ಕರ್ನಾಟಕದಲ್ಲಿ ಈ ಹಿಂದಿನ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿದೆ. ಈಗ ರಾಜ್ಯದಲ್ಲಿ 7ನೇ ವೇತನ ಆಯೋಗ ಅವಧಿ ವಿಸ್ತರಿಸಲಾಗುತ್ತಾ?
ಈ ತಿಂಗಳ ವಾರದಲ್ಲಿ ಸುಧಾಕರ್ ರಾವ್ 7ನೇ ರಾಜ್ಯ ವೇತನ ಆಯೋಗದ ಸದಸ್ಯರ ಜೊತೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು. ಇನ್ನು ನವೆಂಬರ್ ತಿಂಗಳಿನಲ್ಲಿ ಈ ಆಯೋಗವು ವರದಿಯನ್ನು ಸಲ್ಲಿಕೆ ಮಾಡಬಹುದು ಎಂದು ವರದಿಯಾಗಿದೆ. ಈಗ ಆಯೋಗದ ಅವಧಿ ವಿಸ್ತರಿಸಲಾಗುತ್ತಾ, ಇಲ್ಲಿದೆ ವಿವರ ಮುಂದೆ ಓದಿ....

ಆಯೋಗದ ಅವಧಿ ವಿಸ್ತರಣೆ ಮಾಡಲಾಗುತ್ತಾ?
7ನೇ ರಾಜ್ಯ ವೇತನ ಆಯೋಗ ಎಲ್ಲ ಪರಿಶೀಲನೆಯನ್ನು ನಡೆಸಿದ್ದು, ಸರ್ಕಾರಕ್ಕೆ ನವೆಂಬರ್‌ನಲ್ಲಿ ವರದಿ ನೀಡಲಿದೆ ಎಂಬ ಮಾಹಿತಿಯಿದೆ. ಆದರೆ ಈ ನಡುವೆಯೇ ಅವಧಿಯನ್ನು ಮತ್ತೆ ಆರು ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗುತ್ತದೆ ಎಂದು ಸುದ್ದಿಯೂ ಕೂಡಾ ಇದೆ.
ಆಯೋಗವು ತನ್ನ ಶಿಫಾರಸು ನೀಡುವ ಮುನ್ನ ಮುಖ್ಯಮಂತ್ರಿಗಳು ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆಯನ್ನು ನಡೆಸಿದೆ. ವೇತನ ಪರಿಷ್ಕರಣೆ ಮಾಡಬೇಕಾದರೆ ಬೇಕಾದ ಅನುದಾನ ಎಷ್ಟು ಎಂಬ ಬಗ್ಗೆ ಚರ್ಚೆಗಳನ್ನು ನಡೆಲಾಗಿದೆ. ಈ ಲೆಕ್ಕಾಚಾರದ ಆಧಾರದಲ್ಲಿ ಸಮಯವನ್ನು ಮತ್ತಷ್ಟು ವಿಸ್ತರಣೆ ಮಾಡಬಹುದು ಎಂಬ ಸುದ್ದಿಯಿದೆ.
ಸಮಯವನ್ನು ಯಾಕೆ ವಿಸ್ತರಣೆ ಮಾಡಲಾಗುತ್ತೆ?
ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ತಾವು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ ಎಂದು ತಿಳಿಸಿತ್ತು. ಅದರಂತೆಯೇ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಮುಂದಾಗುತ್ತಿದೆ. ಈಗಾಗಲೇ ನಾಲ್ಕು ಜಾರಿಗೆ ತಂದಿದೆ. ಇನ್ನು ಒಂದು ಜಾರಿ ಮಾಡಬೇಕಾಗಿದೆ.
ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸುವ ಪ್ರಯತ್ನವನ್ನು ಮಾಡಲು ಮುಂದಾಗುತ್ತಿದೆ. ಇಂತಹ ಸಂದರ್ಭದಲ್ಲಿ 7ನೇ ರಾಜ್ಯ ವೇತನ ಆಯೋಗವು ವರದಿ ನೀಡಿದರೆ ಸರ್ಕಾರವು ಅದನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಆದ್ದರಿಂದಾಗಿ ಈಗ ಆಯೋಗವನ್ನು ವರದಿಯನ್ನು ವಿಸ್ತರಣೆ ಮಾಡಿ, 2024ರಲ್ಲಿ ವರದಿ ಸ್ವೀಕರಿಸುವಂತೆ ಮಾಡಬಹುದು ಎಂಬ ಲೆಕ್ಕಾಚಾರವಿದೆ.
7ನೇ ರಾಜ್ಯ ವೇತನ ಆಯೋಗದ ಕಾರ್ಯವೇನು?
7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ ಎಐಸಿಟಿಇ/ ಐಸಿಎಆರ್/ ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ), ಎಲ್ಲ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಸಿಬ್ಬಂದಿಗಳ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸಿ, ನೂತನ ವೇತನ ರಚನೆಯನ್ನು ರೂಪಿಸುತ್ತದೆ. ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವೃಂದದ ಹುದ್ದೆಗಳನ್ನು ಸಮೀಕರಿಸಿ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಿ ವರದಿ ನೀಡಲಿದೆ. ಇನ್ನು ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಬಹುದಾದ ತುಟ್ಟಿಭತ್ಯೆಯ ಸೂತ್ರ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಮತ್ತು ರಜೆ ಪ್ರಯಾಣ ರಿಯಾಯಿತಿ ಮತ್ತು ವೈದ್ಯಕೀಯ ಮರುಪಾವತಿ ಸೌಲಭ್ಯ ಮೊದಲಾದವುಗಳ ಪರಿಶೀಲನೆ ನಡೆಸಲಿದೆ. ಬದಲಾವಣೆಗಳನ್ನು ಆಯೋಗ ಶಿಫಾರಸು ಮಾಡಲಿದೆ.


Click it and Unblock the Notifications