ಆಕ್ಸಿಸ್ ಬ್ಯಾಂಕ್ ಅಕ್ಟೋಬರ್ ತಿಂಗಳಿನಲ್ಲಿ ಸತತ ಎರಡನೇ ಬಾರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರದಲ್ಲಿ 75 ಮೂಲಾಂಕ ಏರಿಕೆ ಮಾಡಿದೆ. ಅಕ್ಟೋಬರ್ 14, 2022ರಿಂದ ಹೊಸ ಬಡ್ಡಿದರ ಜಾರಿಗೆ ಬರುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ವರ್ಷದಲ್ಲಿ ನಾಲ್ಕನೇ ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಸೆಪ್ಟೆಂಬರ್ 30ರಂದು ರೆಪೋ ದರ 50 ಮೂಲಾಂಕ ಹೆಚ್ಚಳ ಮಾಡಲಾಗಿದ್ದು ದರವು ಪ್ರಸ್ತುತ 5.9ಕ್ಕೆ ಏರಿಕೆಯಾಗಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಲು ಆರಂಭ ಮಾಡಿದೆ.
ಇನ್ನು ಆಕ್ಸಿಸ್ ಬ್ಯಾಂಕ್, ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಅಕ್ಟೋಬರ್ 1ರಂದು ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಅದಾದ ಬಳಿಕ ಈಗ ಮತ್ತೆ ಎಫ್‌ಡಿ ಬಡ್ಡಿದರ ಏರಿಸಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಆಕ್ಸಿಸ್ ಬ್ಯಾಂಕ್ ಎರಡು ಬಾರಿ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಆಕ್ಸಿಸ್ ಬ್ಯಾಂಕ್‌ನ ನೂತನ ಎಫ್‌ಡಿ ಬಡ್ಡಿದರ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....
ಆಕ್ಸಿಸ್ ಬ್ಯಾಂಕ್‌ನ ನೂತನ ಎಫ್‌ಡಿ ಬಡ್ಡಿದರ
ಆಕ್ಸಿಸ್ ಬ್ಯಾಂಕ್ 7 ದಿನದಿಂದ 29 ದಿನದಲ್ಲಿ ಮೆಚ್ಯೂರ್ ಆಗುವ ಹಾಗೂ 30 ದಿನದಿಂದ 60 ದಿನದಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲಿನ ಬಡ್ಡಿದರದಲ್ಲಿ 75 ಮೂಲಾಂಕ ಹೆಚ್ಚಳ ಮಾಡಿದೆ. ಈ ಹಿಂದೆ 7 ದಿನದಿಂದ 29 ದಿನದಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಬಡ್ಡಿದರ ಶೇಕಡ 2.75 ಆಗಿತ್ತು. ಆದರೆ ಪ್ರಸ್ತುತ ಏರಿಕೆ ಬಳಿಕ ಶೇಕಡ 3.50 ಆಗಿದೆ. ಇನ್ನು 30 ದಿನದಿಂದ 60 ದಿನದಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲಿನ ಬಡ್ಡಿದರವು ಈ ಹಿಂದೆ ಶೇಕಡ 3.25 ಆಗಿತ್ತು. ಆದರೆ ಪ್ರಸ್ತುತ ಶೇಕಡ 3.50 ಆಗಿದೆ.
ಇತರೆ ಅವಧಿ ಬಡ್ಡಿದರ ಎಷ್ಟಿದೆ?
ಇನ್ನು 61 ದಿನದಿಂದ 3 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲಿ ಬಡ್ಡಿದರವು ಶೇಕಡ 3.25ರಿಂದ ಶೇಕಡ 4ಕ್ಕೆ ಹೆಚ್ಚಳವಾಗಿದೆ. 3 ತಿಂಗಳಿನಿಂದ 6 ತಿಂಗಳ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರ 25 ಮೂಲಾಂಕ ಏರಿಕೆಯಾಗಿದ್ದು ಶೇಕಡ 3.75ರಿಂದ ಶೇಕಡ 4.25ಕ್ಕೆ ತಲುಪಿದೆ. ಇನ್ನು ಬ್ಯಾಕ್ ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರ್ ಹೊಂದುವ ಎಫ್‌ಡಿ ಮೇಲೆ ಶೇಕಡ 5ರಷ್ಟು ಬಡ್ಡಿದರವನ್ನು ನೀಡುತ್ತದೆ. 1 ವರ್ಷದಿಂದ 15 ತಿಂಗಳ ಅವಧಿಯಲ್ಲಿ ಮೆಚ್ಯೂರ್ ಹೊಂದುವ ಎಫ್‌ಡಿ ಮೇಲೆ ಶೇಕಡ 6.10ರಷ್ಟು ಬಡ್ಡಿದರವನ್ನು ಆಕ್ಸಿಸ್ ಬ್ಯಾಂಕ್ ನೀಡುತ್ತದೆ.
ಪರಿಷ್ಕರಣೆ ಬಳಿಕ ಹೆಚ್ಚಾದ ಬಡ್ಡಿದರ
ಇನ್ನು 15 ತಿಂಗಳಿನಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 6.15ರಷ್ಟು ಬಡ್ಡಿದರವನ್ನು ನೀಡುವುದನ್ನು ಮುಂದುವರಿಸಿದೆ. 2 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರ್ ಹೊಂದುವ ಎಫ್‌ಡಿ ಮೇಲೆ ಪರಿಷ್ಕರಣೆ ಬಳಿಕ ಬ್ಯಾಂಕ್ ಶೇಕಡ 6.20ರಷ್ಟು ಬಡ್ಡಿದರ ನೀಡುತ್ತದೆ. 3 ವರ್ಷ 25 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಆಕ್ಸಿಸ್ ಬ್ಯಾಂಕ್ ಶೇಕಡ 6.10ರಷ್ಟು ಬಡ್ಡಿದರ ನೀಡುತ್ತದೆ. ಇನ್ನು ಆಕ್ಸಿಸ್ ಬ್ಯಾಂಕ್‌ನಲ್ಲಿ ಎನ್‌ಆರ್‌ಇ ಹಾಗೂ ಎಫ್‌ಸಿಎನ್‌ಆರ್ ಡೆಪಾಸಿಟ್‌ಗಳು ಹೆಚ್ಚಳವಾಗಿದೆ.
ಹಿರಿಯ ನಾಗರಿಕರಿಗೆ ನೀಡಲಾಗುವ ಬಡ್ಡಿದರ
ಇನ್ನು ಬ್ಯಾಂಕ್ ಹಿರಿಯ ನಾಗರಿಕರ ಎಫ್‌ಡಿ ಮೇಲಿನ ಬಡ್ಡಿದರವನ್ನು ಕೂಡಾ ಏರಿಕೆ ಮಾಡಿದೆ. ಕೆಲವು ಅವಧಿಗಳ ಎಫ್‌ಡಿ ಬಡ್ಡಿದರ ಮಾತ್ರ ಹೆಚ್ಚಳ ಮಾಡಲಾಗಿದೆ. ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಪ್ರಸ್ತುತ ಹಿರಿಯ ನಾಗರಿಕರು ಶೇಕಡ 3.5ರಿಂದ 6.90ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.


Click it and Unblock the Notifications