ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ನೋಂದಣಿ ರದ್ದುಗೊಳಿಸಲು ಮೆಟಾ ಒಡೆತನದ ವಾಟ್ಸಾಪ್ ಒಪ್ಪಿಗೆ ನೀಡಿದೆ. ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ಸೇವೆಯನ್ನು ಅದರ ಪ್ಲಾಟ್‌ಫಾರ್ಮ್‌ನಿಂದ ಈಗಾಗಲೇ ಕಡಿತಗೊಳಿಸಲಾಗಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ. ಅದಕ್ಕಾಗಿ ಯಾರು ತಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ವಾಟ್ಸಾಪ್ ವಂಚನೆ ಮಾಡುವ ತಂತ್ರ ರೂಪಿಸುತ್ತಾರೋ ಎಚ್ಚರವಿರಬೇಕಾಗುತ್ತದೆ.
"ನಾವು ವಾಟ್ಸಾಪ್‌ನೊಂದಿಗೆ ಮಾತುಕತೆಯನ್ನು ನಡೆಸುತ್ತಿದ್ದೇವೆ. ಸಕ್ರಿಯವಾಗಿ ಮಾತುಕತೆ ನಡೆಯುತ್ತಿದೆ. ಹೌದು, ಗ್ರಾಹಕರ ಸುರಕ್ಷತೆಯು ಅತ್ಯಂತ ಮುಖ್ಯವಾಗಿದೆ ಎಂದು ವಾಟ್ಸಾಪ್ ಸಂಸ್ಥೆಯು ಒಪ್ಪಿಕೊಂಡಿದೆ. ವಂಚನೆಗೆ ಬಳಸುವ ಮೊಬೈಲ್ ಸಂಖ್ಯೆಯ ನೋಂದಣಿ ರದ್ದುಗೊಳಿಸಲು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ," ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.

ಗ್ರಾಹಕರನ್ನು ವಂಚಿಸುವ ಉದ್ದೇಶದಿಂದ ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಕರೆ ಮಾಡುವ ವಂಚಕರ ತಂತ್ರವನ್ನು ನಿಲ್ಲಿಸಲು ಸರ್ಕಾರದ ಕ್ರಮಗಳ ಬಗ್ಗೆ ಪ್ರಶ್ನಿಸಿದಾಗ ಟೆಲಿಕಾಂ ಸಚಿವ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪ್ರಸ್ತುತ ವಂಚಕರು ಜನರನ್ನು ವಂಚನೆ ಮಾಡಲು ಹಲವಾರು ಮಾರ್ಗಗಳನ್ನು ಹೊಂದಿದ್ದಾರೆ. ಹೊಸ ಹೊಸ ತಂತ್ರಗಳನ್ನು ವಂಚಕರು ಅಳವಡಿಸಿಕೊಳ್ಳುತ್ತಿದ್ದಾರೆ. ವಾಟ್ಸಾಪ್ ಅನ್ನು ಕೂಡಾ ತಮ್ಮ ತಂತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಯಾವ ವಾಟ್ಸಾಪ್ ಬಳಕೆದಾರರು ವಂಚನೆಯನ್ನು ನಡೆಸುತ್ತಿದ್ದಾರೆ ಅವರ ಸಂಖ್ಯೆಯನ್ನು ನಿಷ್ಕ್ರೀಯಗೊಳಿಸಲು ಸರ್ಕಾರವು ಟೆಲಿಗ್ರಾಮ್‌ನಂತಹ ಇತರ ಸಂದೇಶ ಕಳುಹಿಸುವ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಸಚಿವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ವಾಟ್ಸಾಪ್, ಸಮಸ್ಯೆಯನ್ನು ಪರಿಹರಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದೆ.
"ಪ್ಲಾಟ್‌ಫಾರ್ಮ್‌ನಿಂದ ವಂಚಕರನ್ನು ಹೊರಹಾಕುವುದು ಸೇರಿದಂತೆ ಬಳಕೆದಾರರ ಸುರಕ್ಷಿತೆಯ ಬಗ್ಗೆ ಖಚಿತಪಡಿಸಿಕೊಳ್ಳಲು ನಾವು ಸರ್ಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಬಳಕೆದಾರರ ಸುರಕ್ಷತೆಯನ್ನು ರಕ್ಷಿಸುವಲ್ಲಿ ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸೇವೆಯನ್ನು ಹೊಂದಿದೆ. ಜೊತೆಗೆ ನಾವು ಬ್ಲಾಕ್ ಮತ್ತು ರಿಪೋರ್ಟ್ ಎಂಬ ಎರಡು ಸುರಕ್ಷತಾ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದ್ದೇವೆ," ಎಂದು ವಾಟ್ಸಾಪ್ ತಿಳಿಸಿದೆ.
ಗ್ರಾಹಕರಿಗೆ ಸಹಾಯವಾಗುವಂತೆ ಮೂರು ಹಂತಗಳ ಸುಧಾರಣೆಯ ಆರಂಭದ ಬಗ್ಗೆಯೂ ಈ ಸಂದರ್ಭದಲ್ಲಿ ಅಶ್ವಿನಿ ವೈಷ್ಣವ್ ಮಾತನಾಡಿದ್ದಾರೆ. ಗ್ರಾಹಕರು ತನ್ನ ಗುರುತಿಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುವುದು ಈ ಪೈಕಿ ಮೊದಲನೆಯದ್ದಾಗಿದೆ.
ಇನ್ನು ಎರಡನೇಯದಾಗಿ ಜನರು ತಮ್ಮ ಫೋನ್ ಅನ್ನು ಕಳೆದುಕೊಂಡರೆ ಅಥವಾ ಅದು ಕಳ್ಳತನವಾದರೆ ಗ್ರಾಹಕರು ದೂರಸಂಪರ್ಕ ಇಲಾಖೆಯ ಅಡಿಯಲ್ಲಿ ಬರುವ ಸಂಚಾರ್ ಸಾಥಿ ಹೆಸರಿನ ವೆಬ್ ಪೋರ್ಟಲ್ ಮೂಲಕ ಫೋನ್ ಸಂಖ್ಯೆಯನ್ನು ನಿಷ್ಕ್ರೀಯಗೊಳಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದಾಗಿದೆ. ಈ ಸೇವೆಯನ್ನು ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಬೆಂಬಲಿತವಾಗಿದೆ.
ಮೋಸ ಮಾಡುವ ಚಂದಾದಾರರನ್ನು ಗುರುತಿಸುವ ನಿಟ್ಟಿನಲ್ಲಿ, ಟೆಲಿಕಾಂ ಸಿಮ್ ಚಂದಾದಾರರ ಪರಿಶೀಲನೆಗಾಗಿ ಸರ್ಕಾರವು ASTR ಅಥವಾ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತದೆ. ಮೊಬೈಲ್ ಫೋನ್ ಅನ್ನು ಒಮ್ಮೆ ಕಳ್ಳತನ ಮಾಡಿದರೆ, ನಿಮ್ಮ ಗುರುತಿನ ದುರ್ಬಳಕೆ, ನಿಮ್ಮ ಕೆವೈಸಿ ದುರ್ಬಳಕೆ ಮತ್ತು ಬ್ಯಾಂಕಿಂಗ್ ವಂಚನೆಗಳಂತಹ ವಿವಿಧ ವಂಚನೆಗಳನ್ನು ಮಾಡಬಹುದಾಗಿದೆ. ಇಂತಹ ವಂಚನೆಗಳನ್ನು ತಡೆಯಲು ಈ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪುಗಳು ನಿಗದಿಪಡಿಸಿದ ಗೌಪ್ಯತೆ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಶೀಲನೆ ಮಾಡಲಾಗುತ್ತದೆ. ದೇಶವು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನಿನಲ್ಲಿ ಸಹ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.


Click it and Unblock the Notifications