ವಿಶಾಖಪಟ್ಟಣದಲ್ಲಿ ಗುರುವಾರದ ಅನಿಲ ಸೋರಿಕೆ ಘಟನೆಯು ಕನಿಷ್ಠ ಎಂಟು ಮಂದಿಯ ಪ್ರಾಣ ತೆಗೆದಿದೆ. ನೂರಾರು ಮಂದಿ ಅಸ್ವಸ್ಥರಾಗಿದ್ದಾರೆ. ಈ ಘಟನೆಯ ಮೂಲ ಇರುವುದು ಎಲ್.ಜಿ. ಪಾಲಿಮರ್ಸ್ ಒಡೆತನದ ಕಾರ್ಖಾನೆಯಲ್ಲಿ. ಪ್ಲಾಸ್ಟಿಕ್ ರಿಸಿನ್ ಮತ್ತು ಸಿಂಥೆಟಿಕ್ ಫೈಬರ್ ಉತ್ಪಾದನೆ ಮಾಡುವ ಕೈಗಾರಿಕೆಯ ಒಂದು ಭಾಗವಷ್ಟೇ ಈ ಘಟಕ.
ಇನ್ನು ಇದರ ಮಾಲೀಕತ್ವ ಯಾರದು ಅಂತ ನೋಡಿದರೆ, ದಕ್ಷಿಣ ಕೊರಿಯಾದ ಬ್ಯಾಟರಿ ತಯಾರಿಸುವ ಎಲ್.ಜಿ. ಕೆಮಿಕಲ್ಸ್ ಲಿಮಿಟೆಡ್ ನದು. ಪಾಲಿಮರ್ಸ್ ಕ್ಷೇತ್ರದಲ್ಲಿ ಅಭಿವೃದ್ಧಿ, ಉತ್ಪಾದನೆ ಮತ್ತು ಸೇವೆ ಒದಗಿಸುತ್ತದೆ ಈ ಎಲ್.ಜಿ. ಕೆಮಿಕಲ್ಸ್. ವಿಶಾಖಪಟ್ಟಣದ ಘಟಕದಲ್ಲಿ ಉತ್ಪನ್ನಗಳನ್ನು ತಯಾರಿಸಲು ಸ್ಟೈರೀನ್ ಎಂಬ ಕಚ್ಚಾ ವಸ್ತುವನ್ನು ಬಳಲಾಗುತ್ತದೆ. ಇದಕ್ಕೆ ಬಹಳ ಬೇಗ ಬೆಂಕಿ ವ್ಯಾಪಿಸುವ ಗುಣ ಇದೆ ಹಾಗೂ ಅದು ಸುಟ್ಟ ಮೇಲೆ ವಿಷಾನಿಲವನ್ನು ಬಿಡುಗಡೆ ಮಾಡುತ್ತದೆ.
1997ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಸುಪರ್ದಿಗೆ ತೆಗೆದುಕೊಂಡಿತು
ಎಲ್.ಜಿ. ಕೆಮಿಕಲ್ 1997ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮೂಲಕ ಭಾರತವನ್ನು ಪ್ರವೇಶ ಮಾಡಿತು. ಆ ಕಂಪೆನಿಯ ಹೆಸರನ್ನು ಎಲ್.ಜಿ. ಪಾಲಿಮರ್ಸ್ ಇಂಡಿಯಾ ಲಿಮಿಟೆಡ್ ಎಂದು ಬದಲಿಸಿತು. ಇದಕ್ಕೂ ಮೊದಲು ಕಂಪೆನಿಯು 1961ರಲ್ಲಿ ಹಿಂದೂಸ್ಥಾನ್ ಪಾಲಿಮರ್ಸ್ ಆರಂಭವಾಗಿತ್ತು. ಪಾಲಿಸ್ಟೈರೀನ್ ಉತ್ಪಾದನೆ ಮಾಡುತ್ತಿತ್ತು. ಆ ನಂತರ 1978ರಲ್ಲಿ ಯು.ಬಿ. ಗ್ರೂಪ್ ನ ಮೆಕ್ ಡೆವೆಲ್ ಜತೆಗೆ ಹಿಂದೂಸ್ತಾನ್ ಪಾಲಿಮರ್ಸ್ ವಿಲೀನ ಆಯಿತು. ಎಲ್.ಜಿ. ಪಾಲಿಮರ್ಸ್ ಹೇಳಿಕೊಳ್ಳುವಂತೆ, ಪಾಲಿಸ್ಟೈರೀನ್ ಉತ್ಪಾದಿಸುವ ಪ್ರಮುಖ ಕಂಪೆನಿ ಅದು. ಅದರ ಜತೆಗೆ ಭಾರತದಲ್ಲಿ ಎಂಜಿನಿಯರಿಂಗ್ ಪ್ಲಾಸ್ಟಿಕ್ ನ ಕಾಂಪೌಂಡ್ಸ್ ಗಳನ್ನು ಮಾಡುತ್ತದೆ. ಮಾರಾಟದ ವಿಚಾರಕ್ಕೆ ಬಂದರೆ, 2017ರ ಅಂಕಿ- ಅಂಶದ ಪ್ರಕಾರ, ವಿಶ್ವದ ಹತ್ತನೇ ಅತಿ ದೊಡ್ಡ ಕೆಮಿಕಲ್ ಕಂಪೆನಿ ಎಲ್.ಜಿ. ಪಾಲಿಮರ್ಸ್.
ಟ್ಯಾಂಕ್ ನಲ್ಲಿ 1800 ಟನ್ ಸ್ಟೈರೀನ್ ಇತ್ತು
ಮೇ 7, 2020ರ ಗುರುವಾರ ವಿಶಾಖಪಟ್ಟಣದಲ್ಲಿ ನಡೆದ ಘಟನೆಯು ಇನ್ನೇನು ಫ್ಯಾಕ್ಟರಿ ಮತ್ತೆ ಆರಂಭಿಸಬೇಕು ಎಂದು ಸಿದ್ಧತೆ ಮಾಡಿಕೊಳ್ಳುವಾಗ ಆಗಿದೆ. ಕೊರೊನಾ ಲಾಕ್ ಡೌನ್ ನಂತರದಲ್ಲಿ ಮತ್ತೆ ಕಾರ್ಖಾನೆಯಲ್ಲಿ ಕೆಲಸ ಶುರು ಮಾಡಲು ಕಾರ್ಮಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಎಲ್ ಜಿ ಪಾಲಿಮರ್ಸ್ ನೀಡಿದ ಹೇಳಿಕೆ ಪ್ರಕಾರ, ಅಲ್ಲಿನ ಸಂಗ್ರಹಾಗಾರ ತೊಟ್ಟಿಯಲ್ಲಿ 1800 ಟನ್ ಸ್ಟೈರೀನ್ ಇತ್ತು. ಆದರೆ ತಾಪಮಾನದಲ್ಲಿನ ವ್ಯತ್ಯಾಸ ಹಾಗೂ ಒಂದೇ ಕಡೆ ಜಡವಾಗಿದ್ದ ಕಾರಣಕ್ಕೆ ಆಟೋ ಪಾಲಿಮರೈಜೇಷನ್ ಆಗಿ, ಅದರ ಪರಿಣಾಮ ಆವಿಯಾಗಿದೆ.
ಕನಿಷ್ಠ ಮೂರು ಸಾವಿರ ಜನರ ಸ್ಥಳಾಂತರ
ಈ ಮಧ್ಯೆ ವಿಶಾಖಪಟ್ಟಣದಲ್ಲಿ ನಡೆದ ಅಪಘಾತಕ್ಕೆ ಎಲ್.ಜಿ. ಪಾಲಿಮರ್ಸ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತದೆ. ಕನಿಷ್ಠ ಮೂರು ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಹತ್ತಿರ ಹತ್ತಿರ 170 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಕೈಗಾರಿಕೆಗಳಲ್ಲಿ ರಾಸಾಯನಿಕಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳು ಎದ್ದಿವೆ. 1984ರಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಅನಿಲ ದುರಂತದ ಘಟನೆ ವಿಶ್ವದ ಭೀಕರ ಕೈಗಾರಿಕೆ ದುರಂತಗಳಲ್ಲಿ ಒಂದು ಎಂಬ ಕುಖ್ಯಾತಿಯನ್ನು ಪಡೆದಿದ್ದು, ಈ ಸಂದರ್ಭದಲ್ಲಿ ಮತ್ತೆ ಅದನ್ನು ನೆನಪಿಸಿಕೊಳ್ಳುವಂತಾಗಿದೆ.


Click it and Unblock the Notifications