ಕೈಗೆಟುಕುವ ಬೆಲೆಗೆ ಸ್ಮಾರ್ಟ್‌ಫೋನ್ ನಿರ್ಮಿಸುವ ಯೋಜನೆಗೆ ರಿಲಯನ್ಸ್ ಜಿಯೋ ಜೊತೆಗೆ ನಿಕಟವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ, ಯೋಜನೆಯ ಕುರಿತಾಗಿ ಕೆಲಸ ನಡೆಯುತ್ತಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಗುರುವಾರ ತಿಳಿಸಿದ್ದಾರೆ.
'' ಕಡಿಮೆ ಬೆಲೆಯ ಫೋನ್ ತಯಾರಿಕೆಯತ್ತ ನಾವು ಗಮನ ಹರಿಸಿದ್ದೇವೆ. ಅದಕ್ಕಾಗಿ ಜಿಯೋ ಜೊತೆಗೆ ಕೆಲಸ ಮಾಡುತ್ತಿದ್ದೇವೆ'' ಎಂದು ಸುಂದರ್ ಪಿಚೈ ಅವರು ವರ್ಚುವಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಆದರೆ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಬಿಡುಗಡೆ ದಿನಾಂಕದ ಕುರಿತು ಯಾವುದೇ ಮಾಹಿತಿ ತಿಳಿಸಿಲ್ಲ.

2020ರಲ್ಲಿ ಗೂಗಲ್ ಕಂಪನಿಯು ಜಿಯೋ ಪ್ಲಾರ್ಟ್‌ಫಾರ್ಮ್‌ನಲ್ಲಿ ಶೇಕಡಾ 7.7ರಷ್ಟು ಪಾಲನ್ನು ಅಥವಾ 33,737 ಕೋಟಿ ರೂಪಾಯಿಗಳ ಮೌಲ್ಯದ ಷೇರುಗಳನ್ನು ಖರೀದಿಸಿತ್ತು. ಇದೇ ವೇಳೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ತಯಾರಿಕೆಯ ಗುರಿ ಹೊಂದಿತ್ತು. ಈ ವಹಿವಾಟಿನೊಂದಿಗೆ, ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ ಫೇಸ್‌ಬುಕ್‌ನಂತಹ ಜಾಗತಿಕ ಹೂಡಿಕೆದಾರರ ಪಟ್ಟಿಗೆ ಗೂಗಲ್ ಸೇರಿಕೊಂಡಿತು.
ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ವೇಗ ನೀಡಲು ಮುಂದಿನ ಐದರಿಂದ ಏಳು ವರ್ಷಗಳಲ್ಲಿ 75,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಯೋಜನೆಯನ್ನು ಸುಂದರ್ ಪಿಚೈ ಕಳೆದ ವರ್ಷ ಜುಲೈನಲ್ಲಿ ಪ್ರಕಟಿಸಿದ್ದರು. ಮುಂದಿನ 5-7 ವರ್ಷಗಳಲ್ಲಿ ಈ ಬೃಹತ್ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸಲು ಈ ಹೂಡಿಕೆ ಮಾಡುತ್ತಿರುವುದಾಗಿ ಸುಂದರ್ ಪಿಚೈ ಘೋಷಿಸಿದ್ದರು.
ಈ ಯೋಜನೆಗಳಲ್ಲಿ ಕೋವಿಡ್-19ರ ಪ್ರಭಾವದ ಕುರಿತು ಮಾತನಾಡಿದ ಪಿಚೈ, ಸಾಂಕ್ರಾಮಿಕವು ಜನರ ಜೀವನದಲ್ಲಿ ತಂತ್ರಜ್ಞಾನವು ವಹಿಸುವ ಮಹತ್ವವನ್ನು ಎತ್ತಿ ತೋರಿಸಿದೆ. ಸ್ವಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟಿಂಗ್ ಸಾಧನಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲಾಗುತ್ತಿದೆ ಎಂದಿದ್ದಾರೆ.


Click it and Unblock the Notifications