For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳ ವಿಲೀನ ಹಿನ್ನೆಲೆಯಲ್ಲಿ ಗ್ರಾಹಕರು ಏನು ಮಾಡಬೇಕು?

ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಪ್ರಸ್ತಾವನೆಯನ್ನು ಸೆಪ್ಟೆಂಬರ್ ೧೭, ೨೦೧೮ ರಂದು ಕೇಂದ್ರ ಸರಕಾರ ಘೋಷಿಸಿದೆ.

|

ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಪ್ರಸ್ತಾವನೆಯನ್ನು ಸೆಪ್ಟೆಂಬರ್ 17, 2018 ರಂದು ಕೇಂದ್ರ ಸರಕಾರ ಘೋಷಿಸಿದೆ. ಸರಕಾರದ ಈ ದಿಢೀರ ಪ್ರಸ್ತಾವನೆಯಿಂದ ಗ್ರಾಹಕರು ಹಾಗೂ ಶೇರುದಾರರು ಆಶ್ಚರ್ಯಪಡುವಂತಾಗಿದೆ.

ಈ ವಿಲೀನದ ಕುರಿತು ಮಾತನಾಡಿದ ಕೇಂದ್ರ ವಿತ್ತ ಖಾತೆಯ ಹಣಕಾಸು ಸೇವೆಗಳ ವಿಭಾಗದ ಕಾರ್ಯದರ್ಶಿ ರಾಜೀವ ಕುಮಾರ, "ಮೂರು ಬ್ಯಾಂಕ್‌ಗಳ ವಿಲೀನದಿಂದ ಜಾಗತಿಕವಾಗಿ ಮೂರನೇ ಅತಿ ದೊಡ್ಡ ಏಕೈಕ ಬ್ಯಾಂಕ್ ಕಾರ್ಯಾರಂಭಿಸಲಿದೆ" ಎಂದು ಹೇಳಿದ್ದಾರೆ.
ಇದರ ಬಗ್ಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ವಿತ್ತ ಸಚಿವ ಅರುಣ ಜೇಟ್ಲಿ, "ಸರಕಾರದ ಪ್ರಸ್ತಾವನೆಯನ್ನು ಜಾರಿಗೊಳಿಸಲು ಆಯಾ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಮೊದಲು ಸಮ್ಮತಿಸಬೇಕು. ಶೀಘ್ರದಲ್ಲೇ ಈ ಬ್ಯಾಂಕುಗಳ ಆಡಳಿತ ಮಂಡಳಿಗಳ ಸಭೆ ನಡೆಯಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿವೆ." ಎಂದು ತಿಳಿಸಿದ್ದಾರೆ.
ಕಳೆದ 2017ರ ಏಪ್ರೀಲ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಐದು ಸಹವರ್ತಿ ಬ್ಯಾಂಕುಗಳು ಮಾತೃ ಸಂಸ್ಥೆಯೊಂದಿಗೆ ವಿಲೀನವಾಗಿದ್ದವು. ಇದು ಭಾರತದ ಬ್ಯಾಂಕಿಂಗ್ ಇತಿಹಾಸದ ಅತಿ ದೊಡ್ಡ ವಿಲೀನ ಪ್ರಕ್ರಿಯೆಯಾಗಿತ್ತು. ಈಗ ಮತ್ತೆ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಗೊಳಿಸುವ ಕೇಂದ್ರದ ನಿರ್ಧಾರ ಜಾಣತನದಿಂದ ಕೂಡಿದೆ ಎನ್ನಲಾಗಿದೆ. ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

ಆದರೆ ಈ ಮೂರು ಬ್ಯಾಂಕುಗಳ ವಿಲೀನದಿಂದ ಅದರ ಗ್ರಾಹಕರ ಮೇಲಾಗುವ ಪರಿಣಾಮಗಳೇನು ಹಾಗೂ ಅವರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು ಎಂಬುದನ್ನು ತಿಳಿಯುವುದು ಅವಶ್ಯ. ಈ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರು, ಸಾಲ ಪಡೆದವರು, ಠೇವಣಿ ಇಟ್ಟವರು ಹಾಗೂ ಇನ್ನಿತರ ವ್ಯವಹಾರ ಹೊಂದಿರುವವರು ಕೈಗೊಳ್ಳಬೇಕಾದ ಕ್ರಮಗಳು ಯಾವುವು ಎಂಬುದನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಆತಂಕ ಪಡುವ ಅಗತ್ಯವಿಲ್ಲ

ಆತಂಕ ಪಡುವ ಅಗತ್ಯವಿಲ್ಲ

ವಿಲೀನದಿಂದ ಗ್ರಾಹಕರ ಮೇಲಾಗುವ ಪರಿಣಾಮಗಳ ಬಗ್ಗೆ ಮಾತನಾಡಿದ ರೈಟ್ ಹೊರೈಜನ್ಸ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಅನೀಲ ರೇಗೊ, "ವಿಲೀನ ಆಗಲಿ ಅಥವಾ ಆಗದಿರಲಿ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಹಣ ಸಂಪೂರ್ಣ ಸುರಕ್ಷಿತವಾಗಿಯೇ ಇರುತ್ತದೆ. ಎಸ್‌ಬಿಐ ಹಾಗೂ ಸಹವರ್ತಿ ಬ್ಯಾಂಕುಗಳ ವಿಲೀನ ಸಂದರ್ಭದಲ್ಲಿ ಗ್ರಾಹಕರಿಗೆ ಯಾವುದೇ ದೊಡ್ಡ ಸಮಸ್ಯೆ ಆಗಲಿಲ್ಲ ಎಂಬುದನ್ನು ನಾವು ಗಮನಿಸಬೇಕು." ಎಂದು ಹೇಳಿದರು.
ಅದೇ ರೀತಿ ಎಸ್‌ವಿಸಿ ಕೋ ಆಪರೇಟಿವ್ ಬ್ಯಾಂಕ್ ಎಂಡಿ ಅಜೀತ ವೇಣುಗೋಪಾಲನ್ ಹೀಗೆ ಹೇಳಿದ್ದಾರೆ-
"ಎಲ್ಲ ಗ್ರಾಹಕರು ಮೊದಲು ವಿಲೀನ ಪ್ರಕ್ರಿಯೆಯ ಉದ್ದೇಶವನ್ನು ಮೊದಲು ಅರಿತುಕೊಳ್ಳಬೇಕು. ವಿಲೀನವು ಗ್ರಾಹಕರ ಹಿತಾಸಕ್ತಿಗೆ ಪೂರಕವಾಗಿದೆ, ಹಾಗೆಯೇ ದೇಶದ ಅರ್ಥ ವ್ಯವಸ್ಥೆಗೂ ಬಲ ನೀಡಲಿದೆ. ಹಾಗಾಗಿ ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿಲೀನ ಸಂದರ್ಭದಲ್ಲಿ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು."

ಹೊಸ ಬ್ಯಾಂಕ್‌ನ ಶುಲ್ಕ ಹಾಗೂ ಸೇವೆಗಳನ್ನು ಪರಿಶೀಲಿಸಿ

ಹೊಸ ಬ್ಯಾಂಕ್‌ನ ಶುಲ್ಕ ಹಾಗೂ ಸೇವೆಗಳನ್ನು ಪರಿಶೀಲಿಸಿ

ಬ್ಯಾಂಕುಗಳು ವಿಲೀನವಾದ ನಂತರ ಜಾರಿಗೆ ಬರುವ ಹೊಸ ಬ್ಯಾಂಕ್ ನೀಡುವ ಶುಲ್ಕ ಸಹಿತ ಹಾಗೂ ಶುಲ್ಕ ರಹಿತ ಸೇವೆಗಳು, ಠೇವಣಿ ಹಾಗೂ ಸಾಲದ ಬಡ್ಡಿ ದರ ಮುಂತಾದುವುಗಳ ಬಗ್ಗೆ ಗ್ರಾಹಕರು ಕೂಲಂಕುಶವಾಗಿ ಮಾಹಿತಿ ಪಡೆದುಕೊಳ್ಳಬೇಕು.
ಈ ಬಗ್ಗೆ ವೇಣುಗೋಪಾಲನ್ ಅವರು ಹೇಳುವ ಪ್ರಕಾರ, "ಸಾಮಾನ್ಯ ಶುಲ್ಕಗಳಾದ ಮಿನಿಮಮ್ ಬ್ಯಾಲೆನ್ಸ್ ಅಥವಾ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಗಳು ವಿಲೀನದ ನಂತರವೂ ಮುಂಚಿನಂತೆಯೇ ಮುಂದುವರಿಯಬಹುದು. ಆದಾಗ್ಯೂ ಹೊಸ ಬ್ಯಾಂಕಿನ ನಿರ್ಧಾಗಳನ್ವಯ ಈ ಸೇವಾ ಶುಲ್ಕಗಳು ಕಾಲಕ್ರಮೇಣ ಬದಲಾಗಬಹುದು."

ಅಂದರೆ ಹೊಸ ಬ್ಯಾಂಕ್ ಜಾರಿಗೆ ಬಂದ ನಂತರ ನೀವು ಯಾವುದಾದರೂ ಹೊಸ ಸೇವೆಗಳನ್ನು ಪಡೆಯಬಯಸುವಿರಾದರೆ ಬದಲಾದ ಶುಲ್ಕಗಳನ್ನು ನೀಡಬೇಕಾಗಬಹುದು.

ವದಂತಿಗಳಿಗೆ ಕಿವಿಗೊಡಬೇಡಿ

ವದಂತಿಗಳಿಗೆ ಕಿವಿಗೊಡಬೇಡಿ

ವಿಲೀನ ಕುರಿತು ಆಯಾ ಬ್ಯಾಂಕುಗಳ ಆಡಳಿತ ಮಂಡಳಿಗಳು ಒಪ್ಪಿಗೆ ನೀಡಿದ ನಂತರ ಈ ನಿರ್ಧಾರವನ್ನು ಅಧಿಕೃತವಾಗಿ ಗ್ರಾಹಕರಿಗೆ ತಿಳಿಸಲಾಗುವುದು. ಗ್ರಾಹಕರ ಚಾಲ್ತಿ ಖಾತೆ, ಉಳಿತಾಯ ಖಾತೆ, ಲಾಕರ್ ಸೌಲಭ್ಯ, ಠೇವಣಿ, ಸಾಲ ಖಾತೆ ಮುಂತಾದುವುಗಳ ನಿರ್ವಹಣೆಯ ಕುರಿತು ಇಮೇಲ್, ಪತ್ರಗಳ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ. ಇಂಥ ಮೇಲ್ ಹಾಗೂ ಪತ್ರಗಳ ಮೇಲೆ ನಿಗಾ ಇಟ್ಟು ಪರಿಶೀಲಿಸಿ.

ಇಂಥ ಬದಲಾವಣೆಯ ಸಂದರ್ಭದ ದುರುಪಯೋಗ ಪಡೆದು ಗ್ರಾಹಕರನ್ನು ವಂಚಿಸಲು ಕೆಲವರು ಯತ್ನಿಸಬಹುದು. ನಕಲಿ ಇಮೇಲ್‌ಗಳ ಮೂಲಕ ನಿಮ್ಮ ಮಾಹಿತಿಯನ್ನು ವಂಚಕರು ಕೇಳಬಹುದು. ಗ್ರಾಹಕರು ಇಂಥ ಯಾವುದೇ ಇಮೇಲ್‌ಗಳಿಗೆ ಉತ್ತರಿಸಕೂಡದು. ಒಂದು ವೇಳೆ ಯಾವುದೋ ಇಮೇಲ್ ಉತ್ತರಿಸುವ ಅನಿವಾರ್ಯತೆ ಕಂಡುಬಂದಲ್ಲಿ ಮೊದಲು ನೇರವಾಗಿ ಬ್ಯಾಂಕಿಗೆ ಹೋಗಿ ಇಮೇಲ್‌ನ ಸತ್ಯಾಸತ್ಯತೆಯನ್ನು ಖಾತರಿಪಡಿಸಿಕೊಳ್ಳಿ.

ಸಾಲ ಖಾತೆ ಹಾಗೂ ಠೇವಣಿಯ ಬಡ್ಡಿದರ ಬದಲಾವಣೆ ಪರಿಶೀಲಿಸಿ

ಸಾಲ ಖಾತೆ ಹಾಗೂ ಠೇವಣಿಯ ಬಡ್ಡಿದರ ಬದಲಾವಣೆ ಪರಿಶೀಲಿಸಿ

"ಪ್ರಸ್ತುತ ನೀವು ಸಾಲ ಖಾತೆ ಹೊಂದಿದ್ದರೆ ಹೊಸ ಬ್ಯಾಂಕ್ ಜಾರಿಯಾದ ನಂತರ ಬಡ್ಡಿದರಗಳು ಬದಲಾವಣೆ ಆಗಬಹುದು. ಹೊಸ ಬ್ಯಾಂಕಿನ ಮೂಲ ದರಗಳ ಅನ್ವಯ ಈ ಬದಲಾವಣೆಗಳನ್ನು ಮಾಡಲಾಗುತ್ತದೆ" ಎಂದು ಎಚ್ಚರಿಸುತ್ತಾರೆ ವೇಣುಗೋಪಾಲನ್.
ಆದಾಗ್ಯೂ ಬಡ್ಡಿದರ ಬದಲಾವಣೆ ಮಾಡುವುದೇ ಆದಲ್ಲಿ ಬ್ಯಾಂಕುಗಳು ಸಾಕಷ್ಟು ಸಮಯ ಮೊದಲೇ ಗ್ರಾಹಕರಿಗೆ ತಿಳಿಸುತ್ತವೆ. ಹೀಗಾಗಿ ಮುಂಚಿನ ಬಡ್ಡಿದರಗಳನ್ನೇ ಮುಂದುವರಿಸುವಂತೆ ಹೊಸ ಬ್ಯಾಂಕಿಗೆ ಗ್ರಾಹಕರು ಬೇಡಿಕೆ ಇಡಬಹುದು. ಆದರೂ ಇದರ ಬಗ್ಗೆ ಅಂತಿಮ ನಿರ್ಧಾರ ಬ್ಯಾಂಕಿನದೇ ಆಗಿರುತ್ತದೆ ಎನ್ನುತ್ತಾರೆ ಅವರು.

ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಪರಿಶೀಲಿಸಿ

ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಪರಿಶೀಲಿಸಿ

ವಿಲೀನದ ನಂತರ ನೀವು ಬಳಸುತ್ತಿದ್ದ ಐಎಫ್‌ಎಸ್‌ಸಿ ಕೋಡ್ ಹಾಗೂ ಖಾತೆ ಸಂಖ್ಯೆಗಳು ಬದಲಾವಣೆಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಇವುಗಳನ್ನು ಬಳಸುವಾಗ ಹೊಸ ಸಂಖ್ಯೆಗಳನ್ನೇ ಬಳಸಬೇಕಾಗುತ್ತದೆ. ಇವುಗಳನ್ನು ಬದಲಿಸುವ ಮುಂಚೆ ಸಾಕಷ್ಟು ಮುಂಚೆಯೇ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ.
ಇನ್ನು ಇಂಟರನೆಟ್ ಬ್ಯಾಂಕಿಂಗ್ ವ್ಯವಸ್ಥೆ ಸಹ ಬದಲಾವಣೆಯಾಗುತ್ತದೆ. ಈ ಬಗ್ಗೆ ವೇಣುಗೋಪಾಲನ್ ಅವರು ಹೇಳುವುದು ಹೀಗೆ-
"ವಿಲೀನದ ನಂತರ ಮುಂಚೆ ಇದ್ದ ಬ್ಯಾಂಕ್ ಪೋರ್ಟಲ್‌ಗಳು ಬಂದ್ ಆಗಬಹುದು. ಆನ್‌ಲೈನ್ ಲಾಗಿನ್ ಮಾಡುವ ಸಂದರ್ಭದಲ್ಲಿ ಹೊಸ ಬ್ಯಾಂಕಿನ ಪೋರ್ಟಲ್‌ಗೆ ರಿಡೈರೆಕ್ಟ್ ಮಾಡಲಾಗುವುದು.
ಹೊಸ ಬ್ಯಾಂಕ್ ಯಾವುದೇ ಬದಲಾವಣೆ ಮಾಡದಿದ್ದರೆ ನಿಮ್ಮ ಹಳೆಯ ಯೂಸರ್ ನೇಮ್ ಹಾಗೂ ಪಾಸವರ್ಡ್‌ಗಳನ್ನೇ ಬಳಸಿ ಆನ್‌ಲೈನ್ ವ್ಯವಹಾರ ಮಾಡಬಹುದು."

ಆದರೆ ಈ ಸಂದರ್ಭದಲ್ಲಿ ಗ್ರಾಹಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಒಂದೊಮ್ಮೆ ಹೊಸ ಪೋರ್ಟಲ್‌ಗೆ ರಿಡೈರೆಕ್ಟ್ ಆಗುತ್ತಿದ್ದಲ್ಲಿ, ಆ ಪೋರ್ಟಲ್ ಬ್ಯಾಂಕಿನ ಅಸಲಿ ಪೋರ್ಟಲ್ ಆಗಿದೆಯಾ ಅಥವಾ ಅದನ್ನೇ ಹೋಲುವ ಫಿಶಿಂಗ್ ವೆಬ್‌ಸೈಟ್ ಆಗಿದೆಯಾ ಎಂಬುದನ್ನು ಖಂಡಿತವಾಗಿಯೂ ಪರಿಶೀಲಿಸಬೇಕು.

ಬಂದ್ ಆದ ಶಾಖೆ, ಎಟಿಎಂಗಳ ಮಾಹಿತಿ ಪಡೆದುಕೊಳ್ಳಿ

ಬಂದ್ ಆದ ಶಾಖೆ, ಎಟಿಎಂಗಳ ಮಾಹಿತಿ ಪಡೆದುಕೊಳ್ಳಿ

ಎನ್.ಎ. ಶಾಹ ಅಸೋಸಿಯೇಟ್ಸ್ ಎಲ್‌ಎಲ್‌ಪಿ ಸಂಸ್ಥೆಯ ಪಾರ್ಟನರ್ ಸಂದೀಪ ಶಾಹ ಹೀಗೆ ಹೇಳುತ್ತಾರೆ-
"ವಿಲೀನದ ಪ್ರಕ್ರಿಯೆಯಿಂದ ಹತ್ತಿರದಲ್ಲೇ ಇರಬಹುದಾದ ಬೇರೆ ಬೇರೆ ಬ್ಯಾಂಕಿನ ಕೆಲ ಶಾಖೆಗಳು ಮುಚ್ಚಿಹೋಗಬಹುದು. ಇದರಿಂದ ಲಾಕರ್ ಸೌಲಭ್ಯದ ಸಮಸ್ಯೆ ಉಂಟಾಗಬಹುದು. ಅದೇ ರೀತಿ ಕೆಲ ಎಟಿಎಂಗಳು ಸ್ಥಾನಪಲ್ಲಟಗೊಳ್ಳಬಹುದು. ಗ್ರಾಹಕರು ಈ ಕುರಿತು ಬ್ಯಾಂಕಿನಿಂದ ಮಾಹಿತಿ ಪಡೆದುಕೊಳ್ಳಬೇಕು."

ಖಾತೆ ಮುಚ್ಚಲು, ಠೇವಣಿ ಹಿಂಪಡೆಯಲು ಮುಂದಾಗಬೇಡಿ

ಖಾತೆ ಮುಚ್ಚಲು, ಠೇವಣಿ ಹಿಂಪಡೆಯಲು ಮುಂದಾಗಬೇಡಿ

ಭಾರಿ ನಷ್ಟ ಹಾಗೂ ಮರಳಿ ಬಾರದ ಸಾಲದ ಕಾರಣದಿಂದ ಬ್ಯಾಂಕುಗಳು ವಿಲೀನವಾಗುತ್ತಿದ್ದು, ಇನ್ನು ಅವು ಯಾವುದೇ ಸೇವೆ ನೀಡಲಾರವು ಅಥವಾ ಮುಚ್ಚಿ ಹೋಗುತ್ತಿವೆ ಎಂದು ಕೆಲವರು ವದಂತಿ ಹಬ್ಬಿಸುತ್ತಾರೆ. ಇದರಿಂದ ಅನೇಕ ಗ್ರಾಹಕರು ಆತಂಕಕ್ಕೊಳಗಾಗುತ್ತಾರೆ. ತಮ್ಮ ಖಾತೆ ಬಂದ್ ಮಾಡಲು ಅಥವಾ ಇಟ್ಟ ಠೇವಣಿಯನ್ನು ಮರಳಿ ಪಡೆಯಲು ಸಹ ಕೆಲವರು ಬ್ಯಾಂಕಿಗೆ ಧಾವಿಸುತ್ತಾರೆ. ಆದರೆ ವಿಲೀನದಿಂದ ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆ ಆಗುವುದಿಲ್ಲ ಹಾಗೂ ಗ್ರಾಹಕರಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು.

ಈ ಬಗ್ಗೆ ವೇಣುಗೋಪಾಲನ್ ಹೇಳುವುದು ಹೀಗೆ-
"ವಿಲೀನದ ನಂತರ ಜಾರಿಗೆ ಬರುವ ಹೊಸ ಬ್ಯಾಂಕ್ ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆಗಳನ್ನು ನೀಡಲಿದೆ ಎಂದು ಆಶಿಸಲಾಗಿದೆ. ಹೊಸ ಬ್ಯಾಂಕಿನೊಂದಿಗೆ ಮುಂದುವರಿಯಬೇಕಾ ಅಥವಾ ಬೇಡವಾ ಎಂಬುದನ್ನು ನಂತರದ ದಿನಗಳಲ್ಲಿ ಗ್ರಾಹಕರೇ ನಿರ್ಧರಿಸಬೇಕು. ಬ್ಯಾಂಕಿಂಗ್ ಸೇವೆಗಳು, ಗ್ರಾಹಕ ಸೇವೆ, ಮೂಲಭೂತ ಬ್ಯಾಂಕಿಂಗ್ ಸೌಕರ್ಯ ಮುಂತಾದುವುಗಳ ಆಧಾರದಲ್ಲಿ ಗ್ರಾಹಕರು ನಿರ್ಧರಿಸಬಹುದು. ಆದರೆ ಬ್ಯಾಂಕಿನ ಹೆಸರು, ಚಿನ್ಹೆ ಬದಲಾಗಿದೆ ಎಂಬ ಒಂದೇ ಕಾರಣ ಮುಂದಿಟ್ಟುಕೊಂಡು ಯಾವುದೇ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ."

ಕೊನೆ ಮಾತು

ಕೊನೆ ಮಾತು

ಪ್ರಸ್ತುತ ದೇಶದ ಪ್ರಮುಖ ಮೂರು ಬ್ಯಾಂಕ್‌ಗಳ ವಿಲೀನ ಪ್ರಸ್ತಾವನೆಯನ್ನು ಸರಕಾರ ಮುಂದಿಟ್ಟಿದೆ. ಈ ಸಂದರ್ಭದಲ್ಲಿ ಆಯಾ ಬ್ಯಾಂಕುಗಳ ಗ್ರಾಹಕರಾಗಲಿ ಅಥವಾ ಶೇರುದಾರರಾಗಲಿ ಅನವಶ್ಯಕ ಚಿಂತೆ ಮಾಡುವುದು ಬೇಕಿಲ್ಲ. ಎಲ್ಲರ ಹಣ ಈಗಲೂ ಸುರಕ್ಷಿತವಾಗಿದೆ. ಕೆಲ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾತ್ರ ಗಮನಿಸಬೇಕಾಗುತ್ತದೆ. ಒಟ್ಟಾರೆಯಾಗಿ ಗ್ರಾಹಕರ ಹಿತದೃಷ್ಟಿಯಿಂದಲೇ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

Read more about: money banking finance news sbi
English summary

7 steps a customer should take as govt merges PSU banks

The central government proposed to merge three PSU banks — Bank of Baroda, Dena Bank and Vijaya Bank. The news came as a surprise to stakeholders.
Story first published: Saturday, September 29, 2018, 10:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X