ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಗೆ S&P Global ರೇಟಿಂಗ್ ಏಜೆನ್ಸಿ BBB+ ರೇಟಿಂಗ್ ನೀಡಿದೆ. ಆ ಮೂಲಕ ಕಂಪೆನಿಯ ಬೆಳವಣಿಗೆಯ ಸ್ಥಿರತೆ ಬಗ್ಗೆ ತನ್ನ ಅಭಿಪ್ರಾಯ ದಾಖಲಿಸಿದೆ. ಖರ್ಚು- ವೆಚ್ಚದಲ್ಲಿನ ಶಿಸ್ತು ಹಾಗೂ ಆಸ್ತಿ ಮಾರಾಟದಿಂದ ಹಣ ಸಂಗ್ರಹ ಹಾಗೂ ಆದಾಯದಲ್ಲಿ ಏರಿಕೆ.. ಈ ಎಲ್ಲ ಅಂಶಗಳು ಸೇರಿ ಈ ರೇಟಿಂಗ್ ನೀಡಲಾಗಿದೆ.
ಇನ್ನು ನಿಮಗೆಲ್ಲ ಗೊತ್ತೇ ಇರುತ್ತದೆ: ರಿಲಯನ್ಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ ಶೇಕಡಾ 9.98ರಷ್ಟು ಪಾಲನ್ನು 43,574 ಕೋಟಿ ರುಪಾಯಿಗೆ ಖರೀದಿಸಲು ಫೇಸ್ ಬುಕ್ ಒಪ್ಪಿದೆ. ಈ ಹಣವನ್ನು ಕಂಪೆನಿಯ ಸಾಲವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅಂತಲೇ ಭಾವಿಸುತ್ತೇವೆ ಎಂದು ರೇಟಿಂಗ್ ಏಜೆನ್ಸಿ ತಿಳಿಸಿದೆ. ಇದರ ಜತೆಗೆ ಈ ವ್ಯವಹಾರದಿಂದ ರಿಲಯನ್ಸ್ ಬೆಳವಣಿಗೆ ಸಾಧ್ಯತೆ ಕೂಡ ಹೆಚ್ಚಿಸುತ್ತದೆ ಎಂದು ಕೂಡ ಅಭಿಪ್ರಾಯ ಪಡಲಾಗಿದೆ.

ಫೇಸ್‌ಬುಕ್ ನ ವಾಟ್ಸಾಪ್ ಜತೆ ಸೇರಿ ಜಿಯೋಮಾರ್ಟ್ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಅನ್ನು ಚುರುಕುಗೊಳಿಸಲು ರಿಲಯನ್ಸ್ ಕೆಲಸ ಮಾಡಲಿದೆ. "ಡಿಜಿಟಲ್ ಹಾಗೂ ರೀಟೇಲ್ ವಿಭಾಗಗಳ ದೇಶೀ ಮಾರುಕಟ್ಟೆಯಲ್ಲಿ ರಿಲಯನ್ಸ್ ಪ್ರಮುಖ ಸ್ಥಾನದಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ ಸಂಸ್ಥೆಯ ಕಾರ್ಯಕ್ಷಮತೆ ಚೇತರಿಕೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ," ಎಂದು S&P Global ಹೇಳಿದೆ.
EBITDA ರು. 31,500 ಕೋಟಿ ತಲುಪಿದೆ
ಮುಂದಿನ 12ರಿಂದ 24 ತಿಂಗಳಲ್ಲಿ ಕಂಪೆನಿಯ ಸಾಮರ್ಥ್ಯ ಸುಧಾರಿಸಲು ಮತ್ತು ಸ್ಥಿರಗೊಳ್ಳಲು ಸಾಧ್ಯವಿದೆ. ಹೀಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ನ (ಆರ್‌ಐಎಲ್) ರೇಟಿಂಗ್ ನಲ್ಲಿ ಸ್ಥಿರ ದೃಷ್ಟಿಕೋನ ಇರುವುದಾಗಿ ತಿಳಿಸಿದ್ದೇನೆ ಎಂದು ಏಜೆನ್ಸಿ ಹೇಳಿದೆ.
ರಿಲಯನ್ಸ್ ಡಿಜಿಟಲ್ ಮತ್ತು ರೀಟೇಲ್ ವಿಭಾಗಗಳ ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್ ಗೂ ಮುಂಚಿನ ಆದಾಯವು (EBITDA) ಮಾರ್ಚ್ 31, 2018ರಂದು ಕೊನೆಗೊಂಡ ವರ್ಷಕ್ಕೆ ರು. 9,300 ಕೋಟಿಯಿಂದ ಗಮನಾರ್ಹ ಹೆಚ್ಚಳ ಕಂಡು, ಆರ್ಥಿಕ ವರ್ಷ 2020ರಲ್ಲಿ ಅಂದಾಜು ರು. 31,500 ಕೋಟಿ ತಲುಪಿದೆ.
ಫೇಸ್‌ಬುಕ್ ನಂತಹ ಪ್ರಮುಖ ಪಾಲುದಾರರ ಜೊತೆಗಿನ ಹೂಡಿಕೆಗಳೂ ಸೇರಿ, ಡಿಜಿಟಲ್ ಮತ್ತು ರೀಟೇಲ್ ವಿಭಾಗಗಳಿಂದ ರಿಲಯನ್ಸ್ ಆದಾಯವು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಶೇಕಡಾ 15ರ ಸಂಯೋಜಿತ ವಾರ್ಷಿಕ ದರದಲ್ಲಿ ಬೆಳೆಯಲಿದೆ ಎಂದು ಅದು ಹೇಳಿದೆ.
ಸೌದಿ ಅರಾಮ್ಕೋ ಖರೀದಿ ವ್ಯವಹಾರ
ಅಲ್ಲದೆ, ಕಂಪೆನಿಯಲ್ಲಿನ ತೈಲದಿಂದ ರಾಸಾಯನಿಕಗಳವರೆಗಿನ ವ್ಯವಹಾರದಲ್ಲಿ ಶೇಕಡಾ 20ರಷ್ಟು ಪಾಲನ್ನು ಖರೀದಿಸಲು ಸೌದಿ ಅರಾಮ್ಕೋ (ಅರಾಮ್ಕೋ) ಸಂಸ್ಥೆಯಿಂದ ನಾನ್-ಬೈಂಡಿಂಗ್ ಲೆಟರ್ ಆಫ್ ಇಂಟೆಂಟ್ ಅನ್ನು ರಿಲಯನ್ಸ್ 2019ರ ಆಗಸ್ಟ್ ನಲ್ಲಿ ಪಡೆದಿದೆ.
ಈ ವಹಿವಾಟಿನಿಂದ ಬರುವ ಮೊತ್ತವನ್ನು ಕಂಪೆನಿಯು ತನ್ನ ಸಾಲಗಳನ್ನು ಕಡಿಮೆಮಾಡಲು ಬಳಸಿದರೆ, ಅರಾಮ್ಕೋ ಒಪ್ಪಂದ ಅಂತಿಮಗೊಳಿಸುವುದರಿಂದ ಕಂಪೆನಿಗೆ ಕ್ರೆಡಿಟ್ ಪಾಸಿಟಿವ್ ಆಗಿರಲಿದೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.
2019ರ ಆರ್ಥಿಕ ವರ್ಷದಲ್ಲಿ ಕಂಪೆನಿಯ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ರು. 93,600 ಕೋಟಿಗಳ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಆರ್ಥಿಕ ವರ್ಷ 2020ರಲ್ಲಿ ಸಂಸ್ಥೆಯ ಕ್ಯಾಪೆಕ್ಸ್ ಸುಮಾರು ರು. 63,000 ಕೋಟಿಗಳಿಗೆ ಇಳಿದಿದೆ ಎಂದು ಅಂದಾಜಿಸಲಾಗಿದೆ. "ಮುಂದಿನ ಎರಡು ವರ್ಷಗಳಲ್ಲಿ ಆರ್‌ಐಎಲ್ ತನ್ನ ಹೂಡಿಕೆಯನ್ನು ವರ್ಷಕ್ಕೆ ರೂ. 50,000 ಕೋಟಿಗಳಿಗೆ ಇಳಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ," ಎಂದು ಅದು ಹೇಳಿದೆ.
ಇಂಧನ ವಿಭಾಗದ ಇಳಿಕೆಯನ್ನು ಸರಿದೂಗಿಸಲಿದೆ
ಸಂಸ್ಥೆಯು ಡಿಜಿಟಲ್ ವಿಭಾಗದಲ್ಲಿ ಹೂಡಿಕೆಗೆ ಆದ್ಯತೆ ನೀಡುವ ಸಾಧ್ಯತೆಯಿದ್ದು, ಇಂಧನ ವಿಭಾಗದ ಹೂಡಿಕೆಗಳನ್ನು ನಿರ್ವಹಣೆಗೆ ಸಂಬಂಧಿಸಿದಂತೆ ಮಾತ್ರ ಸೀಮಿತ ಆಗಿಸಲಿದೆ ಎಂದು ಏಜೆನ್ಸಿ ಹೇಳಿದ್ದು, ಡಿಜಿಟಲ್ ಮತ್ತು ರೀಟೇಲ್ ವಿಭಾಗಗಳಲ್ಲಿ ಚೇತರಿಸಿಕೊಳ್ಳುತ್ತಿರುವ ರಿಲಯನ್ಸ್ ಗಳಿಕೆಯು ಇಂಧನ ವಿಭಾಗದಲ್ಲಿನ ಇಳಿಕೆಯನ್ನು ಸರಿದೂಗಿಸಬೇಕಿದೆ.
ಕೋವಿಡ್-19 ಜಾಗತಿಕ ಸೋಂಕು ಸಂದರ್ಭದ ಶಟ್ ಡೌನ್ ಗಳಿಂದಾದ ಹಿನ್ನಡೆ ಹಾಗೂ ಭಾರತದ ದೇಶೀಯ ಮಾರುಕಟ್ಟೆಯ ಮೇಲೆ ಮುಂದೆಯೂ ಉಂಟಾಗಬಹುದಾದ ತೊಂದರೆಗಳು ರಿಲಯನ್ಸ್ ಕ್ರೆಡಿಟ್ ಪ್ರೊಫೈಲ್ ಅನ್ನು ನಿರ್ಬಂಧಿಸಬಹುದು ಎಂದು ಅದು ಹೇಳಿದೆ.


Click it and Unblock the Notifications