ಸಾಕಷ್ಟು ದುಡ್ಡು ಗಳಿಸಿ ಜೀವನವನ್ನು ಸುರಕ್ಷಿತ ಹಾಗೂ ನೆಮ್ಮದಿದಾಯಕವನ್ನಾಗಿ ಮಾಡಿಕೊಳ್ಳುವುದು ಎಲ್ಲರ ಆಸೆಯಾಗಿರುತ್ತದೆ. ಇದಕ್ಕಾಗಿ ದುಡಿದು ಕೂಡಿಟ್ಟ ಹಣವನ್ನು ಲಾಭದಾಯಕ ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಸಾಕಷ್ಟು ದುಡ್ಡು ಗಳಿಸಿ ಜೀವನವನ್ನು ಸುರಕ್ಷಿತ ಹಾಗೂ ನೆಮ್ಮದಿದಾಯಕವನ್ನಾಗಿ ಮಾಡಿಕೊಳ್ಳುವುದು ಎಲ್ಲರ ಆಸೆಯಾಗಿರುತ್ತದೆ. ಇದಕ್ಕಾಗಿ ದುಡಿದು ಕೂಡಿಟ್ಟ ಹಣವನ್ನು ಲಾಭದಾಯಕ ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಆದಷ್ಟೂ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಆದಾಯ ಪಡೆಯುವುದು ಹೇಗೆ ಎಂಬುದನ್ನು ನಾವು ಗಮನಿಸಬೇಕು. ಮಾರುಕಟ್ಟೆಯಲ್ಲಿ ಹಲವಾರು ಹೂಡಿಕೆ ಯೋಜನೆಗಳು ಲಭ್ಯವಿದ್ದು, ನಿಮಗೆ ಅದರಲ್ಲಿ ಯಾವುದು ಸೂಕ್ತ ಎಂಬುದನ್ನು ಅರಿತುಕೊಳ್ಳುವುದು ಅಗತ್ಯ.
ಸಾಂಪ್ರದಾಯಿಕ ಯೋಜನೆಗಳಿಗಿಂತ ಇಕ್ವಿಟಿ ಬೆಸ್ಟ್
ಹಣ ಹೂಡಿಕೆ ಮಾಡಿ ಅದರಿಂದ ದೊಡ್ಡ ಮೊತ್ತದ ಸಂಪತ್ತು ಸೃಷ್ಟಿಸಲು ತಾಳ್ಮೆ, ಶ್ರದ್ಧೆ ಹಾಗೂ ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಬೇಕಾಗುತ್ತವೆ. ಪ್ರಸ್ತುತ ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಾದ ಎಫ್ಡಿ, ಆರ್ ಡಿ, ಸಣ್ಣ ಉಳಿತಾಯ ಯೋಜನೆ ಮುಂತಾದುವುಗಳಿಗಿಂತ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದು ಹೆಚ್ಚು ಲಾಭದಾಯಕ ಎಂಬುದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಅದರಲ್ಲಿನ ಏರಿಳಿತಗಳು ಹಾಗೂ ಅದರ ರಿಸ್ಕ್ ಅಂಶಗಳನ್ನು ತಡೆದುಕೊಳ್ಳಲು ಸಿದ್ಧರಾಗಿರುವುದು ಅವಶ್ಯ.
ತಿಂಗಳಿಗೆ 1000 ಹೂಡಿಕೆ ಮಾಡಿ ಶ್ರೀಮಂತರಾಗಿ
ಷೇರು ಮಾರುಕಟ್ಟೆ ಆಧರಿತ ಇಕ್ವಿಟಿಗಳಲ್ಲಿನ ಹೂಡಿಕೆಗಳು ವಿಪರೀತ ಏರಿಳಿತಗಳಿಗೆ ಒಳಪಟ್ಟಿದ್ದು ಅಷ್ಟೇ ರಿಸ್ಕ್ ಸಹ ಹೊಂದಿರುತ್ತವೆ. ಹಾಗೆಯೇ ಇವುಗಳಿಂದ ಯಾವುದೇ ನಿಶ್ಚಿತ ಆದಾಯ ಬರುತ್ತದೆ ಎಂಬುದು ಕೂಡ ಖಾತರಿ ಇರುವುದಿಲ್ಲ. ಆದಾಗ್ಯೂ ಕಳೆದ ಕೆಲ ದಶಕಗಳಲ್ಲಿ ಇಕ್ವಿಟಿಗಳು ಅತಿ ಉತ್ತಮ ಆದಾಯ ನೀಡಿರುವುದು ಮಾತ್ರ ಸತ್ಯ. ಇದರಲ್ಲಿನ ರಿಸ್ಕ್ ಕಾರಣದಿಂದ ದೇಶದ ಮಧ್ಯಮ ವರ್ಗದ ಜನತೆ ಇವುಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಆದರೆ ಹಾಗಂತ ನಿರಾಶರಾಗುವುದು ಬೇಕಿಲ್ಲ. ಇಕ್ವಿಟಿ ಆಧರಿತ ಕೆಲ ವಿಶಿಷ್ಟ ಯೋಜನೆಗಳು ಸಣ್ಣ ಹೂಡಿಕೆದಾರರಿಗೆ ಸೂಕ್ತವಾಗಿದ್ದು, ಕಡಿಮೆ ರಿಸ್ಕ್ ಹೊಂದಿವೆ. ತಿಂಗಳಿಗೆ ಕೇವಲ 1000 ರೂಪಾಯಿ ತೊಡಗಿಸಿದರೆ ಸಾಕು. ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಸಂಪತ್ತನ್ನು ನೀವೂ ಕೂಡಿಸಬಹುದು ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?
ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್ - ಕಡಿಮೆ ರಿಸ್ಕ್, ಹೆಚ್ಚು ಆದಾಯ
ದೊಡ್ಡ ಮೊತ್ತದ ಆದಾಯ ಗಳಿಸಬೇಕಾದರೆ ಅಷ್ಟೇ ದೊಡ್ಡ ಪ್ರಮಾಣದ ರಿಸ್ಕ್ ಅನ್ನೂ ಎದುರಿಸಬೇಕಾಗುತ್ತದೆ ಎಂಬ ಹಳೆಯ ಗಾದೆ ಮಾತೊಂದಿದೆ. ಆದರೆ ಸಿಪ್ ಅಥವಾ ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್ ಮೂಲಕ ತುಸು ಹೆಚ್ಚಿನ ತಾಳ್ಮೆ ವಹಿಸಿದಲ್ಲಿ ಅತ್ಯುತ್ತಮ ಆದಾಯ ಗಳಿಸಲು ಸಾಧ್ಯವಿದೆ. ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆ ಮಾತಿನಂತೆ ಸಿಪ್‌ನಲ್ಲಿ ನಿಯಮಿತವಾಗಿ ಸಣ್ಣ ಮೊತ್ತದ ಹಣ ಹೂಡುವ ಮೂಲಕ ದೊಡ್ಡ ಸಂಪತ್ತು ಕೂಡಿಸಬಹುದು. ಸಿಪ್ ಎಂಬುದು ಉತ್ತಮ ಹೂಡಿಕೆ ಯೋಜನೆ ಮಾತ್ರವಲ್ಲದೆ ನಿವೃತ್ತ ಜೀವನಕ್ಕೆ ಸಹ ಉತ್ತಮ ಯೋಜನೆಯಾಗಿದೆ. ಪ್ರಸ್ತುತ ಭಾರತದಲ್ಲಿನ ಸಿಪ್ ಹೂಡಿಕೆಗಳು ಸ್ಥಿರವಾದ ಆದಾಯ ನೀಡುತ್ತಿದ್ದು, ನಿರಂತರ ಬೆಳವಣಿಗೆ ತೋರುತ್ತಿವೆ. ಮಾರ್ಚ್ 2019ರ ವೇಳೆಗೆ ಸಿಪ್ ಯೋಜನೆಗಳಲ್ಲಿ 8005 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದರೆ ಇದರ ಅಗಾಧತೆ ನಿಮಗೆ ಅರ್ಥವಾಗಿರಬಹುದು. ವಾರ್ಷಿಕವಾಗಿ ಮ್ಯೂಚುವಲ್ ಫಂಡ್ ಸಿಪ್ ಯೋಜನೆಗಳು ಶೇ.13.15 ರಷ್ಟು ಬೆಳವಣಿಗೆ ಸಾಧಿಸಿವೆ.
ಶಿಸ್ತಿನಿಂದ ಕೂಡಿದ ಹೂಡಿಕೆ ಸಿಪ್
ಸಿಪ್‌ನಲ್ಲಿ ಹೂಡಿಕೆ ಅತಿ ಸರಳವಾಗಿದ್ದರೂ ಅಷ್ಟೇ ಶಿಸ್ತಿನಿಂದ ಕೂಡಿದೆ. ಯಾವುದಾದರೂ ಹೂಡಿಕೆ ಸಂಸ್ಥೆಯಲ್ಲಿ ಸಿಪ್ ಖಾತೆ ತೆರೆದು ಅದಕ್ಕೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಮಾಡಿದರಾಯಿತು. ನಿಮ್ಮ ಪೂರ್ವಯೋಜನೆಯಂತೆ ಬ್ಯಾಂಕ್ ಖಾತೆಯಿಂದ ವಾರಕ್ಕೆ, ತಿಂಗಳಿಗೆ ಅಥವಾ ತ್ರೈಮಾಸಿಕಕ್ಕೊಮ್ಮೆ ನೀವು ನಿಗದಿಪಡಿಸಿದ ಮೊತ್ತದಷ್ಟು ಹಣ ಸಿಪ್ ಖಾತೆಗೆ ವರ್ಗಾವಣೆ ಆಗುತ್ತದೆ. ವಾರಕ್ಕೆ, ತಿಂಗಳಿಗೆ ಅಥವಾ ತ್ರೈಮಾಸಿಕಕ್ಕೊಮ್ಮೆ ಚಿಕ್ಕ ಮೊತ್ತಗಳನ್ನು ಹೂಡಿಕೆ ಮಾಡುತ್ತ ಸಾಗುವುದರಿಂದ ಮಾರುಕಟ್ಟೆಯ ಏರಿಳಿತಗಳ ಪರಿಣಾಮ ತೀರಾ ನಗಣ್ಯವಾಗಿರುತ್ತದೆ.
ಸಿಪ್ ಇದು ಅತ್ಯಂತ ಸಕಾರಾತ್ಮಕ ಹಾಗೂ ಅಷ್ಟೇ ಶಿಸ್ತುಬದ್ಧ ಹೂಡಿಕೆ ಯೋಜನೆಯಾಗಿದೆ. ನಿಮ್ಮ ಉಳಿತಾಯ ಖಾತೆಯಿಂದ ಸಿಪ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುವುದರಿಂದ ನಿಮ್ಮಲ್ಲಿ ಉಳಿತಾಯದ ಶಿಸ್ತು ಮೂಡುತ್ತದೆ.
ಅತಿ ಸರಳ ಹೂಡಿಕೆ ಯೋಜನೆ ಸಿಪ್
ಭಾರತದ ಯಾವುದೇ ನಾಗರಿಕ ಸಿಪ್ ಖಾತೆ ಆರಂಭಿಸಬಹುದು. ಹಾಗೆಯೇ ಹೂಡಿಕೆ ಮಾಡುವುದು ಸಾಕೆನ್ನಿಸಿದರೆ ಖಾತೆಯನ್ನು ತಕ್ಷಣ ಬಂದ್ ಮಾಡಬಹುದು. ತಿಂಗಳಿಗೆ ಕೇವಲ 500 ರೂಪಾಯಿ ಹೂಡಿಕೆಯೊಂದಿಗೆ ಸಿಪ್ ಯೋಜನೆ ಆರಂಭಿಸಬಹುದಾಗಿದ್ದು, ಇದಕ್ಕಾಗಿ ನೀವು ತಿಂಗಳಿನ ಬಜೆಟ್ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಹಣದುಬ್ಬರ ಮೀರಿದ ಆದಾಯ
ಡೆಬ್ಟ್, ಚಿನ್ನ, ರಿಯಲ್ ಎಸ್ಟೇಟ್ ಮುಂತಾದುವುಗಳಿಗಿಂತ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಗೆ ಇಕ್ವಿಟಿಗಳು ಅತಿ ಸೂಕ್ತವಾಗಿವೆ ಎನ್ನುತ್ತಾರೆ ಹಣಕಾಸು ತಜ್ಞರು. ಆಗಾಗ ಏರಿಳಿತಗಳು ಕಂಡುಬಂದರೂ ದೀರ್ಘಾವಧಿಯಲ್ಲಿ ಇಕ್ವಿಟಿಗಳು ಹಣದುಬ್ಬರ ಮೀರಿಸಿದ ಆದಾಯ ನೀಡಿದ್ದು ಸತ್ಯವಾಗಿದೆ. ಷೇರು ಮಾರುಕಟ್ಟೆಯ ಸಂಪೂರ್ಣ ಜ್ಞಾನ ಇರದವರು ಅಥವಾ ಅದರ ಬಗ್ಗೆ ತಿಳಿದುಕೊಳ್ಳಲು ಸಮಯ ಇರದಿರುವವರು ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ.
ಸರಕಾರದಿಂದ ನಿಯಂತ್ರಿತ ಹಾಗೂ ಸುರಕ್ಷಿತ ಸಿಪ್
ಭಾರತದ ಮ್ಯೂಚುವಲ್ ಫಂಡ್ ಮಾರುಕಟ್ಟೆಯು ಸರಕಾರದ ನಿಬಂಧನೆಗಳಿಗೆ ಒಳಪಟ್ಟು ಕೆಲಸ ಮಾಡುತ್ತಿದ್ದು, ಪಾರದರ್ಶಕವಾಗಿದೆ. ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ವಿಚಾರ ಮಾಡದೆ ನಿಯಮಿತವಾಗಿ ಸಿಪ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದು. ಹೀಗೆ ಮಾಡಿದಲ್ಲಿ ಸಿಪ್‌ನ 'ರೂಪಾಯಿ ಮೌಲ್ಯ ಸರಾಸರಿ' ಯ ಮೂಲಕ ಆದಾಯ ಪಡೆಯಬಹುದು.
ಎಷ್ಟು ಹೂಡಿಕೆಗೆ ಎಷ್ಟು ಆದಾಯ?
ಉದಾಹಣೆಗೆ, ನೀವು ಪ್ರತಿ ತಿಂಗಳು 1000 ರೂಪಾಯಿಗಳಂತೆ 35 ವರ್ಷಗಳವರೆಗೆ, ಶೇ. 15ರ ಬಡ್ಡಿ ದರದಂತೆ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳೋಣ. 35 ವರ್ಷಗಳಲ್ಲಿ ನೀವು ಒಟ್ಟು 4.2 ಲಕ್ಷ ರೂ. ಹೂಡಿಕೆ ಮಾಡಿರುತ್ತೀರಿ ಹಾಗೂ ನಿಮ್ಮ ಆದಾಯ ಹೂಡಿಕೆಯ ಮೂರು ಪಟ್ಟು ಹೆಚ್ಚಾಗಿರುತ್ತದೆ. 35 ವರ್ಷಗಳ ಪಕ್ವತಾ ಅವಧಿಯ ನಂತರ ಸಿಪ್‌ನಲ್ಲಿ ನಿಮ್ಮ 1.44 ಕೋಟಿ ರೂ. ಹಣ ಜಮೆಯಾಗಿರುತ್ತದೆ. ಒಟ್ಟಾರೆ ಆದಾಯ 1.5 ಕೋಟಿಯಾಗಿರುತ್ತದೆ.
ಸಿಪ್ ಆದಾಯದ ಎರಡು ವಿಧಾನ
ಸಿಪ್‌ನಲ್ಲಿ ಮಾಡಿದ ಹೂಡಿಕೆಯಿಂದ ಎರಡು ವಿಧಾನಗಳಲ್ಲಿ ಆದಾಯ ಬರುವಂತೆ ಮಾಡಲಾಗುತ್ತದೆ. ಮೊದಲನೆಯದಾಗಿ ರೂಪಾಯಿ ಮೌಲ್ಯ ಹಾಗೂ ಇಕ್ವಿಟಿ ಮೌಲ್ಯದ ಸರಾಸರಿಗೊಳಿಸುವಿಕೆ. ಶೇರು ಮಾರುಕಟ್ಟೆ ಸದಾ ಏರಿಳಿತದಿಂದ ಕೂಡಿರುವುದರಿಂದ ಯಾವಾಗ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಅವಕಾಶಗಳು ಸೃಷ್ಟಿಯಾಗುತ್ತಿರುತ್ತವೆ. ಶೇರು ಮೌಲ್ಯಗಳು ಕಡಿಮೆ ಇದ್ದಾಗ ಕಡಿಮೆ ಹಣಕ್ಕೆ ಹೆಚ್ಚು ಶೇರುಗಳನ್ನು ಕೊಂಡು ಹೆಚ್ಚಿನ ಆದಾಯ ಬರುವಂತೆ ಮಾಡಲಾಗುತ್ತದೆ.
ಎರಡನೆಯದಾಗಿ ಕಂಪೌಂಡಿಂಗ್ ಅಥವಾ ಸಂಚಿತ ಆದಾಯದ ಉಪಯೋಗ. ನೀವು ಹೂಡಿಕೆ ಮಾಡಿದ ಪ್ರತಿ ರೂಪಾಯಿಗೂ ಬಡ್ಡಿ ಆದಾಯ ಬರಲಾರಂಭಿಸುತ್ತದೆ. ದೀರ್ಘಾವಧಿಯಲ್ಲಿ ಈ ಬಡ್ಡಿ ಆದಾಯ ದೊಡ್ಡದಾಗುತ್ತ ಸಾಗಿ ದೊಡ್ಡ ಮೊತ್ತ ಸಂಗ್ರಹವಾಗುತ್ತದೆ. ಸಿಪ್ ಯೋಜನೆಯ ಅವಧಿ ಹೆಚ್ಚಾದಷ್ಟೂ ಬಡ್ಡಿ ಆದಾಯ ಅಧಿಕವಾಗುತ್ತದೆ.
ಕೊನೆ ಮಾತು: ಬೇಗನೆ ಹೂಡಿಕೆ ಆರಂಭಿಸಿ
ಪ್ರತಿ ತಿಂಗಳು ಚಿಕ್ಕ ಮೊತ್ತವನ್ನು ಶಿಸ್ತುಬದ್ಧವಾಗಿ ಹೂಡಿಕೆ ಮಾಡುತ್ತ ಬಂದಲ್ಲಿ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಸಂಪತ್ತಿನ ಸೃಷ್ಟಿ ಸಾಧ್ಯವಿದೆ. ಇದಕ್ಕೆ ಸಿಪ್ ಯೋಜನೆಗಳು ಅನುಕೂಲಕರವಾಗಿವೆ. ಆದರೆ ವೃತ್ತಿ ಜೀವನದ ಆರಂಭಿಕ ಹಂತದಿಂದಲೇ ಇಂಥ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತ ಜೀವನದ ಹತ್ತಿರದ ಸಮಯದಲ್ಲಿ ಸಾಕಾದಷ್ಟು ಹಣ ಕೂಡಿಸಲು ಸಾಧ್ಯವಾಗುತ್ತದೆ.


Click it and Unblock the Notifications