ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವದಿಂದ ಈ ವರ್ಷ ಚೈನೀಸ್ ಮೊಬೈಲ್ ಕಂಪೆನಿ ವಿವೋ ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ. ಬಿಸಿಸಿಐ ಜತೆ ಈ ಬಗ್ಗೆ ಮಾತುಕತೆ ನಡೆಸಿ, ಸಮ್ಮತಿಯೊಂದಿಗೆ ದೂರವಾಗುವುದಕ್ಕೆ ಆಲೋಚಿಸುತ್ತಿದೆ. ಭಾರತ- ಚೀನಾ ಮಧ್ಯೆ ಈಚೆಗೆ ಉದ್ಭವಿಸಿರುವ ರಾಜತಾಂತ್ರಿಕ ಉದ್ವಿಗ್ನತೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಈ ಒಂದು ವರ್ಷ ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದನ್ನು ವಿನಾಯಿತಿ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಸಂಬಂಧ ಸುಧಾರಿಸಿದಲ್ಲಿ ಬಿಸಿಸಿಐನಿಂದ ಹೊಸದಾಗಿ ಮೂರು ವರ್ಷದ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಪರಿಷ್ಕೃತ ನಿಬಂಧನೆಗಳೊಂದಿಗೆ 2021ರಿಂದ 2023ರ ತನಕ ಮತ್ತೆ ಒಪ್ಪಂದ ಆಗಲಿದೆ. ಈ ವರ್ಷ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ತನಕ ಯುಎಇಯಲ್ಲಿ ಐಪಿಎಲ್ ನಡೆಯಲಿದೆ.
ಒಂದು ವರ್ಷದ ಮಟ್ಟಿಗೆ ಹಿಂದಕ್ಕೆ ಸರಿಯುತ್ತಾ ವಿವೋ
ಹೌದು, ಬಿಸಿಸಿಐ ಪದಾಧಿಕಾರಿಗಳ ಜತೆಗೆ ಈ ಬಗ್ಗೆ ವಿವೋ ಕಂಪೆನಿ ಪ್ರತಿನಿಧಿಗಳ ಚರ್ಚೆ ನಡೆಯುತ್ತಿದೆ. ಒಂದು ವರ್ಷದ ಮಟ್ಟಿಗೆ ವಿವೋ ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಹೆಸರು ಬಹಿರಂಗ ಆಗಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಾರ್ಷಿಕವಾಗಿ 440 ಕೋಟಿ ಪಾವತಿ
ಐಪಿಎಲ್ ಉಸ್ತುವಾರಿ ನೋಡಿಕೊಳ್ಳುವ ಸಮಿತಿಯು ಎಲ್ಲ ಪ್ರಾಯೋಜಕರನ್ನು ಮುಂದುವರಿಸಿದ್ದು, ಐದು ವರ್ಷದ ತನಕ (2022) ಒಪ್ಪಂದ ಮಾಡಿಕೊಂಡಿರುವುದರಲ್ಲಿ ವಿವೋ ಕೂಡ ಸೇರಿದ್ದು ವಾರ್ಷಿಕವಾಗಿ 440 ಕೋಟಿ (ಅಂದಾಜು) ಪಾವತಿ ಮಾಡುತ್ತದೆ. ಇನ್ನು ಈಗಾಗಲೇ ಕೆಲವು ಭಾರತೀಯ ಕಂಪೆನಿಗಳ ಜತೆ ಬಿಸಿಸಿಐ ಮಾತು ಕತೆ ನಡೆಸಿದೆ. ಅವುಗಳು ಒಂದು ವರ್ಷದ ಅವಧಿಗೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ತೋರಿಸಿವೆ.
ಖಾಲಿ ಮೈದಾನದ ಪಂದ್ಯಾವಳಿಗೆ ಆಕರ್ಷಣೆ ಇಲ್ಲ
ಇಷ್ಟು ಕಡಿಮೆ ಅವಧಿಗೆ 440 ಕೋಟಿ ಪಾವತಿ ಮಾಡುವುದು ಕಷ್ಟ. ಅದೂ ಅಲ್ಲದೆ ಈ ಸಲ ವಿದೇಶದಲ್ಲಿ ಪಂದ್ಯಾವಳಿಗಳು ನಡೆಯುತ್ತಿವೆ. ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ನಡೆಯುವ ಪಂದ್ಯಗಳ ಬಗ್ಗೆ ಹೆಚ್ಚಿನ ಆಕರ್ಷಣೆ ಇರುವುದಿಲ್ಲ. ಆದರೂ ವಿವೋ ಅಧಿಕೃತವಾಗಿ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿದ ಮೇಲಷ್ಟೇ ಒಂದು ನಿರ್ಧಾರಕ್ಕೆ ಬರುವುದು ಸಾಧ್ಯ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.


Click it and Unblock the Notifications