ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ವಿವಿಧ ವೃಂದದ ವೇತನ ಹೆಚ್ಚಳದ ಬೇಡಿಕೆ ವಿವರವನ್ನು ನೀಡಿದೆ. ರಾಜ್ಯದಲ್ಲಿ ಈ ಹಿಂದೆ ಇದ್ದ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಮೊದಲಾದವುಗಳನ್ನು ರಚನೆ ಮಾಡಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ.
ಈ ನೂತನ ಆಯೋಗವು ಸರ್ಕಾರಕ್ಕೆ ನವೆಂಬರ್‌ನಲ್ಲಿ ವರದಿಯನ್ನು ನೀಡುವ ಸಾಧ್ಯತೆಯಿದೆ. ವಿವಿಧ ವೃಂದದ ವೇತನ ಏರಿಕೆಯ ಬೇಡಿಕೆಯಿದೆ. ಎಷ್ಟು ವೇತನ ಹೆಚ್ಚಾಗುವ ನಿರೀಕ್ಷೆಯನ್ನು ಸರ್ಕಾರಿ ನೌಕರರು ಹೊಂದಿದ್ದಾರೆ, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯಲ್ಲಿ 7ನೇ ವೇತನ ಆಯೋಗಕ್ಕೆ ಹಿರಿಯ ಸಹಾಯಕರು (Senior Assistant)/ ಹಿರಿಯ ಶೀಘ್ರಲಿಪಿಗಾರರು (Senior Steno)/ಶಾಖಾಧಿಕಾರಿ (Section Officer) ವೃಂದದ ಹುದ್ದೆಗಳ ವೇತನದ ಕುರಿತು ವಿವರಣೆಯನ್ನು ನೀಡಿದೆ.
ಕೇಂದ್ರ ಸಚಿವಾಲಯದಲ್ಲಿ ಹಾಗೂ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಹಿರಿಯ ಸಹಾಯಕ ಹುದ್ದೆಯು ಸಹಾಯಕ ಶಾಖಾಧಿಕಾರಿ ಎಂದಾಗಿರುತ್ತದೆ. ಅದೊಂದು ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿದೆ. ಹಿರಿಯ ಸಹಾಯಕ ಹುದ್ದೆಯ ವೇತನ ಶ್ರೇಣಿಯನ್ನು 37,900-70,850 ರೂಪಾಯಿಯಿಂದ 10,900-78,200 ರೂಪಾಯಿಗೆ ಏರಿಸುವ ಬೇಡಿಕೆಯಿದೆ.
ಹಾಗೆಯೇ ಈ ಹುದ್ದೆಯ ಹೆಸರನ್ನು 'ಸಹಾಯಕ ಶಾಖಾಧಿಕಾರಿ' ಎಂದು ಬದಲಾಯಿಸಿ ಕೇಂದ್ರ ಹಾಗೂ ನೆರೆ ರಾಜ್ಯಗಳಂತೆ ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯನ್ನಾಗಿ ಮಾಡುವ ಬೇಡಿಕೆಯನ್ನು ಇಡಲಾಗಿದೆ. ಇನ್ನು 3/8/2022ರಲ್ಲಿ ಕೆಲವು ಇತರೆ ಇಲಾಖೆಯ ಹುದ್ದೆಗಳನ್ನು ಸುಮಾರು 1 ರಿಂದ 3 ಹಂತಗಳ ವೇತನ ಶ್ರೇಣಿಯೊಂದಿಗೆ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿರುತ್ತದೆ. ಇನ್ನು ಈ ಆದೇಶದಲ್ಲಿ ನಾನ್ ಗೆಜೆಟೆಡ್ ಹಾಗೂ ಗ್ರೂಪ್ -ಸಿ ಹುದ್ದೆಯ ವೇತನ ಶ್ರೇಣಿಯನ್ನು ಗೆಜೆಟೆಡ್ ಗ್ರೂಪ್ -ಎ ಮತ್ತು ಗ್ರೂಪ್-ಬಿ ವೇತನ ಶ್ರೇಣಿಗೆ ಹೆಚ್ಚಿಸಲಾಗಿದೆ.
ಹಿರಿಯ ಶೀಘ್ರಲಿಪಿಗಾರರ ಹುದ್ದೆಯು ಪ್ರಸ್ತುತ ಹಿರಿಯ ಸಹಾಯಕ ಹುದ್ದೆಯ ಸಮಾನಾಂತರ ಹುದ್ದೆಯಾಗಿದೆ. ಈ ಹುದ್ದೆಯ ವೇತನ ಶ್ರೇಣಿಯನ್ನು ಒಂದು ಹಂತದ ವೇತನ ಶ್ರೇಣಿಗೆ ಹೆಚ್ಚಿಸಬೇಕು ಮತ್ತು ವೇತನ ಶ್ರೇಣಿಯನ್ನು 37,900-70,850 ರೂಪಾಯಿಯಷ್ಟು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಕೂಡಾ ಇದೆ.
ಇನ್ನು ಶಾಖಾಧಿಕಾರಿ ಹುದ್ದೆ, ಸಚಿವಾಲಯದ ಶಾಖಾಧಿಕಾರಿ ಹುದ್ದೆಯು ಅತೀ ಪ್ರಮುಖ ಹುದ್ದೆಯಾಗಿದೆ. ಈ ಹುದ್ದೆಯ ವೇತನ ಏರಿಕೆಯ ಬೇಡಿಕೆಯಿದೆ. ಕೆಲವು ವರ್ಷಗಳ ಹಿಂದೆ ತಹಶೀಲ್ದಾರ್ ಹುದ್ದೆಯನ್ನು ಗ್ರೇಡ್-1 ಮತ್ತು ಗ್ರೇಡ್ -2 ತಹಶೀಲ್ದಾರ್ ಹುದ್ದೆಗಳನ್ನಾಗಿ ಬೇರ್ಪಡಿಸಿ, ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಿದೆ. ಗ್ರೇಡ್ -1 ತಹಶೀಲ್ದಾರ್ ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಯ ವೇತನ ಶ್ರೇಣಿಗಿಂತಲೂ ಹೆಚ್ಚಿಸಲಾಗಿದೆ.
ಅದಲ್ಲದೇ ಒರ್ವ ಶಾಖಾಧಿಕಾರಿಯನ್ನು ನಿಯೋಜನೆ ಮೇಲೆ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ನಿಯೋಜಿಸಿದಾಗ ಈ ಹುದ್ದೆಯ ಕೆಲಸ ಕಾರ್ಯಗಳಿಗೆ ಸಮಾನವಾಗಿ ಶಾಖಾಧಿಕಾರಿಯು ಕೆಲಸ ನಿರ್ವಹಿಸಿದ್ದರೂ ಸಹ ಅವರಿಗೆ ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ಇರುವ ವೇತನ ಶ್ರೇಣಿ ಇಲ್ಲ. ಇದು ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಗೆ ವಿರುದ್ಧವಾಗಿದೆ ಎಂದು ವರದಿ ಹೇಳಿದೆ.
ಈ ತಾರತಮ್ಯವನ್ನು ಸಂಘವು ಈ ಹಿಂದೆ ರಚಿಸಲಾಗಿದ್ದ ವೇತನ ಆಯೋಗಗಳ ಗಮನಕ್ಕೆ ತಂದಿದೆ. ಕರ್ನಾಟಕ ನಾಲ್ಕನೇ ವೇತನ ಆಯೋಗ-1993 ತನ್ನ ವರದಿಯಲ್ಲಿ ಈ ಕುರಿತು ಉಲ್ಲೇಖಿಸಿದೆ ಎಂದು ಹೇಳಿದೆ. ಆದರೆ ಇದುವರೆಗೂ ತಹಶೀಲ್ದಾರ್ ಗ್ರೇಡ್-1 ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಗೆ ನೀಡಿರುವುದಿಲ್ಲ. ಈ ತಾರತಮ್ಯಕ್ಕೆ ಕೊನೆ ಹಾಡಬೇಕು ಎಂಬುವುದು ಬೇಡಿಕೆಯಾಗಿದೆ.
ಪ್ರಸ್ತುತ ಸಚಿವಾಲಯದ ಇಲಾಖೆಯ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಪೀಠಾಧಿಕಾರಿ (Desk Officer System) ವ್ಯವಸ್ಥೆಯನ್ನು ಜಾರಿಗೊಳಿಸಲು ನಿಯಮಗಳಲ್ಲಿ ಅವಕಾಶವಿದೆ. ಈ ಹುದ್ದೆಗೆ ಅಧೀನ ಕಾರ್ಯದರ್ಶಿ ಅಥವಾ ಶಾಖಾಧಿಕಾರಿಗಳನ್ನು ನಿಯೋಜಿಸಬಹುದಾಗಿರುತ್ತದೆ.
ಈ ಪೀಠಾಧಿಕಾರಿ ಹುದ್ದೆ ಜವಾಬ್ದಾರಿಯುತವಾದುದ್ದು. ಆದರೆ ಇತರೆ ಇಲಾಖೆಗಳಲ್ಲಿ ಶಾಖಾಧಿಕಾರಿಗಳಾಗಿ ಕಾರ್ಯನಿರ್ವಹಿಸುವವರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನೇ ನಿಗದಿಪಡಿಸಿರುವುದು ಸರಿಯಲ್ಲ. ಪ್ರಸ್ತುತ ವೇತನ ಶ್ರೇಣಿಯನ್ನು 43,100-83,900 ರೂಪಾಯಿಯಿಂದ 52,650-97,100 ರೂಪಾಯಿಗೆ ಹೆಚ್ಚಿಸಬೇಕು ಎಂಬ ಬೇಡಿಕೆ ಇಡಲಾಗಿದೆ.


Click it and Unblock the Notifications