ಅಮೆರಿಕದ ಬಿಲಿಯನೇರ್ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ 38 ವರ್ಷದ ವಿವೇಕ್ ರಾಮಸ್ವಾಮಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯ ಹುಡುಕಾಟದಲ್ಲಿದ್ದಾರೆ ಎಂದು ವರದಿಯಾಗಿದೆ. ವರದಿ ಪ್ರಕಾರ ಉದ್ಯಮಿ ವಿವೇಕ್ ಈ ಕೆಲಸಕ್ಕೆ ವಾರ್ಷಿಕವಾಗಿ 100,000 ಡಾಲರ್ ಅಥವಾ ಅಂದಾಜು 83 ಲಕ್ಷ ರೂಪಾಯಿ ವೇತನವನ್ನು ನೀಡಲು ಸಿದ್ಧರಿದ್ದಾರೆ.
ರಾಮಸ್ವಾಮಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ಪ್ರಸ್ತುತ ಡೊನಾಲ್ಡ್ ಟ್ರಂಪ್ ನಂತರ ಎರಡನೇ ಅತೀ ಆದ್ಯತೆಯ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದಾರೆ. ವಿಸ್ಕಾನ್ಸಿನ್‌ನಲ್ಲಿ ನಡೆದ ಮೊದಲ ಜಿಒಪಿ ಅಧ್ಯಕ್ಷೀಯ ಚರ್ಚೆಯ ನಂತರ ರಾಮಸ್ವಾಮಿ ಪ್ರಾಮುಖ್ಯತೆ ಮತ್ತಷ್ಟು ಅಧಿಕವಾಗಿದೆ.

ದಾದಿ ಹುಡುಕಾಟದ ಬಗ್ಗೆ ಸ್ವಲ್ಪ ತಿಳಿಯಿರಿ
ಬ್ಯುಸಿನೆಸ್ ಇನ್ಸೈಡರ್ ವರದಿಯ ಪ್ರಕಾರ ವಿವೇಕ್ ರಾಮಸ್ವಾಮಿ ಮಕ್ಕಳನ್ನು ನೋಡಿಕೊಳ್ಳಲು ದಾದಿ ಉದ್ಯೋಗವು EstateJobs.com ನಲ್ಲಿ ಕಾಣಿಸಿಕೊಂಡಿದೆ. ಇದು ದಾದಿಗಳು, ಚಾಲಕರು ಮತ್ತು ಖಾಸಗಿ ಬಾಣಸಿಗರಂತಹ ಮನೆಯ ಕೆಲಸ ಮಾಡುವವರನ್ನು ಹುಡುಕುವ ಶ್ರೀಮಂತ ವ್ಯಕ್ತಿಗಳಿಗೆ ಸೇವೆ ಸಲ್ಲಿಸುವ ವೆಬ್‌ಸೈಟ್ ಆಗಿದೆ. ಈ ಜಾಹೀರಾತಿನ ಪ್ರಕಾರ ದಾದಿ ವಾರಕ್ಕೆ 84 ರಿಂದ 96 ಗಂಟೆಗಳವರೆಗೆ ಕೆಲಸ ಮಾಡಬೇಕಾಗುತ್ತದೆ.
ದಾದಿಯು ಮಕ್ಕಳ ದಿನಚರಿಯನ್ನು ನಿರ್ವಹಣೆ ಮಾಡುವ, ನೋಡಿಕೊಳ್ಳುವ ಜವಾಬ್ದಾರಿಯುತ ಮನೆಯ ಸಿಬ್ಬಂದಿಗಳ ತಂಡದ ಭಾಗವಾಗಿರುತ್ತಾರೆ. ಆಯ್ಕೆಯಾದವರು ಶಿಫ್ಟ್ ಆಧಾರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಂದು ವಾರ ಕೆಲಸ ಮಾಡಿದ ಬಳಿಕ ಒಂದು ವಾರ ರಜೆ ಇರುತ್ತದೆ.
ಇನ್ನು ಪ್ರಯಾಣವು ಕೆಲಸದ ಒಂದು ಭಾಗವಾಗಿದ್ದು, ಆಗಾಗ್ಗೆ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಉದ್ಯೋಗ ಜಾಹೀರಾತಿನಲ್ಲಿ ಕ್ಲೈಂಟ್‌ನ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಹಲವಾರು ವಿವರಗಳು ಇದು ರಾಮಸ್ವಾಮಿ ಕುಟುಂಬಕ್ಕೆ ಸಂಬಂಧಿಸಿದೆ ಎಂದು ಸೂಚಿಸಿದೆ ಎಂದು ವರದಿ ಹೇಳಿದೆ.
ಓಹಿಯೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕ ಮತ್ತು ವೈದ್ಯೆಯಾಗಿರುವ ವಿವೇಕ್ ಪತ್ನಿ ಅಪೂರ್ವ ಮತ್ತು ವಿವೇಕ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ರಾಮಸ್ವಾಮಿ ಸಸ್ಯಾಹಾರಿಯಾದ ಕಾರಣ ದಾದಿಯು ಮಕ್ಕಳಿಗೆ ಸಸ್ಯಾಹಾರಿ ಊಟವನ್ನು ತಯಾರಿಸಬೇಕೆಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಜಾಹೀರಾತಿನಲ್ಲಿ ಉಲ್ಲೇಖಿಸಿದ ಮಕ್ಕಳ ವಯಸ್ಸು ಈ ಜಾಹೀರಾತಿನಲ್ಲಿರುವ ವಯಸ್ಸಿಗೆ ಹೊಂದಿಕೆಯಾಗುತ್ತದೆ.
ರಾಮಸ್ವಾಮಿ ಆದಾಯ
ಫೋರ್ಬ್ಸ್ ವರದಿ ಪ್ರಕಾರ ರಾಮಸ್ವಾಮಿ ಆದಾಯವು ಆಗಸ್ಟ್‌ನಲ್ಲಿ 1 ಬಿಲಿಯನ್ ಡಾಲರ್ ಮೀರಿದೆ. ಈ ಆದಾಯದಲ್ಲಿ ಬಹುಪಾಲು 2014 ರಲ್ಲಿ ಸ್ಥಾಪಿಸಲಾದ ಔಷಧೀಯ ಸಂಶೋಧನಾ ಸಂಸ್ಥೆಯಾದ ರೋವಂಟ್ ಸೈನ್ಸಸ್‌ನಿಂದ ಲಭ್ಯವಾಗಿದೆ.
ಕಂಪನಿಯು 2021 ರಲ್ಲಿ ಸಾರ್ವಜನಿಕವಾಗಿದೆ. ಸ್ಟಾಕ್ ಆ ವರ್ಷದಲ್ಲಿ ಮೌಲ್ಯದಲ್ಲಿ ಸುಮಾರು ಶೇಕಡ 40 ರಷ್ಟು ಹೆಚ್ಚಳ ಕಂಡಿದೆ. ರಾಮಸ್ವಾಮಿ ಪ್ರಾರಂಭದಿಂದಲೂ ಸಂಬಳ, ಬೋನಸ್‌ಗಳು ಮತ್ತು ಕ್ಯಾಪಿಟಲ್ ಲಾಭಗಳ ರೂಪದಲ್ಲಿ ರೋವಂಟ್‌ನಿಂದ 260 ಮಿಲಿಯನ್ ಡಾಲರ್ ಗಳಿಸಿದ್ದಾರೆ. 2021 ರಲ್ಲಿ, ತಮ್ಮ ರಾಜಕೀಯ ಕ್ಷೇತ್ರದ ಮೇಲೆ ಗಮನಹರಿಸಲು ರೋವಂಟ್‌ನ ಸಿಇಒ ಸ್ಥಾನದಿಂದ ಕೆಳಗಿಳಿದರು.
ಅವರ ಔಷಧೀಯ ಉದ್ಯಮದ ಜೊತೆಗೆ, ರಾಮಸ್ವಾಮಿ ಅದೇ ವರ್ಷದಲ್ಲಿ ಸ್ಟ್ರೈವ್ ಎಂಬ "ಆಂಟಿ-ವೇಕ್" ಆಸ್ತಿ ನಿರ್ವಹಣಾ ಸಂಸ್ಥೆಯನ್ನು ಪ್ರಾರಂಭಿಸಿದರು. ಕಂಪನಿಯು 300 ಮಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ರಾಮಸ್ವಾಮಿ ಷೇರು 100 ಮಿಲಿಯನ್ ಡಾಲರ್‌ಗಿಂತಲೂ ಅಧಿಕವಾಗಿದೆ. ರಾಮಸ್ವಾಮಿ ಈ ಹಿಂದೆ ಹಾರ್ವರ್ಡ್ ಮತ್ತು ಯೇಲ್‌ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 2014 ರವರೆಗೆ ಹೆಡ್ಜ್ ಫಂಡ್ ಕ್ಯೂವಿಟಿಯಲ್ಲಿ ಕೆಲಸ ಮಾಡಿದ್ದಾರೆ.


Click it and Unblock the Notifications