ಪ್ರಸ್ತುತ ದೇಶದಲ್ಲಿ 2000 ರೂಪಾಯಿ ನೋಟು ಬದಲಾವಣೆ ಮಾಡುವುದು ಅಥವಾ ಡೆಪಾಸಿಟ್ ಮಾಡುವುದು ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರವಾಗಿದೆ. 2000 ರೂಪಾಯಿಯ ನೋಟು ಹೆಚ್ಚಾಗಿ ಉದ್ಯಮಿಗಳ ಕೈಯಲ್ಲಿ ಇರಬಹುದು ಎಂದುಕೊಂಡರೆ, ಕೆಲವು ಮಧ್ಯಮ ವರ್ಗದ ಕುಟುಂಬದಲ್ಲಿಯೂ ಇರುವುದು ಕಂಡುಬರುತ್ತಿದೆ.
ಪ್ರಸ್ತುತ ಈ ಎರಡು ಸಾವಿರ ರೂಪಾಯಿ ನೋಟುಗಳನ್ನು ನಾವು ದೇಶದಾದ್ಯಂತ ಬ್ಯಾಂಕುಗಳಲ್ಲಿ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಆರ್‌ಬಿಐನ 19 ಸ್ಥಳೀಯ ಕಚೇರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಈ ನಡುವೆ ನಾವು ಅಂಚೆ ಕಚೇರಿಯಲ್ಲಿ ಈ 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಅಂಚೆ ಕಚೇರಿಯಲ್ಲಿ 2000 ರೂಪಾಯಿ ನೋಟು ಬದಲಾಯಿಸಬಹುದೇ?
ಕಳೆದ ಬಾರಿ 500, 1000 ರೂಪಾಯಿಯ ನೋಟನ್ನು ಬ್ಯಾನ್ ಮಾಡಿದಾಗ ಆ ನೋಟುಗಳನ್ನು ಅಂಚೆ ಕಚೇರಿಯಲ್ಲೂ ಬದಲಾವಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆದಾಗ ಈ ನೋಟುಗಳನ್ನು ಅಂಚೆ ಕಚೇರಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಯಾವುದೇ ವಿಚಾರವನ್ನು ಆರ್‌ಬಿಐ ಉಲ್ಲೇಖ ಮಾಡಿಲ್ಲ.
ಇನ್ನು 2000 ರೂಪಾಯಿಯ ನೋಟುಗಳನ್ನು ಅಂಚೆ ಕಚೇರಿಯಲ್ಲಿ ಡೆಪಾಸಿಟ್ ಮಾಡುವುದು ಒಂದು ಆಯ್ಕೆಯಾಗಿದೆ ಕೂಡಾ ಹೇಳಬಹುದು. ಆದರೆ ಅಂಚೆ ಕಚೇರಿಯಲ್ಲಿ 2000 ರೂಪಾಯಿ ನೋಟನ್ನು ಡೆಪಾಸಿಟ್ ಮಾಡಲು ಕೆವೈಸಿ ಪರಿಶೀಲಿಸಿದ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಮೇ 23, 2023ರಿಂದ ಬ್ಯಾಂಕ್‌ಗಳು ಮತ್ತು ಆರ್‌ಬಿಐ ಕಚೇರಿಯಲ್ಲಿ 2000 ರೂಪಾಯಿ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕುಗಳಲ್ಲಿ ನಾವು 2000 ರೂಪಾಯಿ ನೋಟನ್ನು ನಮ್ಮ ಖಾತೆಗಳಿಗೆ ಜಮೆ ಮಾಡಿಕೊಳ್ಳಬಹುದಾಗಿದೆ. ಇನ್ನು ಬ್ಯಾಂಕ್‌ಗಳಲ್ಲಿ ನೋಟನ್ನು ಜಮೆ ಮಾಡುವುದಾದರೆ ಸಾಮಾನ್ಯವಾಗಿ ಹೇಗೆ ನಾವು ನೋಟುಗಳನ್ನು ಜಮೆ ಮಾಡುತ್ತೇವೆಯೊ ಹಾಗೆಯೇ ಮಾಡಬಹುದಾಗಿದೆ.
ನಿನ್ನೆಯಿಂದ ನೋಟು ಬದಲಾವಣೆ ಪ್ರಕ್ರಿಯೆ ಆರಂಭ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಬಗ್ಗೆ ಮೇ 19ರಂದು ಪ್ರಮುಖವಾದ ನಿರ್ಧಾರವನ್ನು ಘೋಷಣೆ ಮಾಡಿದೆ. ಅದರ ಪ್ರಕ್ರಿಯೆ ಮೇ 23ರಂದು ಆರಂಭಾಗಿದೆ. ನಿನ್ನೆಯಿಂದ ದೇಶದಾದ್ಯಂತ ಎಲ್ಲ ಬ್ಯಾಂಕ್‌ಗಳಲ್ಲಿ ನೀವು 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಆದರೆ ಹಲವಾರು ಗೊಂದಲಗಳು ಈಗಲೂ ಇದೆ.
ಡೆಪಾಸಿಟ್ ಮಾಡುವ ಒಟ್ಟು ಮೊತ್ತಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಒಂದು ಬಾರಿ 2000 ರೂಪಾಯಿಯ 10 ನೋಟುಗಳನ್ನು ಮಾತ್ರ ಬದಲಾವಣೆ ಮಾಡಲು ಅವಕಾಶವಿದೆ. ಒಟ್ಟಾಗಿ ಎಷ್ಟು ಡೆಪಾಸಿಟ್ ಮಾಡಬಹುದು ಎಂಬ ಗರಿಷ್ಠ ಮಿತಿಯನ್ನು ಆರ್‌ಬಿಐ ನೀಡಿಲ್ಲ. ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವುದಾದರೆ ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ.
ಒಂದು ಖಾತೆಗೆ 50 ಸಾವಿರ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗೆ ಯಾವುದೇ ದಾಖಲೆಗಳು ಬೇಕಾಗಿಲ್ಲ. "ನಾವು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ನೀವು 50 ಸಾವಿರ ರೂಪಾಯಿಗಿಂತ ಅಧಿಕ ನಗದನ್ನು ಡೆಪಾಸಿಟ್ ಮಾಡುವುದಾದರೆ ಆದಾಯ ತೆರಿಗೆ ನಿಯಮ ಅನ್ವಯ ಮಾಡಲಾಗುತ್ತದೆ ಎಂಬುವುದು ನಿಮಗೆ ತಿಳಿದಿರಲಿ. ಅಧಿಕ ಮೊತ್ತ ಡೆಪಾಸಿಟ್ ಮಾಡುವಾಗ ನೀವು ಪ್ಯಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ," ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.
10 ನೋಟುಗಳನ್ನು ಜಮೆ ಮಾಡಲು requisition slip ಬೇಕಾಗಿಲ್ಲ. ಜನರು 20000 ರೂಪಾಯಿಯವರೆಗಿನ 2000 ರೂಪಾಯಿ ನೋಟುಗಳನ್ನು ಒಂದು ಬಾರಿ ಯಾವುದೇ ದಾಖಲೆಗಳನ್ನು ಸಲ್ಲಿಸದೆ ಜಮೆ ಮಾಡಬಹುದು ಎಂದು ಈಗಾಗಲೇ ಎಸ್‌ಬಿಐ ತಿಳಿಸಿದೆ.


Click it and Unblock the Notifications