ಈಗಾಗಲೇ ಜೂನ್ ತಿಂಗಳು ಕೊನೆಯಾಗುತ್ತಿದೆ, ಜುಲೈ ತಿಂಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಇದೆ. ಜುಲೈ ತಿಂಗಳ ಆರಂಭದಿಂದಲೇ ಹೊಸ ಬದಲಾವಣೆಗಳು ಆಗಲಿದೆ. ಹೊಸ ತಿಂಗಳಿನಲ್ಲಿ ಆಗುವ ಹೊಸ ಬದಲಾವಣೆಗಳು, ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ. ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರಲಿದೆ.
ನಮ್ಮ ಸಾಮಾನ್ಯ ಜೀವನದಲ್ಲಿ ವೈಯಕ್ತಿಕ ಹಣಕಾಸು ಬಹಳ ಮುಖ್ಯವಾಗಿದೆ. ನಮ್ಮ ಸುತ್ತಮುತ್ತಲೂ ಆಗುವ ಹಣಕಾಸು ಬದಲಾವಣೆಯು ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಬೀರಲಿದೆ. ಕೆಲವು ನಿಯಮ ಬದಲಾವಣೆಯು ನಮಗೆ ಸಹಕಾರಿಯಾದರೆ, ಕೆಲವು ಬದಲಾವಣೆಯಿಂದ ನಮ್ಮ ಜೇಬಿಗೆ ಕತ್ತರಿ ಹಾಕಲಿದೆ.
ಜುಲೈ 1 ರಿಂದ, ಸಾಮಾನ್ಯ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವ ಕೆಲವು ಬ್ಯಾಂಕಿಂಗ್, ಹಣಕಾಸು ಸಂಬಂಧಿತ ನಿಯಮಗಳಲ್ಲಿ ಬದಲಾವಣೆಯಾಗಿದೆ. ಅದರಲ್ಲೂ ಕಾರ್ಮಿಕ ನೀತಿ ಬದಲಾವಣೆಯಿಂದಾಗಿ ನಮ್ಮ ಹಣಕಾಸು ಮಾತ್ರವಲ್ಲ, ಜೀವನ ಶೈಲಿಯೇ ಬದಲಾವಣೆಯಾಗಬಹುದು. ಆದ್ದರಿಂದ, ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ವೈಯಕ್ತಿಕ ಹಣಕಾಸಿನ ನಿರ್ವಹಣೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಾಗಾದರೆ ಏನೆಲ್ಲಾ ಬದಲಾವಣೆ ಆಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಪ್ಯಾನ್ ಆಧಾರ್ ಲಿಂಕ್ ಮಾಡಿಬಿಡಿ
ನೀವು ಇನ್ನೂ ಕೂಡಾ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ಕೂಡಲೇ ಮಾಡಿಬಿಡಿ. ನೀವು ಜೂನ್ 30ರ ಒಳಗೆ ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಒಂದು ಸಾವಿರ ರೂಪಾಯಿ ದಂಡ ಬೀಳಲಿದೆ. ನೀವು ಜೂನ್ 30ರ ಮುನ್ನ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಐನ್ನೂರು ರೂಪಾಯಿ ದಂಡ ಬೀಳಲಿದೆ.
ಕ್ರಿಪ್ಟೋಕರೆನ್ಸಿಯಿಂದ ತೆರಿಗೆ ಕಡಿತ
ಜುಲೈ ಒಂದರೊಂದ ಕ್ರಿಪ್ಟೋಕರೆನ್ಸಿಯ ವಹಿವಾಟಿನ ಮೇಲೆ ದಂಡ ವಿಧಿಸಲಾಗುತ್ತದೆ. ಸರ್ಕಾರವು ಕ್ರಿಪ್ಟೋ ವಹಿವಾಟಿನ ಮೇಲೆ ಶೇಕಡ ಒಂದರಷ್ಟು ಟಿಡಿಎಸ್ ವಿಧಿಸಲಿದೆ. ನೀವು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿ ನಷ್ಟವನ್ನು ಅನುಭವಿಸಿದರೂ ಕೂಡಾ ತೆರಿಗೆಯನ್ನು ಪಾವತಿ ಮಾಡಲೇಬೇಕು. ಇನ್ನು ಸರ್ಕಾರ ಈಗಾಗಲೇ ಕ್ರಿಪ್ಟೋಕರೆನ್ಸಿಯಿಂದ ಲಾಭದ ಮೇಲೆ ಶೇಕಡ ಮೂವತ್ತರಷ್ಟು ತೆರಿಗೆ ವಿಧಿಸಿದೆ.
ಕಾರ್ಮಿಕ ನೀತಿ ಬದಲಾವಣೆ
ಜುಲೈ ಒಂದರಿಂದ ನಾಲ್ಕು ಕಾರ್ಮಿಕ ನೀತಿಗಳು ಜಾರಿಯಾಗುವ ಸಾಧ್ಯತೆ ಇದೆ. ಈ ನೂತನ ಕಾರ್ಮಿಕ ನೀತಿಯಿಂದಾಗಿ ಕೈಗೆ ಸಿಗುವ ಸಂಬಳವು ಕಡಿಮೆ ಆಗಲಿದೆ. ಈ ನೂತನ ಕಾರ್ಮಿಕ ನೀತಿಯಲ್ಲಿ ದೈನಂದಿನ ಕೆಲಸದ ಸಮಯವನ್ನು 12 ಗಂಟೆಗಳಿಗೆ ಮಿತಿಗೊಳಿಸಲಾಗಿದೆ. ವಾರದ ಕೆಲಸದ ಸಮಯವನ್ನು 48 ಗಂಟೆ ಎಂದು ನಿಗದಿ ಮಾಡಲಾಗಿದೆ. ಹೊಸ ಕಾರ್ಮಿಕ ಕಾನೂನುಗಳ ಪ್ರಕಾರ ಉದ್ಯೋಗಿಯ ಮೂಲ ವೇತನವು ಒಟ್ಟು ವೇತನದ ಕನಿಷ್ಠ ಶೇಕಡ 50ರಷ್ಟು ಇರಬೇಕಾಗುತ್ತದೆ. ಇದರ ಕಾರಣದಿಂದಾಗಿ ನಿಮ್ಮ ಇಪಿಎಫ್‌ಗೆ ಕೊಡುಗೆ ಅಧಿಕವಾಗಲಿದೆ. ಗ್ರಾಚ್ಯುಟಿ ಕಡಿತ ಕೂಡಾ ಅಧಿಕವಾಗಲಿದೆ. ಆದರೆ ಪ್ರತಿ ತಿಂಗಳು ಕೈಗೆ ಬರುವ ಸಂಬಳ ಕಡಿಮೆ ಆಗಲಿದೆ. ರಜೆಯಲ್ಲಿಯೂ ಬದಲಾವಣೆ ಆಗಲಿದೆ. ಪ್ರತಿ ದಿನ ಕೆಲಸದ ಅವಧಿ ಹೆಚ್ಚಾಗುವ ಕಾರಣ ರಜೆ ಅಧಿಕವಾಗಲಿದೆ.
ಜುಲೈ ಒಂದರಿಂದ ಎಸಿ ದುಬಾರಿ ಸಾಧ್ಯತೆ
ಎನರ್ಜಿ ರೇಟಿಂಗ್ ನಿಯಮವನ್ನು ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ ಬದಲಾವಣೆ ಮಾಡಿದೆ. ಈ ಹೊಸ ನೀತಿಯ ಪ್ರಕಾರ ಫವ್ ಸ್ಟಾರ್ ರೇಟೆಡ್ ಎಸಿಗಳನ್ನು ಫೋರ್ (ನಾಲ್ಕು) ಸ್ಟಾರ್ ಎಸಿಗಳು ಎಂದು ಪರಿಗಣಿಸಲಾಗುತ್ತದೆ. ಶ್ರೇಣಿಯನ್ನು ಕಡಿಮೆ ಮಾಡಲಾಗುತ್ತದೆ. ಆದ್ದರಿಂದಾಗಿ ಎಸಿ ಸಂಸ್ಥೆಗಳು ಎಸಿ ಬೆಲೆಯಲ್ಲಿ ಶೇಕಡ ಹತ್ತರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.
ಎಲ್‌ಪಿಜಿ ದರ ಹೆಚ್ಚಳ ಸಾಧ್ಯತೆ
ಜೂನ್‌ನಲ್ಲಿ ಎಲ್‌ಪಿಜಿ ದರವನ್ನು ಹೆಚ್ಚಳ ಮಾಡಲಾಗಿದೆ. ಆ ಬಳಿಕ ಸರ್ಕಾರ ವಾರ್ಷಿಕವಾಗಿ ಹನ್ನೆರೆಡು ಸಿಲಿಂಡರ್‌ಗಳಿಗೆ ಇನ್ನೂರು ರೂಪಾಯಿ ಸಬ್ಸಿಡಿಯನ್ನು ಘೋಷಣೆ ಮಾಡಿದೆ. ಆದರೆ ಉಕ್ರೇನ್ ರಷ್ಯಾ ಯುದ್ಧದ ನಡುವೆ ಜಾಗತಿಕ ಕಚ್ಚಾ ತೈಲ ಬೆಲೆ ಹೆಚ್ಚಳವಾಗುತ್ತಿರುವ ಕಾರಣದಿಂದಾಗಿ ಎಲ್‌ಪಿಜಿ ಬೆಲೆಯು ಹೆಚ್ಚಾಗುವ ನಿರೀಕ್ಷೆ ಇದೆ. ಸರ್ಕಾರವು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ದರದಲ್ಲಿ ಪರಿಷ್ಕರಣೆ ಮಾಡುತ್ತದೆ.
ಡಿಮ್ಯಾಟ್ ಖಾತೆ ಕೆವೈಸಿ
ನೀವು ಜೂನ್ 30ರ ಒಳಗೆ ಕೆವೈಸಿ ಪ್ರಕ್ರಿಯೆ ಪೂರ್ಣ ಮಾಡದಿದ್ದರೆ ನಿಮ್ಮ ಡಿಮ್ಯಾಟ್ ಖಾತೆಯು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸದು. ನೀವು ಜುಲೈ ಒಂದರಿಂದ ಡಿಮ್ಯಾಟ್ ಖಾತೆ ಮೂಲಕ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗದು. ಆದ್ದರಿಂದಾಗಿ ಶೀಘ್ರದಲ್ಲಿಯೇ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇನ್ನು ನಾಲ್ಕು ದಿನಗಳೆಷ್ಟೇ ಬಾಕಿ ಉಳಿದಿದೆ.


Click it and Unblock the Notifications