ವೈವಾಹಿಕ ಜೀವನಕ್ಕೆ ಅಡಿಯಿಡುವುದೆಂದರೆ ಹೊಸ ಜೀವನವನ್ನು ಪ್ರಾರಂಭಿಸಿದಂತೆ. ಈಗ ಜೀವನದಲ್ಲಿ ಎಲ್ಲವನ್ನೂ ಹೊಸದಾಗಿ, ಭಿನ್ನವಾಗಿ ಪ್ರಾರಂಭಿಸಬೇಕಾಗಿದ್ದು ಇದರಲ್ಲಿ ಆರ್ಥಿಕ ನಿರ್ವಹಣೆ ಪ್ರಮುಖವಾದ ಸವಾಲಾಗಿದೆ.
ವೈವಾಹಿಕ ಜೀವನಕ್ಕೆ ಅಡಿಯಿಡುವುದೆಂದರೆ ಹೊಸ ಜೀವನವನ್ನು ಪ್ರಾರಂಭಿಸಿದಂತೆ. ಈಗ ಜೀವನದಲ್ಲಿ ಎಲ್ಲವನ್ನೂ ಹೊಸದಾಗಿ, ಭಿನ್ನವಾಗಿ ಪ್ರಾರಂಭಿಸಬೇಕಾಗಿದ್ದು ಇದರಲ್ಲಿ ಆರ್ಥಿಕ ನಿರ್ವಹಣೆ ಪ್ರಮುಖವಾದ ಸವಾಲಾಗಿದೆ. ವಿವಾಹದ ಬಳಿಕ ಖರ್ಚುಗಳು ಸಹ ಹೆಚ್ಚುತ್ತವೆ ಹಾಗೂ ಜವಾಬ್ದಾರಿಗಳೂ ಹೆಚ್ಚುತ್ತವೆ. ಹಾಗಾಗಿ ನವವಿವಾಹಿತರು ವಿವಾಹದ ಬಳಿಕ ಮುಂದಿನ ಜೀವನಕ್ಕಾಗಿ ತಮ್ಮ ಆರ್ಥಿಕ ನಿರ್ವಹಣೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ 10 ಸಲಹೆಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ. ದಂಪತಿಗಳಿಗೆ ಹಾಗು ಮದುವೆ ಆಗುವವರಿಗಾಗಿ ಈ ಲೇಖನ. ತಪ್ಪದೇ ಓದಿ..
1. ಖರ್ಚುವೆಚ್ಚಗಳ ಬಗ್ಗೆ ಜಂಟಿ ಸಮಾಲೋಚನೆ
ನಿಮ್ಮ ಆದಾಯ ಮತ್ತು ಖರ್ಚುಗಳ ಬಗ್ಗೆ ಜೀವನ ಸಂಗಾತಿಯಲ್ಲಿ ಮುಕ್ತವಾಗಿ ಹಾಗೂ ಯಾವುದೇ ಮುಚ್ಚುಮರೆಯಿಲ್ಲದೇ ಸಮಾಲೋಚಿಸಿ. ನಿಮ್ಮ ಆದಾಯ ಹಾಗೂ ಖರ್ಚಿನ ನಿರ್ವಹಣೆಯ ಬಗ್ಗೆ ನಿಮ್ಮ ಸಂಗಾತಿ ತಿಳಿದಿರಬೇಕು ಹಾಗೂ ನಿಮ್ಮಲ್ಲಿ ಇರುವ ಆಸ್ತಿ, ವಸ್ತುಗಳ ಬಗ್ಗೆ ತಿಳಿದಿರಬೇಕು. ಅಲ್ಲದೇ ನೀವು ಹೂಡುವ ಅಥವಾ ಹೂಡಲಿರುವ ಹೂಡಿಕೆಗಳಿಗೂ ನಿಮ್ಮ ಜೀವನ ಸಂಗಾತಿಯನ್ನೇ ನಾಮನಿರ್ದೇಶಿಸಬೇಕು.
2. ಹೆಚ್ಚಿನ ಖರ್ಚನ್ನು ಮಾಡದಿರಿ
ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆ ಮಾತನ್ನು ನಿಮ್ಮ ಜೀವನದಲ್ಲಿ ಖಂಡಿತವಾಗಿ ಅಳವಡಿಸಿಕೊಳ್ಳಬೇಕು. ಮದುವೆಯ ಬಳಿಕ ಹೆಚ್ಚಿನ ನವ ವಿವಾಹಿತರು ಯಾವುದೋ ಹುಮ್ಮಸ್ಸಿನಲ್ಲಿ ದುಬಾರಿ ಬೆಲೆಯ ಕಾರು, ಎಲೆಕ್ಟ್ರಾನಿಕ್ ಉಪಕರಣ ಮೊದಲಾದವುಗಳನ್ನು ಖರೀದಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇವುಗಳ ಖರ್ಚನ್ನು ಭರಿಸಲಾಗದೇ ಜೀವನದ ಅಗತ್ಯದ ಖರ್ಚನ್ನೇ ಮೊಟಕುಗೊಳಿಸಬೇಕಾಗಿ ಬಂದು ವೇದನೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಿಮಗೆ ಅವಶ್ಯವಿರುವಷ್ಟೇ, ನಿಮ್ಮ ಆರ್ಥಿಕ ಸಾಮರ್ಥ್ಯ ಅನುಸರಿಸಿಯೇ ಕೊಳ್ಳಿರಿ.
ನೆನಪಿರಲಿ, ದಂಪತಿಗಳ ನಡುವಿನ ಅನ್ಯೋನ್ಯತೆಯೇ ಈ ಜಗತ್ತಿನ ಅತ್ಯಂತ ದುಬಾರಿ ವಸ್ತುವಾಗಿದ್ದು, ಜಗತ್ತಿನ ಯಾವುದೇ ವಸ್ತು ಇದಕ್ಕೆ ಸಮವಲ್ಲ! ನಿಮ್ಮ ಅನ್ಯೋನ್ಯತೆಗೆ ಭಂಗವಾಗುವ ಯಾವುದೇ ವಸ್ತು ನಿಮಗೆ ಬೇಕಾಗಿಲ್ಲ!
3. ತುರ್ತು ಪರಿಸ್ಥಿತಿಗೊಂದು ನಿಧಿ ಇರಲಿ
ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಸಾರವಾಗಿ ಪುಟ್ಟದೇ ಆದರೂ ಸರಿ, ತುರ್ತು ಪರಿಸ್ಥಿತಿಗಾಗಿ ನಿಧಿಯೊಂದನ್ನು ಸ್ಥಾಪಿಸಿ. ಸಾಮಾನ್ಯವಾಗಿ, ಈ ನಿಧಿ ನಿಮ್ಮ ಆರು ತಿಂಗಳ ಸಾಮಾನ್ಯ ಮನೆ ಖರ್ಚುಗಳನ್ನು ಭರಿಸುವಷ್ಟಿರಬೇಕು.
4. ಕುಟುಂಬದ ಆರ್ಥಿಕ ಯೋಜನೆ ತಯಾರಿಸಿ
ನಿಮ್ಮ ಆದಾಯ-ಖರ್ಚುಗಳನ್ನೆಲ್ಲಾ ಪರಿಗಣಿಸಿ ನಿಮ್ಮದೇ ಆದ ಆರ್ಥಿಕ ಯೋಜನೆಯೊಂದನ್ನು ಸಿದ್ದಪಡಿಸಿ. ಇದರಲ್ಲಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಆರ್ಥಿಕ ಗುರಿಗಳಿರಲಿ ಹಾಗೂ ಇವುಗಳನ್ನು ಸಾಧಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಈಗಲೇ ಮಾರ್ಗಗಳನ್ನು ನಿಯೋಜಿಸಿ.
5. ನಿವೃತ್ತಿಗಾಗಿ ಇಂದಿನಿಂದಲೇ ಯೋಜನೆ ಪ್ರಾರಂಭಿಸಿ
ನಿವೃತ್ತಿಯ ಬಳಿಕ ನೀವು ನಿಮ್ಮದೇ ನಿಧಿಯನ್ನು ಅವಲಂಬಿಸಿ ಜೀವನ ಮುಂದುವರೆಸಲು ಸಾಧ್ಯವಾಗುವಂತೆ ನಿವೃತ್ತಿಗಾಗಿ ಯೋಜನೆಯೊಂದನ್ನು ಪ್ರಾರಂಭಿಸಿ. ಆರ್ಥಿಕ ತಜ್ಞರ ಪ್ರಕಾರ ಪ್ರತಿ ತಿಂಗಳೂ ನಿಮ್ಮ ಒಟ್ಟು ಆದಾಯದ ಕನಿಷ್ಟ 20%ರಷ್ಟು ಮೊತ್ತವನ್ನು ನಿವೃತ್ತಿಗಾಗಿ ಮೀಸಲಿರಿಸಿ.
6. ಹೂಡಿಕೆಯಲ್ಲಿ ಹಣ ತೊಡಗಿಸಿ
ಉತ್ತಮ ಉಳಿತಾಯ ಯೋಜನೆಗಳಾದ ಪಿಪಿಎಫ್, ಮ್ಯೂಚುವಲ್ ಫಂಡ್ ಮೊದಲಾದವುಗಳಲ್ಲಿ ನಿಯಮಿತವಾಗಿ ಹೂಡಿಕೆಯನ್ನು ಹೂಡಲು ಪ್ರಾರಂಭಿಸಿ.
7. ಜೀವ ವಿಮೆಯನ್ನು ಖರೀದಿಸಿ
ಉತ್ತಮವಾದ ವಿಮಾ ಯೋಜನೆಯೊಂದನ್ನು ಕಡ್ಡಾಯವಾಗಿ ಕೊಳ್ಳಿ. ಜಿವವಿಮೆ ಎಷ್ಟಿರಬೇಕು ಎಂದರೆ ಇದು ನಿಮ್ಮ ಆದಾಯವನ್ನು ಭರಿಸುವಂತಿರಬೇಕು. ಇದಕ್ಕಾಗಿ ಅತ್ಯುತ್ತಮ ಆಯ್ಕೆಯೆಂದರೆ ಅವಧಿ ವಿಮೆ (term plan).
8. ಆರೋಗ್ಯ ವಿಮೆಯನ್ನು ಖರೀದಿಸಿ
ಯಾವುದೇ ಕುಟುಂಬಕ್ಕೆ ಆರೋಗ್ಯ ವಿಮೆಯೊಂದು ಕಡ್ಡಾಯವಾಗಿದೆ. ನಿಮ್ಮ ವೈದ್ಯಕೀಯ ಅಗತ್ಯತೆಯನ್ನು ಆಧರಿಸಿ ನಿಮಗೆ ಸೂಕ್ತವಾಗುವ ವೈದ್ಯಕೀಯ ವಿಮೆಯನ್ನು ಖರೀದಿಸಿ. ಈ ವಿಮೆ ನಿಮ್ಮ ಉದ್ಯೋಗದಾತ ಸಂಸ್ಥೆ ಒದಗಿಸಿದ ವಿಮೆಗಿಂತಲೂ ಭಿನ್ನ ಹಾಗೂ ಇದಕ್ಕೂ ಹೆಚ್ಚಿನ ಸೌಲಭ್ಯ ನೀಡುವಂತಿರಬೇಕು.
9. ಸಾಲ ಮುಕ್ತರಾಗಿ
ಸಾಲ ಕೊಳ್ಳಲು ಬೇಕಾದಷ್ಟು ಪ್ರಚೋದನೆಗಳಿರುತ್ತವೆ. ಆದರೆ ಎಲ್ಲಿಯವರೆಗೆ ಜೀವ/ಮಾನ ಹೋಗುವಷ್ಟು ಅನಿವಾರ್ಯತೆ ಇರುವುದಿಲ್ಲವೋ ಅಲ್ಲಿಯವರೆಗೂ ಸಾಲ ಮಾಡದೇ ಇರುವುದು ಜಾಣರ ಲಕ್ಷಣ. ಸಾಮಾನ್ಯವಾಗಿ ನಮ್ಮ ಅಕ್ಕಪಕ್ಕದವರ ಖರ್ಚನ್ನು ನೋಡಿ ನಾವೂ ಹಿಂದೆ ಬೀಳಬಾರದೆಂದೇ ನಮ್ಮಲ್ಲಿ ಹೆಚ್ಚಿನವರು ಸಾಲ ಮಾಡಿಯಾದರೂ ಒಬ್ಬಟ್ಟು ತಿನ್ನುವ ಸಂಧಿಗ್ಧತೆಗೆ ಒಳಗಾಗುತ್ತಾರೆ. ಉದಾಹರಣೆಗೆ ವಿದೇಶ ಪ್ರವಾಸ, ಕ್ಲಬ್ ಒಂದರಲ್ಲಿ ಸದಸ್ಯತ್ವ ಇತ್ಯಾದಿ.
ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಬಳಸುವುತ್ತಿದ್ದರೆ ಇದನ್ನು ಸಮಯೋಚಿತವಾಗಿ ಬಳಸಿ ಹಾಗೂ ಎಲ್ಲಾ ಪಾವತಿಗಳನ್ನು ಕಡೆಯ ದಿನಾಂಕಕ್ಕೂ ಮುನ್ನವೇ ಪಾವತಿಸಿಬಿಡಿ.
10. ಮನೆಯನ್ನು ಕೊಳ್ಳಲು ಯೋಜನೆ ಹೂಡಿ
ಒಂದು ವೇಳೆ ನೀವು ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ನೀವು ನಿಮ್ಮದೇ ಸ್ವಂತ ಮನೆಯನ್ನು ಹೊಂದುವತ್ತ ಖಂಡಿತವಾಗಿಯೂ ಯೋಜನೆಯೊಂದನ್ನು ಹಮ್ಮಿಕೊಳ್ಳಬೇಕು. ಆದರೆ ಈ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು ಹಾಗೂ ಇದಕ್ಕಾಗಿ ಮನೆ ಸಾಲವನ್ನು ಪಡೆಯುವುದಾದರೆ ಇದರ ಪ್ರತಿ ತಿಂಗಳ ಕಂತು ನಿಮ್ಮ ಒಟ್ಟು ಆದಾಯದ 35%ಕ್ಕೆ ಮೀರಬಾರದು.
ಒಂದು ವೇಳೆ ದಂಪತಿಗಳಿಬ್ಬರೂ ಉದ್ಯೋಗಸ್ಥರಾಗಿದ್ದರೆ ಜಂಟಿ ಹೆಸರಿನಲ್ಲಿ ಮನೆಸಾಲವನ್ನು ಪಡೆಯಬೇಕು ಹಾಗೂ ಈ ಮೂಲಕ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆಯಬಹುದು.


Click it and Unblock the Notifications