ವಿಶ್ವದ ಅತಿ ದೊಡ್ಡ ಕ್ರಿಪ್ಟೋ ಕರೆನ್ಸಿ ಭಾನುವಾರ (ಜನವರಿ 3, 2021) $ 34,000 ತಲುಪಿತು. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ 25,00,326. ಹೌದು 25 ಲಕ್ಷ ರುಪಾಯಿ. ಸಿಂಗಾಪೂರದಲ್ಲಿ ಆ ನಂತರ ಮಧ್ಯಾಹ್ನ 3.05ರ ಹೊತ್ತಿಗೆ $ 33,970 ತಲುಪಿತು. ಡಿಸೆಂಬರ್ ತಿಂಗಳೊಂದರಲ್ಲೇ ಹತ್ತಿರಹತ್ತಿರ 50%ನಷ್ಟು ಮೇಲೇರಿತ್ತು ಬಿಟ್ ಕಾಯಿನ್. ಅಂದ ಹಾಗೆ, ಡಿಸೆಂಬರ್ ನಲ್ಲೇ $ 20,000 ಮೈಲುಗಲ್ಲನ್ನು ಮೊದಲ ಬಾರಿಗೆ ದಾಟಿತ್ತು.
ಕಳೆದ ವರ್ಷ ಮಾರ್ಚ್ ನಲ್ಲಿ ಕೊರೊನಾ ಬಿಕ್ಕಟ್ಟು ಉಲ್ಬಣ ಸ್ಥಿತಿಯಲ್ಲಿ ಕಾಣಿಸಿಕೊಂಡಾಗ ಬಿಟ್ ಕಾಯಿನ್ ಮೌಲ್ಯ ಶೇಕಡಾ 25ರಷ್ಟು ಕುಸಿತ ಕಂಡಿತ್ತು. ಲಂಡನ್ ನಲ್ಲಿ ಇರುವ ನೆಕ್ಸೋ ಸ್ಥಾಪಕ ಹಾಗೂ ಸಹ ಸಂಸ್ಥಾಪಕ ಆಂಟೋನಿ ಟ್ರೆಂಚೆವ್ ಪ್ರಕಾರ, 2021ರ ಮೊದಲ ತ್ರೈಮಾಸಿಕದಲ್ಲಿ ಬಿಟ್ ಕಾಯಿನ್ $ 50,000ದತ್ತ ಸಾಗುತ್ತದೆ.
ಇನ್ನೇನು ಕ್ರಿಸ್ ಮಸ್ ರಜಾ ದಿನಗಳು ಮುಗಿದು, ಈ ವಾರ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಹಿಂತಿರುಗಲಿದ್ದಾರೆ. ಇದರಿಂದ ಬಿಟ್ ಕಾಯಿನ್ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗಬಹುದು ಎಂಬ ನಿರೀಕ್ಷೆ ಇದೆ.

ಜಾಗತಿಕ ಮಟ್ಟದಲ್ಲಿ ಬಿಟ್ ಕಾಯಿನ್ ಮೇಲಿನ ಪೋರ್ಟ್ ಫೋಲಿಯೋ ಹೂಡಿಕೆ ಹೆಚ್ಚಾಗುತ್ತಿದೆ. ಈಗ ಸಟ್ಟಾ ವ್ಯವಹಾರವನ್ನೂ ಮೀರಿ ಅದು ಬೆಳೆಯುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಮತ್ತೊಬ್ಬ ವಿಶ್ಲೇಷಕರು ಹೇಳುವಂತೆ, ಬಿಟ್ ಕಾಯಿನ್ 4,00,000 ಅಮೆರಿಕನ್ ಡಾಲರ್ ತಲುಪಬಹುದು.
ಆದರೂ ಬಹಳ ಎಚ್ಚರಿಕೆಯಿಂದ ಇರಬೇಕು ಎಂಬ ಮಾತನ್ನು ಸಹ ಸೇರಿಸುತ್ತಾರೆ. ಏಕೆಂದರೆ, ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ವ್ಯವಹಾರ ಪ್ರಮಾಣ ಅತ್ಯಲ್ಪ. ಇದರಲ್ಲಿ ಸ್ವಲ್ಪ ಮಟ್ಟಿಗಾದರೂ ಇಳಿಕೆ ಕಾಣುವುದು ಬಾಕಿ ಇದೆ. ನವೆಂಬರ್ 26ರಂದು ಒಂದೇ ದಿನ 14% ಇಳಿಕೆ ಕಂಡಿತ್ತು. 2017ರಲ್ಲಿ ಭಾರೀ ಪ್ರಮಾಣದಲ್ಲಿ, ಅಂದರೆ 83% ಏರಿಕೆ ಕಂಡಿತ್ತು.


Click it and Unblock the Notifications