
5 ಲಕ್ಷ ರೂ. ಮಿಕ್ಕಿದ ಆದಾಯ ಇರುವ ಗುಂಪಿನವರ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ದಾಖಲಿಸಲಾಗುತ್ತದೆ. ತೆರಿಗೆ ಲೆಕ್ಕ ಹಾಕುವ ಅಧಿಕಾರಿ ಮತ್ತು ತೆರಿಗೆದಾರನ ನಡುವಣ ಮುಖಾಮುಖಿಯನ್ನು ಕನಿಷ್ಠಗೊಳಿಸುವುದಕ್ಕೆ ತಂತ್ರಜ್ಞಾನವನ್ನು ಬಳಕೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸುಮಿತ್ ಬೋಸ್ ಎಫ್ಐಸಿಸಿಐ ಸಮಾರಂಭದಲ್ಲಿ ಹೇಳಿದ್ದಾರೆ.
ಕಳೆದ ವರ್ಷ 10 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ವಾರ್ಷಿಕ ವರಮಾನ ಇರುವವರಿಗೆ ವಿದ್ಯುನ್ಮಾನ ರೂಪದಲ್ಲಿ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. [ 10 ಲಕ್ಷಕ್ಕಿಂತ ಅಧಿಕ ಆದಾಯ, ಆನ್ ಲೈನ್ ಪಾವತಿ ಏಕೆ?]
ತೆರಿಗೆ ತಳಹದಿಯನ್ನು ವಿಸ್ತರಿಸಲು ಆದಾಯ ತೆರಿಗೆ ಇಲಾಖೆ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಖಾಯಂ ಖಾತೆ ಸಂಖ್ಯೆ (ಪಾನ್ ಕಾರ್ಡ್) ಹೊಂದಿದ್ದು, ತೆರಿಗೆ ವಿವರಗಳನ್ನು ಸಲ್ಲಿಸದಿರುವವರನ್ನು ಕಂಡು ಹಿಡಿಯುವ ಪ್ರಕ್ರಿಯೆಯನ್ನು ಇಲಾಖೆ ನಡೆಸುತ್ತಿದೆ ಎಂದು ಬೋಸ್ ತಿಳಿಸಿದರು.
ಸುಮಾರು 35,000ಕ್ಕೂ ಅಧಿಕ ತೆರಿಗೆ ವಂಚಕರನ್ನು ಪತ್ತೆ ಹಚ್ಚಲಾಗಿದೆ. ಎಲ್ಲರಿಗೂ ಇಷ್ಟರಲ್ಲೇ ಎರಡನೇ ಬಾರಿಗೆ ಮನವಿ ಪತ್ರ ಕಳಿಸಲಾಗುತ್ತಿದೆ. ಐಟಿ ಅಧಿಕಾರಿಗಳು ಕಳಿಸಿದ ಮೊದಲ ಪತ್ರದಲ್ಲಿ ತೆರಿಗೆ ಏಕೆ ಕಟ್ಟಿಲ್ಲ ಎಂದಷ್ಟೇ ಪ್ರಶ್ನಿಸಲಾಗಿದೆ.ಕೂಡಲೇ ಐಟಿ ರಿಟರ್ನ್ಸ್ ಮಾಡುವಂತೆ ಸೂಚಿಸಲಾಗಿದೆ.
ನಮ್ಮಲ್ಲಿ ತೆರಿಗೆ ಪಾವತಿ ಮಾಡದಿರುವವರ ಸಂಪೂರ್ಣ ವಿವರಗಳು ಲಭ್ಯವಿದೆ. ತೆರಿಗೆ ವಂಚನೆಯಿಂದ ಜಿಡಿಪಿಗೆ ಹೊಡೆತ ಬೀಳುತ್ತಿದೆ. 2011-12ರಲ್ಲಿ ಜಿಡಿಪಿ ಪ್ರಮಾಣ ನೇರ ತೆರಿಗೆಗೆ ಶೇ 5.5ರಷ್ಟಿತ್ತು. ಪರೋಕ್ಷ ತೆರಿಗೆಗೆ ಶೇ 4.4ರಷ್ಟಿತ್ತು ಎಂದು ಬೋಸ್ ಹೇಳಿದ್ದಾರೆ.
ಆದಾಯ ತೆರಿಗೆ ಪಾವತಿ ಸುಲಭಗೊಳಿಸಲು ಹಾಗೂ ಸಾರ್ವಜನಿಕರಿಗೆ ತೆರಿಗೆ ಕಟ್ಟಲು ಅನುಕೂಲಕರ ಸೇವೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಚಯಿಸಿದೆ. ‘Register for Home Visit' ಹಾಗೂ ‘Online Tax Help' ಎಂಬ ಈ ಸೇವೆಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಆರಂಭಗೊಂಡಿದೆ.(ಪಿಟಿಐ)


Click it and Unblock the Notifications