
ಕೆಲ ರಾಷ್ಟ್ರೀಕೃತ ಬ್ಯಾಂಕ್ ಗಳು ಈಗಾಗಲೇ ಬಡ್ಡಿ ದರವನ್ನು ಪರಿಷ್ಕರಿಸಿದೆ, ಇನ್ನೂ ಕೆಲ ಬ್ಯಾಂಕ್ ಗಳು ಸದ್ಯದಲ್ಲೇ ಬಡ್ಡಿ ದರವನ್ನು ಇಳಿಸಲಿದೆ. ಹಣಕಾಸು ಸಚಿವರಾಗಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಸರಕಾರೀ ಸ್ವಾಮ್ಯದ ಬ್ಯಾಂಕ್ ಪ್ರಮುಖರ ಸಭೆಯಲ್ಲಿ ಬಡ್ಡಿ ದರವನ್ನು ಇಳಿಸುವಂತೆ ಆದೇಶಿಸಿದ್ದಾರೆಂದು ವರದಿಯಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮನೆಸಾಲದ ಮೇಲಿನ ಬಡ್ಡಿಯನ್ನು 10 ಮೂಲ ಅಂಕಕ್ಕೆ ಇಳಿಸಿದೆ. ಮೂವತ್ತು ಲಕ್ಷದ ವರೆಗಿನ ಸಾಲಕ್ಕೆ ಬಡ್ಡಿದರವನ್ನು ಶೇ.10.65 ರಿಂದ ಶೇ.10.50 ಕ್ಕೆ ಇಳಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಗ್ರೂಪಿನ ಕೆಲ ಸಹವರ್ತಿ ಬ್ಯಾಂಕ್ ಗಳು ಈಗಾಗಲೇ ಬಡ್ಡಿದರವನ್ನು 50 -75 ಬಿಪಿಎಸ್ ನಷ್ಟು ಇಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಬಿಕನೀರ್ ಮತ್ತು ಜೈಪುರ್ ಶೇ.10.75 ವಾರ್ಷಿಕ ಬಡ್ಡಿದರದಲ್ಲಿ ಮನೆಸಾಲ ನೀಡಲು ಆರಂಭಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ತನ್ನ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ ಪರಿಷ್ಕೃತ ಬಡ್ಡಿದರವನ್ನು ಪ್ರಕಟಿಸಲಿದೆ. ಬಡ್ಡಿ ದರವನ್ನು ಎಷ್ಟು ಇಳಿಸಬೇಕೆನ್ನುವುದನ್ನು ಕೇಂದ್ರ ವಿತ್ತ ಇಲಾಖೆ ನಿರ್ಧರಿಸಿಲ್ಲ, ಅದು ಆಯಾಯ ಬ್ಯಾಂಕ್ ಗಳಿಗೆ ಬಿಟ್ಟ ವಿಚಾರ ಎಂದು ಎ.ಎಲ್.ಸಿ.ಒ (Asset Liability Committee) ತಿಳಿಸಿದೆ.
ಕರ್ನಾಟಕ ಮೂಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಪೋರೇಶನ್ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಗಳು ತನ್ನ ನಿರ್ಧಾರವನ್ನು ಇನ್ನು ಪ್ರಕಟಿಸಬೇಕಾಗಿದೆ.


Click it and Unblock the Notifications