ಷೇರು ಮಾರುಕಟ್ಟೆಯಲ್ಲಿ ಗುರುವಾರ ಪ್ರಮುಖವಾಗಿ ಮದ್ಯದ ಷೇರಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆರಂಭಿಕ ವಹಿವಾಟಿನಲ್ಲೇ ಮದ್ಯದ ಷೇರು ಏರಿಕೆಯನ್ನು ಕಂಡಿದೆ. ಷೇರು ಮಾರುಕಟ್ಟೆ ಇಂದು ಕುಸಿತ ಕಂಡಿದ್ದರೂ ಕೂಡಾ ಹೂಡಿಕೆದಾರರು ಹೆಚ್ಚಾಗಿ ಮದ್ಯದ ಷೇರಿನ ಮೇಲೆ ಅಧಿಕ ಹೂಡಿಕೆ ಮಾಡಿದ್ದಾರೆ.
ರಾಡಿಕೋ ಖೈತಾನ್‌ನಂತಹ ಷೇರುಗಳು ಏರಿಕೆ ಕಂಡಿದೆ. ಈ ಷೇರು ಶೇಕಡ ಒಂದರಷ್ಟು ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ಯುನೈಟೆಡ್ ಬ್ರೆವರೀಸ್ ಷೇರುಗಳು ಶೇಕಡ 0.5ರಷ್ಟು ಹೆಚ್ಚಳವಾಗಿದೆ. ಇನ್ನು ಯುನೈಟೆಡ್ ಸ್ಪಿರೀಟ್ಸ್ ಕೂಡಾ ಏರಿಕೆ ಕಂಡಿದೆ. ಶೇಕಡ ಒಂದರಷ್ಟು ಲಾಭವನ್ನು ಗಳಿಸಿದೆ.
ಗುರುವಾರ ವಹಿವಾಟಿನ ಆರಂಭದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 373 ಪಾಯಿಂಟ್‌ಗಳು ಅಥವಾ ಶೇಕಡಾ 0.68 ರಷ್ಟು ಕುಸಿದು 54,520 ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಫ್ಟಿ 110 ಪಾಯಿಂಟ್ ಅಥವಾ 0.67 ರಷ್ಟು ಕುಸಿದು 16,247 ಕ್ಕೆ ವಹಿವಾಟು ಆರಂಭಿಸಿದೆ. ಆದರೆ ಮದ್ಯದ ಷೇರುಗಳು ಮಾತ್ರ ಜಿಗಿದಿದೆ. ಹಾಗಾದರೆ ಈ ಜಿಗಿತಕ್ಕೆ ಕಾರಣವೇನು ಎಂದು ತಿಳಿಯಲು ಮುಂದೆ ಓದಿ...

ಹೂಡಿಕೆದಾರರ ಚಿತ್ತ ಮದ್ಯದ ಷೇರಿನ ಮೇಲೆ ಏಕೆ?
ಪಂಜಾಬ್‌ನಲ್ಲಿ ಆಮ್ ಆದ್ಮಿ ನೇತೃತ್ವದ ಸರ್ಕಾರವು ತನ್ನ ಮೊದಲ ಅಬಕಾರಿ ನೀತಿಯನ್ನು ಅನುಮೋದನೆ ಮಾಡಿದೆ. ಇದರಿಂದಾಗಿ ಮದ್ಯದ ದರವು ಶೇಕಡ 35-60 ರಷ್ಟು ಇಳಿಕೆ ಹೊಂದುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಮದ್ಯದ ಷೇರು ಎಲ್ಲ ಹೂಡಿಕೆದಾರರ ಗಮನವನ್ನು ಸೆಳೆದಿದೆ. ಜುಲೈ ಒಂದರಿಂದ ಭಾರತದಲ್ಲಿ ತಯಾರಿಸಲ್ಪಟ್ಟ ಮದ್ಯ, ಬಿಯರ್‌ಗಳ ಬೆಲೆಯು ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ.
ಹರಿಯಾಣದಲ್ಲಿ ಮದ್ಯದ ಬೆಲೆಗಿಂತ ಶೇಕಡ 10-15ರಷ್ಟು ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಹರಿಯಾಣ ಹಾಗೂ ಚಂಡೀಗಢದಿಂದ ಅಕ್ರಮ ಮದ್ಯ ಸಾಗಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಈ ಹೊಸ ನೀತಿಯಿಂದಾಗಿ ಹರಿಯಾಣ ಹಾಗೂ ಚಂಡೀಗಢದಿಂದ ಅಕ್ರಮ ಮದ್ಯ ಸಾಗಾಟ ಕಡಿಮೆಯಾಗಿ, ಈ ಮೂಲಕ ರಾಜ್ಯದಲ್ಲಿ ಅಬಕಾರಿ ಸುಂಕ ಸಂಗ್ರಹ ಶೇಕಡ 40ರಷ್ಟು ಅಧಿಕವಾಗುವ ಭರವಸೆಯನ್ನು ಸರ್ಕಾರ ಹೊಂದಿದೆ. ಕಳೆದ ಹಣಕಾಸು ವರ್ಷ 2021-22ರಲ್ಲಿ ರೂಪಾಯಿ 6,158 ಕೋಟಿ ಆದಾಯ ಸಂಗ್ರಹವಾಗಿದೆ. ಈ ಹಣಕಾಸು ವರ್ಷದಲ್ಲಿ ಈ ಆದಾಯ ಸಂಗ್ರಹವು ರೂಪಾಯಿ 9,647.85 ಕೋಟಿಗೆ ಏರಿಕೆ ಮಾಡುವ ಭರವಸೆಯನ್ನು ಪಂಜಾಬ್ ಸರ್ಕಾರ ಹೊಂದಿದೆ.


Click it and Unblock the Notifications