ಭಾರತೀಯರಲ್ಲಿ ಬಹುಸಂಖ್ಯೆಯ ಜನರು ಖಾರವಾದ, ಅದರಲ್ಲೂ ನಾಲಗೆ ಮೇಲೆ ಖಾದ್ಯ ನಿಂತರೆ ಬ್ರಹ್ಮರಂಧ್ರದ ತನಕ ಖಾರ ತಲುಪುವಂಥದ್ದನ್ನು ಇಷ್ಟಪಡುತ್ತಾರೆ. ಇಂಥ ಖಾದ್ಯಗಳನ್ನು ತಿನ್ನುವುದಕ್ಕೆ ಇಷ್ಟಪಡುವಂಥ ದೇಶದಲ್ಲಿ ಮೆಣಸು ಕೃಷಿ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬೇರೆ ದೇಶಗಳಿಗೆ ಮೆಣಸನ್ನು ರಫ್ಟು ಮಾಡುವ ಮಟ್ಟಿಗೆ ಕೃಷಿ ನಡೆಯುತ್ತದೆ.
ನಿಮಗೆ ಗೊತ್ತಿರಲಿ, ಕೆಲವು ತಳಿಯ ಮೆಣಸು ಅಸಲಿಗೆ ಖಾರವೇ ಇರುವುದಿಲ್ಲ. ಇನ್ನೂ ಕೆಲವು ಅದ್ಯಾವ ಪರಿಯಲ್ಲಿ ಖಾರ ಅಂದರೆ, ಅದನ್ನು ತಿನ್ನುವುದಕ್ಕೆ ಸಾಧ್ಯವೇ ಇಲ್ಲ. ವಿಶ್ವದಲ್ಲೇ ಅತ್ಯಂತ ಖಾರವಾದ ಮೆಣಸು ಎಲ್ಲಿ ಬೆಳೆಯುತ್ತಾರೆ ಹಾಗೂ ಅದರ ಹೆಸರೇನು ಎಂಬ ಬಗ್ಗೆ ನಿಮಗೆ ಗೊತ್ತಿದೆಯಾ?
ಕರೋಲಿನಾ ರೀಪರ್
ಆ ಮೆಣಸಿನ ಹೆಸರು "ಕರೋಲಿನಾ ರೀಪರ್". ಇದನ್ನು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯಲಾಗುತ್ತದೆ. ವಿಶ್ವದಲ್ಲೇ ಸಿಕ್ಕಾಪಟ್ಟೆ ಖಾರದ ಮೆಣಸು ಇದು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ. 2017ರಲ್ಲಿ ದಾಖಲಾಗಿರುವ ಗಿನ್ನೆಸ್ ವಿಶ್ವದಾಖಲೆ ಮಾಹಿತಿ ಪ್ರಕಾರ, ಇದರ ಹೀಟ್ ಪ್ರಮಾಣ 1,641,183 Scoville Heat Units (SHU).
ಹಾಟೆಸ್ಟ್ ಮೆಣಸು 2.2 ಮಿಲಿಯನ್ SHU
ಈ ಪರೀಕ್ಷೆಯನ್ನು ಆಯೋಜಿಸಿದ್ದು ವಿನ್ ಥ್ರೋಪ್ ವಿಶ್ವವಿದ್ಯಾಲಯ; ದಕ್ಷಿಣ ಕರೋಲಿನಾದಲ್ಲಿ. ಈ ಮೇಲ್ಕಂಡ ಸಂಖ್ಯೆ ಒಟ್ಟಾರೆ ಪರೀಕ್ಷೆ ಮಾಡಿದ ಬ್ಯಾಚ್ ನ ಸರಾಸರಿ ಅಷ್ಟೇ. ಆದರೆ ಅತ್ಯಂತ ಹಾಟೆಸ್ಟ್ ಅನಿಸಿದ್ದರ ಪ್ರಮಾಣ 2.2 ಮಿಲಿಯನ್ SHU. ಈ ಕರೋಲಿನಾ ರೀಪರ್ ತಿನ್ನುವುದು ಅದೆಷ್ಟು ಅಪಾಯಕಾರಿ ಎಂಬುದು 2018ರಲ್ಲಿ ಯುಎಸ್ ಎಯಲ್ಲಿನ ನ್ಯೂಯಾರ್ಕ್ ನಲ್ಲಿ ಅನುಭವಕ್ಕೆ ಬಂದಿದೆ.
ಮೆಣಸು ತಿನ್ನೋ ಸ್ಪರ್ಧೆಯಲ್ಲಿ ವ್ಯಕ್ತಿ ಆಸ್ಪತ್ರೆಗೆ ದಾಖಲು
34 ವರ್ಷದ ವ್ಯಕ್ತಿ ಇಲ್ಲಿ ನಡೆದ ಮೆಣಸು ತಿನ್ನುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಈ ಮನುಷ್ಯ ಒಂದಿಷ್ಟು ತಿನ್ನುತ್ತಿದ್ದಂತೆ ಗಂಭೀರ ಸ್ವರೂಪದ ತಲೆ ನೋವು ಕಾಣಿಸಿಕೊಂಡಿತು. ಆ ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇಲ್ಲಿ ಇನ್ನೂ ಒಂದು ಮಾಹಿತಿ ಏನು ಗೊತ್ತಾ? ಈ ಕರೋಲಿನಾ ರೀಪರ್ ಗೂ ಮುಂಚೆ ವಿಪರೀತ ಖಾರದ ಮೆಣಸು ಎಂಬ ಕಿರೀಟ ಇದ್ದದ್ದು ಭಾರತದಲ್ಲಿ ಬೆಳೆಯುವಂಥ ತಳಿಗೆ.
ಭೂತ್ ಜೊಲೊಕಿಯಾ
ಆ ತಳಿಯ ಹೆಸರು 'ಭೂತ್ ಜೊಲೊಕಿಯಾ'. ಕರೋಲಿನಾಗೂ ಮುಂಚೆ, 2007ರಲ್ಲಿ ಅತ್ಯಂತ ಖಾರದ ಮೆಣಸು ಎಂಬ ಕೀರ್ತಿ ಇದರ ಪಾಲಿಗೆ ಇತ್ತು. ನೀವು ಮಾಮೂಲಿ ಮೆಣಸು ತಿಂದಿರುತ್ತೀರಲ್ಲಾ ಅದರ 400 ಪಟ್ಟು ಹೆಚ್ಚು ಖಾರವಾಗಿ ಇರುತ್ತವೆ ಇದು. ಇದನ್ನು ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಬೆಳೆಯುತ್ತಾರೆ.


Click it and Unblock the Notifications