ಇಂದು ನವೆಂಬರ್ 14, ವಿಶ್ವ ಡಯಾಬಿಟಿಸ್ ದಿನ. ಮಧುಮೇಹ ರೋಗ ಇದೀಗ ಜಾಗತಿಕ ಆರೋಗ್ಯ ಸಮಸ್ಯೆಯಾಗಿ ಬೆಳೆದಿದೆ. 50 ವರ್ಷ ದಾಟಿದವರಲ್ಲಿ ಡಯಾಬಿಟಿಸ್ ವಕ್ಕರಿಸುವುದು ತೀರಾ ಸಾಮಾನ್ಯವಾಗಿ ಹೋಗಿದೆ. ಈಗ 30 ವರ್ಷದೊಳಗಿನ ಯುವಸಮುದಾಯದವರಲ್ಲೂ ಶುಗರ್, ಬಿಪಿ ಕಾಣಿಸಿಕೊಳ್ಳುತ್ತಿದೆ.
ವೈದ್ಯರ ಪ್ರಕಾರ, ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಪೂರ್ಣ ಗುಣಮುಖ ಅಸಾಧ್ಯವಾಗಿದೆ. ಕಾಯಿಲೆ ನಿಯಂತ್ರಣ ಬಿಟ್ಟರೆ ಬೇರೆ ದಾರಿ ಇರುವುದಿಲ್ಲ. ಡಯಾಬಿಟಿಸ್ ಬಹುತೇಕ ಜೀವನಶೈಲಿ ಸಂಬಂಧಿಸಿದ ರೋಗವಾಗಿದ್ದು, ದೈಹಿಕ ಕ್ಷಮತೆ ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವಾದ್ಯಂತ 42.2 ಕೋಟಿ ಜನರು ಡಯಾಬಿಟಿಸ್‌ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯ ನೇರ ಮತ್ತು ಪರೋಕ್ಷ ಪರಿಣಾಮವಾಗಿ ಪ್ರತೀ ವರ್ಷ 15 ಲಕ್ಷ ಜನರು ಸಾಯುತ್ತಿದ್ದಾರೆ. ಡಯಾಬಿಟಿಸ್ ತೀರಾ ಸಾಮಾನ್ಯವಾಗಿ ಬರುವ ರೋಗ ಮಾತ್ರವಲ್ಲ, ಬಹಳ ಡೇಂಜರಸ್ ಕೂಡ ಹೌದು.
ಈ ವರ್ಷದ ಥೀಮ್
ಈ ವರ್ಷದ ವಿಶ್ವ ಮಧುಮೇಹ ದಿನಕ್ಕೆ "ಡಯಾಬಿಟಿಸ್ ಶಿಕ್ಷಣ ಲಭ್ಯತೆ" ಎಂಬುದನ್ನು ಥೀಮ್ ಆಗಿ ಇರಿಸಲಾಗಿದೆ. ಸಕ್ಕರೆ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಹಿಂದೆಂದಿಗಿಂತ ಹೆಚ್ಚಾಗಿದೆ. ಭಾರತದಲ್ಲಿ 20ರಿಂದ 70 ವರ್ಷ ವಯೋಮಾನದ ಜನರಲ್ಲಿ ಶೇ. 8.7ರಷ್ಟು ಮಂದಿ ಸಕ್ಕರೆ ಕಾಯಿಲೆಗೆ ಒಳಗಾಗಿದ್ದಾರೆ.
ಸರ್ಕಾರ ಮತ್ತು ವೈದ್ಯರು ಡಯಾಬಿಟಿಸ್ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಹೌದು. ಆದರೆ, ಇದು ಲೈಫ್‌ಸ್ಟೈಲ್ ಸಂಬಂಧಿತ ರೋಗವೇ ಆಗಿರುವುದರಿಂದ ಜನರೂ ಕೂಡ ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಇಂದಿನ ವರ್ಕ್ ಕಲ್ಚರ್ ಜನರ ದೈಹಿಕ ಆರೋಗ್ಯ ಪಾಲನೆಗೆ ಪೂರಕವಾಗಿಲ್ಲ ಎಂಬುದು ವಾಸ್ತವ ಸಂಗತಿ. ಇಲ್ಲಿ ಸರ್ಕಾರ, ವೈದ್ಯರ ಜೊತೆಗೆ ಕಾರ್ಪೊರೇಟ್ ವಲಯ ಕೂಡ ತಮ್ಮ ಉದ್ಯೋಗಿಗಳ ದೈಹಿಕ ಆರೋಗ್ಯದತ್ತ ಗಮನ ಕೊಡುವುದು ಮುಖ್ಯವಾಗುತ್ತದೆ.
ಹೆಲ್ತ್ ಇನ್ಷೂರೆನ್ಸ್ ಸಿಗುತ್ತಾ?
ಡಯಾಬಿಟಿಸ್ ಇದ್ದರೆ ಬೇರೆ ಹಲವು ರೋಗಗಳ ಪ್ರವೇಶಕ್ಕೆ ವೇದಿಕೆ ಸಿಕ್ಕಂತಾಗುತ್ತದೆ. ಹೀಗಾಗಿ, ಡಯಾಬಿಟಿಸ್ ರೋಗಿಗಳಿಗೆ ಇನ್ಷೂರೆನ್ಸ್ ಕವರ್ ಮಾಡಲು ವಿಮಾ ಕಂಪನಿಗಳು ಮೀನ ಮೇಷ ಎಣಿಸುತ್ತವೆ.
ಮಧುಮೇಹ ರೋಗಿಗಳಿಗೆ ಇನ್ಷೂರೆನ್ಸ್ ಕೊಡೋದಿಲ್ಲ ಎಂದು ಯಾವ ಕಂಪನಿಗಳೂ ಹೇಳೋದಿಲ್ಲ. ಆದರೆ, ಪ್ರೀಮಿಯಮ್ ಹೆಚ್ಚು ಇರುತ್ತದೆ. ಮಾಮೂಲಿಯ ಹೆಲ್ತ್ ಇನ್ಷೂರೆನ್ಸ್‌ನ ಪ್ರೀಮಿಯಂಗಿಂತ ಶೇ. 15-30ರಷ್ಟು ಹೆಚ್ಚು ಹಣವನ್ನು ಡಯಾಬಿಟಿಸ್ ರೋಗಿಗಳಿಂದ ಪಡೆಯಲಾಗುತ್ತದೆ.
ಕೆಲ ವಿಮಾ ಕಂಪನಿಗಳು ಡಯಾಬಿಟಿಸ್ ರೋಗಿಗಳಿಗೆ ಪಾಲಿಸಿ ನೀಡುವಾಗ ವೇಯ್ಟಿಂಗ್ ಪೀರಿಯಡ್ ಇಟ್ಟಿರುತ್ತವೆ. ಒಂದರಿಂದ ಮೂರು ವರ್ಷದವರೆಗೆ ಡಯಾಬಿಟಿಸ್ ಅನ್ನು ಪಾಲಿಸಿಯಲ್ಲಿ ಕವರ್ ಮಾಡಲಾಗುವುದಿಲ್ಲ. ಅದಾದ ಬಳಿಕ ಕವರೇಜ್ ಸಿಗುತ್ತದೆ. ಇನ್ನೂ ಕೆಲ ವಿಮಾ ಕಂಪನಿಗಳು ಹೆಚ್ಚು ಪ್ರೀಮಿಯಂ ಪಡೆದು ಮೊದಲ ವರ್ಷದಿಂದಲೇ ಡಯಾಬಿಟಿಸ್ ರೋಗವನ್ನು ಇನ್ಷೂರೆನ್ಸ್ ವ್ಯಾಪ್ತಿಗೆ ತರಬಹುದು.
ಡಯಾಬಿಟಿಸ್ ಕವರೇಜ್ ಹೇಗೆ?
ಇಲ್ಲಿ ನೀವು ಸಕ್ಕರೆ ಕಾಯಿಲೆ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಅದನ್ನು ವಿಮಾ ಕಂಫನಿಗಳಿಂದ ಕ್ಲೈಮ್ ಮಾಡಲು ಆಗುವುದಿಲ್ಲ. ಡಯಾಬಿಟಿಸ್ ರೋಗದಿಂದ ನೀವು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೆ, ಆಗ ಪೂರ್ವಭಾವಿ ವೆಚ್ಚ, ಆಂಬುಲೆನ್ಸ್ ಇತ್ಯಾದಿಯನ್ನು ಕ್ಲೇಮ್ ಮಾಡಬಹುದು. ಡಯಾಲಿಸಿಸ್ ಅನ್ನೂ ಕ್ಲೈಮ್ ಮಾಡಲು ಸಾಧ್ಯ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಎಲ್ಲಾ ಡಯಾಬಿಟಿಸ್ ರೋಗಿಗಳಿಗೂ ಇನ್ಷೂರೆನ್ಸ್ ಸಿಗುತ್ತೆ ಎಂಬುದು ಖಾತ್ರಿ ಇಲ್ಲ. ಸಾಮಾನ್ಯವಾಗಿ ಇನ್ಷೂರೆನ್ಸ್ ಕಂಪನಿಗಳು 6.5ರಿಂದ 7 ಎಚ್‌ಬಿಎ1ಸಿ ರೀಡಿಂಗ್ ಇರುವ ಡಯಾಬಿಟಿಸ್ ರೋಗಿಗಳಿಗೆ ವಿಮೆ ಕವರೇಜ್ ಕೊಡುತ್ತವೆ.
ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ 3 ಸದಸ್ಯರ ಕುಟುಂಬಕ್ಕೆ ಹೆಲ್ತ್ ಇನ್ಷೂರೆನ್ಸ್ ಮಾಡಿಸಬೇಕೆಂದರೆ ವಾರ್ಷಿಕ ಪ್ರೀಮಿಯಂ 10-15 ಸಾವಿರ ರೂ ಆಗುತ್ತದೆ. ಒಟ್ಟು ವರ್ಷಕ್ಕೆ 10 ಲಕ್ಷ ರೂ ಕವರೇಜ್ ಸಿಗುತ್ತದೆ. ಡಯಾಬಿಟಿಸ್ ರೋಗಿಯಾದರೆ ಪ್ರೀಮಿಯಂ 12-20 ಸಾವಿರ ರೂ ಆಗಬಹುದು.


Click it and Unblock the Notifications