ಕೇಂದ್ರ ಸರ್ಕಾರವು 7ನೇ ವೇತನ ಆಯೋಗದಡಿಯಲ್ಲಿ ತುಟ್ಟಿಭತ್ಯೆಯನ್ನು ಏರಿಕೆ ಮಾಡುವ ಸಾಧ್ಯತೆಯಿದೆ. ಒಂದು ಕೋಟಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಹೆಚ್ಚಳ ಮಾಡಲಾಗುತ್ತದೆ. ತುಟ್ಟಿಭತ್ಯೆಯು ಶೇಕಡ 38ರಿಂದ ಶೇಕಡ 42ಕ್ಕೆ ಏರಿಸುವ ನಿರೀಕ್ಷೆಯಿದೆ.
ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ಹೆಚ್ಚಳ ಮಾಡಿದರೆ, ಜನವರಿ 1, 2023ರಿಂದ ಜಾರಿಗೆ ಬರಲಿದೆ. ಇನ್ನು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಡಿಯರೆನ್ಸ್ ರಿಲೀಫ್ ಅನ್ನು (ಡಿಆರ್) ಕೂಡಾ ಘೋಷಣೆ ಮಾಡುವ ನಿರೀಕ್ಷೆಯಿದೆ.
ತುಟ್ಟಿಭತ್ಯೆ (ಡಿಎ) ಎನ್ನುವುದು ಜೀವನ ವೆಚ್ಚದ ಹೊಂದಾಣಿಕೆ ಭತ್ಯೆಯಾಗಿದ್ದು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ಪಾವತಿ ಮಾಡುತ್ತದೆ. ಮತ್ತೊಂದೆಡೆ, ತುಟ್ಟಿಭತ್ಯೆ ಪರಿಹಾರ (ಡಿಆರ್) ಭತ್ಯೆಯಂತೆಯೇ ಇರುತ್ತದೆ ಮತ್ತು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ನೀಡಲಾಗುತ್ತದೆ. ಆದರೆ ಈ ತುಟ್ಟಿಭತ್ಯೆ ಏರಿಕೆಯಿಂದಾಗಿ ನಿಮ್ಮ ವೇತನ ಎಷ್ಟು ಏರಿಕೆಯಾಗಲಿದೆ, ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ವೇತನ ಎಷ್ಟು ಹೆಚ್ಚಳವಾಗಲಿದೆ?
ಪ್ರಸ್ತುತ ಡಿಎ ಶೇಕಡ 38 ಆಗಿದೆ. ತುಟ್ಟಿಭತ್ಯೆ ಶೇಕಡ 4ರಷ್ಟು ಹೆಚ್ಚಳವಾದರೆ, ನಿಮ್ಮ ಬೇಸಿಕ್ ಸ್ಯಾಲರಿಯ ಶೇಕಡ 42ರಷ್ಟು ಇರಲಿದೆ. ನಿಮ್ಮ ಬೇಸಿಕ್ ಸ್ಯಾಲರಿ ಅಂದರೆ ಆದಾಯ 18,000 ರೂಪಾಯಿ ಅಂದುಕೊಳ್ಳಿ, ಆಗ ಡಿಎ 7,560 ರೂಪಾಯಿ ಆಗಿರುತ್ತದೆ. ಅಂದರೆ ನಿಮ್ಮ ಕೈಗೆ ಅಧಿಕವಾಗಿ 720 ರೂಪಾಯಿ ಮಾಸಿಕವಾಗಿ ಲಭ್ಯವಾಗಲಿದೆ. ಇನ್ನು ಪ್ರಸ್ತುತ ಶೇಕಡ 38ರಷ್ಟು ಡಿಎ ಇದ್ದರೆ, 6,840 ರೂಪಾಯಿ ಆಗಿದೆ.
ಡಿಎ ಲೆಕ್ಕಾಚಾರ ಮಾಡುವುದು ಹೇಗೆ?
ಕೇಂದ್ರ ಸರ್ಕಾರಿ ಉದ್ಯೋಗಿಗಳು: ಡಿಎ ಭತ್ಯೆ ಶೇಕಡವಾರು= (ಎಐಸಿಪಿಐ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳು- 115.76) /115.76) ×100
ಇಲ್ಲಿ ಎಐಸಿಪಿಐ ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಆಗಿದೆ.
ಸಾರ್ವಜನಿಕ ವಲಯದ ಉದ್ಯೋಗಿಗಳು:
ಡಿಎ ಭತ್ಯೆ ಶೇಕಡ= ((ಎಐಸಿಪಿಐ ಸರಾಸರಿ (ಮೂಲ ವರ್ಷ 2016=100) ಕಳೆದ 3 ತಿಂಗಳು-126.33)/126.33) ×100
ಹೊಸ ರಚನೆಯಲ್ಲಿ ಡಿಎ ಲೆಕ್ಕಾಚಾರಕ್ಕಾಗಿ 'ಮೂಲ ವೇತನ' ಎಂಬ ಪದವು ಸರ್ಕಾರವು ಅಂಗೀಕರಿಸಿದ 7 ನೇ ವೇತನ ಆಯೋಗದ ಶಿಫಾರಸುಗಳಿಂದ ಸೂಚಿಸಲಾದ ಪೇ ಮ್ಯಾಟ್ರಿಕ್ಸ್‌ನಲ್ಲಿ ಅನ್ವಯವಾಗುವ ಹಂತದ ಪ್ರಕಾರ ನೀಡಲಾಗುವ ವೇತನವಾಗಿದೆ. ಮೂಲ ವೇತನವು ವಿಶೇಷ ವೇತನದಂತಹ ಯಾವುದೇ ಇತರ ವೇತನಗಳನ್ನು ಹೊರತುಪಡಿಸುತ್ತದೆ.
ಕೊನೆಯ ಬಾರಿಗೆ ಡಿಎ ಹೆಚ್ಚಳವಾಗಿದ್ದು ಯಾವಾಗ?
ಕಳೆದ ಬಾರಿಗೆ ಡಿಎ 2022ರ ಸೆಪ್ಟೆಂಬರ್ 28ರಂದು ಡಿಎ ಅನ್ನು ಏರಿಸಿದೆ. ಜುಲೈ 1, 2022ರಿಂದ ಜಾರಿಗೆ ಬರುವಂತೆ ಈ ಏರಿಕೆಯನ್ನು ಮಾಡಲಾಗಿದೆ. ಕೇಂದ್ರ ಸರ್ಕಾರವು ಕಳೆದ ಸೆಪ್ಟೆಂಬರ್‌ನಲ್ಲಿ ಶೇಕಡ 4ರಷ್ಟು ಡಿಎ ಹೆಚ್ಚಳ ಮಾಡಿದ್ದು, ಪ್ರಸ್ತುತ ಶೇಕಡ 38ರಷ್ಟು ಡಿಎ ಇದೆ. ಡಿಎ ಅನ್ನು ಮತ್ತೆ ಶೇಕಡ 4ರಷ್ಟು ಏರಿಸುವ ನಿರೀಕ್ಷೆಯಿದೆ.


Click it and Unblock the Notifications