ಭಾರತದ ಮಾರುಕಟ್ಟೆಯಲ್ಲಿ ಸೋಮವಾರ (ಫೆಬ್ರವರಿ 1, 2021) ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಎಂಸಿಎಕ್ಸ್ ನಲ್ಲಿ ಬೆಳ್ಳಿ ಫ್ಯೂಚರ್ಸ್ 6% ಅಥವಾ 4200 ರುಪಾಯಿ ಹೆಚ್ಚಳವಾಗಿ, ಪ್ರತಿ ಕೇಜಿಗೆ ರು. 73,888 ಇದೆ. ಈ ಮೂಲಕ ಮೂರು ದಿನದ ಗಳಿಕೆಯನ್ನು ದೇಶೀ ಮಾರುಕಟ್ಟೆಯಲ್ಲಿ ರು. 7500ಕ್ಕೆ ವಿಸ್ತರಿಸಿಕೊಂಡಿದೆ.
ಬೆಳ್ಳಿ ಬೆಲೆಯು ಶುಕ್ರವಾರ ಎಂಸಿಎಕ್ಸ್ ನಲ್ಲಿ 3.2 ಪರ್ಸೆಂಟ್ ಅಥವಾ ಕೇಜಿಗೆ 2170 ರುಪಾಯಿ ಗಳಿಕೆ ಕಂಡಿತ್ತು. ಈಚೆಗೆ ಇಷ್ಟೆಲ್ಲ ಗಳಿಕೆ ಕಂಡ ನಂತರವೂ ಕಳೆದ ವರ್ಷ ಆಗಸ್ಟ್ ನಲ್ಲಿ ತಲುಪಿದ್ದ 80,000 ರುಪಾಯಿಯ ಗರಿಷ್ಠ ಮಟ್ಟದಿಂದ ಈಗಲೂ 6000 ರುಪಾಯಿ ಕಡಿಮೆ ಬೆಲೆಯಲ್ಲಿ ವಹಿವಾಟು ಆಗುತ್ತಿದೆ.
ಇನ್ನು ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 0.5 ಏರಿಕೆ ಕಂಡು, ಪ್ರತಿ 10 ಗ್ರಾಮ್ ಗೆ 49,717 ರುಪಾಯಿಯಲ್ಲಿ ವಹಿವಾಟು ನಡೆಸಿತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳೆ ಬೆಲೆಯು ಇಂದು 7.4% ಹೆಚ್ಚಳವಾಗಿ, ಆರು ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಗುರುವಾರದಿಂದ ಈಚೆಗೆ ಬೆಳ್ಳಿ ಬೆಲೆಯಲ್ಲಿ 15% ಹೆಚ್ಚಳ ಆಗಿದೆ. Reddit ನಲ್ಲಿ ಬೆಳ್ಳಿ ಗಣಿಗಾರಿಕೆ ಸ್ಟಾಕ್ ಖರೀದಿಸುವಂತೆ ಮತ್ತು ಐಷೇರ್ಸ್ ಸಿಲ್ವರ್ ಟ್ರಸ್ಟ್ ಇಟಿಎಫ್ ಖರೀದಿಸುವಂತೆ ರೀಟೇಲ್ ಹೂಡಿಕೆದಾರರಿಗೆ ಶಿಫಾರಸು ಬಂದಿತ್ತು. ಆ ನಂತರ ಈ ಬೆಳವಣಿಗೆ ಆಗಿದೆ. ಆದರೆ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ವಿಶ್ಲೇಷಕರು.
ಇನ್ನೊಂದು ಕಡೆ, ಸ್ಪಾಟ್ ಚಿನ್ನದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಗೆ (28.3495 ಗ್ರಾಮ್) 0.3% ಹೆಚ್ಚಳವಾಗಿ $ 1852.35 ತಲುಪಿದೆ. ಆದರೆ ಚಿನ್ನಕ್ಕಿಂತ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಳಿತ ಕಾಣಿಸಿಕೊಳ್ಳುತ್ತದೆ. ಹೂಡಿಕೆ ಆಸ್ತಿಯಾಗಿ, ಕೈಗಾರಿಕೆಯಲ್ಲಿ ಬಳಸುವುದಕ್ಕೆ, ಅಷ್ಟೇ ಏಕೆ ಸೋಲಾರ್ ಪ್ಯಾನೆಲ್ ಗಳಲ್ಲೂ ಅದನ್ನು ಬಳಸುತ್ತಾರೆ.


Click it and Unblock the Notifications