ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಹಲವು ಸವಾಲು- ಸಮಸ್ಯೆಗಳು ಎದುರಾದರೂ ಅಂತೂ ಅಂತಿಮವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆರಂಭವಾಗಲಿವೆ. ಎಂಟು ತಂಡಗಳು ಪ್ರಶಸ್ತಿಗಾಗಿ ಪೋಟಿ ನಡೆಸಲಿವೆ. ಈ ಬಾರಿ ಪಂದ್ಯಾವಳಿಯಲ್ಲಿ ಕೊರೊನಾ ಇನ್ಷೂರೆನ್ಸ್ ಕವರ್ ಆಗಲ್ಲ.
ನಿಮಗೆ ಗೊತ್ತಿರಲಿ, ಕೊರೊನಾ ಕಾರಣಕ್ಕೆ ಟೆನಿಸ್ ಗ್ರಾನ್ ಸ್ಲಾಮ್ ವಿಂಬಲ್ಡನ್ ರದ್ದಾದ ಮೇಲೆ ಆಯೋಜಕರಿಗೆ 14.2 ಕೋಟಿ ಅಮೆರಿಕನ್ ಡಾಲರ್ ಬಂದಿತ್ತು. ಆದರೆ ಐಪಿಎಲ್ ರದ್ದಾದರೆ ಯಾವುದೇ ಮೊತ್ತ ಸಿಗುವುದಿಲ್ಲ. ಏಕೆಂದರೆ, ಬೋರ್ಡ್ ಆಫ್ ಕ್ರಿಕೆಟ್ ಕಂಟ್ರೋಲ್ ಆಫ್ ಇಂಡಿಯಾ (ಬಿಸಿಸಿಐ)ದಿಂದ ಕೊರೊನಾ ವೈರಾಣುಗಾಗಿ ಯಾವುದೇ ಇನ್ಷೂರೆನ್ಸ್ ಮಾಡಿಸಿಲ್ಲ.
ವಿಂಬಲ್ಡನ್ ಆಯೋಜಿಸುವ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ನಿಂದ ಕೊರೊನಾಗೆ ಇನ್ಷೂರೆನ್ಸ್ ಪಡೆಯಲಾಗಿತ್ತು. ಅದರಲ್ಲೂ ಕೊರೊನಾದಂಥ ಬಿಕ್ಕಟ್ಟಿಗಾಗಿಯೇ ಪಡೆದುಕೊಂಡಿದ್ದರಿಂದ ಹಣ ಬಂದಿತು. 2003ರಲ್ಲಿ SARS ಕಾಣಿಸಿಕೊಂಡಿತಲ್ಲಾ, ಆಗಿನಿಂದ ವಿಂಬಲ್ಡನ್ ಆಯೋಜಕರು 31.7 ಮಿಲಿಯನ್ ಡಾಲರ್ ನಷ್ಟು ಮೊತ್ತವನ್ನು ಪ್ರೀಮಿಯಂ ಆಗಿ ಕಟ್ಟುತ್ತಾ ಬರುತ್ತಿದ್ದಾರೆ.
ಪಂದ್ಯಾವಳಿ ಇತರ ಕಾರ್ಯಕ್ರಮಗಳಿಗೆ ಇನ್ಷೂರೆನ್ಸ್
ಯಾವುದೇ ದೊಡ್ಡ ಕಾರ್ಯಕ್ರಮಗಳ ಆಯೋಜಕರು ಸಾಮಾನ್ಯವಾಗಿ ಇನ್ಷೂರೆನ್ಸ್ ಖರೀದಿ ಮಾಡುತ್ತಾರೆ. ಉದಾಹರಣೆಗೆ ಸಂಗೀತ ಸಂಜೆ, ಐಪಿಎಲ್ ಇತ್ಯಾದಿ. ಇದರಲ್ಲಿ ಪರ್ಸನಲ್ ಅಪಘಾತ ಕೂಡ ಕವರ್ ಆಗುತ್ತದೆ. ಇದರ ಜತೆಗೆ ಭಯೋತ್ಪಾದಕ ದಾಳಿ, ನೈಸರ್ಗಿಕ ವಿಪತ್ತುಗಳಾದ ಭೂಕುಸಿತ, ಪ್ರವಾಹ ಹಾಗೂ ಭೂಕಂಪನ ಸಹ ಒಳಗೊಂಡಿರುತ್ತದೆ. ಬೀಕರವಾದ ಕಾಯಿಲೆಗಳಿಂದ ಯಾವುದಾದರೂ ಮುಖ್ಯ ಕಾರ್ಯಕ್ರಮ ರದ್ದಾದ, ಮುಂದೂಡಿದ, ತಡೆಯಾದ ಸಂದರ್ಭಕ್ಕೂ ಈ ಇನ್ಷೂರೆನ್ಸ್ ಕವರ್ ಆಗುತ್ತದೆ. ಆದರೆ ಬಿಸಿಸಿಐನಿಂದ ಯಾವುದೇ ಇನ್ಷೂರೆನ್ಸ್ ಖರೀದಿಸಿಲ್ಲ. ಇದನ್ನು ಮುಂದಿನ ಹಂತದಲ್ಲಿ ಸೇರ್ಪಡೆ ಮಾಡುವುದು ಸಾಧ್ಯವಿಲ್ಲ. ಈ ವಿಚಾರದಲ್ಲಿ 2020ನೇ ಇಸವಿ ಅತ್ಯುತ್ತಮ ಪಾಠ. ಈಗ ಎಲ್ಲ ಪ್ರಮುಖ ಕಾರ್ಯಕ್ರಮಗಳ ಆಯೋಜಕರು ಸಹ ಇನ್ಷೂರೆನ್ಸ್ ಮಾಡಿಸುವಾಗ ಪ್ಯಾಂಡೆಮಿಕ್ ಎಂಬುದನ್ನು ಸೇರಿಸುತ್ತಿದ್ದಾರೆ. ಇದರಿಂದ ಪ್ರೀಮಿಯಂ ಹೆಚ್ಚಾಗುತ್ತಿದೆ.
ಹೊಸದಾಗಿ ಪಾಲಿಸಿ ಖರೀದಿ
ಒಟ್ಟಾರೆ ಐಪಿಎಲ್ ಗೆ ಇನ್ಷೂರೆನ್ಸ್ ಮಾಡಿಸುವುದು ಒಂದು ಕಡೆಯಾಯಿತು. ಪ್ರತಿ ತಂಡವು ಸಹ ಇನ್ಷೂರೆನ್ಸ್ ಮಾಡಿಸುತ್ತದೆ. ಅದರಲ್ಲಿ ಪ್ರತಿ ಆಟಗಾರನಿಗೆ ಇನ್ಷೂರೆನ್ಸ್ ಕವರ್ ಆಗುತ್ತದೆ. ವೈಯಕ್ತಿಕ ಅಪಘಾತ, ಪಂದ್ಯ ರದ್ದು (ಕೊರೊನಾ ಕಾರಣದಿಂದ ಅಲ್ಲ) ಹಾಗೂ ಪ್ರತಿ ಆಟಗಾರನಿಗೂ ಮೆಡಿಕಲ್ ಇನ್ಷೂರೆನ್ಸ್ ಇರುತ್ತದೆ. ಆದ್ದರಿಂದ ಯಾವುದಾದರೂ ಆಟಗಾರ ಪಂದ್ಯದ ಮಧ್ಯೆ ಗಾಯಾಳುವಾದರೆ ಆಯೋಜಕರಿಗೆ ಹಾಗೂ ತಂಡದ ಫ್ರಾಂಚೈಸಿಗೆ ಆಗುವ ಆಟಗಾರನ ಶುಲ್ಕದ ನಷ್ಟವನ್ನು ಇನ್ಷೂರೆನ್ಸ್ ಕವರ್ ಮಾಡಿಕೊಡುತ್ತದೆ. ಸುರೇಶ್ ರೈನ್ ತಾವಾಗಿಯೇ ವೈಯಕ್ತಿಕ ಕಾರಣ ನೀಡಿ, ಚೆನ್ನೈ ಸೂಪರ್ ಕಿಂಗ್ಸ್ ನಿಂದ ಹೊರಬಂದರಲ್ಲ, ಅದು ಯಾವ ವಿಭಾಗದ ಅಡಿಯಲ್ಲೂ ಇನ್ಷೂರೆನ್ಸ್ ಕವರ್ ಆಗಲ್ಲ. ಇನ್ನು ಐಪಿಎಲ್ ಮೂಲ ಇನ್ಷೂರೆನ್ಸ್ ಕೂಡ ಈಗ ಸಿಂಧುವಲ್ಲ. ಏಕೆಂದರೆ, ಇಡೀ ಪಂದ್ಯಾವಳಿ ಭಾರತದಿಂದ ಹೊರಗೆ ನಡೆಯುತ್ತಿದೆ. ಆದ್ದರಿಂದ ಬಿಸಿಸಿಐ ಹಾಗೂ ತಂಡಗಳು ಹೊಸ ಪಾಲಿಸಿ ಖರೀದಿಗೆ ಮುಂದಾಗಿವೆ.
ಕೊರೊನಾಗೆ ನಷ್ಟ ಭರಿಸುವುದಿಲ್ಲ
ಮೂಲಗಳ ಪ್ರಕಾರ, ಹೊಸದಾಗಿ ಮಾಡಿಸಲಿರುವ ಪಾಲಿಸಿ 3000 ಕೋಟಿ ರುಪಾಯಿ ದಾಟುತ್ತದೆ. ಅದರಲ್ಲಿ ವೈಯಕ್ತಿಕ ಅಪಘಾತ, ವೈದ್ಯಕೀಯ ತುರ್ತು, ಮಳೆಯ ಕಾರಣಕ್ಕೆ ಪಂದ್ಯ ವಿಳಂಬ ಹಾಗೂ ಕ್ರೀಡಾಳುಗಳಿಗೆ ಗಾಯದಂಥದ್ದು ಕವರ್ ಆಗುತ್ತದೆ. ಅನಿರೀಕ್ಷಿತ ಘಟನೆಗಳು ಮಾತ್ರ ಇನ್ಷೂರೆನ್ಸ್ ನಲ್ಲಿ ಕವರ್ ಆಗುತ್ತದೆ. ಕೊರೊನಾ ಈಗಲೂ ವಿಶ್ವದ ವಿವಿಧೆಡೆ ಇದೆ. ಈ ಕಾಯಿಲೆಯನ್ನು ಕವರೇಜ್ ಒಳಗೆ ತರಲು ಆಯೋಜಕರಿಗೆ ಸಾಧ್ಯವಿಲ್ಲ. ಕೊರೊನಾ ಆತಂಕದಿಂದಾಗಿ ಯಾವುದಾದರೂ ಆಟಗಾರ ಕೊನೆ ಕ್ಷಣದಲ್ಲಿ ಹಿಂತಿರುಗಲು ನಿರ್ಧರಿಸಿದಲ್ಲಿ ತಂಡಕ್ಕಾಗಲೀ ಅಥವಾ ಆಯೋಜಕರಿಗಾಗಲೀ ಯಾವುದೇ ಇನ್ಷೂರೆನ್ಸ್ ದೊರೆಯುವುದಿಲ್ಲ. ಇನ್ನು ಯಾವುದೇ ಆಟಗಾರನಿಗೆ ಕೊರೊನಾ ಪಾಸಿಟಿವ್ ಆಗಿ, ಪಂದ್ಯಾವಳಿಯ ಮಧ್ಯದ ಹಂತದಲ್ಲಿ ಹಿಂತಿರುಗಿದರೂ ಕವರ್ ಆಗುವುದಿಲ್ಲ.


Click it and Unblock the Notifications