ಆರ್ಥಿಕ ಸಂಕಷ್ಟದಿಂದ ಆರ್‌ಬಿಐ ನಿರ್ಬಂಧಕ್ಕೆ ಒಳಪಟ್ಟಿದ್ದ ಯೆಸ್ ಬ್ಯಾಂಕ್ ಬುಧವಾರ(ಮಾರ್ಚ್ 18)ರಂದು ನಿರ್ಬಂಧ ಮುಕ್ತಗೊಳ್ಳಲಿದೆ. ಈಗಾಗಲೇ ಷೇರುಪೇಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಸಿರುವ ಯೆಸ್ ಬ್ಯಾಂಕ್ ಷೇರು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಆರ್‌ಬಿಐ ಯೆಸ್ ಬ್ಯಾಂಕ್ ಸೂಪರ್‌ಸೀಡ್ ಆದೇಶ ಹೊರಡಿಸಿದ್ದೇ ತಡ ಮಾರ್ಚ್ 6ರಂದು ಯೆಸ್ ಬ್ಯಾಂಕ್ ಷೇರಿನ ಮೌಲ್ಯವು ಆರು ರುಪಾಯಿವರೆಗೂ ತಲುಪಿತ್ತು. ಆದರೆ ಕೇವಲ 11 ದಿನಗಳಲ್ಲಿ 1000 ಪರ್ಸೆಂಟ್ ಏರಿಕೆ ಕಂಡಿರುವ ಯೆಸ್ ಬ್ಯಾಂಕ್ ಷೇರು ಮಂಗಳವಾರ (ಮಾರ್ಚ್ 17) ಗರಿಷ್ಟ ಮಟ್ಟ 69.90 ರುಪಾಯಿಗೆ ತಲುಪಿತ್ತು. ನಂತರ ದಿನದ ವಹಿವಾಟಿನ ಕೊನೆಗೆ 58.65 ರುಪಾಯಿಗೆ ತಲುಪಿದೆ.
ಹೀಗೆ ಕೇವಲ ಆರು ರುಪಾಯಿಗೆ ನೆಲಕಚ್ಚಿದ ಯೆಸ್ ಬ್ಯಾಂಕ್ ಷೇರು ಕೇವಲ 11 ದಿನದಲ್ಲಿ 60 ರುಪಾಯಿ ಗಡಿದಾಟಲು ಕಾರಣಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ ಓದಿ
1. ದೇಶದ ಪ್ರಮುಖ ಬ್ಯಾಂಕುಗಳು ಹೂಡಿಕೆಗೆ ಮುಂದಾಗಿದ್ದು
ಪ್ರಮುಖ ಭಾರತೀಯ ಬ್ಯಾಂಕುಗಳು ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರಿದ್ದು ಯೆಸ್ ಬ್ಯಾಂಕ್ ಷೇರು ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬಿಕ್ಕಟ್ಟಿನಲ್ಲಿ ಬಳಲುತ್ತಿರುವ ಯೆಸ್ ಬ್ಯಾಂಕ್‌ನಲ್ಲಿ ಸ್ಟೇಟ್ ಬ್ಯಾಂ್ ಆಫ್ ಇಂಡಿಯಾ(ಎಸ್‌ಬಿಐ) , ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಫೆಡರಲ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳು ಈಕ್ವಿಟಿ ಮಾರ್ಗದ ಮೂಲಕ ಪುನಶ್ಚೇತನ ಘಟಕದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿವೆ.
2. ಲಾಕ್ ಇನ್ ಪಿರಿಯಡ್
ರೀಟೇಲ್ ಷೇರುದಾರರಿಗೆ ಷೇರು ಮಾರಾಟದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ನೂರಕ್ಕೂ ಹೆಚ್ಚು ಷೇರು ಇರುವಂಥವರು ಶೇಕಡಾ ಇಪ್ಪತ್ತೈದಕ್ಕಿಂತ ಹೆಚ್ಚು ಷೇರುಗಳನ್ನು ಮೂರು ವರ್ಷಗಳ ಕಾಲ ಮಾರುವಂತಿಲ್ಲ.
ಹಣ ಹೂಡಿಕೆ ಬಳಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಷೇರುಗಳ ವಹಿವಾಟಿನ ಪ್ರಮಾಣ ತಗ್ಗಿಸಲು ಈ ಕ್ರಮಕ್ಕೆ ಮುಂದಾಗಿದೆ. ಈ ನಿರ್ಬಂಧವು 13 ಮಾರ್ಚ್ 2020 ರ ಸಂಜೆಯವರೆಗೆ ಮಾಡಿದ ಹೂಡಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಅದರ ನಂತರದ ಷೇರುಗಳಿಗೆ ಅನ್ವಯಿಸುವುದಿಲ್ಲ.
3. ಯೆಸ್ ಬ್ಯಾಂಕ್ ಆಡಳಿತ ಮಂಡಳಿಯಲ್ಲಿನ ಬದಲಾವಣೆ
ಆರ್‌ಬಿಐ ಈ ಹಿಂದಿನ ಆಡಳಿತ ಮಂಡಳಿಯನ್ನು ವಜಾ ಮಾಡಿ ಎಸ್‌ಬಿಐನ ಮಾಜಿ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಯೆಸ್‌ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಆಗಿ ಅಧಿಕಾರಕ್ಕೆ ತಂದಿತು. ಪ್ರಶಾಂತ್ ಕುಮಾರ್ ಎಸ್‌ಬಿಐನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು.
ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ರೆಸಲ್ಯೂಶನ್ ಸ್ಕೀಮ್ ಬಿಡುಗಡೆ ಬಳಿಕ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸುನಿಲ್ ಮೆಹ್ತಾ ಅವರು ಘಟಕದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ. ಮಂಡಳಿಯ ಇತರ ಸದಸ್ಯರು ಮಹೇಶ್ ಕೃಷ್ಣಮೂರ್ತಿ ಮತ್ತು ಅತುಲ್ ಭೇದಾ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇರಿಸಿಕೊಳ್ಳಲಿದ್ದಾರೆ. ನಿಯಂತ್ರಕ ಅಧಿಕಾರಿಗಳು ಕಂಡುಕೊಂಡ ಹಲವಾರು ವ್ಯತ್ಯಾಸಗಳ ನಂತರ ನಿರ್ವಹಣೆಯಲ್ಲಿನ ಬದಲಾವಣೆಯು ಹೂಡಿಕೆದಾರರಿಗೆ ಸಮಾಧಾನಕರವಾಗಿರಬಹುದು.
4. ಯೆಸ್ ಬ್ಯಾಂಕ್ ಮೇಲಿನ ನಿಷೇಧವನ್ನು ಪೂರ್ವಭಾವಿಯಾಗಿ ಕೊನೆಗೊಳಿಸಿದ್ದು
ಮಾರ್ಚ್ 5 ರಂದು ಆರ್‌ಬಿಐ ವಿಧಿಸಿದ ನಿಷೇಧದಂತೆ ಪ್ರತಿ ಠೇವಣಿದಾರರಿಗೆ 50,000 ರುಪಾಯಿ ಮಾತ್ರ ವಿತ್‌ಡ್ರಾ ಮಾಡಿಕೊಳ್ಳಬಹುದಿತ್ತು. ಏಪ್ರಿಲ್ 3ರವರೆಗೆ ಈ ನಿಯಮ ಅನ್ವಯವಿತ್ತು. ಆದರೆ ಅವಧಿಗೂ ಮುನ್ನವೇ ನಿಷೇಧವನ್ನು ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಎಸ್‌ಬಿಐ ಮತ್ತು ನಿರ್ವಾಹಕರು ನೀಡಿದ ಭರವಸೆಯಂತೆ, ಮಾರ್ಚ್ 18 ರಂದು ಸಂಜೆ 6 ಗಂಟೆಗೆ ಯೆಸ್ ಬ್ಯಾಂಕ್ ತನ್ನ ಸೇವೆಗಳನ್ನು ಪೂರ್ಣವಾಗಿ ಪುನರಾರಂಭಿಸುವುದಾಗಿ ತಿಳಿಸಿದೆ. ನಿರೀಕ್ಷೆಗಿಂತ ವೇಗವಾಗಿ ಚೇತರಿಕೆ ಮತ್ತು ಠೇವಣಿದಾರರ ಹಣದ ಭರವಸೆ ಬ್ಯಾಂಕಿಗೆ ವರವಾಗಿದೆ.
5. ಆರ್‌ಬಿಐ ನೀಡಿದ ಭರವಸೆ
ಆರ್‌ಬಿಐ ಯೆಸ್ ಬ್ಯಾಂಕಿನ ಪುನರ್ರಚನೆ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದೆ. ಸೋಮವಾರ (ಮಾರ್ಚ್ 16)ರಂದು ಪತ್ರಿಕಾಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಅಗತ್ಯವಿದ್ದಲ್ಲಿ, ಕೇಂದ್ರ ಬ್ಯಾಂಕ್ ದುರ್ಬಲಗೊಂಡ ಸಾಲಗಾರನಿಗೆ ಹೆಚ್ಚುವರಿ ದ್ರವ್ಯತೆ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು. ಅಲ್ಲದೆ ನಿಮ್ಮ ಹಣ ಸೇಫ್ ಆಗಿದೆ ಯಾರು ಭಯ ಪಡಬೇಕಿಲ್ಲ ಎಂದು ಭರವಸೆ ನೀಡಿತು.
6. ಮೂಡೀಸ್ ರೇಟಿಂಗ್ ನವೀಕರಿಸಿದ್ದು
ಸೋಮವಾರ ಸಂಜೆ ತಡವಾಗಿ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಯೆಸ್ ಬ್ಯಾಂಕಿನ ಮೇಲಿನ ಸಾಲದ ದೃಷ್ಟಿಕೋನವನ್ನು ನಕಾರಾತ್ಮಕದಿಂದ ಧನಾತ್ಮಕವಾಗಿ ಬದಲಾಯಿಸಿತು. ಎಂಟಿಎನ್ ಪ್ರೋಗ್ರಾಂ ರೇಟಿಂಗ್‌ಗಳನ್ನು ಕ್ರಮವಾಗಿ Caa3 ನಿಂದ Caa1 ಗೆ ಮತ್ತು (P) Caa3 ನಿಂದ (P) Caa1 ಗೆ ನವೀಕರಿಸಿದೆ.
ಮೂಡಿಸ್ ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆ


Click it and Unblock the Notifications