ನಾಯಿಯೂ ಸೇರಿದ ಹಾಗೆ ಕೆಲವು ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶು ಆಸ್ಪತ್ರೆಗಳ ಬಗ್ಗೆ ಕೇಳಿರಬಹುದು. ಆದರೆ ದುಬೈನಲ್ಲಿ ಆಸ್ಪತ್ರೆಯೊಂದಿದ್ದು, ಅದು ಒಂಟೆಗಳಿಗಾಗಿ ಅಂತಲೇ ಇದೆ. ಇಡೀ ಜಗತ್ತಿನಲ್ಲಿ ಒಂಟೆಗಳ ಆರೋಗ್ಯದ ದೇಖ ರೇಖಿಗೆ ಇರುವ ಏಕೈಕ ಆಸ್ಪತ್ರೆ ದುಬೈ ಕ್ಯಾಮೆಲ್ ಹಾಸ್ಪಿಟಲ್.
40 ಮಿಲಿಯನ್ ದಿರ್ಹಾಮ್ ಖರ್ಚು ಮಾಡಿ ಈ ಆಸ್ಪತ್ರೆ ನಿರ್ಮಿಸಲಾಗಿದೆ ( ಅಮೆರಿಕನ್ ಡಾಲರ್ ಲೆಕ್ಕದಲ್ಲಿ $ 10.9 ಮಿಲಿಯನ್ ಹಾಗೂ ಭಾರತೀಯ ರುಪಾಯಿ ಲೆಕ್ಕದಲ್ಲಿ 77 ಕೋಟಿ). ಇದನ್ನು ಡಿಸೈನ್ ಮಾಡಿರುವವರು ಸಫರಿನಿ. 2017ರಲ್ಲಿ ಈ ಆಸ್ಪತ್ರೆ ಆರಂಭವಾಗಿದ್ದು, ಇದೀಗ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ.
ಈ ಆಸ್ಪತ್ರೆಯಲ್ಲಿ ಪಶು ವೈದ್ಯರು, ತಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿಯೂ ಸೇರಿದಂತೆ 65 ಮಂದಿ ಇದ್ದಾರೆ. ಇಲ್ಲಿನ ಹೈಟೆಕ್ ವ್ಯವಸ್ಥೆಯಲ್ಲಿ ಒಂದು ಸಲಕ್ಕೆ 22 ಒಂಟೆಗೆ ಏಕಕಾಲಕ್ಕೆ ಚಿಕಿತ್ಸೆ ನೀಡಬಹುದು. ಇಲ್ಲಿರುವ ವೈದ್ಯಕೀಯ ಸಲಕರಣೆಗಳು ಅಮೆರಿಕ ಹಾಗೂ ಯುರೋಪ್ ನಿಂದ ಬಂದಂಥವು. ಮರಳುಗಾಡಿನ ಒಂಟೆಗಳಿಗಾಗಿಯೇ ವಿಶೇಷವಾಗಿ ರೂಪಿಸಿದಂಥವು. ಅಂದ ಹಾಗೆ ಈ ಒಂಟೆಗಳು ಹತ್ತಿರ ಹತ್ತಿರ ಐನೂರು ಕೇಜಿ ತೂಕ ಇರುತ್ತವೆ.

ಒಂಟೆಗಳಿಗೆ ಚಿಕಿತ್ಸೆ ಮಾಡಬೇಕು ಅಂದರೆ, ಅದರ ವೆಚ್ಚ $1000ನಿಂದ ಆರಂಭವಾಗುತ್ತದೆ (ಭಾರತೀಯ ರುಪಾಯಿ ಲೆಕ್ಕದಲ್ಲಿ 70 ಸಾವಿರ). ಈ ದುಬೈ ಒಂಟೆ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ವೆಚ್ಚವೆಂದರೆ ಅಲ್ಟ್ರಾಸೌಂಡ್ ಗೆ. ಅದಕ್ಕೆ ತಗುಲುವ ವೆಚ್ಚ $110 (ಭಾರತೀಯ ರುಪಾಯಿ ಲೆಕ್ಕದಲ್ಲಿ 7,700). ಚಿಕಿತ್ಸೆ ನಂತರ ನೀಡುವ ಔಷಧಗಳನ್ನು ಮಾರಲಾಗುತ್ತದೆ.

ಈ ಆಸ್ಪತ್ರೆಯಲ್ಲಿ ಎರಡು ಆಪರೇಷನ್ ರೂಮ್ ಗಳಿವೆ. ಜತೆಗೆ ಒಂಟೆಗಳ ಮಾಲೀಕರಿಗೆ ವಿಐಪಿ ಕೊಠಡಿಗಳಿದ್ದು, ಅಲ್ಲಿ ಕೂತು ಹೈ ಡೆಫಿನಿಷನ್ ನಲ್ಲಿ ಶಸ್ತ್ರಚಿಕಿತ್ಸೆಯನ್ನು ನೇರವಾಗಿ ವೀಕ್ಷಿಸಬಹುದು. ಇಲ್ಲಿ ಐದು ಮೀಟರ್ ನ ಎಂಡೋಸ್ಕೋಪಿ ಇದೆ. ಈ ರೀತಿಯಾದದ್ದು ಜಗತ್ತಿನಲ್ಲೇ ಇಲ್ಲಿನದು ಮೂರನೆಯದು. ಇನ್ನು ಅಮೆರಿಕ ಹೊರತು ಪಡಿಸಿದರೆ ಇಲ್ಲಿ ಮಾತ್ರ ಇರುವುದು.

ಇಲ್ಲಿಗೆ ಬರುವ ಒಂಟೆಗಳ ಪೈಕಿ ಬಹುತೇಕವು ಮ್ಯಾರಥಾನ್ ರೇಸ್ ನಲ್ಲಿ ಗಾಯಗೊಂಡಿರುತ್ತವೆ ಅಥವಾ ಮೂಳೆ ಮುರಿದಿರುತ್ತದೆ. ಇನ್ನೊಂದು ಸಂಗತಿ ಏನು ಗೊತ್ತಾ? ಆಪರೇಷನ್ ಥಿಯೇಟರ್ ನಲ್ಲಿ ಇಷ್ಟು ಎತ್ತರದ- ಅಷ್ಟು ತೂಕದ ಒಂಟೆಯನ್ನು ತಲೆ ಕೆಳಗಾಗಿ ನೇತು ಹಾಕಿರಲಾಗುತ್ತದೆ.
ದುಬೈನಲ್ಲಿ ನಡೆಯುವ ಒಂಟೆ ರೇಸ್ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಅಲ್ ಮರ್ಮೂಮ್ ಪಾರಂಪರಿಕ ಹಬ್ಬದಲ್ಲಿ ಗೆದ್ದವರಿಗೆ $ 4 ಕೋಟಿಗೂ ಹೆಚ್ಚು ಬಹುಮಾನ ಈ ವರ್ಷ ಸಿಕ್ಕಿತ್ತು. ಅಂದರೆ ಇನ್ನೂರಾ ಎಂಬತ್ತರಿಂದ ಮುನ್ನೂರು ಕೋಟಿ ರುಪಾಯಿ. ಅಬು ಧಾಬಿಯ ಅಲ್ ಧಫ್ರಾ ಹಬ್ಬದಲ್ಲಿ ಗೆದ್ದವರು $ 8 ಲಕ್ಷ ಡಾಲರ್ ಗೂ ಹೆಚ್ಚು (ಭಾರತೀಯ ರುಪಾಯಿ ಲೆಕ್ಕದಲ್ಲಿ 5.60 ಕೋಟಿ) ಸಿಗುತ್ತದೆ.


Click it and Unblock the Notifications