ಈ ದೀಪಾವಳಿ ಧನಲಾಭ ತರಲಿ.. ದೀಪಾವಳಿ ಹಬ್ಬದಂದು ಹೂಡಿಕೆ ಯೋಜನೆ ಏಕೆ ಆರಂಭಿಸಬೇಕು?

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಜ್ಞಾನ ಹಾಗೂ ಸಮೃದ್ಧಿಯ ಸಂಕೇತ ಬೆಳಕಿನ ಹಬ್ಬ ದೀಪಾವಳಿ ನಮ್ಮೆಲ್ಲರ ಬಾಳಿನಲ್ಲಿ ಹೊಸ ನಿರೀಕ್ಷೆ ಹಾಗೂ ಉತ್ತಮ ಜೀವನವನ್ನು ತರುವ ವಿಶಿಷ್ಟ ಆಚರಣೆಯಾಗಿದೆ. ಐಶ್ವರ್ಯದ ಅಧಿದೇವತೆ ಸಾಕ್ಷಾತ್ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳುವ ಹಬ್ಬ ದೀಪಾವಳಿಯಾಗಿದೆ. ಹೀಗಾಗಿ ದೀಪಾವಳಿಯ ಶುಭ ಸಂದರ್ಭದಲ್ಲಿ ಹೊಸ ಚಿನ್ನಾಭರಣ, ವಾಹನ, ಮನೆ ಅಥವಾ ಮನೆಗೆ ಬೇಕಾಗುವ ಹೊಸ ವಸ್ತುಗಳನ್ನು ಖರೀದಿಸುವುದು ಭಾರತೀಯರ ಸಂಪ್ರದಾಯವಾಗಿದೆ. ಬಹುತೇಕ ದೊಡ್ಡ ಕಂಪನಿಗಳು ವಸ್ತುಗಳ ಖರೀದಿಗೆ ಇನ್ನಿಲ್ಲದ ಆಫರ್‌ಗಳನ್ನು ನೀಡುವುದರಿಂದ ನಮ್ಮ ಖರೀದಿಯ ಭರಾಟೆ ಮತ್ತೂ ಜೋರಾಗುತ್ತದೆ.

  ದೀಪಾವಳಿಯ ಶುಭ ಸಂದರ್ಭದಲ್ಲಿ ಖರೀದಿ ಮಾಡುವುದು ತಪ್ಪೇನೂ ಅಲ್ಲ. ಆದರೆ ಯಾವುದೋ ಆಫರ್‌ಗಳು ಅಥವಾ ಇನ್ನಾವುದೋ ಆಮಿಷಕ್ಕೆ ಬಲಿಯಾಗಿ ಹಿಂದೆ ಮುಂದೆ ವಿಚಾರಿಸದೆ ಖರ್ಚು ಮಾಡುವುದು ಮಾತ್ರ ಸರಿಯಲ್ಲ. ಇದು ಬರುವ ದಿನಗಳಲ್ಲಿ ಇಡೀ ಹಣಕಾಸು ಬಜೆಟ್ ಅನ್ನು ಏರುಪೇರು ಮಾಡಬಹುದು. ಹಬ್ಬದ ಸಂದರ್ಭದಲ್ಲಿ ಖರ್ಚು ಮಾಡುವಾಗ ಸಹ ಒಂದು ನಿರ್ದಿಷ್ಟ ಹಣಕಾಸು ಯೋಜನೆ ಹಾಕಿಕೊಂಡೇ ಖರೀದಿ ಮಾಡುವುದು ಜಾಣತನವಾಗಿದೆ.  ಆದರೆ ಬರೀ ವಸ್ತುಗಳ ಖರೀದಿಯೇ ಹಬ್ಬವಲ್ಲ. ಕಡಿಮೆ ಖರ್ಚಿನಲ್ಲೇ ಅದ್ದೂರಿ ವೈಭವದ ದೀಪಾವಳಿ ಆಚರಣೆ ಮಾಡೋದು ಹೇಗೆ?

  ದೀಪಾವಳಿ ಹಬ್ಬ ಧನಸಂಪತ್ತು ತರುವಂತಾಗಲಿ..

  ಮುಂದಿನ ಜೀವನಕ್ಕಾಗಿ ಹಣಕಾಸಿನ ಉಳಿತಾಯ ಯೋಜನೆಗಳನ್ನು ಸಹ ನಾವು ಹಬ್ಬದ ಸಂದರ್ಭಗಳಲ್ಲಿ ಆರಂಭಿಸಬೇಕಾಗುತ್ತದೆ. ಮ್ಯೂಚುವಲ್ ಫಂಡ್, ಐಪಿಓ, ಇಕ್ವಿಟಿ ಹೀಗೆ ನಿಮಗೆ ಸರಿಹೊಂದುವ ಉಳಿತಾಯ ಯೋಜನೆಗಳನ್ನು ಸಹ ದೀಪಾವಳಿಯ ಶುಭ ಸಂದರ್ಭದಲ್ಲಿ ಆರಂಭಿಸಿ ನಿಜವಾದ ಅರ್ಥದಲ್ಲಿ ಜೀವನದಲ್ಲಿ ಐಶ್ವರ್ಯ ಬರುವಂತೆ ಮಾಡುವುದು ಅಗತ್ಯವಾಗಿದೆ. ಸೂಕ್ತ ಹೂಡಿಕೆಗಳ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೀವೂ ನೋಡಿ.

  ದೀಪಾವಳಿ ಸಂದರ್ಭದಲ್ಲಿ ಹೂಡಿಕೆ ಆರಂಭಿಸುವಿಕೆ
  ದೀಪಾವಳಿಗಾಗಿ ನಾವು ವಸ್ತುಗಳ ಖರೀದಿಗೆ ಮನಸು ಬಿಚ್ಚಿ ಖರ್ಚು ಮಾಡುತ್ತೇವೆ. ಆದರೆ ಒಂದು ನಿಮಿಷ ವಿಚಾರಿಸಿ ನೋಡಿದರೆ, ಸ್ವಲ್ಪ ಖರ್ಚು ಕಡಿಮೆ ಮಾಡಿ ಅದೇ ಹಣವನ್ನು ಒಳ್ಳೆಯ ಹೂಡಿಕೆ ಯೋಜನೆಗಳಲ್ಲಿ ಹಾಕಿದರೆ ಭವಿಷ್ಯದ ದಿನಗಳಲ್ಲಿ ಐಶ್ವರ್ಯ ನಮ್ಮದಾಗುವುದು ಎಂಬುದು ನಮ್ಮ ಗಮನಕ್ಕೆ ಬರುತ್ತದೆ.
  ಹಾಗಂತ ದೀಪಾವಳಿಗೆ ಖರ್ಚು ಮಾಡುವುದು ಬೇಡ ಅಂತಲ್ಲ. ಹಬ್ಬ ಜೋರಾಗಿಯೇ ಇರಲಿ. ಆದರೂ ಖರ್ಚಿನಲ್ಲಿ ಒಂದು ಭಾಗವನ್ನು ಹೂಡಿಕೆಗೆ ಮೀಸಲಿಟ್ಟು ಭವಿಷ್ಯದ ಜೀವನ ಬೆಳಕಾಗುವಂತೆ ದೀಪಾವಳಿ ಆಚರಿಸೋಣ. ಇದು ಇಂದಿನ ಅಗತ್ಯವೂ ಆಗಿದೆ.

  ದೀಪಾವಳಿ ಹಬ್ಬದಂದು ಹೂಡಿಕೆ ಯೋಜನೆ ಏಕೆ ಆರಂಭಿಸಬೇಕು?

  ದೀಪಾವಳಿ ಸಂದರ್ಭದಲ್ಲಿ ಚಿನ್ನಾಭರಣ ಕೊಳ್ಳುವುದು ಅತ್ಯಂತ ಸಾಮಾನ್ಯವಾಗಿದೆ. ಇದೂ ಸಹ ಒಂದು ರೀತಿಯ ಹೂಡಿಕೆಯೇ ಹೌದು. ಆದರೆ ಇದರ ಬದಲಾಗಿ ಬೇರೆ ರೀತಿಯ ದೀರ್ಘಾವಧಿ ಯೋಜನೆಗಳಲ್ಲಿ ಹೂಡಿಕೆ ಮಾಡಿದಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಪ್ರತಿಫಲ ಪಡೆಯಬಹುದು ಅಲ್ಲವೆ? ಒಬ್ಬ ಹೂಡಿಕೆದಾರನಾಗಿ ಯೋಚನೆ ಮಾಡಿದಲ್ಲಿ ಇದರ ಉತ್ತಮ ಅಂಶಗಳು ನಿಮಗೆ ಮನದಟ್ಟಾಗುತ್ತವೆ.
  ದೀಪಾವಳಿಯ ಸೇಲ್ ಆಫರ್‌ಗಳು ಹಾಗೂ ಕಂಪನಿಗಳ ಮಾರಾಟ ತಂತ್ರಗಳ ಬಗ್ಗೆ ಒಂಚೂರು ತಿಳಿಯೋಣ. ದೀಪಾವಳಿ ಬರುತ್ತಿದ್ದಂತೆಯೇ ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಹಲವಾರು ರೀತಿಯ ಆಫರ್‌ಗಳನ್ನು ಘೋಷಿಸುತ್ತವೆ. ಹಬ್ಬದ ಸಂದರ್ಭದಲ್ಲಿ ಸಹಜವಾಗಿಯೇ ಖರೀದಿಗಳು ಹೆಚ್ಚಾಗುವುದರಿಂದ ಆ ಕಂಪನಿಗಳ ಬಂಡವಾಳ ಮೌಲ್ಯವೂ ಹೆಚ್ಚಾಗುತ್ತದೆ. ಇಂಥ ಸಂದರ್ಭಗಳಲ್ಲಿ ಆ ಕಂಪನಿಗಳ ಶೇರುಗಳಲ್ಲಿ ನೀವು ಹೂಡಿಕೆ ಮಾಡಿದಲ್ಲಿ ಕಡಿಮೆ ಸಮಯದಲ್ಲಿ ಸಾಕಷ್ಟು ಆದಾಯ ಪಡೆಯಬಹುದು. ಇದಕ್ಕಾಗಿ ನಿಮ್ಮೆಲ್ಲ ಹಣವನ್ನೂ ವಿನಿಯೋಗಿಸುವುದು ಬೇಕಿಲ್ಲ. ಕೆಲ ಮೊತ್ತವನ್ನು ಹೂಡಿಕೆ ಮಾಡಿದರೂ ಸಾಕು.

  ದೀಪಾವಳಿಗಾಗಿ ಉತ್ತಮ ಹೂಡಿಕೆ ವಿಧಾನಗಳು

  ಹಬ್ಬದ ಸಂದರ್ಭದಲ್ಲಿ ಹೂಡಿಕೆ ಆರಂಭಿಸಲು ದೊಡ್ಡ ಮೊತ್ತದ ಹಣ ಬೇಕೆಂದೇನೂ ಇಲ್ಲ. ಚಿಕ್ಕದಾಗಿಯೇ ಹೂಡಿಕೆ ಆರಂಭಿಸಬಹುದು. ಬರುವ ತಿಂಗಳಿನಿಂದ ಪ್ರತಿತಿಂಗಳು ಇಕ್ವಿಟಿ ಮ್ಯೂಚುವಲ್ ಫಂಡಗಳಲ್ಲಿ ಹೂಡಿಕೆ ಆರಂಭಿಸಬಹುದು. ಸುಮಾರು ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಿ ನಂತರ ನಿಲ್ಲಿಸಬಹುದು.
  ಮ್ಯೂಚುವಲ್ ಫಂಡಗಳು ಸಾಮಾನ್ಯವಾಗಿ ಉತ್ತಮ ಆದಾಯವನ್ನೇ ತಂದು ಕೊಟ್ಟಿವೆ ಎಂಬುದು ವಾಸ್ತವವಾಗಿದೆ. ನಿಮ್ಮ ಹೂಡಿಕೆ ಸಾಮರ್ಥ್ಯ ಹಾಗೂ ರಿಸ್ಕ್ ಅಂಶಗಳನ್ನು ಆಧರಿಸಿ ಸೂಕ್ತವಾಗಿ ಹೂಡಿಕೆ ಮಾಡಿದಲ್ಲಿ ನಿಶ್ಚಿಂತೆಯಿಂದ ಉತ್ತಮ ಪ್ರತಿಫಲ ನಿಮ್ಮದಾಗುತ್ತದೆ.

  ಚಿನ್ನದ ಯೋಜನೆಗಳಲ್ಲಿ ಹೂಡಿಕೆ ಮಾಡಿ

  ಬಹು ಪುರಾತನ ಕಾಲದಿಂದಲೂ ಚಿನ್ನ ಭಾರತೀಯರಿಗೆ ಅತಿ ಅಚ್ಚು ಮೆಚ್ಚಿನ ವಸ್ತುವಾಗಿದೆ. ಇದು ಅತ್ಯಂತ ಸುರಕ್ಷಿತ ಹೂಡಿಕೆ ವಿಧಾನವೂ ಆಗಿದೆ. ಹಣಕಾಸು ತಜ್ಞ ಜೆಫ್ರಿ ಎ. ಫ್ರಾಂಕ್ಸ್ ಹೇಳುವ ಪ್ರಕಾರ ಚಿನ್ನದಲ್ಲಿ ಹೂಡಿಕೆ ಮಾಡಿದ್ದರಿಂದ ಇತಿಹಾಸದ ಅನೇಕ ಸಂದರ್ಭಗಳಲ್ಲಿ ಭಾರತೀಯರಿಂದ ಫ್ರಾನ್ಸ್‌ವರೆಗಿನ ಜನತೆ ಹಣದುಬ್ಬರದ ಸಂಕಷ್ಟಗಳಿಂದ ಪಾರಾಗಿದ್ದಾರೆ.
  ನಿಮ್ಮ ಮಕ್ಕಳ ಮದುವೆಗಾಗಿ ನೀವು ಚಿನ್ನವನ್ನು ಖರೀದಿಸುತ್ತಿಲ್ಲ ಎಂದಾದಲ್ಲಿ ನೀವು ಗೋಲ್ಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸೂಕ್ತವಾಗಿದೆ.

  ಮ್ಯೂಚುವಲ್ ಫಂಡ್‌ಗಳಲ್ಲಿ ಏಕೆ ಹೂಡಿಕೆ ಮಾಡಬೇಕು?

  - ರಿಸ್ಕ್ ನಿರ್ವಹಣೆ ಸುಲಭ
  ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯಿಂದ ರಿಸ್ಕ್ ಅನ್ನು ಸರಳವಾಗಿ ನಿಭಾಯಿಸಬಹುದು. ವೈವಿಧ್ಯತೆಯ ಹೂಡಿಕೆಗಳ ವಿಧಾನದಿಂದ ಮ್ಯೂಚುವಲ್ ಫಂಡ್‌ಗಳು ಹೂಡಿಕೆಯ ಸುರಕ್ಷಿತ ಸಾಧನಗಳಾಗಿವೆ.

  - ಸಣ್ಣ ಮೊತ್ತದ ಬಂಡವಾಳ ಸಾಕು
  ನೀವು ನೇರವಾಗಿ ಶೇರು ಹಾಗೂ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಬಯಸಿದರೆ ದೊಡ್ಡ ಮೊತ್ತದ ಬಂಡವಾಳ ಬೇಕಾಗುತ್ತದೆ. ಆದರೆ ಹಲವಾರು ಜನರ ಹಣವನ್ನು ಸಂಗ್ರಹಿಸಿ ಒಟ್ಟಾಗಿ ಹೂಡಿಕೆ ಮಾಡುವ ಮೂಲಕ ಲಾಭ ತಂದುಕೊಂಡುವ ಮ್ಯೂಚುವಲ್ ಫಂಡ್‌ಗಳು ಅತ್ಯಂತ ಉತ್ತಮ ಹೂಡಿಕೆ ಯೋಜನೆಗಳಾಗಿವೆ. ಹೀಗಾಗಿ ಚಿಕ್ಕ ಮೊತ್ತದ ಬಂಡವಾಳ ಇದ್ದರೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

  - ನೀವು ಹೂಡಿಕೆ ಪರಿಣಿತರಾಗಿರಬೇಕಿಲ್ಲ
  ನುರಿತ ಹಣಕಾಸು ತಜ್ಞರು ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಗಳನ್ನು ನಿರ್ವಹಣೆ ಮಾಡುವುದರಿಂದ ನೀವು ಸ್ವತಃ ಹೂಡಿಕೆಯ ಪರಿಣಿತರಾಗಿರುವ ಅವಶ್ಯಕತೆ ಇಲ್ಲ. ಯಾವುದೇ ಹೂಡಿಕೆ ಮಾಡುವ ಮುನ್ನ ಫಂಡ್ ಮ್ಯಾನೇಜರ್‌ಗಳು ಹಾಗೂ ಹಣಕಾಸು ತಜ್ಞರು ಎಲ್ಲ ರೀತಿಯ ಸಾಧಕ ಬಾಧಕಗಳನ್ನು ವಿಚಾರ ಮಾಡುತ್ತಾರೆ. ಅಂದರೆ ನಿಮ್ಮ ಹಣದ ಹೂಡಿಕೆ ಅಷ್ಟರ ಮಟ್ಟಿಗೆ ಸುರಕ್ಷಿತವಾಗಿರುತ್ತದೆ. ಯಾವ ಶೇರು ಅಥವಾ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿ ಉತ್ತಮ ಪ್ರತಿಫಲ ಪಡೆಯುವುದು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಹೀಗಾಗಿ ಪ್ರತಿದಿನ ಶೇರು ಮಾರುಕಟ್ಟೆ ಏನಾಗುತ್ತಿದೆ ಎಂಬುದರ ಬಗ್ಗೆ ನೀವು ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಆದರೆ ನೀವೇ ನೇರವಾಗಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದಾದರೆ ರಿಸ್ಕ್ ಜಾಸ್ತಿ ಇರುತ್ತದೆ ಎಂಬುದು ಗೊತ್ತಿರಲಿ.

  - ಹೂಡಿಕೆಯಲ್ಲಿ ವೈವಿಧ್ಯತೆ
  ಎಲ್ಲರಿಗೂ ಸರಿಹೊಂದುವಂತಹ ಹೂಡಿಕೆ ವಿಧಾನಗಳು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಲಭ್ಯವಿವೆ. ಆಯಾ ವ್ಯಕ್ತಿಯ ಹಣಕಾಸು ಪರಿಸ್ಥಿತಿ ಹಾಗೂ ರಿಸ್ಕ್ ತಡೆಯುವ ಸಾಮರ್ಥ್ಯದ ಆಧಾರದಲ್ಲಿ ಸೂಕ್ತವಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದರಲ್ಲಿದೆ. ಇವು ಒಂದು ರೀತಿಯ ಶಾಪಿಂಗ್ ಮಾಲ್ ಎಂದರೂ ತಪ್ಪಾಗಲಾರದು. ಅಷ್ಟೊಂದು ವೈವಿಧ್ಯಮಯ ಹೂಡಿಕೆ ವಿಧಾನಗಳು ಇದರಲ್ಲಿ ಲಭ್ಯವಿವೆ.

  - ಯೋಜನಾಬದ್ಧ ಹೂಡಿಕೆ
  ಮ್ಯೂಚುವಲ್ ಫಂಡ್‌ಗಳಲ್ಲಿನ ಯೋಜನಾಬದ್ಧ ಹೂಡಿಕೆ ವಿಧಾನ (ಸಿಸ್ಟೆಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್-ಸಿಪ್) ದ ಬಗ್ಗೆ ನೀವು ಕೇಳಿರಬಹುದು. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತ ದೊಡ್ಡ ಮೊತ್ತದ ಬಂಡವಾಳ ಸೃಷ್ಟಿಸುವ ಯೋಜನೆ ಇದಾಗಿದೆ. ಕಾಲಾಂತರದಲ್ಲಿ ಇವು ಉತ್ತಮ ಪ್ರತಿಫಲವನ್ನೂ ನೀಡಲಾರಂಭಿಸುತ್ತವೆ.

  ಕೊನೆ ಮಾತು

  ದೀಪಾವಳಿ ಎಂದರೆ ಹೊಸ ಬಟ್ಟೆ, ವಸ್ತು, ವಾಹನ, ಚಿನ್ನ ಹೀಗೆ ಎಲ್ಲವನ್ನೂ ಕೊಂಡು ಸಂಭ್ರಮಿಸುವ ಶುಭ ಸಂದರ್ಭವಾಗಿದೆ. ಆದರೆ ಹಬ್ಬವನ್ನು ಬರೀ ಖರೀದಿಗೆ ಸೀಮಿತಗೊಳಿಸದೆ ಹೂಡಿಕೆಯನ್ನು ಸಹ ಆರಂಭಿಸಿದಲ್ಲಿ ನಿಜವಾದ ಅರ್ಥದಲ್ಲಿ ನಾವು ದೀಪಾವಳಿಯನ್ನು ಆಚರಿಸಿದಂತಾಗುವುದು. ಸತತವಾಗಿ ಬದಲಾಗುವ ಈ ಜೀವನದಲ್ಲಿ ಹಣಕಾಸು ಭದ್ರತೆ ಅತಿ ಮುಖ್ಯವಾದ ಸಂಗತಿಯಾಗಿದೆ. ದೀಪಾವಳಿಯನ್ನು ಇಂದು ಆಚರಿಸಿ ನಾಳೆ ಮರೆಯುವುದಲ್ಲ. ಬೆಳಕಿನ ಹಬ್ಬ ನಮ್ಮ ಜೀವನದುದ್ದಕ್ಕೂ ಬೆಳಕು ತರುವಂತಾಗಲು ವಿವೇಚನೆಯಿಂದ ಹೂಡಿಕೆ ಆರಂಭಿಸಿ ಪ್ರತಿ ದೀಪಾವಳಿಯನ್ನೂ ವಿಶಿಷ್ಟವಾಗಿಸೋಣ. ಎಲ್ಲರ ಜೀವನದಲ್ಲಿ ಈ ದೀಪಾವಳಿ ಐಶ್ವರ್ಯ ತುಂಬಿಸಿ ಮನೆ ಮನಗಳನ್ನು ಬೆಳಗಲಿ.

  ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

  English summary

  Diwali 2018: How to invest diligently this Diwali and become rich

  By now you must be busy getting ready to welcome the festival of light, hope and prosperity! And I am no different from any other Indian.
  Story first published: Wednesday, November 7, 2018, 12:06 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more