ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಯಲ್ಲಿ ಶೇಕಡ 4 ರಷ್ಟು ಹೆಚ್ಚಳಕ್ಕೆ ಕೇಂದ್ರ ಸಂಪುಟವು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಜುಲೈನಿಂದ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಡಿಎ ಶೇಕಡ 42 ರಿಂದ ಶೇಕಡ 46 ಕ್ಕೆ ಹೆಚ್ಚಳವಾಗಿದೆ.
ವರದಿಯಂತೆ ಇಂದು ಸರ್ಕಾರದ ಅಧಿಕೃತ ಘೋಷಣೆ ಹೊರಬೀಳಲಿದೆ. ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ- ಐಡಬ್ಲ್ಯೂ) ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಈ ಹಿಂದೆ, ಅರೆಸೇನಾ ಪಡೆಗಳು ಸೇರಿದಂತೆ ಗ್ರೂಪ್ ಸಿ ಮತ್ತು ಗೆಜೆಟೆಡ್ ಅಲ್ಲದ ಗ್ರೂಪ್ ಬಿ ಮಟ್ಟದ ಅಧಿಕಾರಿಗಳಿಗೆ ದೀಪಾವಳಿ ಬೋನಸ್‌ಗಳನ್ನು ಸರ್ಕಾರ ಅನುಮೋದಿಸಿತ್ತು. 2022-2023 ಕ್ಕೆ, ಕೇಂದ್ರ ಸರ್ಕಾರಿ ನೌಕರರಿಗೆ ನಾನ್ ಪ್ರೊಡಕ್ಟಿವಿಟಿ ಬೋನಸ್‌ಗಳ (ಆಡ್ ಹಾಕ್ ಬೋನಸ್‌ಗಳು) ಲೆಕ್ಕಾಚಾರಕ್ಕಾಗಿ ಹಣಕಾಸು ಸಚಿವಾಲಯವು 7000 ರೂಪಾಯಿ ಮಿತಿಯನ್ನು ನಿಗದಿಪಡಿಸಿದೆ.
ನವರಾತ್ರಿಯ ಹಬ್ಬಕ್ಕೂ ಮುನ್ನ ನಡೆಯುವ ಕೊನೆಯ ಕ್ಯಾಬಿನೆಟ್ ಸಭೆಯು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 11, 2023 ರ ಬುಧವಾರದಂದು ನಿಗದಿಯಾಗಿದೆ. ಈ ಸಭೆಯ ಬಳಿಕ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಘೋಷಣೆಯನ್ನು ಮಾಡು ಭರವಸೆಯಿತ್ತು.
ತುಟ್ಟಿಭತ್ಯೆಯನ್ನು ಶೇಕಡ 3 ರಷ್ಟು ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ತುಟ್ಟಿಭತ್ಯೆಯನ್ನು ಶೇಕಡ 4 ರಷ್ಟು ಏರಿಕೆ ಮಾಡಲಾಗುತ್ತಿದೆ. ಈ ನೂತನ ಡಿಎ ಏರಿಕೆಯು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಅಂದರೆ ಉದ್ಯೋಗಿಗಳು ಅಕ್ಟೋಬರ್ ತಿಂಗಳಿನಿಂದ ಅಧಿಕ ವೇತನವನ್ನು ಪಡೆಬಹುದು. ಜೊತೆಗೆ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಬಾಕಿಯನ್ನು ಪಡೆಯಬಹುದು.
ಸಾಮಾನ್ಯವಾಗಿ ಕೇಂದ್ರ ಸರ್ಕಾರ ವರ್ಷದಲ್ಲಿ ಎರಡು ಬಾರಿ ಡಿಎಯನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ. ಮೊದಲನೆಯ ಡಿಎ ಜನವರಿಯಿಂದ ಜಾರಿಗೆ ಬಂದರೆ, ಇನ್ನೊಂದು ಬಾರಿ ಮಾಡಿದ ಪರಿಷ್ಕರಣೆ ಜುಲೈನಿಂದ ಜಾರಿಗೆ ಬರುತ್ತದೆ. ಆದರೂ ಹಬ್ಬ ಹತ್ತಿರ ಬರುತ್ತಿದಂತೆ ಮಾಡುವ ಡಿಎ ಏರಿಕೆಯನ್ನು ಉದ್ಯೋಗಿಗಳಿಗೆ ನೀಡಲಾಗುವ ಹಬ್ಬದ ಉಡುಗೊರೆ ಎಂದೇ ಪರಿಗಣಿಸಲಾಗುತ್ತದೆ.
ಈ ನಿರ್ಧಾರದಿಂದ 47 ಲಕ್ಷ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ಕಳೆದ ವರ್ಷ ಸರ್ಕಾರ ನವರಾತ್ರಿಗೆ ಮುನ್ನ ನಡೆದ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸಿತ್ತು.


Click it and Unblock the Notifications