ಟೊಮೆಟೊ ದರವು ಈಗಾಗಲೇ ಗಗನಕ್ಕೆ ಏರಿದೆ. ದೇಶದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಟೊಮೆಟೊ ದರವು 160 ರೂಪಾಯಿಗೂ ಅಧಿಕವಾಗಿದೆ. ಇನ್ನು ಕೆಲವೆಡೆ ಪ್ರತಿ ಕೆಜಿ ಟೊಮೆಟೊ ದರವು 100 ರೂಪಾಯಿಯಿಂದ 130 ರೂಪಾಯಿವರೆಗೆ ಇದೆ. ಈ ನಡುವೆ ಟೊಮೆಟೊ ಮಾತ್ರವಲ್ಲದೆ ಹಲವಾರು ತರಕಾರಿಗಳ ದರವು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ಮುಖ್ಯವಾಗಿ ಶುಂಠಿ ಹಾಗೂ ಮೆಣಸಿನಕಾಯಿ ದರವು ಹೆಚ್ಚಳವಾಗಿದೆ.
ಬಿಸಿ ಅಲೆ, ಭಾರೀ ಮಳೆ ಹಾಗೂ ಪೂರೈಕೆ ತೊಂದರೆಯಿಂದಾಗಿ ದೇಶದಲ್ಲಿ ಹಲವಾರು ತರಕಾರಿಗಳ ಬೆಲೆಯು ಹೆಚ್ಚಳವಾಗುತ್ತಿದೆ. ಟೊಮೆಟೊ ಈಗ ಟ್ರೋಲ್ ಆಗುತ್ತಿರುವಾಗ ದೇಶದಲ್ಲಿ ಹೂಕೋಸು, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ದರವು ಗ್ರಾಹಕರ ಬಜೆಟ್ ಮೇಲೆ ಪ್ರಭಾವ ಉಂಟು ಮಾಡಿದೆ. ನಿನ್ನೆ ದೆಹಲಿಯಲ್ಲಿ ಟೊಮೆಟೊ ಪ್ರತಿ ಕೆಜಿಗೆ ಸುಮಾರು 145 ರೂಪಾಯಿಗೆ ತಲುಪಿದೆ. ಒಂದು ಹೂಕೋಸು ಬೆಲೆ 80 ರೂಪಾಯಿ, ಶುಂಠಿ 380 ರೂಪಾಯಿ (100 ಗ್ರಾಂಗೆ 38 ರೂ.) ಹಸಿರು ಮೆಣಸಿನಕಾಯಿ ಕೆಜಿಗೆ 170 ರೂಪಾಯಿ 100 ಗ್ರಾಂಗೆ 17 ರೂ. ಆಗಿದೆ.

ಮೆಣಸಿನಕಾಯಿ ದರ ಏರಿಕೆಗೆ ಪ್ರಮುಖ ಕಾರಣ?
ಕಳೆದ ತಿಂಗಳಿನಲ್ಲಿ ಮೆಣಸಿನಕಾಯಿ ಬೆಲೆಯು ಪ್ರತಿ ಕೆಜಿಗೆ 60 ರೂಪಾಯಿ ಆಸುಪಾಸಿನಲ್ಲಿತ್ತು. ಈಗ ಶೇಕಡ 116ರಷ್ಟು ಬೆಲೆ ಏರಿಕೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಪೂರೈಕೆಗೆ ತೊಂದರೆ ಉಂಟಾಗಿದೆ ಆದ್ದರಿಂದಾಗಿ ಬೆಲೆಯು ಏರಿಕೆಯಾಗಿದೆ ಎಂದು ಮೆಣಸಿನಕಾಯಿ ಬೆಳೆಗಾರರು ಮತ್ತು ವ್ಯಾಪಾರಿಗಳು ಹೇಳಿದ್ದಾರೆ. ಎಲೆಸುರುಳಿ ರೋಗ ಕೂಡಾ ಒಂದು ಕಾರಣ ಎಂದು ವರದಿಗಳು ಹೇಳುತ್ತದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ, ಟೊಮೆಟೊ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳ ಬುಟ್ಟಿಯೊಂದಿಗೆ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಈ ನಾಲ್ಕು ವಸ್ತುಗಳ ದರವೇ 1,070 ರೂಪಾಯಿ ಆಗಿದೆ. ಯಾರಿಗಾದರೂ ಬೆಲೆ ಬಾಳುವ ಉಡುಗೊರೆಯನ್ನು ನಾವು ನೀಡಲು ಬಯಸಿದರೆ ಇದು ಉತ್ತಮ ಉಡುಗೊರೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಈ ನಡುವೆ ಹಣ, ಚಿನ್ನ ಹೀಗೆ ದುಬಾರಿ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ತರಕಾರಿ ಬೆಲೆ ದುಬಾರಿಯಾಗಿರುವ ನಿಟ್ಟಿನಲ್ಲಿ ಟೊಮೆಟೋ ಕದ್ದೊಯ್ದಿರುವ ಘಟನೆ ನಡೆದಿದೆ.
ಟೊಮೆಟೊ ದರವು ತೀರಾ ದುಬಾರಿಯಾಗಲು ಪ್ರಮುಖ ಕಾರಣ ನಮಗೆ ಎರಡು ತಿಂಗಳ ಅವಧಿಯಲ್ಲಿ ನಡೆದ ವಿದ್ಯಮಾನವಾಗಿದೆ. ಏಪ್ರಿಲ್ ಮೇ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೊ ದರವು ಭಾರೀ ಇಳಿಕೆಯಾಗಿದೆ. ಇದರಿಂದಾಗಿ ರೈತರುಗಳು ಸಿಟ್ಟಿನಲ್ಲಿ ಬೆಳೆಯನ್ನೇ ನಾಶ ಮಾಡಿದ್ದಾರೆ. ಇನ್ನು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕಾಣಿಸಿಕೊಂಡ ಅಸಾಮಾನ್ಯ ಶಾಖದಿಂದಾಗಿ ಕೀಟದ ದಾಳಿಗಳು ಹೆಚ್ಚಳವಾಗಿ ಬೆಳೆ ನಾಶವಾಗಿದೆ.


Click it and Unblock the Notifications