ಅತಿ ದೊಡ್ಡ ಮಟ್ಟದ ಹೂವಿನ ಹರಾಜು ನಡೆಯುತ್ತದೆ.

ಭಾರತದಲ್ಲಿ ಬೆಳೆಯುವ ಹೂವುಗಳು ನೇರವಾಗಿ ಯುಕೆ ಮತ್ತು ಗ್ರೀಸ್, ಇಟಲಿಯಂಥ ಇತರ ಯುರೋಪಿಯನ್ ದೇಶಗಳನ್ನು ತಲುಪುತ್ತವೆ. ಹೀಗೆ ನೇರವಾಗಿಯೇ ಹೂವನ್ನು ತಲುಪಿಸುವುದು ಅತ್ಯುತ್ತಮ ವಿಧಾನ ಎನ್ನಲಾಗುತ್ತದೆ. ಏಕೆಂದರೆ ಹಾಲೆಂಡ್ ತಲುಪಿ, ಅಲ್ಲಿಂದ ಮತ್ತೆ ರಫ್ತಾಗಿ, ಇತರ ಚೆಕ್ ಪೋಸ್ಟ್ ಗಳಲ್ಲಿ ದಾಟಿ ನಿರ್ದಿಷ್ಟ ದೇಶಕ್ಕೆ ಸೇರುವುದು ಎರಡು ದಿನ ತಡವಾಗುತ್ತದೆ. ಇದರಿಂದ ಸಾಗಣೆ ವೆಚ್ಚ, ಕಮಿಷನ್ ಮತ್ತಿತರ ಖರ್ಚು ಕೂಡ ಹೆಚ್ಚಾಗುತ್ತದೆ.
ಎರಡು ವರ್ಷದ ಹಿಂದೆ ಐವತ್ತೇಳು ಕೋಟಿಗೂ ಹೆಚ್ಚು ಮೊತ್ತದ ರಫ್ತು ಆಗಿದ್ದರೆ ಹೋದ ವರ್ಷವೂ ಐವತ್ತೇಳು ಕೋಟಿಗೂ ಸ್ವಲ್ಪ ಹೆಚ್ಚು ಮೊತ್ತದಷ್ಟೇ ಆಗಿತ್ತು. ಇನ್ನು ಈ ವರ್ಷ ಇಲ್ಲಿಯ ತನಕ ಇಪ್ಪತ್ತು ಕೋಟಿ ರುಪಾಯಿ ವ್ಯವಹಾರ ಆಗಿದೆ ಎಂಬ ಅಂಕಿ- ಅಂಶ ದೊರೆಯುತ್ತದೆ.
ಸಾಮಾನ್ಯವಾಗಿ ರೈತರ ಆದಾಯದ ಪೈಕಿ ಶೇಕಡಾ ಐವತ್ತೈದರಷ್ಟು ನವೆಂಬರ್ ನಿಂದ ಮಾರ್ಚ್ ಮಧ್ಯೆ ದೊರೆಯುತ್ತದೆ. ರಫ್ತು ಮೂಲಕ ದೊರೆಯುವ ಆದಾಯವಷ್ಟೇ ಅಲ್ಲ, ದೇಶೀಯವಾಗಿಯೂ ಅತ್ಯುತ್ತಮ ಬೇಡಿಕೆ ಇರುತ್ತದೆ. ಈ ಸಲ ಪ್ರೇಮಿಗಳ ದಿನ ಶುಕ್ರವಾರ ಬಂದಿರುವುದರಿಂದ, ವಾರಾಂತ್ಯ ಅನ್ನೋ ಕಾರಣಕ್ಕೆ ಬೇಡಿಕೆ ಸಾಮಾನ್ಯಕ್ಕಿಂತ ಹೆಚ್ಚೇ ಇರುತ್ತದೆ. ಇನ್ನು ಫೆಬ್ರವರಿ ಹದಿನಾರರಿಂದ ಇಪ್ಪತ್ತೆಂಟನೇ ತಾರೀಕಿನವರೆಗೆ ಸಾಲು ಮದುವೆಗಳು ಇದ್ದು, ಹೂವಿನ ಬೆಲೆಯಲ್ಲಿ ಭಾರೀ ಏರಿಕೆ ಆಗುವ ನಿರೀಕ್ಷೆ ಇದೆ.
ಜನವರಿ ಫೆಬ್ರವರಿ ಅವಧಿಯಲ್ಲಿ ಇಪ್ಪತ್ತು ಹೂವನ್ನು ಒಳಗೊಂಡ ಒಂದು ಗುಚ್ಛಕ್ಕೆ ನೂರೈವತ್ತರಿಂದ ಇನ್ನೂರು ರುಪಾಯಿ ಆಗುತ್ತದೆ. ಆದರೆ ಪ್ರೇಮಿಗಳ ದಿನಕ್ಕೆ ಇನ್ನೂರರಿಂದ ನಾನೂರು ರುಪಾಯಿ ಆಗುತ್ತದೆ.


Click it and Unblock the Notifications