ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಾಧ್ಯಕ್ಷರು ಯಾರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದೀರಾ? ಅಧ್ಯಕ್ಷರು ಅಂತಷ್ಟೇ ಅಲ್ಲ, ಪ್ರಧಾನಮಂತ್ರಿಯೂ ಆಗಿರಬಹುದು. ಆ ದೇಶದಲ್ಲಿ ಅತಿ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಹುದ್ದೆಯಲ್ಲಿ ಅವರು ಇರಬೇಕು. ಯಾವುದೇ ದೇಶಕ್ಕೆ ಅಧ್ಯಕ್ಷ ಸ್ಥಾನದಲ್ಲಿ ಇರುವವರು ಬಹಳ ಬಹಳ ಮುಖ್ಯ. ಸಶಸ್ತ್ರ ಪಡೆಯ ಕಮ್ಯಾಂಡರ್-ಇನ್- ಚೀಫ್ ಹುದ್ದೆ ರಾಷ್ಟ್ರಾಧ್ಯಕ್ಷರದೇ ಆಗಿರುತ್ತದೆ.
ಇನ್ನು ದೇಶದಲ್ಲಿ ಕಾನೂನುಗಳನ್ನು ಜಾರಿಗೆ ತರುವ ಮುನ್ನ ಅವರ ಅಂಕಿತ ಬೀಳಬೇಕು. ಭಾರತದಲ್ಲಿ ರಾಷ್ಟ್ರಪತಿ ಹುದ್ದೆಯು ಸಾಂವಿಧಾನಿಕವಾಗಿ ಅತ್ಯಂತ ಎತ್ತರದಲ್ಲಿದೆ. ಆದರೆ ಆಡಳಿತ ನಡೆಸುವುದು ಪ್ರಧಾನಮಂತ್ರಿ. ಅದೇ ಅಮೆರಿಕ, ರಷ್ಯಾ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಅಧ್ಯಕ್ಷರ ಹುದ್ದೆಯೇ ಹೆಚ್ಚು ಪ್ರಭಾವಿ. ಹಾಗಿದ್ದರೆ ವಿಶ್ವದ ಟಾಪ್ 5 ಅತಿ ಶ್ರೀಮಂತ ಅಧ್ಯಕ್ಷರ ಮಾಹಿತಿಯನ್ನು ತಿಳಿದುಕೊಳ್ಳೋಣ.
ವ್ಲಾಡ್ಮಿರ್ ಪುಟಿನ್
ಅತ್ಯಂತ ಶ್ರೀಮಂತ ಅಧ್ಯಕ್ಷರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ವ್ಲಾಡ್ಮಿರ್ ಪುಟಿನ್. 2012ರಿಂದ ರಷ್ಯಾದ ಅಧ್ಯಕ್ಷ ಸ್ಥಾನದಲ್ಲಿ ಇರುವ ಪುಟಿನ್, ಅದಕ್ಕೂ ಮುನ್ನ 1999ರಿಂದ 2008ರ ತನಕ ಅದೇ ಹುದ್ದೆಯಲ್ಲಿ ಇದ್ದರು. ಇನ್ನು 1999ರಿಂದ 2000 ಹಾಗೂ 2008ರಿಂದ 2012ರ ತನಕ ಆಡಳಿತಾರೂಢ ಪ್ರಧಾನಿ ಆಗಿದ್ದರು. ಹಲವು ರಷ್ಯನ್ ಕಂಪೆನಿಗಳಲ್ಲಿ ಬಿಲಿಯನ್ ಡಾಲರ್ ಗಟ್ಟಲೆ ಪಾಲನ್ನು ಹೊಂದಿದ್ದಾರೆ ಪುಟಿನ್. 1983ರಲ್ಲಿ ಮದುವೆ ಆಗಿ, ಆ ನಂತರ ಮದುವೆ ಮುರಿದುಬಿದ್ದಿದೆ. ಈ ದಾಂಪತ್ಯಕ್ಕೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪುಟಿನ್ ಅಧ್ಯಕ್ಷ ಗಾದಿಗೆ ಏರಿದ ನಂತರ ಸತತ ಎಂಟು ವರ್ಷ ನಿರಂತರವಾಗಿ ರಷ್ಯಾ ಆರ್ಥಿಕ ಪ್ರಗತಿ ಸಾಧಿಸಿತು. ಪುಟಿನ್ ನಿವ್ವಳ ಆಸ್ತಿ ಮೌಲ್ಯ 4000 ಕೋಟಿ ಅಮೆರಿಕನ್ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 3.04 ಲಕ್ಷ ಕೋಟಿ ರುಪಾಯಿಗೂ ಹೆಚ್ಚು.
ಹಸ್ಸನಲ್ ಬೊಲ್ಕಿಯಾ
ಹಸ್ಸನಲ್ ಬೊಲ್ಕಿಯಾ ಬ್ರೂನೈನ 29ನೇ ಸುಲ್ತಾನ. ಸಂಪೂರ್ಣ ಅರಸೊತ್ತಿಗೆ ದೇಶದ ಕೊನೆ ಸುಲ್ತಾನ. ಜತೆಗೆ ದೇಶದ ಪ್ರಧಾನಮಂತ್ರಿಯೂ ಹೌದು. ದಶಕಗಳ ಕಾಲ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬೊಲ್ಕಿಯಾ ಹೆಸರಿತ್ತು. ಒಟ್ಟಾರೆ ನಿವ್ವಳ ಶ್ತಿ 2000 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು. ರಾಣಿ ಎಲಿಜಬೆತ್ || ನಂತರ ಅತ್ಯಂತ ದೀರ್ಘಕಾಲ ಅರಸೊತ್ತಿಗೆಯ ಅಧಿಕಾರ ಅನುಭವಿಸುತ್ತಿರುವ ಎರಡನೇ ವ್ಯಕ್ತಿ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂಖ್ಯೆಯ ಕಾರು ಸಂಗ್ರಹ ಹೊಂದಿರುವ ವ್ಯಕ್ತಿ ಬೊಲ್ಕಿಯಾ. ಎಷ್ಟೋ ಕಾರು ಕಂಪೆನಿಗಳು ಎಕ್ಸ್ ಕ್ಲೂಸಿವ್ ಆಗಿ ಆತನಿಗಾಗಿ ಕಾರು ಉತ್ಪಾದಿಸುತ್ತವೆ. 24 ಕ್ಯಾರೆಟ್ ಚಿನ್ನದಿಂದ ಕೋಟೆಡ್ ಆಗಿರುವ ರೋಲ್ಸ್ ರಾಯ್ಸ್ ಕಾರು ಇಟ್ಟುಕೊಂಡಿದ್ದಾರೆ ಸುಲ್ತಾನ. ಈತನಿಗೆ ಮೂರು ಜನ ಹೆಂಡತಿಯರು, ಐದು ಮಂದಿ ಗಂಡು ಮಕ್ಕಳು, ಏಳು ಹೆಣ್ಣುಮಕ್ಕಳು ಇದ್ದಾರೆ.
ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್
ವಿಶ್ವದಲ್ಲಿ ಮೂರನೇ ಶ್ರೀಮಂತ ಅರಸು ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್. 2005ರಲ್ಲಿ ಸೌದಿ ಅರೇಬಿಯಾದ ರಾಜನಾಗಿ ಆಯ್ಕೆಯಾದ ವ್ಯಕ್ತಿ. ಎರಡು ಮಸೀದಿಗಳ ಕಸ್ಟೋಡಿಯನ್ ಕೂಡ ಆಗಿದ್ದು, ದೇಶದಲ್ಲಿ ಹಲವು ಸುಧಾರಣೆಗಳು ಆಗಿದೆ. ತನ್ನ ಅಧಿಕಾರಾವಧಿಯಲ್ಲಿ ಮಹಿಳೆಯರಿಗೆ ಹೆಚ್ಚೆಚ್ಚು ಹಕ್ಕುಗಳನ್ನು ನೀಡಿದ ವ್ಯಕ್ತಿ ಈತ. ಜಾಗತಿಕ ಮಟ್ಟದ ಪ್ರಾಕೃತಿಕ ವಿಕೋಪಗಳಿಗೆ ಸ್ಪಂದಿಸಿ, ನೆರವಿನ ಹಸ್ತ ನೀಡಿದ ಕಾರಣಕ್ಕೆ ಬಹಳ ಜನಪ್ರಿಯ ನಾಯಕ. ಆಸ್ತಿ ಮೌಲ್ಯ 1800 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು.
ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್
ಯುನೈಟೆಡ್ ಅರಬ್ ಎಮಿರೇಟ್ಸ್ ನ ಸದ್ಯದ ಅಧ್ಯಕ್ಷ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್. ಯೂನಿಯನ್ ಡಿಫೆನ್ಸ್ ಫೋರ್ಸ್ ನ ಮುಖ್ಯ ಕಮ್ಯಾಂಡರ್, ಜತೆಗೆ ಅಬು ಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿಯ ಅಧ್ಯಕ್ಷ ಕೂಡ ಹೌದು. ಆ ಇನ್ವೆಸ್ಟ್ ಮೆಂಟ್ ಅಥಾರಿಟಿಯು 87,500 ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿಯನ್ನು ನಿರ್ವಹಣೆ ಮಾಡುತ್ತದೆ. ವಿಶ್ವದ ಬೇರೆ ಯಾವುದೇ ಸರ್ಕಾರದ ಮುಖ್ಯಸ್ಥ ಇಷ್ಟು ದೊಡ್ಡ ಮೊತ್ತದ ಜವಾಬ್ದಾರಿ ನಿರ್ವಹಿಸುತ್ತಿರುವ ಉದಾಹರಣೆ ಇಲ್ಲ. ಒಟ್ಟಾರೆಯಾಗಿ ಈ ಕುಟುಂಬದ ಆಸ್ತಿ ಮೌಲ್ಯ 15,000 ಕೋಟಿ USD ಇದೆ. ಆದರೆ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ ಆಸ್ತಿ ಮೌಲ್ಯ 1500 ಕೋಟಿ ಅಮೆರಿಕನ್ ಡಾಲರ್ ಆಸ್ತಿಯಷ್ಟಿದೆ. ಕನಿಷ್ಠ ಆರು ಹೆಂಡತಿಯರು ಹಾಗೂ ಕನಿಷ್ಠ ಮೂವತ್ತು ಮಕ್ಕಳು ಈತನಿಗೆ ಇದ್ದಾರೆ.
ಕಿಮ್ ಜಾಂಗ್-ಉನ್
ಉತ್ತರ ಕೊರಿಯಾ ಕಂಡ ಅತ್ಯಂತ ಕ್ರೂರ ನಾಯಕ ಕಿಮ್ ಜಾಂಗ್- ಉನ್. 2011ರಿಂದ ದೇಶದ ಸರ್ವೋಚ್ಚ ನಾಯಕನ ಸ್ಥಾನ ಅಲಂಕರಿಸಿರುವ ಈತ, ಚುನಾವಣೆ ನಡೆಯುವುದಕ್ಕೇ ಬಿಟ್ಟಿಲ್ಲ. ಮಾಧ್ಯಮಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿದ್ದು, ಸೀಮಿತ ಇಂಟರ್ ನೆಟ್ ಸಂಪರ್ಕಕ್ಕೆ ಅವಕಾಶ ನೀಡಲಾಗಿದೆ. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವೂ ಇಲ್ಲ. ಯಾರು ಈತನ ವಿರುದ್ಧ ಮಾತನಾಡುತ್ತಾರೋ ಅಂಥವರನ್ನೂ ಕ್ರೂರವಾಗಿ ಶಿಕ್ಷಿಸಿದ, ಕೊಂದ ಉದಾಹರಣೆಗಳು ಇವೆ. ತನ್ನ ಸಂಬಂಧಿಯನ್ನೇ ನೇಣಿಗೇರಿಸಿದ್ದ ವ್ಯಕ್ತಿ ಈತ. ಕಿಮ್ ಜಾಂಗ್ ಉನ್ ಬಳಿ ವಿಶ್ವದಾದ್ಯಂತ ಹದಿನೇಳಕ್ಕೂ ಹೆಚ್ಚು ಐಷಾರಾಮಿ ಅರಮನೆಗಳು ಇವೆಯಂತೆ. ಯುರೋಪಿಯನ್ ವಿಲಾಸಿ ಕಾರುಗಳು, ಖಾಸಗಿ ವಿಮಾನ, ನುರು ಅಡೀ ಉದ್ದದ ಖಾಸಗಿ ದೋಣಿ ಇದೆ. 2009ರಲ್ಲಿ ಮದುವೆಯಾದ ಈತನಿಗೆ ಒಂದು ಗಂಡು ಹಾಗೂ ಹೆಣ್ಣುಮಗು ಇದೆ ಎಂಬ ವರದಿ ಇದೆ. ಇನ್ನು ಆಸ್ತಿ ಮೌಲ್ಯ 500 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು.


Click it and Unblock the Notifications