ಕೊರೊನಾ ಎಬ್ಬಿಸಿರುವ ಆತಂಕ ಚಿಕನ್, ಮಟನ್, ಫಿಶ್ ಅಂತ ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ತರಕಾರಿ ಬೆಲೆಗಳು ಕೂಡ ಸಸ್ತಾ ಆಗಿದೆ. ಹುರುಳಿಕಾಯಿ, ದಪ್ಪ ಮೆಣಸಿನಕಾಯಿ, ಬಟಾಣಿ, ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಕ್ಯಾರೆಟ್... ಹೀಗೆ ಎಲ್ಲ ತರಕಾರಿ ಬೆಲೆಗಳು ಕೂಡ ವಿಪರೀತ ಕಡಿಮೆ ಆಗಿದೆ.
ಇದಕ್ಕೆ ಕಾರಣಗಳೇನು ಎಂದು ಹುಡುಕುತ್ತಾ ಹೋದರೆ, ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಬರುವ ತರಕಾರಿಗಳ ಪ್ರಮಾಣವೇ ಕಡಿಮೆ ಆಗಿದೆ. ಇನ್ನು ಕಾರ್ಯಕ್ರಮಗಳು ಕೂಡ ಆಯೋಜನೆ ಆಗುತ್ತಿಲ್ಲ. ಪ್ರಮುಖ ಬಡಾವಣೆಗಳಾದ ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಜಯನಗರ ಸೇರಿದಂತೆ ಹಲವೆಡೆ ಜನಸಂದಣಿಯೇ ಕಡಿಮೆಯಾಗಿ, ಮನೆಗಳಿಂದ ಜನರು ರಸ್ತೆಗೆ ಬರುವುದೇ ಕಡಿಮೆ ಆಗಿದೆ.
ಕ್ಯಾರೆಟ್ ಬೆಲೆಯೇ ಸ್ವಲ್ಪ ಕಾಸ್ಟ್ಲಿ
ಸಾಮಾನ್ಯವಾಗಿ ಹುರುಳಿಕಾಯಿ ಬೆಲೆ ಕೇಜಿಗೆ ಐವತ್ತು ರುಪಾಯಿಯಿಂದಲೇ ಆರಂಭ ಆಗುತ್ತದೆ. ಆದರೆ ಈಗ ಅದರ ಅರ್ಧದಷ್ಟು, ಶೇಕಡಾ ಇಪ್ಪತ್ತೈದರಷ್ಟು ಬೆಲೆಗೂ ಮಾರಲಾಗುತ್ತಿದೆ. ಇದ್ದುದರಲ್ಲಿ ಕ್ಯಾರೆಟ್ ಬೆಲೆ ಉಳಿದದ್ದಕ್ಕಿಂತ ಸ್ವಲ್ಪ ಹೆಚ್ಚಿದೆ. ಉಳಿದಂತೆ ಎಲ್ಲ ತರಕಾರಿ ಬೆಲೆಗಳೂ ಬಿದ್ದುಹೋಗಿವೆ. ದಿನಗೂಲಿ ನೌಕರರು, ಗಾರ್ಮೆಂಟ್ ನೌಕರರು, ಕಟ್ಟಡ ನಿರ್ಮಾಣ ಕಾರ್ಮಿಕರು, ಸರ್ಕಾರಿ ಕಚೇರಿಗಳು ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಖಾಸಗಿ ಕೆಲಸಗಾರರು ಇರುವ ಸ್ಥಳಗಳಲ್ಲಿ ಹೋಟೆಲ್ ವ್ಯವಹಾರಗಳು ನಡೆಯುತ್ತಿವೆ ವಿನಾ ಉಳಿದೆಡೆ ಹೋಟೆಲ್ ಗಳು ಭಣಗುಡುತ್ತಿವೆ. ಇನ್ನು ಚಿಕನ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ದಿನಸಿ ಅಂಗಡಿಗಳಿಗೆ ವ್ಯಾಪಾರ ಇದೆ
ದಿನಸಿ ಅಂಗಡಿಗಳಿಗೆ ಮಾಮೂಲಿಯಂತೆ ವ್ಯಾಪಾರ ಇದೆ. ರಿಲಯನ್ಸ್ ಫ್ರೆಶ್, ಮೋರ್ ನಂಥ ಕಡೆ ವ್ಯಾಪಾರ ಮಾಡುತ್ತಿದ್ದವರು ಮನೆ ಹತ್ತಿರದ ಅಂಗಡಿಗಳಲ್ಲೇ ಖರೀದಿ ವ್ಯವಹಾರ ಮಾಡುತ್ತಿದ್ದಾರೆ. ಮುಂದಿನ ವಾರಗಳಲ್ಲಿ ಏನಾಗಬಹುದೋ ಎಂಬ ಆತಂಕದಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಟ್ಟುಕೊಳ್ಳುತ್ತಿದ್ದಾರೆ.
ಯುಗಾದಿ ಹಬ್ಬಕ್ಕೆ ಇನ್ನೊಂದೇ ವಾರ
ಮುಂದಿನ ವಾರ (ಮಾರ್ಚ್ 25) ಯುಗಾದಿ ಹಬ್ಬ ಇರುವುದರಿಂದ ಬಟ್ಟೆ ಖರೀದಿ ಮೇಲೆ ಮುಖ್ಯವಾದ ಹೊಡೆತ ಬೀಳಬಹುದು. ಇನ್ನು ಶಾಲೆ- ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲವಾದ್ದರಿಂದ ಜ್ಯೂಸ್, ಕಬ್ಬಿನ ಹಾಲು, ಚಾಟ್ಸ್ ಅಂಗಡಿಗಳ ವ್ಯಾಪಾರ ಡಲ್ ಆಗಿದೆ. ಇನ್ನು ರಸ್ತೆ ಬದಿಯ ಬಜ್ಜಿ, ಚುರುಮುರಿ, ಮಸಾಲಾ ಪೂರಿ ತಿನ್ನಲು ಜನರೇ ಹಿಂಜರಿಯುತ್ತಿದ್ದಾರೆ. ಸರ್ಕಾರ ಕೂಡ ಈ ಬಗ್ಗೆ ನಿರ್ಬಂಧ ಹೇರಿದೆ.
ಜನರು ರಸ್ತೆಗೆ ಬರುತ್ತಿಲ್ಲ
"ನಮಗೆ ಮಾಮೂಲಿನಂತೆ ವ್ಯಾಪಾರ ನಡೆಯುತ್ತಾ ಇದೆ. ಆದರೆ ಜನರು ರಸ್ತೆಗೆ ಬರುವುದೇ ಕಡಿಮೆ ಆಗಿದೆ. ಮಾರ್ಕೆಟ್ ನಲ್ಲಿ ವ್ಯಾಪಾರ ನಡೆಯುತ್ತಿದ್ದರೂ ಏನೂ ಮಾಮೂಲಿನಂತೆ ಇಲ್ಲ ಅಂತಲೇ ಅನಿಸುತ್ತದೆ. ಯಾರನ್ನೇ ಕೇಳಿದರೂ ವ್ಯಾಪಾರ ಡಲ್ ಎಂಬ ಉತ್ತರವೇ ಬರುತ್ತದೆ" ಎನ್ನುತ್ತಾರೆ ಹೊಸಕೆರೆಹಳ್ಳಿಯಲ್ಲಿ ದಿನಸಿ ಅಂಗಡಿ ನಡೆಸುವ ವಿಶ್ವನಾಥ್.


Click it and Unblock the Notifications