ಯಾವುದೇ ವ್ಯಕ್ತಿಯ ಆದ್ಯತೆ ವಯಸ್ಸಿಗೆ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತದೆ. ಸ್ವಂತ ಮನೆ, ಕಾರು, ಬ್ಯಾಂಕ್ ಬ್ಯಾಲೆನ್ಸ್ ಹೀಗೆ ಆದ್ಯತೆಗಳನ್ನು ನಿರ್ಧರಿಸಿಕೊಂಡು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಈ ಲೇಖನದಲ್ಲಿ ಕಾರು ಖರೀದಿಯ ಸಮಯದಲ್ಲಿ ಗಮನಿಸಬೇಕಾದ ಅಂಶಗಳನ್ನು ತಿಳಿಸಲಾಗುತ್ತಿದೆ.
ಏಕೆಂದರೆ, ಕಾರು ಕೊಳ್ಳುವ ಸಂಭ್ರಮದಲ್ಲಿ ಕೆಲವೊಮ್ಮೆ ನಿರ್ಧಾರಗಳು ತಪ್ಪಾಗಬಹುದು. ಆ ನಂತರ ಪರಿತಪಿಸುವಂತೆ ಆಗಬಾರದು. ಆ ಕಾರಣಕ್ಕೆ ಈ ಲೇಖನದಲ್ಲಿ ಕೆಲವು ಮುಖ್ಯವಾದ ವಿಚಾರಗಳನ್ನು ಹೇಗೆ ಅಳೆದು- ತೂಗಬೇಕು ಎಂದು ತಿಳಿಸಲಾಗುತ್ತಿದೆ. ನೀವು ಬುದ್ಧಿವಂತರು. ಎಲ್ಲ ಯೋಚನೆ ಮಾಡಿರುತ್ತೀರಿ. ಆದರೂ ಕೆಲವೊಮ್ಮೆ ತಪ್ಪುಗಳಾಗಬಹುದು. ಹಾಗಾಗದಂತೆ ಎಚ್ಚರಿಕೆ ವಹಿಸಿ.
ಎಷ್ಟು ಸೀಟಿನ ಕಾರು, ಯಾವ ಉದ್ದೇಶಕ್ಕೆ?
ನಿಮಗೆ ಎಷ್ಟು ಸೀಟಿನ ಕಾರು ಖರೀದಿಸಬೇಕು ಎಂಬ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬನ್ನಿ. ಐದು, ಆರು, ಏಳು ಅಥವಾ ಎಂಟು- ಒಂಬತ್ತು ಸೀಟಿನ ಕಾರಿನಲ್ಲಿ ಯಾವುದು ನಿಮ್ಮ ಅಗತ್ಯ ಎಂಬುದನ್ನು ತೀರ್ಮಾನಿಸಿ. ಗಂಡ- ಹೆಂಡತಿ, ಇಬ್ಬರು ಮಕ್ಕಳಿಗಾಗುವಷ್ಟು ಸಾಕಾ? ಅಥವಾ ಅಪ್ಪ- ಅಮ್ಮ, ಅಣ್ಣ- ತಮ್ಮ, ಅಕ್ಕ- ತಂಗಿಯರಿಗೂ ಆಗುವಂತೆ ದೊಡ್ಡ ಕಾರು ಖರೀದಿಸಬೇಕಾ? ಈ ನಿರ್ಧಾರ ಮಾಡಿದ ಮೇಲೆ ಕಾರನ್ನು ಕಚೇರಿ- ಮನೆ ಮಧ್ಯದ ಓಡಾಟಕ್ಕೆ ಬಳಸುತ್ತೀರಾ ಅಥವಾ ಕುಟುಂಬದವರ ಜತೆಗೆ ಹೊರಗೆ ಹೋಗುವಾಗ ಮಾತ್ರ ಬಳಸುತ್ತೀರಾ ಎಂಬುದನ್ನು ಪರಿಶೀಲಿಸಿಕೊಳ್ಳಿ. ಆಗ ಕಾರು ನಿಮ್ಮ ಪಾಲಿಗೆ ಅಗತ್ಯವೋ ಅನಿವಾರ್ಯವೋ ಅಥವಾ ಯಾವುದಕ್ಕೂ ಇರಲಿ ಅಂತಷ್ಟೇ ಕೊಳ್ಳುತ್ತೀದ್ದೀರೋ ಎಂಬುದು ಅಂತಿಮವಾಗುತ್ತದೆ. ಆ ನಂತರ ಮುಂದಿನ ಹಂತದ ಬಗ್ಗೆ ಯೋಚಿಸಬಹುದು.
ಯಾವ ಕಂಪೆನಿಯ ಕಾರು?
ಮುಂದಿನ ಹಂತವು ಯಾವ ಕಂಪೆನಿಯ ಕಾರು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ನೀವಿರುವ ಪ್ರದೇಶದಲ್ಲಿ ಆ ಕಾರಿನ ಸರ್ವೀಸ್ ಸಿಗುತ್ತದೆಯಾ? ಅದರ ರೀಸೇಲ್ ಮೌಲ್ಯ ಹೇಗಿದೆ? ರೋಡ್ ಸೈಡ್ ಅಸಿಸ್ಟೆನ್ಸ್ ಸಿಗುತ್ತದೆಯಾ? ಸುರಕ್ಷಿತ ಕ್ರಮಗಳು ಚೆನ್ನಾಗಿವೆಯಾ? ಮೈಲೇಜ್ ಎಷ್ಟು ನೀಡುತ್ತದೆ? ನಿರ್ವಹಣೆ ವೆಚ್ಚ ಎಷ್ಟಾಗುತ್ತದೆ? ಇಂಥ ಅಂಶಗಳ ಆಧಾರದಲ್ಲಿ ಮೌಲ್ಯಮಾಪನವನ್ನು ಮಾಡಿ. ಸಾಧ್ಯವಾದಲ್ಲಿ ನೀವು ನಿರ್ಧರಿಸಿದ ಕಾರನ್ನು ಬಾಡಿಗೆ ಆಧಾರದ ಮೇಲೆ ಕೆಲ ದಿನಗಳ ಕಾಲ ಪಡೆದು, ಅದರ ಪರ್ಫಾರ್ಮೆನ್ಸ್ ಹೇಗಿದೆ ಎಂದು ಪರೀಕ್ಷಿಸಿ. ಈಗಿನ್ನೂ ಕಾರು ಕಲಿಯುತ್ತಿರುವವರಾದರೆ ಹೊಸದಕ್ಕಿಂತ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವುದು ಉತ್ತಮ. ಆಗ ಕಾರಿನ ಕ್ಲಚ್ ಸೇರಿ ಇತರ ಸಮಸ್ಯೆಗಳು ಬಂದರೂ ಹೊಸ ಕಾರಿಗೆ ಏನೋ ಆಯಿತು ಎಂಬ ಆತಂಕ ಇರುವುದಿಲ್ಲ. ಸೆಕೆಂಡ್ ಹ್ಯಾಂಡ್ ಕಾರಿಗೆ ದೊಡ್ಡ ಖರ್ಚು ಮಾಡಬೇಡಿ.
ಆರ್ಥಿಕ ಹೊರೆ ಆಗದಂತೆ ಎಚ್ಚರ ವಹಿಸಿ
ಕಾರಿನ ಕಂಪೆನಿ, ಹೊಸದೋ- ಹಳೆಯದೋ, ಎಷ್ಟು ಸೀಟಿನದು... ಇಷ್ಟೆಲ್ಲ ಅಂಶಗಳ ಬಗ್ಗೆ ತಿರ್ಮಾನ ಆದ ನಂತರ ಬೆಲೆ ಬಗ್ಗೆ ನಿರ್ಧಾರಕ್ಕೆ ಅನುಕೂಲ ಆಗುತ್ತದೆ. ಆಗ ಎಷ್ಟು ಮೊತ್ತವನ್ನು ಡೌನ್ ಪೇಮೆಂಟ್ ನೀಡಬೇಕಾಗುತ್ತದೆ? ಇಎಂಐ ಎಷ್ಟು ಕಟ್ಟಬೇಕಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬನ್ನಿ. ಬೇರೆ ಸಾಲಗಳು ಇವೆಯಾ, ಅವುಗಳಿಗೆ- ಇತರ ಖರ್ಚಿಗೆ ಎಷ್ಟು ಹಣ ಕಟ್ಟಬೇಕು ಎಂಬುದು ಲೆಕ್ಕ ಹಾಕಿ. ಕಾರು ತೆಗೆದುಕೊಂಡ ನಂತರ ತಿಂಗಳಿಗೆ ಆಗಬಹುದಾದ ಕಾರಿನ ಇಂಧನ, ನಿರ್ವಹಣೆ ಮತ್ತಿತರ ವೆಚ್ಚವನ್ನೂ ಲೆಕ್ಕ ಹಾಕಿಟ್ಟುಕೊಂಡಿರಿ. ಕಾರು ಖರೀದಿ ನಂತರ ಆ ಖರ್ಚುಗಳು ಸಹ ಸೇರಿಕೊಳ್ಳುತ್ತವೆ. ನಿಮ್ಮ ಒಟ್ಟು ಆದಾಯದಲ್ಲಿ ಇವೆಲ್ಲ ಖರ್ಚು ಕಳೆದರೂ ತುಂಬ ಹೊರೆ ಆಗದಿರುವಂತೆ ಎಚ್ಚರ ವಹಿಸಿ.
ಸೂಕ್ತ ಸಮಯ ಯಾವುದೆಂದು ನಿರ್ಧರಿಸಿ
ಕಾರು ಖರೀದಿಸುವಾಗ ಸೂಕ್ತ ಸಮಯ ಯಾವುದೆಂದು ತಿಳಿಯಿರಿ. ಈ ವರ್ಷದ ಏಪ್ರಿಲ್ ನಿಂದ ಬಿಎಸ್ 6 ಎಂಜಿನ್ ಕಡ್ಡಾಯ ಆಗುತ್ತದೆ. ಬಿಎಸ್ 4 ಎಂಜಿನ್ ನ ಬಳಕೆ ಮತ್ತು ಅದರ ಭವಿಷ್ಯ ಇನ್ನೆಷ್ಟು ವರ್ಷಗಳು ಎಂಬ ಬಗ್ಗೆ ಯಾವುದೂ ಆಂತಿಮವಾಗಿಲ್ಲ. ಇಂಥ ಸನ್ನಿವೇಶದಲ್ಲಿ ಡಿಸ್ಕೌಂಟ್ ಸಿಗುತ್ತದೆ ಎಂಬ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಬೇಡಿ. ಮುಂದೆ ರೀಸೇಲ್ ವಿಚಾರಕ್ಕೆ ಬಂದಾಗ ಹೊಡೆತ ಬೀಳುತ್ತದೆ. ಈಚೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟ ಹೆಚ್ಚಾಗುತ್ತಿದೆ. ಇನ್ನು ಡೀಸೆಲ್ ಎಂಜಿನ್ ನ ಸಣ್ಣ ಕಾರುಗಳು ಬಿಎಸ್ 4 ಎಂಜಿನ್ ನಲ್ಲಿ ಮಾತ್ರ ಬರಲಿದೆ. ಬಿಎಸ್ 6 ಎಂಜಿನ್ ಬಂದ ಮೇಲೆ ಸಣ್ಣ ಡೀಸೆಲ್ ಎಂಜಿನ್ ಕಾರಿನ ಉತ್ಪಾದನೆಯನ್ನು ಬಹುತೇಕ ತಯಾರಕರು ನಿಲ್ಲಿಸಬಹುದು. ಬಿಎಸ್ 6 ಎಂಜಿನ್ ಕಾರುಗಳು ದುಬಾರಿ ಆಗಬಹುದು. ಆದ್ದರಿಂದ ಈ ಎಲ್ಲ ಅಂಶವನ್ನೂ ಗಮನಿಸಿ.


Click it and Unblock the Notifications