For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್ ಡೌನ್ ಮುಗಿದ ಮೇಲೆ ನಿಮ್ಮ ವ್ಯವಹಾರ ಹೇಗೆ ಮಾಡ್ತೀರಿ?

|

ಇಡೀ ಭಾರತಕ್ಕೆ ಲಾಕ್ ಡೌನ್ ರೂಢಿಯಾಗುತ್ತಾ ಒಂದು ತಿಂಗಳು ಕಳೆದೇ ಹೋಯಿತು. ಇನ್ನೆಷ್ಟು ದಿನ ಹೀಗೇ ಇರುತ್ತದೆ ಎಂಬ ಅಂದಾಜು ಮಾಡುವುದಕ್ಕಂತೂ ಆಗುತ್ತಿಲ್ಲ. ಆದರೆ ಆರ್ಥಿಕ ತಜ್ಞರೋ ಅಥವಾ ವೈದ್ಯರನ್ನೋ ಪರಿಹಾರದ ಬಗ್ಗೆ ಕೇಳಿದರೆ, ಈ ತಕ್ಷಣಕ್ಕೆ ಕೊರೊನಾದೊಂದಿಗೆ ಬದುಕುವುದು ಹೇಗೆ ಅಂತ ಕಲಿಯುವುದೇ ಉತ್ತಮ ಎನ್ನುತ್ತಿದ್ದಾರೆ.

ಅದರರ್ಥ, ಕೊರೊನಾ ನಿಯಂತ್ರಣಕ್ಕೆ ಬರುತ್ತದೋ ಇಲ್ಲವೋ ಅಥವಾ ಔಷಧ ಕಂಡುಹಿಡಿಯುತ್ತಾರೋ ಇಲ್ಲವೋ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಬಹಳ ಜಾಗ್ರತೆಯಿಂದ ನಮ್ಮ ದೈನಂದಿನ ವ್ಯಾಪಾರ- ವ್ಯವಹಾರ, ಕೆಲಸ- ಕಾರ್ಯಗಳನ್ನು ಮಾಡುವುದನ್ನು ರೂಢಿಸಿಕೊಳ್ಳಿ ಎನ್ನುವುದು ಅವರ ಮಾತಿನ ಒಳಾರ್ಥ.

ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕ್ರೈಸಿಸ್ ಮ್ಯಾನೇಜ್ ಮೆಂಟ್ ಅಂತ ಕರೆಯುತ್ತಾರೆ. ಅಂದರೆ ಬಿಕ್ಕಟ್ಟಿನ ಸಂದರ್ಭವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಒಂದು ತಂಡ ಸದಾ ಯೋಜನೆ ರೂಪಿಸುತ್ತಲೇ ಇರುತ್ತದೆ. ಪರ್ಯಾಯ ಕಾರ್ಯ ನಿರ್ವಹಣೆ ಹೇಗೆ ಮಾಡಬಹುದು, ನಮ್ಮ ಕೆಲಸ ನಿಲ್ಲದಂತೆ ಹೇಗೆ ಯೋಜನೆ ರೂಪಿಸಬಹುದು... ಹೀಗೆ.

ಕೊರೊನಾ ಸೋಂಕು ಹರಡದಂತೆ ಸುರಕ್ಷಿತವಾಗಿ ಹಣದ ವಹಿವಾಟು ನಡೆಸುವುದು ಹೇಗೆ?ಕೊರೊನಾ ಸೋಂಕು ಹರಡದಂತೆ ಸುರಕ್ಷಿತವಾಗಿ ಹಣದ ವಹಿವಾಟು ನಡೆಸುವುದು ಹೇಗೆ?

ಐ.ಟಿ. ಕಂಪೆನಿಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವರ್ಕ್ ಫ್ರಂ ಹೋಮ್ ಜಾರಿಗೆ ತಂದು, ಕೊರೊನಾ ಆರಂಭದ ದಿನಗಳಿಂದಲೂ ವ್ಯಾಪಾರ- ವ್ಯವಹಾರಕ್ಕೆ ಏನೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಈಗ ಇತರ ವ್ಯಾಪಾರ- ವ್ಯವಹಾರ ಮಾಡುವವರು ಸಹ ಹೀಗೆ ಯೋಚಿಸುವ ಅಗತ್ಯ ಇದೆ. ಈ ಲೇಖನದಲ್ಲಿ ಕೆಲವು ವ್ಯಾಪಾರಗಳ ಬಗ್ಗೆ ಮತ್ತು ಅವು ಹೇಗೆ ಬದಲಾಗಬಹುದು ಎನ್ನುವ ಬಗ್ಗೆ ಸಲಹೆ ನೀಡಲಾಗುತ್ತಿದೆ. ಇದರಿಂದ ಖಂಡಿತಾ ನಿಮಗೆ ಪ್ರಯೋಜನ ಆಗುತ್ತದೆ.

ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್- ದರ್ಶಿನಿಗಳು

ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್- ದರ್ಶಿನಿಗಳು

ಯಾವುದೇ ದೊಡ್ಡ ಪಟ್ಟಣ, ನಗರಗಳಲ್ಲಿನ ಪ್ರಮುಖ ವ್ಯಾಪಾರ- ವ್ಯವಹಾರದ ಪಾಲು ಇವರದು. ಕೊರೊನಾ ಲಾಕ್ ಡೌನ್ ಮುಗಿದ ನಂತರ ತಕ್ಷಣವೇ ಇವುಗಳನ್ನು ಆರಂಭಿಸಲು ಅನುಮತಿ ನೀಡುತ್ತಾರಾ? ಹಾಗೊಂದು ವೇಳೆ ಅನುಮತಿ ನೀಡಿದರೂ ನಿರ್ಬಂಧಗಳನ್ನು ಹಾಕಬಹುದಾ? ಅದ್ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕಾಗಬಹುದು? ಇಂಥ ವಿಚಾರಗಳಿಗೆ ಸಂಬಂಧಿಸಿದಂತೆ ತಯಾರಿ ಮಾಡಿಟ್ಟುಕೊಳ್ಳುವುದು ಅತ್ಯುತ್ತಮ. ಒಂದು ವೇಳೆ ಪಾರ್ಸೆಲ್ ಸರ್ವೀಸ್ ಮಾತ್ರ ನೀಡಬೇಕು ಅಂದರೆ ಅದಕ್ಕೆ ಹೇಗೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ, ಎಷ್ಟು ಮಂದಿ ಅದಕ್ಕಾಗಿಯೇ ಬೇಕಾಗುತ್ತಾರೆ, ಪಾರ್ಸೆಲ್ ಗಾಗಿ ಎಂಥ ಬಟ್ಟೆ ಬ್ಯಾಗ್ ಗಳನ್ನು ಬಳಸಬೇಕು ಇತ್ಯಾದಿ ಆಲೋಚನೆಗಳನ್ನು ಈಗಿಂದಲೇ ಮಾಡಿಟ್ಟುಕೊಳ್ಳಿ. ಕುಡಿಯುವ ನೀರು, ಸಾಮಾಜಿಕ ಅಂತರ ಇದಕ್ಕೆಲ್ಲ ಖಂಡಿತವಾಗಿಯೂ ಕಠಿಣ ನಿಯಮಗಳನ್ನೇ ತರುವ ಸಾಧ್ಯತೆ ಇದೆ. ಅದೇ ರೀತಿ ಕಸ ವಿಲೇವಾರಿ ಕಡೆಗೂ ಈ ಮುಂಚಿಗಿಂತ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಮುಂಚೆ ಕ್ಯಾಶ್ ವ್ಯವಹಾರವಷ್ಟೇ ಮಾಡುತ್ತಿದ್ದೆ ಅಂತಿದ್ದವರು ಡಿಜಿಟಲ್ ಪೇಮೆಂಟ್ ಕಡೆಗೂ ಕಣ್ಣು ಹಾಯಿಸಬೇಕು. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಡೆಲಿವರಿ ಮಾಡುವಂತಿರಬೇಕು.

ಕ್ಲಿನಿಕ್, ಡಯಾಗ್ನೋಸ್ಟಿಕ್ ಸೆಂಟರ್ ಗಳು
 

ಕ್ಲಿನಿಕ್, ಡಯಾಗ್ನೋಸ್ಟಿಕ್ ಸೆಂಟರ್ ಗಳು

ಕೆಲವು ಕ್ಲಿನಿಕ್ ಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದದ್ದನ್ನು ತೀರಾ ಇತ್ತೀಚಿನ ತನಕ ನೋಡಿದ್ದೇವೆ. ಅದೇ ರೀತಿ ವಾರಾಂತ್ಯಗಳಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ಗಳ ಮುಂದೆ ನಾನಾ ಬಗೆಯ ಪರೀಕ್ಷೆಗಳಿಗಾಗಿ ಜನವೋ ಜನ ಇರುತ್ತಿದ್ದರು. ಆದರೆ ಈಗ ಆನ್ ಲೈನ್ ನಲ್ಲೇ ವೈದ್ಯರು ಕನ್ಸಲ್ಟೇಷನ್ ನೀಡಲು ಶುರು ಮಾಡಿದ್ದಾರೆ. ಕಾಯಿಲೆ ಬಂದ ವ್ಯಕ್ತಿ ವೈದ್ಯರ ಬಳಿಗೆ ಹೋಗುವ ಅಗತ್ಯ ದೊಡ್ಡ ಮಟ್ಟದಲ್ಲಿ ಇಲ್ಲ. ವಿಡಿಯೋ ಕಾಲ್ ಮೂಲಕವೇ ಕಾಯಿಲೆ ಲಕ್ಷಣಗಳನ್ನು ತಿಳಿದುಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಮಾರ್ಗದರ್ಶನ ಮಾಡಲಾಗುತ್ತಿದೆ. ಇನ್ನು ಡಯಾಗ್ನೋಸ್ಟಿಕ್ ಸೆಂಟರ್ ಗಳು ರಕ್ತ, ಮೂತ್ರ ಮತ್ಯಾವುದಾದರೂ ಸ್ಯಾಂಪಲ್ ಗಳಿಗೆ ಮನೆಗಳ ಬಳಿಯೇ ಬಂದು ಸಂಗ್ರಹಿಸಿಕೊಂಡು ಹೋಗುವುದಕ್ಕೆ ಸಿದ್ಧತೆ ನಡೆಸಬೇಕಾಗಬಹುದು ಅಥವಾ ಇಂತಿಷ್ಟು ಸಮಯದಲ್ಲಿ ಬಂದು ಸ್ಯಾಂಪಲ್ ನೀಡಿ ಹೋಗಿ ಎಂದು ಅಪಾಯಿಂಟ್ ಮೆಂಟ್ ನೀಡಬಹುದು. ಆದರೆ ಇಲ್ಲೂ ಕೂಡ ಡಿಜಿಟಲ್ ಪೇಮೆಂಟ್ ಕಡ್ಡಾಯವಾಗಿ ಜಾರಿಗೆ ತರಬೇಕಾಗುತ್ತದೆ.

ಟೂರ್ ಆಪರೇಟರ್ ಗಳು

ಟೂರ್ ಆಪರೇಟರ್ ಗಳು

ಪ್ರವಾಸಗಳನ್ನು ಆಯೋಜಿಸುತ್ತಿದ್ದವರಿಗೆ ಇನ್ನು ಎರಡು- ಮೂರು ವರ್ಷಗಳ ಕಾಲ ಪರಿಸ್ಥಿತಿ ಬಹಳ ಕಷ್ಟ ಇದೆ. ಇದು ಹೆದರಿಸಬೇಕು ಅನ್ನೋ ಉದ್ದೇಶಕ್ಕೆ ಹೇಳುತ್ತಿರುವುದಲ್ಲ. ಯಾವುದೆಲ್ಲ ಪ್ರಮುಖ ಪ್ರವಾಸಿ ತಾಣಗಳಿವೆಯೋ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ತಾಣಗಳಲ್ಲಿ ಕೊರೊನಾದಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದಾರೆ. ಇನ್ನು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಹೋಟೆಲ್ ಉದ್ಯಮ, ಕಾರು ಬಾಡಿಗೆ ವ್ಯವಹಾರ, ಟೂರಿಸ್ಟ್ ಗೈಡ್ ಗಳು, ಹೋಮ್ ಸ್ಟೇ... ಹೀಗೆ ಸಾಲುಸಾಲಾಗಿ ವ್ಯವಹಾರ ಇಲ್ಲದಂತಾಗಬಹುದು. ಎಲ್ಲೆಲ್ಲಿ ಪ್ರವಾಸೋದ್ಯಮ ಚೆನ್ನಾಗಿತ್ತೋ ಅಲ್ಲಿ ಮದ್ಯ ಮಾರಾಟವೂ ಆದಾಯ ತಂದುಕೊಡುತ್ತಿತ್ತು. ಇದೀಗ ಇಡೀ ಸರಪಳಿಯೇ ಕಳಚಿ ಬಿದ್ದಿದೆ. ಇಂಥ ಸಮಯದಲ್ಲಿ ಗಾಬರಿ ಪಟ್ಟು, ಹುಚ್ಚು ಸಾಹಸಗಳಿಗೆ ಕೈ ಹಾಕುವುದಕ್ಕಿಂತ ಮುಮ್ದಿನ ಎರಡು- ಮೂರು ವರ್ಷಗಳ ತನಕ ಅಥವಾ ಪ್ರವಾಸೋದ್ಯಮ ಚೇತರಿಸಿಕೊಳ್ಳುವ ತನಕ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ.

ಟ್ಯೂಷನ್, ಪಾಠ- ಪ್ರವಚನ

ಟ್ಯೂಷನ್, ಪಾಠ- ಪ್ರವಚನ

ವರ್ಚುವಲ್ ಕ್ಲಾಸ್ ಎಂಬುದು ಈಗಾಗಲೇ ಜನಪ್ರಿಯವಾಗಿದೆ. ಆದರೆ ಅದರ ಮೇಲೆ ಎಷ್ಟು ಬಂಡವಾಳ ಹಾಕಬೇಕಾಗುತ್ತದೋ ಏನೋ ಎಂಬ ಕಾರಣಕ್ಕೆ ಹಲವರು ಹಿಂಜರಿದಿರಬಹುದು. ಈಗಿನ ಪರಿಸ್ಥಿತಿಯಲ್ಲಿ ಶಾಲೆ- ಕಾಲೇಜುಗಳಲ್ಲಿ, ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ಇಡೀ ಸೆಮಿಸ್ಟರ್- ಪೂರ್ತಿ ವರ್ಷ ಆನ್ ಲೈನ್ ನಲ್ಲಿ ಪಾಠ ಮಾಡುವ ನಿರ್ಧಾರಕ್ಕೆ ಬರಲಾಗುತ್ತಿದೆ. ಇದು ಈ ಸಮಯದ ಅಗತ್ಯ ಮತ್ತು ಅನಿವಾರ್ಯ ಕೂಡ ಹೌದು. ಯಾರಾದರೂ ಮನೆಯಲ್ಲಿ ಟ್ಯೂಷನ್ ಮಾಡ್ತಿದ್ದೆ ಅಥವಾ ಎಲ್ಲಾದರೂ ಸ್ಥಳ ಬಾಡಿಗೆ ಪಡೆದು ಪಾಠ ಹೇಳ್ತಿದ್ದೆ ಎನ್ನುವವರು ಈಗ ಬಿಡುವಿನ ಅವಧಿಯಲ್ಲೇ ಭವಿಷ್ಯಕ್ಕೆ ಸಿದ್ಧರಾಗುವುದು ಉತ್ತಮ. ಏಕೆಂದರೆ, ಈ ರೀತಿಯ ವರ್ಚುವಲ್ ಕ್ಲಾಸ್ ನಡೆಸುವುದಕ್ಕೆ ಕನಿಷ್ಠ ತಯಾರಿಯ ಅಗತ್ಯ ಇರುತ್ತದೆ. ಏಕಾಏಕಿ ಬದಲಾವಣೆಯಿಂದ ಬೆಚ್ಚಿ ಬೀಳುವ ಬದಲು ಇದು ಉತ್ತಮ ಆಯ್ಕೆ. ಇನ್ನು ಧಾರ್ಮಿಕ ಪ್ರವಚನ ಮಾಡುವಂಥವರು ಸಹ ಆನ್ ಲೈನ್ ಮೂಲಕ ಮುಂದುವರಿಯುವ ಕಡೆ ಚಿಂತಿಸಬೇಕು.

ವ್ಯಾಪಾರ- ವ್ಯವಹಾರಗಳನ್ನು ನಂಬಿ ಬದುಕುವ ಕೋಟ್ಯಂತರ ಜನ

ವ್ಯಾಪಾರ- ವ್ಯವಹಾರಗಳನ್ನು ನಂಬಿ ಬದುಕುವ ಕೋಟ್ಯಂತರ ಜನ

ಯಾರನ್ನೋ ಹೆದರಿಸಬೇಕು, ಚಿಂತೆಗೆ ಗುರಿ ಮಾಡಬೇಕು ಎಂಬುದು ಈ ಲೇಖನದ ಉದ್ದೇಶ ಅಲ್ಲ. ದೇಶದ ಆರ್ಥಿಕತೆಯಲ್ಲಿ ಬರುವ ವಿವಿಧ ಹಂತದ, ಮೇಲ್ಮಟ್ಟದಲ್ಲಿ ಕಾಣಿಸಿಕೊಳ್ಳುವಂಥದ್ದು ಇಷ್ಟು. ಇನ್ನು ದಿನಸಿ ಅಂಗಡಿ, ರಿಯಲ್ ಎಸ್ಟೇಟ್, ಡ್ಯಾನ್ಸ್ ಕ್ಲಾಸ್, ಸ್ವಿಮ್ಮಿಂಗ್ ಕ್ಲಾಸ್, ತರಕಾರಿ ಮಾರುವವರು, ಜ್ಯೂಸ್ ಮಾರುವವರು, ಸಿನಿಮಾ ಥಿಯೇಟರ್... ಹೀಗೆ ಅನೇಕ ವ್ಯಾಪಾರ- ವ್ಯವಹಾರಗಳನ್ನು ನಂಬಿ ಬದುಕುವ ಕೋಟ್ಯಂತರ ಜನ ಇದ್ದಾರೆ. ಅವರು ಮಾಡುವ ವ್ಯವಹಾರಕ್ಕೆ ಎಂಥ ಸವಾಲು ಎದುರಾಗಬಹುದು ಎಂಬುದನ್ನು ಈಗಲೇ ಆಲೋಚಿಸುವ ಅಗತ್ಯ ಇದೆ. ಇನ್ನು ಈ ಸಮಯದಲ್ಲಿ ಇನ್ಷೂರೆನ್ಸ್ ಮಾಡಿಸುವ ಕಡೆಗೆ, ಅದರಲ್ಲೂ ಕಾಯಿಲೆ- ಕಸಾಲೆ ಬಂದಾಗ, ಕೆಲಸ ಇಲ್ಲದಂತೆ ಆದಾಗ ಹಣ ಸಿಗುವಂತೆ, ಸಾವು ಸಂಭವಿಸಿತು ಅಂದರೆ ಕುಟುಂಬದವರಿಗೆ ಹೊರೆ ಆಗದಂತೆ ಪ್ಲ್ಯಾನ್ ಮಾಡುವ ಅಗತ್ಯ ಇದೆ. ಆದ್ದರಿಂದ ಬಿಕ್ಕಟ್ಟಿನ ವೇಳೆಯಲ್ಲಿ ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದನ್ನು ಮುಂಚೆಯೇ ಸಿದ್ಧ ಮಾಡಿಟ್ಟುಕೊಂಡಿದ್ದರೆ ಉತ್ತಮ ಅಲ್ಲವಾ? ನಮಗೆ ಒಳ್ಳೆಯದೇ ಆಗುತ್ತದೆ ಎಂಬ ಭರವಸೆಯನ್ನು ಖಂಡಿತಾ ಇಟ್ಟುಕೊಳ್ಳೋಣ. ಆದರೆ ಕೆಟ್ಟದ್ದೇನಾದರೂ ಸಂಭವಿಸಿದಲ್ಲಿ ಅದಕ್ಕೆ ಸಿದ್ಧವಾಗಂತೂ ಇರಬೇಕಲ್ಲವಾ? ಇದಕ್ಕೆ ನೀವೇನಂತೀರಿ?

English summary

After Corona Lock Down, How Will Do Your Business?

After Corona lock down how business will run? Here is the challenges faced bu business.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X