2022 ಇನ್ನು ಕೆಲವೇ ವಾರಗಳಲ್ಲಿ ಕೊನೆಯಾಗಲಿದ್ದು, ಹೊಸ ವರ್ಷ 2023 ಆರಂಭವಾಗಲಿದೆ. ಈ ವರ್ಷ ನಾವು ಹಣದುಬ್ಬರದ ವಿರುದ್ಧ ಆರಂಭ ಮಾಡಿರುವ ಹೋರಾಟವನ್ನು ಮುಂದಿನ ವರ್ಷವೂ ಕೂಡಾ ನಡೆಸಬೇಕಾಗುತ್ತದೆ. ಈಗಾಗಲೇ ಹಲವಾರು ವಸ್ತುಗಳ, ಎಲೆಕ್ಟ್ರಾನಿಕ್ ಸಾಮಾಗ್ರಿಗಳ ದರ ಏರಿಕೆಯಾಗಿದೆ. ಮುಂದಿನ ವರ್ಷವೂ ದರ ಏರಿಕೆ ಮುಂದುವರಿಯುವ ಸಾಧ್ಯತೆಯಿದೆ.
ಪ್ರಮುಖವಾಗಿ ಕಿಯಾ, ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಮರ್ಸೆಡೆಸ್-ಬೆನ್ಜ್ ಹಾಗೂ ಆಡಿ ಜನವರಿ 2023ರಿಂದ ಕಾರುಗಳ ಮತ್ತು ಎಸ್‌ಯುವಿಗಳ ಬೆಲೆ ಏರಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದೆ.
ಪ್ರಮುಖವಾಗಿ ಕಾರು ತಯಾರಿಕ ವೆಚ್ಚ ಅಧಿಕವಾಗಿರುವ ಕಾರಣದಿಂದಾಗಿ ಸಂಸ್ಥೆಗಳು ತಮ್ಮ ವಾಹನದ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಈ ಹಿಂದೆಯೂ ಹಲವಾರು ಸಂಸ್ಥೆಗಳು ದರ ಏರಿಕೆ ಮಾಡಿದೆ. ಹಾಗಾದರೆ ಯಾವೆಲ್ಲ ಕಾರುಗಳ ಬೆಲೆ ಏರಿಕೆಯಾಗಲಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ......
ಮಾರುತಿ ಸುಜುಕಿ ಕಾರು, ಎಸ್‌ಯುವಿ ದರ ಏರಿಕೆ
ಮಾರುತಿ ಸುಜುಕಿ ತನ್ನ ಎಲ್ಲ ಮಾಡೆಲ್‌ಗಳ ದರವನ್ನು ಹೆಚ್ಚಳ ಮಾಡಲಿದೆ ಎಂದು ಹೇಳಿದೆ. ಆದರೆ ಬೆಲೆ ಏರಿಕೆಯು ಬೇರೆ ಬೇರೆ ರೀತಿಯಲ್ಲಿರಲಿದೆ. ಸಂಸ್ಥೆಗೆ ತಯಾರಿಕ ವೆಚ್ಚ ಅಧಿಕವಾಗಿರುವುದು ಮಾತ್ರವಲ್ಲದೆ ಸರ್ಕಾರದ ಕೆಲವು ನಿಮಯಗಳ ಕಾರಣದಿಂದಾಗಿಯೂ ಕೂಡಾ ದರ ಏರಿಕೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ. ಆಲ್ಟೋ, ಆಲ್ಟೋ K10, ಬಲೇನೋ, ಬ್ರೆಝಾ, ಸೆಲೆರಿಯೋ, ಸಿಯಾಸ್, ಡಿಸೈರ್, Eeco, ಇರ್ಟಿಗಾ, ಗ್ರ್ಯಾಂಡ್ ವಿಟಾರಾ, ಇಗ್ನೀಸ್, ಎಸ್-ಪ್ರೆಸ್ಸೋ, ಸ್ವಿಫ್ಟ್, ವಾಗೋನ್ R ಮತ್ತು XL6 ಮಾರುತಿ ಸುಜುಕಿ ಸಂಸ್ಥೆಗೆ ಸೇರಿದ್ದಾಗಿದೆ.
ಕಿಯಾ ದರ ಎಷ್ಟು ಏರಿಕೆ?
ಕಿಯಾ ಸಂಸ್ಥೆಯು ಜನವರಿ 2023ರಿಂದ ತಮ್ಮ ಎಲ್ಲ ಮಾಡೆಲ್‌ಗಳ ದರವನ್ನು 50 ಸಾವಿರ ರೂಪಾಯಿ ಏರಿಕೆ ಮಾಡಲಿದೆ. ಕಾರುಗಳ ತಯಾರಿ ವೆಚ್ಚ ಹಾಗೂ ಸಾಗಣೆ ವೆಚ್ಚ ಅಧಿಕವಾಗಿರುವ ಕಾರಣದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ಈ ದಕ್ಷಿಣ ಕೊರಿಯಾ ಸಂಸ್ಥೆ ಹೇಳಿದೆ. ಡಿಸೆಂಬರ್ 31, 2022ರ ಬಳಿಕ ಮಾಡಲಾಗುವ ಎಲ್ಲ ಬುಕ್ಕಿಂಗ್‌ಗಳಿಗೆ ಈ ಹೊಸ ದರ ಅನ್ವಯವಾಗುತ್ತದೆ. ಕಾರೆನ್ಸ್, ಕಾರ್ನಿವಲ್, EV6, ಸೆಲ್ಟೋಸ್ ಮತ್ತು ಸೋನೆಟ್ ಕಿಯಾ ಸಂಸ್ಥೆಯ ಮಾಡೆಲ್‌ಗಳು ಆಗಿದೆ.
ಟಾಟಾ ಮೋಟರ್ಸ್ ಕೂಡಾ ದುಬಾರಿ!
ತಯಾರಿಕ ವೆಚ್ಚ ಅಧಿಕವಾಗುತ್ತಿರುವ ಕಾರಣದಿಂದಾಗಿ ಹೊಸ ವರ್ಷದಿಂದ ವಾಹನಗಳ ದರ ಏರಿಕೆ ಮಾಡಲಾಗುವುದು ಎಂದು ಟಾಟಾ ಮೋಟರ್ಸ್ ಹೇಳಿಕೊಂಡಿದೆ. ಸಂಸ್ಥೆಯು ಪ್ರಸ್ತುತ ಅಲ್ಟ್ರಾಸ್, ಹ್ಯಾರಿಯರ್, ನೆಕ್ಸಾನ್, ನೆಕ್ಸಾನ್ EV, ಪಂಚ್, ಸಫಾರಿ, ತಿಯಾಗೊ, ತಿಯಾಗೊ EV, ಟಿಗೊರ್ ಮತ್ತು ಟಿಗೊರ್ EVಯನ್ನು ಉತ್ಪಾದನೆ, ಮಾರಾಟ ಮಾಡುತ್ತಿದೆ.
ಆಡಿ ಕಾರುಗಳ ಬೆಲೆ ಏರಿಕೆ
ಜನವರಿ 2023ರಿಂದ ಆಡಿ ಕಾರುಗಳ ಬೆಲೆಯನ್ನು ಶೇಕಡ 1.7ರಷ್ಟು ಏರಿಕೆ ಮಾಡಲಾಗುತ್ತದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಉಳಿದ ಸಂಸ್ಥೆಗಳು ಹೇಳಿದಂತೆ ಈ ಸಂಸ್ಥೆಯು ತಯಾರಿಕ ವೆಚ್ಚ ಅಧಿಕವಾದ ಕಾರಣದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. A4, A6, A8 L, Q3, Q5, Q7, Q8, S5 ಸ್ಪ್ರೋರ್ಟ್ಸ್‌ಬ್ಯಾಕ್, RS 5 ಸ್ಪ್ರೋರ್ಟ್ಸ್‌ಬ್ಯಾಕ್, RSQ8, e-ಟ್ರೋನ್, e-ಟ್ರೋನ್ ಸ್ಪ್ರೋರ್ಟ್ಸ್‌ಬ್ಯಾಕ್ ಮತ್ತು e-ಟ್ರೋನ್ GT ಆಡಿ ಮಾಡೆಲ್‌ಗಳಾಗಿದೆ.
ಮರ್ಸಿಡಿಸ್-ಬೆನ್ಜ್ ನೂತನ ದರ ಪಟ್ಟಿ ನೋಡಿ
ಮರ್ಸಿಡಿಸ್-ಬೆನ್ಜ್ ತನ್ನ ಮಾಡೆಲ್‌ಗಳ ದರವನ್ನು ಹೊಸ ವರ್ಷದಲ್ಲಿ ಶೇಕಡ 5ರಷ್ಟು ಏರಿಕೆ ಮಾಡುತ್ತದೆ. ಹೊಸ ದರ ಪಟ್ಟಿ ನಾವಿಲ್ಲಿ ನೀಡಿದ್ದೇವೆ.
ಜಿಎಲ್‌ಎ 200: ನೂತನ ದರ 46.50 ಲಕ್ಷ ರೂಪಾಯಿ
ಜಿಎಲ್‌ಎ 220ಡಿ: 48.00 ಲಕ್ಷ ರೂಪಾಯಿ
ಸಿ 200: 57.50 ಲಕ್ಷ ರೂಪಾಯಿ
ಸಿ 220ಡಿ: 58.50 ಲಕ್ಷ ರೂಪಾಯಿ
ಇ 200 ಎಕ್ಸ್‌ಕ್ಲ್ಯೂಸಿವ್: 72.50 ಲಕ್ಷ ರೂಪಾಯಿ
ಇ 200ಡಿ ಎಕ್ಸ್‌ಕ್ಲ್ಯೂಸಿವ್: 73.50 ಲಕ್ಷ ರೂಪಾಯಿ
ಜಿಎಲ್‌ಇ 300ಡಿ 4ಮಾಟಿಕ್: 88.00 ಲಕ್ಷ ರೂಪಾಯಿ
ಜಿಎಲ್‌ಇ 400ಡಿ 4ಮಾಟಿಕ್: 1.05 ಕೋಟಿ ರೂಪಾಯಿ
ಎಸ್ 350ಡಿ: 1.65 ಕೋಟಿ ರೂಪಾಯಿ
ಮೇಬ್ಯಾಚ್ ಎಸ್ 580: 2.57 ಕೋಟಿ ರೂಪಾಯಿ
ಮೇಬ್ಯಾಚ್ ಜಿಎಲ್‌ಎಸ್ 600: 2.92 ಕೋಟಿ ರೂಪಾಯಿ
ರಿನಾಲ್ಟ್ ಕಾರುಗಳ ದರ ಏರಿಕೆ
ಫ್ರೆಂಚ್ ಸಂಸ್ಥೆಯಾದ ರಿನಾಲ್ಟ್ ಕೂಡಾ ತಮ್ಮ ಕಾರುಗಳ ದರವನ್ನು ಏರಿಕೆ ಮಾಡಲಿದೆ. ಪ್ರಸ್ತುತ ರಿನಾಲ್ಟ್ ಭಾರತದಲ್ಲಿ ಕ್ವಿಡ್,ಕಿಗರ್ ಮತ್ತು ಟ್ರೈಬರ್ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಸಿಟ್ರೋನ್ ಕಾರುಗಳ ದರ ಹೆಚ್ಚಳ
ಹೊಸ ವರ್ಷ 2023ರ ಜನವರಿಯಿಂದ ಸಿಟ್ರೋನ್ ಸಂಸ್ಥೆಯು ತಮ್ಮ ಕಾರುಗಳ ದರವನ್ನು ಏರಿಕೆ ಮಾಡಲಿದೆ ಎಂದು ಹೇಳಿದೆ. ಸುಮಾರು ಶೇಕಡ 1.5ರಿಂದ ಶೇಕಡ 2ರಷ್ಟು ದರ ಏರಿಕೆ ಮಾಡಲಿದೆ. ಸಿ3, ಸಿ5 ಮಾಡೆಲ್‌ಗಳ ಬೆಲೆಯನ್ನು ಹೆಚ್ಚಿಸಲಿದೆ.


Click it and Unblock the Notifications