ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾವಿರಾರು ಕುಟುಂಬಗಳು ಈಗಲೂ ಕಾಯುತ್ತಿದೆ. ಅದಕ್ಕೆಲ್ಲ ಮುಖ್ಯ ಕಾರಣ ರೇಷನ್ ಕಾರ್ಡ್ ಆಗಿದೆ. ರಾಜ್ಯದ ಸಾವಿರಾರು ಅರ್ಹ ಕುಟುಂಬಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಕಾಯುತ್ತಿವೆ.
ಈ ನಡುವೆ ಮಾರ್ಚ್ 2023 ರಿಂದ ಈವರೆಗೆ ಒಂದೆರಡು ಸಾವಿರವಲ್ಲ ಬರೋಬ್ಬರಿ 2.95 ಲಕ್ಷ ರೇಷನ್ ಕಾರ್ಡ್ ಅರ್ಜಿ ಹಾಗೆಯೇ ಬಾಕಿ ಉಳಿದಿದೆ. ಚುನಾವಣೆಗೂ ಮುನ್ನವೇ ನಿಯಮದಂತೆ ಈ ಅರ್ಜಿ ಪ್ರಕ್ರಿಯೆಯನ್ನು ಮುಚ್ಚಲಾಗಿದೆ. ಈ ಅರ್ಜಿಗಳೆಲ್ಲವೂ ಸರ್ಕಾರದಿಂದ ಅನುಮೋದನೆಯೊಂದು ಪಡೆಯಲು ಬಾಕಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅರ್ಜಿ ಬಾಕಿ ಉಳಿದಿರುವ ಜನರು ಹೇಳುವುದೇನು?
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಗಲಕೋಟೆ ಜಿಲ್ಲೆಯ ಕರಡಿ ಗ್ರಾಮದ ನಿವಾಸಿ ಶಶಿಕುಮಾರ್, "ಚುನಾವಣೆಗೆ ಮುನ್ನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದೆ. ಅನ್ನ ಭಾಗ್ಯ ಯೋಜನೆ ನಮ್ಮ ಮೂವರ ಕುಟುಂಬಕ್ಕೆ ಆಹಾರ ವೆಚ್ಚ ಕಡಿಮೆ ಮಾಡುತ್ತದೆ ಎಂಬ ಭರವಸೆ ಹೊಂದಿದ್ದೆ. ಆ ಸಂದರ್ಭದಲ್ಲಿ ಗ್ಯಾಸ್, ತರಕಾರಿ, ಆಹಾರ ಧಾನ್ಯ ಎಲ್ಲ ವಸ್ತುಗಳ ಬೆಲೆ ಅಧಿಕವಾಗಿತ್ತು. ಆದರೆ ಈಗ ಅರ್ಜಿ ಅನುಮೋದನೆಯೇ ಆಗಿಲ್ಲ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಗುಡ್‌ರಿಟರ್ನ್ಸ್‌ಗೆ ಪ್ರತಿಕ್ರಿಯೆ ನೀಡಿದ ಮಂಗಳೂರಿನ ಮಹಿಳೆಯೋರ್ವರು, "ನಾವಿರುವುದು ಬಾಡಿಗೆ ಮನೆಯಲ್ಲಿ. ನಾನು ನನ್ನ ಮಗ ಸೊಸೆ ಮೂವರು ಇದ್ದೇವೆ. ಆದರೂ ನಮಗೆ ಎಪಿಎಲ್ ರೇಷನ್ ಕಾರ್ಡ್. ಅದನ್ನು ಬದಲಾಯಿಸಲು ಅರ್ಜಿ ಹಾಕಲು ಹೋಗಿದ್ದೆ. ಈಗ ಇರುವ ಕಾರ್ಡ್ ರದ್ದು ಮಾಡಿ ಮತ್ತೆ ಹೊಸದಾಗಿ ರೇಷನ್ ಕಾರ್ಡ್ ಮಾಡಬೇಕು ಎಂದರು. ಹಾಗೆ ರದ್ದು ಮಾಡಿಸಿದೆ," ಎನ್ನುತ್ತಾರೆ.
"ಇದ್ದ ರೇಷನ್ ಕಾರ್ಡ್ ರದ್ದು ಮಾಡಿದ ಬಳಿಕ ಒಂದು ವಾರ ಕಳೆದು ಬನ್ನಿ ಎಂದರು. ಅದರಂತೆ ಹೋದಾಗ ಈಗ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಚುನಾವಣೆ ಘೋಷಣೆ ಆಗಿದೆ ಎಂದರು. ಈಗ ನಮಗೆ ಯಾವುದೇ ರೇಷನ್ ಕಾರ್ಡ್ ಇಲ್ಲದಂತಾಗಿದೆ. ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಇತ್ತ ಗೃಹ ಜ್ಯೋತಿ ಹೊರತುಪಡಿಸಿ ಯಾವ ಯೋಜನೆಗಳ ಪ್ರಯೋಜನವೂ ಲಭ್ಯವಿಲ್ಲ. ಮಾಸಿಕ ಎರಡು ಸಾವಿರ ಲಭ್ಯವಾಗುತ್ತಿದ್ದರೆ, ನಮ್ಮ ಕುಟುಂಬಕ್ಕೆ ಸಹಾಯವಾಗುತ್ತಿತ್ತು," ಎಂದು ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ನೀಡಲು ಆಗ್ರಹ
ಈ ನಡುವೆ ಸಾಮಾಜಿಕ ಕಾರ್ಯಕರ್ತರು ಬಿಪಿಎಲ್ ಕಾರ್ಡ್ ಶೀಘ್ರವೇ ಹಂಚಿಕೆ ಮಾಡಬೇಕು. ಬಡ ಕುಟುಂಬಗಳು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸರ್ಕಾರವು ಅನುವು ಮಾಡಿಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ. ಈಗಾಗಲೇ ಲಕ್ಷಾಂತರ ಅರ್ಜಿಗಳು ಹಾಗೆಯೇ ಬಾಕಿ ಉಳಿದಿದೆ. ಆ ಅರ್ಜಿಗಳನ್ನಾದರೂ ಸರ್ಕಾರ ಪರಿಶೀಲಿಸಿ ಅನುಮೋದಿಸಬೇಕು ಎಂದು ಕೂಡಾ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಪ್ರಯೋಜನ ಪಡೆಯಬೇಕಾದರೆ ರೇಷನ್ ಕಾರ್ಡ್ ಅತೀ ಮುಖ್ಯವಾಗಿದೆ. ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರವು ಆರಂಭದಲ್ಲಿ ಹತ್ತು ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಿತ್ತು. ಆದರೆ ಅಕ್ಕಿ ಕೊರತೆ ಕಾರಣದಿಂದಾಗಿ ಐದು ಕೆಜಿ ಅಕ್ಕಿ ಉಳಿದ ಐದು ಕೆಜಿಯ ಹಣವನ್ನು ನೀಡಲಾಗುವುದು ಎಂದು ಹೇಳಿದೆ. ಆದರೆ ರೇಷನ್ ಕಾರ್ಡ್ ಇಲ್ಲದ ಬಡ ಕುಟುಂಬಗಳು ಈ ಪ್ರಯೋಜನದಿಂದ ವಂಚಿತರಾಗುತ್ತಿದ್ದಾರೆ.
ಇನ್ನು ರೇಷನ್ ಕಾರ್ಡ್‌ನಲ್ಲಿ ಯಜಮಾನಿ ಎಂದು ಗುರುತಿಸಲ್ಪಡುವ ಒಂದು ಕುಟುಂಬದ ಓರ್ವ ಮಹಿಳೆಗೆ ಮಾಸಿಕವಾಗಿ ಎರಡು ಸಾವಿರ ರೂಪಾಯಿಯನ್ನು ನೀಡುವ ಯೋಜನೆಯೇ ಗೃಹ ಲಕ್ಷ್ಮೀ ಯೋಜನೆಯಾಗಿದೆ. ಇದಕ್ಕೂ ರೇಷನ್ ಕಾರ್ಡ್ ಅತೀ ಮುಖ್ಯವಾಗಿದೆ. ಆದರೆ ಈಗ ರೇಷನ್ ಕಾರ್ಡ್ ಇಲ್ಲದ ಕಾರಣ ಅದೆಷ್ಟೋ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲಾಗುತ್ತಿಲ್ಲ.


Click it and Unblock the Notifications