ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಬಗ್ಗೆ ಮೇ 19ರಂದು ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ತಿಳಿಸಿದೆ. ಅದಾದ ಬಳಿಕ ಮೇ 23ರಿಂದ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ನಡುವೆ ಈ ನೋಟು ಚಲಾವಣೆಯಿಂದ ಹಿಂದಕ್ಕೆ ಪಡೆದಿರುವುದು ಆರ್ಥಿಕತೆಯ ಮೇಲೆ ಕೆಟ್ಟ ಪ್ರಭಾವ ಬೀರಿದೆಯೇ ಎಂಬ ಚರ್ಚೆ ಉಂಟಾಗುತ್ತಿದೆ.
ಈ ಬಗ್ಗೆ ಸ್ಪಷ್ಟತೆಯನ್ನು ನೀಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್, "2000 ರೂಪಾಯಿ ನೋಟು ಚಲಾವಣೆಯಿಂದ ಹಿಂಪಡೆಯುವ ಘೋಷಣೆಯನ್ನು ಕಳೆದ ತಿಂಗಳು ಆರ್‌ಬಿಐ ಮಾಡಿದೆ. ಆದರೆ ಇದು ದೇಶದ ಆರ್ಥಿಕತೆಯ ಮೇಲೆ ಯಾವುದೇ ನೆಗೆಟಿವ್ ಪ್ರಭಾವವನ್ನು ಉಂಟು ಮಾಡಿಲ್ಲ," ಎಂದು ತಿಳಿಸಿದ್ದಾರೆ.

ಪಿಟಿಐ ನಡೆಸಿದ್ದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, "ನಾವು ಒಂದು ವಿಷಯವನ್ನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ನಾವು ಪ್ರಸ್ತುತ 2000 ರೂಪಾಯಿ ನೋಟನ್ನು ಚಲಾವಣೆಯಿಂದ ವಾಪಾಸ್ ಪಡೆಯುತ್ತಿರುವುದು ನಮ್ಮ ದೇಶದ ಆರ್ಥಿಕತೆಯ ಮೇಲೆ ಯಾವುದೇ ನೆಗೆಟಿವ್ ಪ್ರಭಾವವನ್ನು ಉಂಟು ಮಾಡುವುದಿಲ್ಲ," ಎಂದು ಹೇಳಿದ್ದಾರೆ.
ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆರ್‌ಬಿಐ ಗವರ್ನರ್ ಈಗಾಗಲೇ ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟು ಬಹುತೇಕವಾಗಿ ವಾಪಾಸ್ ನೀಡಲಾಗಿದೆ ಎಂದು ಹೇಳಿದ್ದಾರೆ. "ಸುಮಾರು 3.62 ಲಕ್ಷ ಕೋಟಿ ರೂಪಾಯಿಯ 2000 ರೂಪಾಯಿ ನೋಟುಗಳ ಪೈಕಿ (ಮಾರ್ಚ್ 31, 2023ರ ಪ್ರಕಾರ) 2.41 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಬ್ಯಾಂಕ್‌ಗೆ ಜಮೆ ಅಥವಾ ಬದಲಾವಣೆ ಮಾಡಲಾಗಿದೆ," ಎಂದು ಈ ಹಿಂದೆ ಆರ್‌ಬಿಐ ಗವರ್ನರ್ ಮಾಹಿತಿ ನೀಡಿದ್ದಾರೆ.
ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ ಈ ಹಿಂದೆ ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ವಾಪಾಸ್ ಪಡೆದಿದೆ. 2016ರ ನವೆಂಬರ್‌ನಲ್ಲಿ 500 ರೂಪಾಯಿ ಹಾಗೂ 1000 ರೂಪಾಯಿ ನೋಟನ್ನು ಅಪನಗದೀಕರಣ ಮಾಡಿದ ಒಂದು ವಾರದಲ್ಲಿಯೆ 2000 ರೂಪಾಯಿ ನೋಟನ್ನು ಜಾರಿಗೆ ತರಲಾಗಿದೆ. 2017ರಲ್ಲಿ ಶೇಕಡ 89ರಷ್ಟು 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ಬಿಡಲಾಗಿದೆ.
ಅದಾದ ಬಳಿಕ ದೇಶದ ಅತೀ ಅಧಿಕ ಮೌಲ್ಯವನ್ನು ಹೊಂದಿರುವ ನೋಟಾದ 2000 ರೂಪಾಯಿ ನೋಟಿನ ಮುದ್ರಣವನ್ನು ಕಡಿತಗೊಳಿಸಲಾಗಿದೆ. ಮಾರ್ಚ್ 31, 2018ಕ್ಕೆ ಒಟ್ಟು ಚಲಾವಣೆಯಲ್ಲಿರುವ 2000 ರೂಪಾಯಿಯ ನೋಟಿನ ಪ್ರಮಾಣವು 6.73 ಲಕ್ಷ ಕೋಟಿ ರೂಪಾಯಿಯಿಂದ 3.62 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಮಾರ್ಚ್ 31, 2023ರ ಪ್ರಕಾರ 2000 ರೂಪಾಯಿಯ ಬರೀ ಶೇಕಡ 10.8ರಷ್ಟು ನೋಟುಗಳು ಮಾತ್ರ ಚಲಾವಣೆಯಲ್ಲಿದೆ. 2018-19ರಲ್ಲೇ ಕೇಂದ್ರ ಬ್ಯಾಂಕ್ 2000 ರೂಪಾಯಿ ನೋಟು ಮುದ್ರಣವನ್ನು ನಿಲ್ಲಿಸಿದೆ.
ಒಂದು ವಾರದಲ್ಲೇ ಅಧಿಕ ಡೆಪಾಸಿಟ್ ಎಸ್‌ಬಿಐನಲ್ಲಿ
ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ಒಂದು ವಾರದಲ್ಲೇ 2000 ರೂಪಾಯಿ ಮುಖಬೆಲೆಯ 14,000 ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಲಾಗಿದೆ. ಇನ್ನು 3,000 ಕೋಟಿ ರೂಪಾಯಿಯಷ್ಟು 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ, "ಸುಮಾರು 14,000 ಕೋಟಿ ರೂಪಾಯಿಯ ಮೌಲ್ಯದ 2,000 ಕರೆನ್ಸಿ ನೋಟುಗಳು ಖಾತೆಗಳಿಗೆ ಗ್ರಾಹಕರು ಡೆಪಾಸಿಟ್ ಮಾಡಿದ್ದಾರೆ. 3,000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿಯ ನೋಟುಗಳನ್ನು ಬದಲಾವಣೆ ಮಾಡಿದೆ. ಮಾರುಕಟ್ಟೆಯಲ್ಲಿರುವ ಶೇಕಡ 20ರಷ್ಟು ನೋಟು ನಮ್ಮಲ್ಲಿದೆ," ಎಂದು ತಿಳಿಸಿದ್ದಾರೆ.


Click it and Unblock the Notifications