ರಷ್ಯಾ -ಉಕ್ರೇನ್ ನಡುವಿನ ಯುದ್ಧ ಪರಿಣಾಮ ಭಾರತದ ಅಡುಗೆ ಮನೆ ಮೇಲೂ ಆಗಿದೆ. ದಿನ ನಿತ್ಯ ಬಳಸುವ ಖಾದ್ಯ ತೈಲಗಳ ಪೂರೈಕೆ ವ್ಯತ್ಯಯದಿಂದಾಗಿ ಖಾದ್ಯ ತೈಲ ಬೆಲೆ ಏರಿಕೆಯಾಗಿತ್ತು. ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತವಾಗಿತ್ತು. ಆದರೆ, ಇತ್ತೀಚೆಗೆ ಖಾದ್ಯ ತೈಲ ಬೆಲೆ ಇಳಿಕೆಯಾಗುತ್ತಿದೆ. ಹೈದಾರಾಬಾದ್ ಮೂಲದ ಜೆಮಿನಿ ಖಾದ್ಯ ತೈಲ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ ಪ್ರಮುಖ ಸಂಸ್ಥೆ ಅದಾನಿ ವಿಲ್ಮಾರ್ ಕೂಡಾ ಬೆಲೆ ಇಳಿಕೆ ಘೋಷಿಸಿದೆ.
ಜೆಮಿನಿ ಖಾದ್ಯ ತೈಲ ರೂಪಾಯಿ 15 ಕಡಿತ ಮಾಡಿದ್ದು, ದರವು 220 ರೂಪಾಯಿಗೆ ತಲುಪಿದೆ. ಇನ್ನು ಈ ವಾರದಲ್ಲಿ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆಯಲ್ಲಿ ಮತ್ತೆ 20 ರೂಪಾಯಿ ಕಡಿತ ಮಾಡುವ ಸಾಧ್ಯತೆ ಇದೆ. ಅದಾನಿ ಸಂಸ್ಥೆ ಒಡೆತನದ ಬ್ರ್ಯಾಂಡ್ ಫಾರ್ಚ್ಯೂನ್ ಸನ್ ಫ್ಲವರ್ ತೈಲದ 1 ಲೀಟರ್ ಬೆಲೆ(MRP) 220 ರಿಂದ 210 ರುಗೆ ಇಳಿಕೆಯಾಗಿದೆ.
ಇದೇ ರೀತಿ ಫಾರ್ಚ್ಯೂನ್ ಸೋಯಾಬಿನ್ ಹಾಗೂ ಫಾರ್ಚ್ಯೂನ್ ಸಾಸಿವೆ ಎಣ್ಣೆ 1 ಲೀಟರ್ ಪ್ಯಾಕ್ ಬೆಲೆ 205 ರು ನಿಂದ 195ರು ತಗ್ಗಿದೆ. ಮಾರುಕಟ್ಟೆಯಲ್ಲಿ ಶೀಘ್ರವೇ ಪರಿಷ್ಕೃತ ದರದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಅದಾನಿ ವಿಲ್ಮಾರ್‌ನ ಎಂಡಿ
"ನಾವು ಕಡಿಮೆ ವೆಚ್ಚದ ಲಾಭವನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ, ಅವರು ಈಗ ತಮ್ಮ ಪ್ಯಾಕೆಟ್‌ಗಳ ಮೇಲೆ ಹಗುರವಾಗಿರುವ ಅತ್ಯುನ್ನತ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳೊಂದಿಗೆ ತಯಾರಿಸಿದ ಶುದ್ಧವಾದ ಖಾದ್ಯ ತೈಲಗಳನ್ನು ನಿರೀಕ್ಷಿಸಬಹುದು. ಕಡಿಮೆ ಬೆಲೆಗಳು ಬೇಡಿಕೆಯನ್ನು ಹೆಚ್ಚಿಸುತ್ತವೆ ಎಂಬ ನಮಗೆ ವಿಶ್ವಾಸವಿದೆ'' ಎಂದು ಅದಾನಿ ವಿಲ್ಮಾರ್‌ನ ಎಂಡಿ ಮತ್ತು ಸಿಇಒ ಆಂಗ್ಶು ಮಲ್ಲಿಕ್ ಹೇಳಿದರು.
ತೈಲಬೀಜಗಳ ಕಡಿಮೆ ಉತ್ಪಾದನೆ
ತೈಲಬೀಜಗಳ ಕಡಿಮೆ ಉತ್ಪಾದನೆ ಮತ್ತು ಹೆಚ್ಚಿನ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ವೆಚ್ಚದಿಂದಾಗಿ 2021-22ರ ಅವಧಿಯಲ್ಲಿ ಖಾದ್ಯ ತೈಲಗಳ ಅಂತಾರಾಷ್ಟ್ರೀಯ ಮತ್ತು ದೇಶೀಯ ಬೆಲೆಗಳು ಏರಿಕೆಯಾಗಿತ್ತು. ಆದರೆ, ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದು ಬೆಲೆಗಳ ಇಳಿಕೆಗೆ ಕಾರಣವಾಗಿದೆ.
ಸೂರ್ಯಕಾಂತಿ ತೈಲಕ್ಕಿಂತ ಕಡಿಮೆ ಇದೆ
ಸೂರ್ಯಕಾಂತಿ ಎಣ್ಣೆ ಬದಲಿಯಾಗಿ ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಬಳಕೆಯತ್ತ ಜನ ವಾಲುತ್ತಿದ್ದಾರೆ. ರಿಫೈಂಡ್ ಕಡ್ಲೇಕಾಯಿ ಎಣ್ಣೆ, ರೈಸ್ ಬ್ರಾನ್ ಎಣ್ಣೆ(ಭತ್ತದ ತೌಡಿನಿಂದ ಮಾಡಿದ ಖಾದ್ಯ ತೈಲ) ಬಳಕೆಗೆ ಸಂಸ್ಥೆಗಳು ಉತ್ತೇಜನ ನೀಡುತ್ತಿದ್ದು, ಈ ಖಾದ್ಯತೈಲಗಳ ಬೆಲೆ ಕೂಡಾ ಸೂರ್ಯಕಾಂತಿ ತೈಲಕ್ಕಿಂತ ಕಡಿಮೆ ಇದೆ ಎಂದು ಅಂಗ್ಶು ಮಲಿಕ್ ತಿಳಿಸಿದ್ದಾರೆ.
ಸೋಯಾಬಿನ್ ಎಣ್ಣೆ ಬಳಕೆಗಿಂತ ಕಡ್ಲೇಕಾಯಿ ಎಣ್ಣೆ
ದಕ್ಷಿಣ ಭಾರತದಲ್ಲಿ ಸಾಸಿವೆ ಎಣ್ಣೆ, ಸೋಯಾಬಿನ್ ಎಣ್ಣೆ ಬಳಕೆಗಿಂತ ಕಡ್ಲೇಕಾಯಿ ಎಣ್ಣೆ, ರಿಫೈಂಡ್ ನೆಲಗಡಲೆ ಖಾದ್ಯ ತೈಲಗಳನ್ನು ಹೆಚ್ಚು ಬಳಸಲಾಗುತ್ತದೆ. ಅಲ್ಲದೆ ಭತ್ತದ ತೌಡಿನಿಂದ ಉತ್ಪಾದಿಸಿದ ಖಾದ್ಯ ತೈಲ ಕೂಡಾ ಜನಪ್ರಿಯತೆ ಗಳಿಸುತ್ತಿದೆ. ಈ ಖಾದ್ಯ ತೈಲಗಳ ಬೆಲೆ ಕೂಡಾ ಸೂರ್ಯಕಾಂತಿ ಎಣ್ಣೆಗಿಂತ ಕಡಿಮೆ ಇದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಆಗುತ್ತಿದೆ ಎಂದು ಅಂಗ್ಶು ಮಲಿಕ್ ಹೇಳಿದರು.
ಅದಾನಿ ವಿಲ್ಮಾರ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ FMCG ಕಂಪನಿಗಳಲ್ಲಿ ಒಂದಾಗಿದೆ.

Click it and Unblock the Notifications