ಇಂದು ಜಗತ್ತನ್ನು ಅಂತರ್ಜಾಲ ಬೆಸೆದ ಬಳಿಕ ಮನೆಯಲ್ಲಿದ್ದುಕೊಂಡು ಪ್ರಾರಂಭಿಸಬಹುದಾದ ನೂರಾರು ವೃತ್ತಿಗಳು ಇವೆ. ಅವುಗಳಲ್ಲಿ ಕೆಲವನ್ನು ಬಂಡವಾಳ ಇಲ್ಲದೇ ನಿಮ್ಮ ಕೌಶಲ್ಯವನ್ನು ಬಂಡವಾಳವನ್ನಾಗಿಸಿ ಆರಂಭಿಸಬಹುದಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಕೌಶಲ್ಯವೇ ದೊಡ್ಡ ಬಂಡವಾಳ ಇದ್ದಂತೆ! ತಂತ್ರಜ್ಞಾನ ಬೆಳೆದಂತೆ ಜೀವನ ನಿರ್ವಹಣೆಯ, ಜೀವನಾಧಾರದ ವೇದಿಕೆಗಳು ಹುಟ್ಟಿಕೊಂಡವು. ಹಿಂದಿನ ದಿನಗಳಲ್ಲಿ ಮನೆಪಾಠ ಅಥವಾ ಯಾವುದಾದರೊಂದು ಕಲಾಪ್ರಾಕಾರವನ್ನು ಮನೆಯಲ್ಲಿಯೇ ತರಗತಿಯ ಮೂಲಕ ಕಲಿಸಿಕೊಡಬಹುದಿತ್ತು. ಇದು ಬಿಟ್ಟರೆ ಬರವಣಿಗೆ ಅಥವಾ ಕರಕುಶಲವೃತ್ತಿಗಳು ಮನೆ ಖರ್ಚನ್ನು ತೂಗಿಸಲು ನೆರವಾಗುತ್ತಿದ್ದವು.
ಆದರೆ ಇಂದು ಜಗತ್ತನ್ನು ಅಂತರ್ಜಾಲ ಬೆಸೆದ ಬಳಿಕ ಮನೆಯಲ್ಲಿದ್ದುಕೊಂಡು ಪ್ರಾರಂಭಿಸಬಹುದಾದ ನೂರಾರು ವೃತ್ತಿಗಳು ಇವೆ. ಅವುಗಳಲ್ಲಿ ಕೆಲವನ್ನು ಬಂಡವಾಳ ಇಲ್ಲದೇ ನಿಮ್ಮ ಕೌಶಲ್ಯವನ್ನು ಬಂಡವಾಳವನ್ನಾಗಿಸಿ ಆರಂಭಿಸಬಹುದಾಗಿದೆ.
ಈ ವೃತ್ತಿಗಳನ್ನು ಆರಂಭಿಸುವವರು ಅಂತರ್ಜಾಲ ಆಧಾರಿತ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನದ ಕ್ರಮವಾಗಿದೆ. ಇದು ಕಷ್ಟಕರವೆಂದು ಕಂಡುಬಂದರೂ ವಾಸ್ತವವಾಗಿ ತುಂಬಾ ಸುಲಭವೂ ಅತಿ ಕಡಿಮೆ ಸಮಯದಲ್ಲಿ ಪ್ರಾರಂಭಿಸಬಹುದಾದ, ಅಲ್ಪ ಅಥವಾ ಬಂಡವಾಳವೇ ಇಲ್ಲದೇ ಪ್ರಾರಂಭಿಸಬಹುದಾಗಿವೆ.
ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಇಂಟರ್ನೆಟ್ ಸಂಪರ್ಕ ಮತ್ತು ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಕಂಪ್ಯೂಟರ್. ಹಾಗಿದ್ದರೆ ಬನ್ನಿ, ಈ ಮೂಲಕ ಪ್ರಾರಂಭಿಸಬಹುದಾದ ಹತ್ತು ಪ್ರಮುಖ ವೃತ್ತಿಗಳ ಬಗ್ಗೆ ಅರಿಯೋಣ..
ಉದ್ಯಮ ಮಾರ್ಗದರ್ಶಿ (Business coach)
ಯಾವುದಾದರೊಂದು ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೈಪುಣ್ಯ ಹೊಂದಿದ್ದರೆ ಈ ಮಾಹಿತಿಯನ್ನು ಇತರರಿಗೆ ಕಲಿಸುವ ಮೂಲಕ ಹೆಚ್ಚಿನ ಸಂಪಾದನೆ ಮಾಡಬಹುದು. ನಿಮಗೆ ಇಡಿಯ ವಿಶ್ವದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಲಭ್ಯರಾಗುತ್ತಾರೆ. ನಿಮ್ಮ ಜ್ಞಾನವನ್ನು ಪರಿಧಿಯ ಎಲ್ಲೆಯಿಲ್ಲದೇ ಆಸಕ್ತರಿಗೆ ಕಲಿಸಿಕೊಟ್ಟು ಅವರು ಜೀವನದಲ್ಲಿ ಮುಂದೆ ಬರುವಂತಾದರೆ ಇದರಿಂದ ಸಿಗುವ ಮಾನಸಿಕ ನೆಮ್ಮದಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಲ್ಲದೇ ನಿಮ್ಮ ಕಲಿಸುವಿಕೆಗೆ ಸೂಕ್ತ ಸಂಭಾವನೆಯೂ ದೊರಕುವುದರಿಂದ ಹೆಚ್ಚಿನ ಗಳಿಕೆಯೂ ಸಾಧ್ಯ.
ಉದಾಹರಣೆಗೆ ವಾಣಿಜ್ಯೋದ್ಯಮಕ್ಕೆ ಪ್ರಮುಖ ಕೊಡುಗೆ ನೀಡಿದ ಟಿಮೋಥಿ ಸೈಕ್ಸ್ ರವರನ್ನೇ ನೋಡಿ. ಇವರೊಬ್ಬ ಸ್ಟಾಕ್ ಟ್ರೇಡರ್ ಅಂದರೆ ಆನ್ಲೈನ್ ಮೂಲಕ ಮಾಹಿತಿಗಳನ್ನು ಮಾರುವ ಮಾರಾಟಗಾರರು. ಇವರ ತಂತ್ರವೆಂದರೆ ಚಿಕ್ಕ ಮೊತ್ತದ ಹಣದ ಮೂಲಕ ಹೆಚ್ಚಿನ ಜನರು ಇವರ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದು. ಈ ತಂತ್ರವನ್ನು ಕಲಿಸಲು ಇವರೊಂದು ಪ್ರೋಗ್ರಾಂ ಅಥವಾ ಕಂಪ್ಯೂಟರ್ ಕಾರ್ಯಕ್ರಮ ತಯಾರಿಸಿದ್ದು ಈ ಪ್ರೋಗ್ರಾಂ ನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಈ ತಂತ್ರಗಳನ್ನು ಕಲಿಯಬಹುದು. ಇದನ್ನು ಬಳಸಲು ಕೊಂಚ ಹಣ ನೀಡಬೇಕಾದುದರಿಂದ ಈ ಮೊತ್ತ ಟಿಮೋಥಿಯವರನ್ನು ಕೋಟ್ಯಾಧಿಪತಿಯಾಗಿಸಿದೆ.
ವರ್ಚುವಲ್ ಸಹಾಯಕ (Virtual assistant)
ಅಂತರ್ಜಾಲದ ಮೂಲಕ ಕಾರ್ಯನಿರ್ವಹಿಸುತ್ತಿರುವ ನೂರಾರು ಸಂಸ್ಥೆಗಳಿಗೆ ಕಛೇರಿಯೇ ಇರುವುದಿಲ್ಲ. ಈ ಸಂಸ್ಥೆಗಳು ನೀಡುವ ವಿವಿಧ ಸೇವೆಗಳನ್ನು ಜಗತ್ತಿನ ಇತರ ಭಾಗಗಳಿಗೆ ವಿಸ್ತರಿಸಲು ಇವರಿಗೆ ಸಹಾಯಕರ ನೆರವು ಬೇಕಾಗಿರುತ್ತದೆ. ಈ ಕೆಲಸಗಳನ್ನು ಮನೆಯಲ್ಲಿದ್ದುಕೊಂಡೇ ಅಂತರ್ಜಾಲದ ಮೂಲಕವೇ ನಿರ್ವಹಿಸಬಹುದು. ಉದಾಹರಣೆಗೆ ಗ್ರಾಹಕ ಸೇವಾ ಕರ್ತವ್ಯಗಳು, ದೂರವಾಣಿ ಕರೆಗಳನ್ನು ಸ್ವೀಕರಿಸಿ ಸೂಕ್ತ ಮಾಹಿತಿ ಒದಗಿಸುವುದು, ವ್ಯಕ್ತಿಗಳ ನಡುವಣ ಭೇಟಿಯ ಸಮಯಗಳನ್ನು ನಿಗದಿಪಡಿಸುವುದು, ಈಮೇಲ್ ಗಳನ್ನು ವಿಶ್ಲೇಷಿಸಿ ಅಗತ್ಯ, ಅನಗತ್ಯಗಳನ್ನು ವಿಂಗಡಿಸಿ ವಿಲೇವಾರಿ ಮಾಡುವುದು ಇತ್ಯಾದಿ ಕೆಲಸಗಳನ್ನು ನಿವರ್ಹಿಸಲು ಈ ವೃತ್ತಿ ನೆರವಾಗುತ್ತದೆ.
ಈ ವೃತ್ತಿಗಳನ್ನು ಮೊದಲಿಗೆ ಓರ್ವರೇ ಗ್ರಾಹಕರಿಗೆ ಮೀಸಲಾಗಿಟ್ಟು ಈ ಕೆಲಸದ ಒಳಮರ್ಮಗಳನ್ನು ಅರಿಯಬೇಕು. ನಿಮ್ಮ ಸಾಮರ್ಥ ಹಾಗೂ ಕೆಲಸದ ಬಗ್ಗೆ ಅರಿವಾಗುತ್ತಾ ಹೋದಂತೆ ನಿಮ್ಮ ಸಾಮರ್ಥ್ಯವನ್ನು ಇತರ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಹೋಗಬಹುದು. ಕೆಲವೇ ದಿನಗಳಲ್ಲಿ ನೀವು ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೈಪುಣ್ಯವನ್ನು ಹೊಂದಿದ್ದೀರಿ ಎಂದು ಅರಿವಾಗುತ್ತದೆ, ಉದಾಹರಣೆಗೆ ಸಮಾಜಿಕ ಕ್ಷೇತ್ರದ ಗ್ರಾಹಕ ಸೇವೆ. ಈ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಿಮ್ಮ ದಿನಗಳು ಕ್ಷಣಗಳಂತೆ ಕಳೆಯಲು ಪ್ರಾರಂಭಿಸುತ್ತವೆ. ಈ ಮೂಲಕ ನೀವು ಸಂಪಾದಿಸಬಹುದಾದ ಮೊತ್ತವೂ ಹೆಚ್ಚುತ್ತಾ ಹೋಗುತ್ತದೆ.
ಇಬೇ ಅಂಗಡಿಯ ಮಾಲಿಕ (eBay store owner)
ತಜ್ಞರು ಹೇಳುವಂತೆ,ಇಬೇ ತಾಣದ ಮೂಲಕ ಮಾರಾಟವಾಗುವ ವಸ್ತುಗಳಿಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಲಾಭ ಪಡೆಯಲು ಸಾಧ್ಯ. ಇದರ ಮೂಲ ಮಂತ್ರವೆಂದರೆ "ಅತಿ ಕಡಿಮೆ ಬೆಲೆಗೆ ಖರೀದಿಸಿ, ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ" ಎನ್ನುವುದು.
ಈ ಉದ್ಯಮಕ್ಕೆ ಕೊಂಚ ಬಂಡವಾಳ ಬೇಕು, ಆದರೆ ಇದೇನೂ ದೊಡ್ಡ ಮೊತ್ತವಲ್ಲ. ಈ ಉದ್ಯೋಗಕ್ಕೆ ಇಡಿಯ ದಿನ ಮನೆಯಲ್ಲಿ ಕುಳಿತಿರಬೇಕೆಂದೂ ಇಲ್ಲ. ಬದಲಿಗೆ ನಿತ್ಯದ ಒಂಭತ್ತರಿಂದ ಐದರವರೆಗಿನ ಕೆಲಸ ಮುಗಿಸಿದ ಬಳಿಕ ಈ ತಾಣವನ್ನು ಸಂದರ್ಶಿಸಿ ನಿಮ್ಮಲ್ಲಿರುವ ವಸ್ತುಗಳನ್ನು ಖರೀದಿಸಬಯಸಿದವರ ವಿವರಗಳನ್ನು ಪಡೆದು ಇವುಗಳನ್ನು ವಿಲೇವಾರಿ ಮಾಡಿದರೆ ಸಾಕು. ಸಾಮಾನ್ಯವಾಗಿ ಈ ವಸ್ತುಗಳು ವಾರಾಂತ್ಯದಲ್ಲಿಯೇ ಹೆಚ್ಚು ಮಾರಾಟವಾಗುವ ಕಾರಣ ವಾರಾಂತ್ಯಕ್ಕೆ ಹೆಚ್ಚು ಸಮಯ ನೀಡಿ ಹೆಚ್ಚು ಗಳಿಸಬಹುದು.
ಫ್ರೀಲ್ಯಾನ್ಸ್ ಬರಹಗಾರ ( Freelance content creator)
ಯಾವಾಗ ಮಾರುಕಟ್ಟೆ ಅಂತರ್ಜಾಲದ ಮೂಲಕ ಗ್ರಾಹಕರಿಗೆ ತೆರೆದುಕೊಂಡಿತೋ, ಆಗಲೇ ಮಾಹಿತಿಗಳನ್ನು ಒದಗಿಸಬಲ್ಲ ಅಥವಾ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಸೂಕ್ತ ಪದಗಳೊಂದಿಗೆ ಅಳವಡಿಸಬಲ್ಲವರಿಗೆ ಹೆಚ್ಚಿನ ಬೇಡಿಕೆ ಇದೆ. ಕೆಲವು ವರ್ಷಗಳಿಂದ ಅಂತರ್ಜಾಲದ ಮೂಲಕ ಮಾರಾಟ ಏರುಗತಿಯಲ್ಲಿ ಸಾಗಿದ್ದು ಮಾಹಿತಿಗಳ ಮಹಾಪೂರವೇ ಲಭ್ಯವಿದೆ. ಅಂಗಡಿಯಲ್ಲಿ ಎಷ್ಟು ಸುಂದರವಾಗಿ ಜೋಡಿಸಿಟ್ಟರೂ ನೋಡದ ಗ್ರಾಹಕ ಇದೇ ವಸ್ತುವನ್ನು ಬಣ್ಣಬಣ್ಣದ ಮಾತುಗಳಿಂದ ಬಣ್ಣಿಸಿ ಅಂತರ್ಜಾಲದ ಮೂಲಕ ನೀಡಿದಾಗ ಗ್ರಾಹಕನ ಗಮನ ಸೆಳೆಯಲು ಸಾಧ್ಯವಾಗಿರುವುದು ಈ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಒದಗಿಸಿದೆ.
ಬರೆಯ ಮಾರಾಟ ಮಾತ್ರವಲ್ಲ, ಸಂಪಾದಕರ ಹಂಗಿಲ್ಲದೇ ಬರೆಯುವವರಿಗೂ ಈ ಉದ್ಯೋಗಗಳು ಉತ್ತಮ ಅವಕಾಶ ಒದಗಿಸುತ್ತವೆ. ಸುಮ್ಮನೆ ಬರೆಯುವುದನ್ನು ಯಾರೂ ಬರೆಯಬಹುದು. ಆದರೆ ಗ್ರಾಹಕನ ಗಮನ ಸೆಳೆದು ಮಾರಾಟವನ್ನು ಹೆಚ್ಚಿಸಿ ಲಾಭವನ್ನು ಹೆಚ್ಚಿಸಲು ನೆರವಾಗುವವಂತೆ ಮಾಹಿತಿಯನ್ನು ಒದಗಿಸುವ ಕ್ರಿಯಾತ್ಮಕ ಲೇಖಕರಿಗೆ ಸದಾ ಬೇಡಿಕೆ ಇದೆ. ಇವರಿಗೆ ಸೂಕ್ತ ಸಂಭಾವನೆಯೂ ದೊರಕುತ್ತದೆ.
ಮುದ್ರಿತ ಟೀ-ಶರ್ಟ್ ಮಾರಾಟ
ಅಭಿಮಾನಿಗಳು ತಮ್ಮ ನೆಚ್ಚಿನ ತಾರೆ ತೊಡುವ ಟೀ ಶರ್ಟ್ ಅನ್ನೇ ಧರಿಸಲು ಇಚ್ಛಿಸುತ್ತಾರೆ. ಆದರೆ ಇವು ಸುಲಭವಾಗಿ ಲಭ್ಯವಿಲ್ಲ. ಅಂತೆಯೇ ಕೆಲವು ಸಂಸ್ಥೆಗಳಿಗೆ ತಮ್ಮ ಉದ್ಯೋಗಿಗಳು ತೊಡುವ ಟೀ ಶರ್ಟ್ ಮೇಲೆ ಸಂಸ್ಥೆಯ ಲಾಂಛನದ ಮುದ್ರೆ ಇರಬೇಕಾಗುತ್ತದೆ. ಮೊದಲೆಲ್ಲಾ ಈ ಬೇಡಿಕೆಗಳನ್ನು ಪೂರೈಸಬೇಕಾದರೆ ಹೆಚ್ಚಿನ ಸಂಖ್ಯೆಯ ಟೀ ಶರ್ಟ್ ಗಳಿಗೆ ಆರ್ಡರ್ ನೀಡಬೇಕಿತ್ತು.
ಈಗ ಕಾಲ ಬದಲಾಗಿದ್ದು ನವನವೀನ ವಿನ್ಯಾಸದ, ಗ್ರಾಹಕರು ಬಯಸಿದ್ದಂತೆಯೇ, ಗ್ರಾಹಕರು ಬಯಸಿದ ಸಂಖ್ಯೆಯಲ್ಲಿಯೇ ಟೀ ಶರ್ಟ್ ಗಳನ್ನು ಉತ್ತಮ ಗುಣಮಟ್ಟದಲ್ಲಿ ಹಾಗೂ ಕೈಗೆಟುಕುವ ಬೆಲೆಯಲ್ಲಿಯೇ ನೀಡಲು ಸಾಧ್ಯ. ಇದೇ ಉದ್ಯಮ ನಡೆಸುತ್ತಿರುವ ಚಮ್ಮಿ ಟೀಸ್ ರವರು ತಮ್ಮ ಟೀ ಶರ್ಟ್ ಗಳ ಮೇಲೆ ಬರೆಯುತ್ತಿರುವ ವಾಕ್ಯಗಳು ನೋಡುವವರ ಗಮನ ನೆಳೆಯುವಂತಿದ್ದು ಇದೇ ಇವರನ್ನು ಇಂದು ಶ್ರೀಮಂತನಾಗಿಸಿದೆ.
ಸಲಹಗಾರ (Consultant)
ಆರೋಗ್ಯ, ಹಣಕಾಸು, ವ್ಯಾಪಾರ, ಭವಿಷ್ಯ, ಉದ್ಯೋಗ ಮೊದಲಾದ ಹತ್ತು ಹಲವು ವಿಷಯಗಳಲ್ಲಿ ತಜ್ಞರ ಅಭಿಮತ ಬೇಕಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ನಮ್ಮ ಮನೆವೈದ್ಯರೇ ಹೆಚ್ಚಿನ ವಿವರ ಒದಗಿಸಬಹುದು. ಉಳಿದ ವಿಷಯಗಳಲ್ಲಿ? ಇಂದು ನೂರಾರು ವಿಷಯಗಳ ತಜ್ಞರು ಅಂತರ್ಜಾಲದ ಮೂಲಕ ಲಭ್ಯವಿದ್ದು ಕೊಂಚ ಮೊತ್ತಕ್ಕೆ ಅಗತ್ಯವಾದ ಮತ್ತು ಸೂಕ್ತವಾದ ಸಲಹೆ ನೀಡುತ್ತಾರೆ. ಒಂದು ವೇಳೆ ನಿಮ್ಮಲ್ಲಿ ಯಾವುದಾದರೂ ವಿಷಯದಲ್ಲಿ ಇತರರಿಗೆ ಮಾರ್ಗದರ್ಶನವಾಗಬಹುದಾದ ನೈಪುಣ್ಯತೆ ಇದ್ದರೆ ಇದನ್ನು ನೀವು ನಗದೀಕರಿಸಿಕೊಳ್ಳಬಹುದು ಹಾಗೂ ನಿಮ್ಮಿಂದಾಗಿ ಅಗತ್ಯವುಳ್ಳವರಿಗೂ ನೆರವಾದ ಆತ್ಮತೃಪ್ತಿಯೂ ದೊರಕುತ್ತದೆ.
ಈ ಸೇವೆ ನೀಡುತ್ತಿರುವ ಸಂಸ್ಥೆಯೊಂದು ಹೇಳಿಕೊಳ್ಳುವ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸೇವೆಯನ್ನು ಒದಗಿಸುವ ಪುಟ್ಟ ಸಂಸ್ಥೆಯಿಂದ ಇಂದು ಸಲಹೆ ಕೇಳಬಯಸುವವರಿಗೆ ಸೇವೆ ಒದಗಿಸುವ ದೊಡ್ಡ ಸಂಸ್ಥೆಯಾಗಿ ಬೆಳೆದಿದ್ದು ಇಂದು ಸಂಸ್ಥೆಯ ಲಾಂಛನವೇ ಗ್ರಾಹಕರಿಗೆ ಭರವಸೆಯ ಸಂಕೇತವಾಗಿದೆ. ಹೆಚ್ಚಿನವರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ತಮ್ಮ ತಂಡಗಳಿಗೆ ಸಲಹೆ ನೀಡಲು ನಮ್ಮಲ್ಲಿ ಬರುತ್ತಿದ್ದಾರೆ.
ಮಾರುಕಟ್ಟೆ ಪ್ರವರ್ತಕ (Affiliate marketer)
ಹಿಂದೆ ದಿನಬೆಳಗಾದರೆ ಸೋಪು, ಊದುಬತ್ತಿಗಳನ್ನು ಹಿಡಿದು ಮನೆಬಾಗಿಲು ಬಡಿದು ಮಾರಾಟ ಮಾಡುತ್ತಿದ್ದ ನೂರಾರು ಜನರಿದ್ದರು. ಇಂದು ಈ ಪರಿ ಕೊಂಚ ಬದಲಾಗಿದೆ. ಇಂದು ನೂರಾರು ಸಂಸ್ಥೆಗಳು ತಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಪ್ರವರ್ತಕರ ನೆರವು ಪಡೆದುಕೊಳ್ಳುತ್ತಿವೆ. ಈ ಪ್ರವರ್ತಕರು ಸಂಸ್ಥೆಯ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಸಿ ಇವನ್ನು ಕೊಳ್ಳುವಂತೆ ಮಾಡುವುದೇ ಇವರ ಕೆಲಸ. ಪ್ರತಿ ಬಾರಿ ಗ್ರಾಹಕ ಈ ಉತ್ಪನ್ನಗಳನ್ನು ಕೊಂಡುಕೊಂಡರೆ ಇವರಿಗೆ ಲಾಭಾಂಶ ದೊರಕುತ್ತದೆ. ಇದಕ್ಕಾಗಿ ಇವರು ಈಮೇಲ್ ಗಳ ಸಂಗ್ರಹ ಅಥವಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಗಳನ್ನು ಹರಿಯಬಿಡುತ್ತಾರೆ.
ಈ ಉದ್ಯೋಗಕ್ಕೆ ಕೊಂಚ ಹೆಚ್ಚೇ ಬಂಡವಾಳ ಬೇಕು. ಏಕೆಂದರೆ ನೀವು ಯಾವ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದೀರೋ ಅದನ್ನು ನೀವೇ ಸ್ವತಃ ಬಳಸದೇ ಇತರರಿಗೆ ತಿಳಿಸುವುದಾದರೂ ಹೇಗೆ? ಆದ್ದರಿಂದ ಈ ಉತ್ಪನ್ನಗಳಿಗೆ ಮೊದಲು ನೀವೇ ಗ್ರಾಹಕರಾಗುವುದು ಅನಿವಾರ್ಯ. ಆದರೆ ಈ ಮೂಲಕ ನೀವು ನೂರು ಗ್ರಾಹಕರನ್ನು ಸೆಳೆಯಲು ಸಫಲರಾದರೆ ಈ ಬಂಡವಾಳ ಸಾರ್ಥಕವಾಗುತ್ತದೆ.
ಸಾಮಾಜಿಕ ತಾಣದ ಪ್ರಬಾವಿ (Social-media influencer)
ತೀರಾ ಇತ್ತೀಚೆಗೆ ಅಂದರೆ 2016ರಲ್ಲಿ ಪರಿಚಯಿಸಲ್ಪಟ್ಟ ಈ ಉದ್ಯೋಗದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರಿದ್ದಷ್ಟೂ ಬೇಡಿಕೆ ಹೆಚ್ಚು. ಸಂಸ್ಥೆಯೊಂದರ ಉತ್ಪನ್ನವನ್ನು ನಿಮ್ಮ ಲಕ್ಷಾಂತರ ಹಿಂಬಾಲಕರಿಗೆ ಪರಿಚಯಿಸುವ ಮೂಲಕ ನಿಮ್ಮ ಹಿಂಬಾಲಕರು ನಿಮ್ಮ ಪ್ರಭಾವದಿಂದಾಗಿ ಇವನ್ನು ಕೊಳ್ಳುವಂತಾದರೆ ನಿಮಗೂ ಇದರಲ್ಲಿ ಲಾಭ ದೊರಕುತ್ತದೆ. ಎಷ್ಟೋ ಸಂದರ್ಭದಲ್ಲಿ ಒಂದೇ ಉತ್ಪನ್ನದ ಜಾಹೀರಾತು ಸಾವಿರಾರು ಡಾಲರು ಗಳಿಸಿಕೊಟ್ಟಿದೆ. ಇದು ನಿಜವಾಗಿಯೂ ಪರಿಣಾಮಕಾರಿ ವಿಧಾನವಾಗಿದ್ದು ಇದು ನಿಜವೆಂದು ಈಗ ಸಂಸ್ಥೆಗಳಿಗೆ ಮನದಟ್ಟಾಗಿರುವುದರಿಂದ ನಿಮಗೆ ಹಣ ನೀಡಲು ಅವರು ಹಿಂದೆಮುಂದೆ ನೋಡುವುದಿಲ್ಲ.
ವ್ಲಾಗರ್ (Vlogger)
ಯೂಟ್ಯೂಬ್ ಎಂಬ ಜಾಲತಾಣ ಪ್ರಾರಂಭವಾದ ಬಳಿಕ ವಿಡಿಯೋಗಳ ಜಾಹೀರಾತಿನ ಮೂಲಕ ಮಿಲಿಯನ್ನುಗಟ್ಟಲೇ ಹಣವನ್ನು ಇದರ ನಿರ್ಮಾತೃರು ಪಡೆಯುತ್ತಿದ್ದಾರೆ. ಇವರೊಂದಿಗೆ ಇವರ ಸೇವೆಯನ್ನು ಬಳಸಿ ಪ್ರಮುಖ ವಿದ್ಯಮಾನವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವವರಿಗೂ ಉತ್ತಮವಾದ ಅವಕಾಶ ಒದಗಿ ಬಂದಿದೆ. ಇದೇ ವ್ಲಾಗಿಂಗ್. ಈ ಸೇವೆಯನ್ನು ನೀಡುವವರೇ ವ್ಲಾಗರ್ಸ್. ಒಂದು ವೇಳೆ ನಿಮ್ಮಲ್ಲಿ ಹತ್ತು ಜನರ ಕುತೂಹಲವನ್ನು ಕೆಣಕಬಲ್ಲ ಕಥಾವಸ್ತುವಿದ್ದರೆ ಅಥವಾ ಪ್ರಮುಖ ಕಾರ್ಯಕ್ರಮದ ನೇರಪ್ರಸಾರವಿದ್ದರೆ, ಆಟ, ಕಾರ್ ರೇಸು, ಕ್ರಿಕೆಟ್ ಮೊದಲಾದ ಲಕ್ಷಾಂತರ ಜನರ ಕುತೂಹಲ ಕೆಣಕುವ ಕಥೆಯಿದ್ದರೆ ಇದನ್ನು ಯೂ ಟ್ಯೂಬ್ ಮೂಲಕ ಪ್ರಸಾರ ಮಾಡಿ ಇದರಿಂದ ಹಣ ಸಂಪಾದಿಸಬಹುದು.
ಗ್ರಾಫಿಕ್ ಡಿಸೈನರ್/ವೆಬ್ ಡೆವಲಪರ್
ಒಂದು ವೇಳೆ ನೀವು ಉತ್ತಮ ಗ್ರಾಫಿಕ್ ಕಲಾವಿದರಾಗಿದ್ದು ಕಂಪ್ಯೂಟರಿನಲ್ಲಿ ಗ್ರಾಹಕರ ಮನಸೆಳೆಯುವಂತಹ ಚಿತ್ರಣಗಳನ್ನು ನಿರ್ಮಿಸಬಲ್ಲ ಚಾಕಚಕ್ಯತೆ ಹೊಂದಿದ್ದರೆ ಅಥವಾ ಈ ಬಗ್ಗೆ ಕೋಡ್ (ಸಂಕೇತಭಾಷೆ) ಬರೆಯುವ ಸಾಮರ್ಥವಿದ್ದರೆ ನಿಮಗೆ ನಿಮ್ಮ ಸೇವೆಯನ್ನು ಘಂಟೆಗಳ ಲೆಕ್ಕದಲ್ಲಿ ನಗದೀಕರಿಸಲು ಸಾಧ್ಯ. ಇಂದು ಅಂತರ್ಜಾಲದಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಸಂಭಾವನೆ ಸಿಗುವಂತಹ ಕೆಲಸವನ್ನು ನೀವೇ ಆಯ್ದುಕೊಂಡು ನಿಮಗೆ ಸೂಕ್ತವಾಗುವ ಸಮಯದಲ್ಲಿ ನಿರ್ವಹಿಸಿ ಉತ್ತಮ ಜೀವನ ನಡೆಸಬಹುದು.
ಯಾವುದೇ ವೃತ್ತಿರಂಗದಲ್ಲಿರುವಂತೆಯೇ ಆನ್ಲೈನ್ ನಲ್ಲಿ ದೊರಕುವ ಕೆಲಸಗಾರರಲ್ಲಿಯೂ ಒಳ್ಳೆಯವರೂ ಕೆಟ್ಟವರೂ ಇರುತ್ತಾರೆ. ಆದ್ದರಿಂದ ಈ ಸೇವೆಗಳನ್ನು ಪಡೆಯಬಯಸುವವರು ತಮ್ಮ ಉದ್ಯೋಗಿಗಳನ್ನು ಆರಿಸಿಕೊಳ್ಳುವ ಮುನ್ನ ಸೂಕ್ತರೆಂದು ಕಂಡುಬಂದವರನ್ನು ಮಾತ್ರವೇ ಆರಿಸಿಕೊಳ್ಳಲು ಈ ಮಾಹಿತಿ ನೆರವಾಗಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications