ಊಹಾಪೋಹಗಳಿಗೆ ತೆರೆ ಎಳೆಯುವ ಮೂಲಕ ಅದಾನಿ ಗ್ರೂಪ್, ದುಬೈ ಮೂಲದ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರು ಎಸಿಸಿ ಹಾಗೂ ಅಂಬುಜಾ ಸಿಮೆಂಟ್ಸ್‌ನ ಮಾಲೀಕರು ಎಂಬುದನ್ನು ಸಿಎನ್‌ಬಿಸಿ ಖಚಿತ ಮಾಡಿದ್ದು, ವರದಿಯಾಗಿದೆ. ಅದಾನಿ ಗ್ರೂಪಿನ್ ವಕ್ತಾರರು ಚಾನೆಲ್‌ಗೆ ನೀಡಿರುವ ಮಾಹಿತಿ ಪ್ರಕಾರ, ಎಂಡೀವರ್ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಲಿಮಿಟೆಡ್, ಎಸಿಸಿ ಸಿಮೆಂಟ್ ಹಾಗೂ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್‌ನ್ನು ಸ್ವಾಧೀನಪಡಿಸಿಕೊಂಡಿದ್ದು, ಅದು ಅದಕ್ಕೆ ಸೇರಿವೆ.
ಈ ವಿಚಾರವನ್ನು ಪಬ್ಲಿಕ್ ಆಫರ್ ದಾಖಲೆಗಳಲ್ಲಿ ಬಹಿರಂಗಪಡಿಸಿರುವುದಾಗಿಯೂ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ, ಕಳೆದ ಸೆಪ್ಟಂಬರ್‌ನಲ್ಲಿ ಸಿಮೆಂಟ್ ಉತ್ಪಾದಕರಾದ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯಲ್ಲಿನ ಸ್ವಿಸ್ ಕಂಪೆನಿಯಾದ ಹಾಲ್ಸಿಮ್‌ನ 6.5 ಬಿಲಿಯನ್ ಡಾಲರ್ ಪಾಲನ್ನು ಸ್ವಾಧೀನಪಡಿಸುವಲ್ಲಿ ವಿನೋದ್ ಅದಾನಿ ಭಾಗವಹಿಸಿದ್ದರು ಎಂದು ಫೋರ್ಬ್ಸ್ ಕಳೆದ ತಿಂಗಳು ವರದಿ ಮಾಡಿತ್ತು.

ಜತೆಗೆ ಮಾರಿಷಸ್ ಮೂಲದ ವಿನೋದ್ ಅದಾನಿ ನಿಯಂತ್ರಿತ ಎಂಡೀವರ್ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಲಿಮಿಟೆಡ್ ಅಂಬುಜಾದ ಶೇಕಡ 63ರಷ್ಟು ಹಾಗೂ ಎಸಿಸಿಯ ಶೇಕಡ 57ರಷ್ಟು ಷೇರುಗಳನ್ನು ಖರೀದಿಸಿತ್ತು ಎಂದು ಅದು ಹೇಳಿತ್ತು. ವಿನೋದ್ ಅದಾನಿ ಅವರು ಅಂಗಸಂಸ್ಥೆಯಲ್ಲಿ ಯಾವುದೇ ವ್ಯವಸ್ಥಾಪಕ ಸ್ಥಾನವನ್ನು ಹೊಂದಿಲ್ಲ ಎಂದು ಗ್ರೂಪ್ 2023ರ ಜನವರಿಯಲ್ಲಿ ಹೇಳಿತ್ತು. ಹಾಗಾದರೆ ವಿನೋದ್ ಅದಾನಿ ಯಾರು, ಆದಾದ ಬಗ್ಗೆ ತಿಳಿಯೋಣ ಮುಂದೆ ಓದಿ..
ವಿನೋದ್ ಅದಾನಿ ಯಾರು?
2022ರಲ್ಲಿ ಹುರುನ್ ಇಂಡಿಯಾ ರಿಚ್ ಇವರನ್ನು ಶ್ರೀಮಂತ ಅನಿವಾಸಿ ಭಾರತೀಯ ಪಟ್ಟಿಯಲ್ಲಿ ಗುರುತಿಸಿತ್ತು. ಅವರನ್ನು ವಿಶ್ವದ 6ನೇ ಶ್ರೀಮಂತ ಭಾರತೀಯ ಎಂದು ಕರೆದಿತ್ತು. ಈ ಉದ್ಯಮಿಯ ನಿವ್ವಳ ಮೌಲ್ಯವು 1,69,000 ಕೋಟಿ ರೂ. ($20.42 ಬಿಲಿಯನ್) ಎಂದು ಅಂದಾಜಿಸಲಾಗಿತ್ತು. ಇವರು ಗೌತಮ್ ಅದಾನಿ ಅವರ ಅಣ್ಣ. ಅವರು 1994ರಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. 2017ರಿಂದೀಚೆಗೆ ವಿನೋದ್ ಅದಾನಿ ಅವರ ಸಂಪತ್ತು 9.5ರಷ್ಟು ಹೆಚ್ಚಾಗಿದೆ ಎಂದು ಆ ಶ್ರೀಮಂತ ಪಟ್ಟಿಯು ಹೇಳಿಕೊಂಡಿದೆ. ಅವರು ಮೂಲಸೌಕರ್ಯ ಹಾಗೂ ಇಂಧನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ.
ವರದಿ ಪ್ರಕಾರ, 2018ರಲ್ಲಿ 49ನೇ ಸ್ಥಾನದಲ್ಲಿದ್ದ ವಿನೋದ್ ಅದಾನಿ ಅವರು 2022ರಲ್ಲಿ 6ನೇ ಸ್ಥಾನಕ್ಕೆ ಏರಿದ್ದಾರೆ. 2021ರಿಂದೀಚೆಗೆ ಅವರು ಪ್ರತಿದಿನಕ್ಕೆ 102ಕೋಟಿ ರೂ. ಸಂಪತ್ತು ಗಳಿಸುತ್ತಿದ್ದಾರೆ ಎಂದು ಹುರುನ್ ವರದಿ ಹೇಳಿದೆ.ಹಿರಿಯ ಅದಾನಿ ಅವರು 94 ಎನ್‌ಆರ್‌ಐ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತರಾಗಿದ್ದರು. 1976ರಲ್ಲಿ ಅವರು ಮುಂಬೈನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಪವರ್ ಲೂಮ್‌ಗಳಿಂದ ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕುಗಳಲ್ಲಿ ಹೂಡಿಕೆ ಮಾಡಲು ಸಿಂಗಾಪುರದಲ್ಲಿ ಕಚೇರಿಯನ್ನು ತೆರೆದಿದ್ದರು.
ವಿನೋದ್ ಅದಾನಿ ಉದ್ದಿಮೆ ಪ್ರಾರಂಭಿಸುವುದಕ್ಕಾಗಿ ಮೊದಲು ಸಿಂಗಾಪುರಕ್ಕೆ ತೆರಳಿದ್ದರು. ಬಳಿಕ ದುಬೈನಲ್ಲಿ ನೆಲೆಸಿದರು. ವಿನೋದ್ ಅದಾನಿ ಅವರು ಸಕ್ಕರೆ, ತೈಲ, ತಾಮ್ರ, ಅಲ್ಯೂಮಿನಿಯಂ ಮುಂತಾದವುಗಳಲ್ಲಿ ವ್ಯಾಪಾರ ಪ್ರಾರಂಭಿಸಿದ್ದರು. ಅವರು ದುಬೈ, ಸಿಂಗಾಪುರ ಹಾಗೂ ಜಕಾರ್ತಾದಲ್ಲಿ ವ್ಯಾಪಾರ-ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಲಿಸ್ಟ್‌ನ ಪ್ರಕಾರ, 2021ರಲ್ಲಿ ಅವರ ಸಂಪತ್ತು 37,400 ಕೋಟಿಯಷ್ಟು ಏರಿಕೆಯಾಗಿದೆ. ಇದರರ್ಥ ಅಂದರೆ ಪ್ರತಿದಿನ ಅವರ ನಿವ್ವಳ ಸಂಪತ್ತು 102 ಕೋಟಿ ರೂ. ಹೆಚ್ಚಾಗಿದೆ.
ಅಮೆರಿಕದ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ತನ್ನ ಸ್ಫೋಟಕ ವರದಿಯಲ್ಲಿ ಅದಾನಿಯು ಗ್ರೂಪ್‌ನ ಷೇರುಗಳ ಬೆಲೆ ತಿರುಚುವಲ್ಲಿ ಭಾಗಿಯಾಗಿರುವುದಾಗಿ ಉಲ್ಲೇಖಿಸಿತ್ತು. ಆದರೆ, ಅದಾನಿ ಗ್ರೂಪ್ ಎಲ್ಲ ಆರೋಪಗಳನ್ನು ಅಲ್ಲಗಳೆದಿತ್ತು. ಈ ವರದಿಯಿಂದಾಗಿ ಅದಾನಿಯು 90 ಬಿಲಿಯನ್ ಡಾಲರ್‌ನಷ್ಟು ಷೇರು ಮೌಲ್ಯವನ್ನು ಕಳೆದುಕೊಂಡಿತ್ತು. ಗ್ರೂಪ್ ತನ್ನ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.


Click it and Unblock the Notifications